ಯುಕೆಜಿಯ ಮಗುವನ್ನು ಫೇಲ್ ಮಾಡಿದ ಶಾಲೆ! ಎಲ್ಲೆಡೆ ಆಕ್ರೋಶ

Prasthutha|

ಆನೇಕಲ್: ಹುಸೂರು ಗೇಟ್ ಸಮೀಪದಲ್ಲಿರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯು ಯುಕೆಜಿಯಲ್ಲಿ ಓದುತ್ತಿದ್ದ ಮಗುವನ್ನು ಅನುತ್ತೀರ್ಣ ಮಾಡಿದ ಬಗ್ಗೆ ಶಾಲಾ ಆಡಳಿತ ಮಂಡಳಿಯ ವಿರುಧ್ದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

- Advertisement -

ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ವಿದ್ಯಾರ್ಥಿನಿ ಬಿ.ನಂದಿನಿ ಎಂಬ ಮಗು ಒಂದು ವಿಷಯದಲ್ಲಿ 40 ಅಂಕಗಳಲ್ಲಿ ಕೇವಲ ಐದು ಅಂಕ ಪಡೆದಿತ್ತು. ಹೀಗಾಗಿ ಆ ವಿಷಯದಲ್ಲಿ ಮಗು ಫೇಲ್ ಎಂದು ನಮೂದಿಸಲಾಗಿದೆ. ಇದರ ವಿರುದ್ಧ ಪೋಷಕರು ಸಿಟ್ಟಿಗೆದ್ದು ಟ್ವಿಟ್ ಮೂಲಕ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೂ ಟ್ವಿಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಯುಕೆಜಿ ತರಗತಿಯಲ್ಲಿ ಓದುತ್ತಿರುವ ಈ ಎಳೆಯ ಮಗುವನ್ನು ಫೇಲ್ ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ, ಹೃದಯ ಮೊದಲೇ ಇಲ್ಲ. ಆ ಮಗುವನ್ನು ಏನು ಮಾಡಲು ಹೊರಟಿದೆ ಈ ಮಹಾ ಸಂಸ್ಥೆ? ”ನನ್ನ ಗಮನಕ್ಕೆ ಈ ಮಹಾಕೃತ್ಯ ಬಂದ ಕೂಡಲೇ ಶಿಕ್ಷಣ ಇಲಾಖೆಯ ಆ ತಾಲೂಕಿನ ಪ್ರಮುಖರಿಗೆ ತಲುಪಿಸಿ ಈ ಶಾಲೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ನಾನು ಕೂಡ ಒಮ್ಮೆ ಈ ಶಾಲೆಗೆ ಸದ್ಯದಲ್ಲೇ ಭೇಟಿ ನೀಡಿ ಪಾವನಾಗಲು ಬಯಸಿದ್ದೇನೆ ಎಂದು ಸುರೇಶ್ ಕುಮಾರ್ ಟ್ವಿಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

- Advertisement -

“ಶಾಲಾ ಆ್ಯಪ್‌ನಲ್ಲಿ ನನ್ನ ಮಗಳ ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್ ನೋಡಿ ನಮಗೆ ಆಘಾತವಾಯಿತು. ಅವಳು 160 ರಲ್ಲಿ ಒಟ್ಟು 100 ಅಂಕಗಳನ್ನು ಗಳಿಸಿದ್ದಳು. ಆದರೆ ಒಂದು ವಿಷಯದಲ್ಲಿ 40 ರಲ್ಲಿ ಐದು ಅಂಕಗಳನ್ನು ಗಳಿಸಿದ್ದಳು. ಕನಿಷ್ಠ ಉತ್ತೀರ್ಣ ಅಂಕ 14 ಆಗಿತ್ತು,”ಎಂದು ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿರುವ ಹುಡುಗಿಯ ತಂದೆ ಮನೋಜ್ ಬಾದಲ್ ತಿಳಿಸಿದರು.

ಕರ್ನಾಟಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ಸ್ (ಕೆಎಎಂಎಸ್) ಅಧ್ಯಕ್ಷ ಡಿ. ಶಶಿಕುಮಾರ್ “ನಿಯಮ ಪ್ರಕಾರ ಶಾಲೆಯು “ಪಾಸ್” ಅಥವಾ “ಫೇಲ್” ಪದಗಳನ್ನು ಬಳಸುವಂತಿಲ್ಲ. ಶಿಕ್ಷಣದ ಹಕ್ಕು ಕಾಯಿದೆಯ ಪ್ರಕಾರ, ಮಗುವನ್ನು ‘ಫೇಲ್’ ಮಾಡುವ ಪ್ರಶ್ನೆಯೇ ಇಲ್ಲ. ಅಲ್ಲದೆ ‘ಫೇಲ್’ ಪದವನ್ನು ಬಳಸಲಾಗುವುದಿಲ್ಲ. ಬೇರೆ ಯಾವುದೇ ಪರಿಭಾಷೆಯನ್ನು ಬಳಸಿ ಅದನ್ನು ಸಂವಹನ ಮಾಡಬಹುದು. ಮಗುವಿನ ಕಾರ್ಯಕ್ಷಮತೆಯನ್ನು ತಿಳಿಸಲು ನಕಾರಾತ್ಮಕ ಅರ್ಥವನ್ನು ಬಳಸಲಾಗುವುದಿಲ್ಲ. ಅಲ್ಲದೆ, ಮಗುವಿಗೆ ಅಂಕಗಳನ್ನು ನೀಡುವ ಬದಲಿಗೆ ಆರ್‌ಟಿಇ ಕಾಯ್ದೆಯಡಿಯಲ್ಲಿ ಗ್ರೇಡ್ ಮಾತ್ರ ನೀಡಬೇಕು,” ಎಂದು ಶಶಿಕುಮಾರ್ ಹೇಳಿದರು.

ಪೋಷಕರು ಆರೋಪಿಸಿರುವಂತೆ ನಾವು ಯಾವ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಿಲ್ಲ. ಶೈಕ್ಷಣಿಕ ವರ್ಷದ ಕೊನೆಯಲ್ಲಿರುವಾಗ ಉತ್ತೀರ್ಣರಾಗುವ ಅಥವಾ ಅನುತ್ತೀರ್ಣದ ಪ್ರಶ್ನೆಯೇ ಬರುವುದಿಲ್ಲ. ಇದು ಡಿಸೆಂಬರ್ ತಿಂಗಳಲ್ಲಿ ನಡೆಸಿದ್ದ ಯೂನಿಟ್ ಟೆಸ್ಟ್ ಫಲಿತಾಂಶಕ್ಕೆ ಸಂಬಂಧಿಸಿದ್ದು ಎಂದು ಶಾಲಾಡಾಳಿತ ಮಂಡಳಿ ತಿಳಿಸಿದೆ.

ಶಾಲೆಯ ಮೊಬೈಲ್ ಅಪ್ಲಿಕೇಶನ್‌ ಮೂಲಕ ಮಕ್ಕಳಿಗೆ ಫಲಿತಾಂಶವನ್ನು ನೀಡಲಾಗುತ್ತಿದೆ. ಒಂದು ವಿಷಯದಲ್ಲಿ 35%ಕ್ಕಿಂತ ಕಡಿಮೆ ಪಡೆದರೆ “ಫೇಲ್” ಎಂದು ಸೆಟ್ ಮಾಡಲಾಗಿದೆ. ಕನಿಷ್ಠ ಅಂಕವನ್ನು ಪಡೆದ ನಂದಿನಿ ಯೂನಿಟ್ ಟೆಸ್ಟ್’ನಲ್ಲಿ ಫೇಲ್ ಎಂದು ತೋರಿಸುತ್ತಿದೆ.

ಮಕ್ಕಳಿಗೆ ಫಲಿತಾಂಶವನ್ನು ನೀಡಲು ಶಾಲೆಯಲ್ಲಿ ಮೊಬೈಲ್ ಅಪ್ಲಿಕೇಶನ್‌ನನ್ನು ಬಳಸಲಾಗುತ್ತಿದೆ. ಈ ಸಾಫ್ಟ್‌’ವೇರ್‌’ನಲ್ಲಿ “ಪಾಸ್” ಮತ್ತು “ಫೇಲ್” ಅನ್ನು ಸೆಟ್ ಮಾಡಲಾಗಿದೆ. ಒಂದು ವಿಷಯದಲ್ಲಿ 35%ಕ್ಕಿಂತ ಕಡಿಮೆ ಪಡೆದಿರುವುದರಿಂದ ಫೇಲ್ ಎಂದು ತೋರಿಸಿದೆ. ಯೂನಿಟ್ ಟೆಸ್ಟ್‌’ನಲ್ಲಿ ನಂದಿನಿ ಕನಿಷ್ಠ ಅಂಕವನ್ನು ಪಡೆದಿದ್ದರಿಂದ “ಫೇಲ್” ಎಂದು ತೋರಿಸಿದೆ. ಈ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿದ್ದೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

“ಶಾಲೆ ಬಳಸುತ್ತಿರುವ ಸಾಫ್ಟ್’ವೇರ್’ನಲ್ಲಿ ‘ಫೇಲ್’ ಎಂಬ ಪದವನ್ನು ನಮೂದಿಸಲಾಗಿದೆ. ಒಮ್ಮೆ ಪೋಷಕರು ಈ ಸಮಸ್ಯೆಯನ್ನು ನಮಗೆ ತಿಳಿಸಿದ ನಂತರ, ‘ಫೇಲ್’ ಎಂಬ ಪದವನ್ನು ತೆಗೆದುಹಾಕಲು ನಾವು ಸಾಫ್ಟ್’ವೇರ್ ಕಂಪನಿಗೆ ತಿಳಿಸಿದ್ದೇವೆ. ಇದರಿಂದ ಉಂಟಾದ ಯಾವುದೇ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ” ಎಂದು ಪ್ರಾಂಶುಪಾಲರು ಕ್ಷಮೆಯಾಚಿಸಿದ್ದಾರೆ.

Join Whatsapp