ನವದೆಹಲಿ : ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಖಾಲಿದ್ ಸೈಫಿ ಅವರನ್ನು ʼಅಪಾಯಕಾರಿ ಕೈದಿಗಳುʼ ಎಂಬ ಆಧಾರದಲ್ಲಿ ಕೈ ಕೋಳ ಹಾಕಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂಬ ಅರ್ಜಿಯನ್ನು ದೆಹಲಿಯ ನ್ಯಾಯಾಲಯ ತಿರಸ್ಕರಿಸಿದೆ.
ಆರೋಪಿಗಳು ಈ ಹಿಂದೆ ಯಾವುದೇ ಅಪರಾಧ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿತರಾಗಿಲ್ಲ ಹಾಗೂ ಗ್ಯಾಂಗ್ ಸ್ಟರ್ ಗಳೂ ಅಲ್ಲ. ಸರಿಯಾಗಿ ಪರಾಮರ್ಶಿಸದೆ ದಿಲ್ಲಿ ಪೊಲೀಸರು ಮತ್ತು ಜೈಲಿನ ಅಧಿಕಾರಿಗಳು ಈ ಅರ್ಜಿ ಸಲ್ಲಿಸಿದ್ದಾರೆ ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಕೋವಿಡ್ ಸಾಂಕ್ರಮಿಕತೆಯ ಹಿನ್ನೆಲೆಯಲ್ಲಿ ಆರೋಪಿಗಳನ್ನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿಲ್ಲ. ಹೀಗಾಗಿ ಈ ಹಂತದಲ್ಲಿ ಈ ಅರ್ಜಿಯ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.