ಅಂಕಾರ: ಟರ್ಕಿ ಭೂಕಂಪದಲ್ಲಿ ಭಾರತೀಯರೊಬ್ಬರು ನಾಪತ್ತೆಯಾಗಿದ್ದಾರೆ.
ಉತ್ತರಾಖಂಡದ ಡೆಹ್ರಾಡೂನ್ ನ ಬಲವಾಲದ ನಿವಾಸಿ ವಿಜಯ್ ಕುಮಾರ್(35) ನಾಪತ್ತೆಯಾಗಿರುವ ವ್ಯಕ್ತಿ. ಇವರು ಬೆಂಗಳೂರು ಮೂಲದ ಆಕ್ಸಿ ಪ್ಲ್ಯಾಂಟ್ ಇಂಡಿಯಾ ಎಂಬ ಕಂಪನಿಯ ಉದ್ಯೋಗಿ ಎಂಬ ಮಾಹಿತಿ ಲಭ್ಯವಾಗಿದೆ.
ಟರ್ಕಿಯ ಕುಲ್ಕು ಗಾಜ್ ಎಂಬ ಪ್ರಮುಖ ಕೈಗಾರಿಕಾ ಅನಿಲ ಪೂರೈಕೆ ಕಂಪನಿಯಲ್ಲಿ ಪ್ಲ್ಯಾಂಟ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ವಿಜಯ್ ಕುಮಾರ್ ಅವರು ಕೆಲಸದ ನಿಮಿತ್ತ ಕಳೆದ ವಾರ ಟರ್ಕಿಗೆ ತೆರಳಿದ್ದರು.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 16 ಸಾವಿರ ಗಡಿ ದಾಟಿದೆ. ಸಾವಿರಾರು ಕಟ್ಟಡಗಳು ನೆಲಕ್ಕುರುಳಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಶವಗಳು ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.