ವಿಧಾನಪರಿಷತ್​ಗೆ ಮೂವರ ಹೆಸರು ಅಂತಿಮ: ವಿರೋಧದ ನಡುವೆ ಸೀತಾರಾಮ್, ಸುಧಾಮ್ ದಾಸ್​ಗೆ ಮಣೆ ಹಾಕಿದ ಕಾಂಗ್ರೆಸ್

Prasthutha|

ಬೆಂಗಳೂರು: ವಿಧಾನಪರಿಷತ್​ಗೆ ನಟಿ, ಮಾಜಿ ಸಚಿವೆ ಉಮಾಶ್ರೀ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಅಲ್ಲದೆ, ಕಾಂಗ್ರೆಸ್​ ಪಕ್ಷದ ಕೆಲವು ನಾಯಕರ ವಿರೋಧದ ನಡುವೆಯೂ ಎಂಆರ್ ಸೀತಾರಾಮ್ ಹಾಗೂ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಅವರ ಹೆಸರನ್ನೂ ಅಂತಿಮಗೊಳಿಸಿ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ.

- Advertisement -

ಕಲಾವಿದರ ಕೋಟಾದಡಿ ಮಾಜಿ ಸಚಿವೆ, ನಟಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ.ಆರ್.ಸೀತಾರಾಮ್​ ಹಾಗೂ ಸಮಾಜಸೇವೆ ಹೆಸರಲ್ಲಿ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್​ ಅವರಿಗೆ ಸ್ಥಾನ ನೀಡಲಾಗಿದೆ. ನಾಮನಿರ್ದೇಶನ ಕುರಿತು ಸಿದ್ದರಾಮಯ್ಯ ಅವರು ನಿನ್ನೆ ರಾಜ್ಯಪಾಲ ಥಾವರ್ ಚಂದ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

ಸೀತಾರಾಮ್, ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ಪಕ್ಷದೊಳಗೆ ವಿರೋಧ

- Advertisement -

ಸೀತಾರಾಮ್, ಸುಧಾಮ್ ದಾಸ್ ಹೆಸರಿಗೆ ಪಕ್ಷದೊಳಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸೀತಾರಾಮ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆಯಲ್ಲಿದೆ. ಇನ್ನೊಂದೆಡೆ, ಸುಧಾಮ್ ದಾಸ್ ಅವರು ಐದು ತಿಂಗಳ ಹಿಂದೆಯಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹೀಗಾಗಿ ಈ ಇಬ್ಬರನ್ನು ಪರಿಷತ್​ಗೆ ಕಳುಹಿಸಲು ಸಚಿವರಾದ ಡಾ.ಜಿ.ಪರಮೇಶ್ವರ್, ಹೆಚ್​ಸಿ ಮಹದೇವಪ್ಪ, ಕೆಹೆಚ್​ ಮುನಿಯಪ್ಪ ವಿರೋಧ ವ್ಯಕ್ತಪಡಿಸಿದ್ದರು.

ತನಿಖೆ ಎದುರಿಸುತ್ತಿರುವ ಸೀತಾರಾಮ್​ ಅವರನ್ನು ಪರಿಷತ್​ಗೆ ಕಳುಹಿಸುವುದನ್ನು ಕಾಂಗ್ರೆಸ್ ಕಾರ್ಯಕರ್ತರೇ ವಿರೋಧಿಸಿದ್ದರು.  ಸೀತಾರಾಮ್ ಬದಲಿಗೆ ಮನೋಹರ್ ಅವರಿ​ಗೆ ಎಂಎಲ್​ಸಿ ಸ್ಥಾನ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿದ್ದರು.

ಮೂವರು ಸಚಿವರು ಹಾಗೂ ಕಾರ್ಯಕರ್ತರ ವಿರೋಧದ ನಡುವೆಯೂ ಸೀತಾರಾಮ್, ಸುಧಾಮ್ ದಾಸ್​ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಹೀಗಾಗಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಹಿನ್ನೆಲೆ ಆಕಾಂಕ್ಷಿಗಳನ್ನು ಸಂಪರ್ಕಿಸಲು ಕೈ ನಾಯಕರು ಪ್ರಯತ್ನಿಸುತ್ತಿದ್ದಾರೆ.

ಸ್ಪಷ್ಟನೆ ಕೇಳಿದ ರಾಜ್ಯಪಾಲ

ಒಂದೆಡೆ, ಆಕಾಂಕ್ಷಿಗಳನ್ನು ಸಂಪರ್ಕಿಸಿ ಸಮಾಧಾನ ಪಡಿಸಲು ನಾಯಕರು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ, ಸೀತಾರಾಮ್, ಸುಧಾಮ್ ದಾಸ್​​ ನಾಮನಿರ್ದೇಶನ ವಿರೋಧಿಸಿ ರಾಜ್ಯಲಾರಿಗೆ ದೂರು ನೀಡಲಾಗಿದೆ. ಹೀಗಾಗಿ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟನೆ ಕೋರಿದ್ದಾರೆ. ಅದರಂತೆ ನಾಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜ್ಯಪಾಲರನ್ನು ಭೇಟಿಯಾಗಿ ಸೀತಾರಾಮ್, ಸುಧಾಮ್ ದಾಸ್ ಬಗ್ಗೆ ಮಾಹಿತಿ ನೀಡಲಿದ್ದಾರೆ.​ಸರ್ಕಾರದ ಕಾರ್ಯದರ್ಶಿ ನೀಡಿದ ವಿವರಣೆ ತೃಪ್ತಿ ನೀಡದಿದ್ದಲ್ಲಿ, ಇಬ್ಬರ ಹೆಸರು ತಡೆ ಹಿಡಿಯುವ ಸಾಧ್ಯತೆ ಇದೆ. ಮತ್ತೊಂದೆಡೆ ಲೋಕಸಭಾ ಚುನಾವಣೆಗೂ ಮುನ್ನ ಪರಿಷತ್​ಗೆ ಆಯ್ಕೆ ವಿಚಾರದಲ್ಲಿ ಬಂಡಾಯ ಏಳುವ ಸಾಧ್ಯತೆ ಇದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಸಮಾಧಾನಿತರ ಜೊತೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಕೆಪಿಸಿಸಿ ಪದಾಧಿಕಾರಿಗಳಿಗೆ ನೀಡಿದ್ದಾರೆ.



Join Whatsapp