ಫಿಫಾ ವಿಶ್ವಕಪ್‌ | 50 ವರ್ಷಗಳಲ್ಲಿ ಮೊದಲ ಬಾರಿಗೆ ಫ್ರಾನ್ಸ್‌ ವಿರುದ್ಧ ಟ್ಯುನೀಷಿಯಾಗೆ ಗೆಲುವು

Prasthutha|

ಫಿಫಾ ವಿಶ್ವಕಪ್‌ ಟೂರ್ನಿಯ ಗ್ರೂಪ್‌ ಹಂತದ ಅಂತಿಮ ಪಂದ್ಯದಲ್ಲಿ ಟ್ಯುನಿಷಿಯಾ, ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡವನ್ನು ಏಕೈಕ ಗೋಲುಗಳ ಅಂತರದಲ್ಲಿ ಮಣಿಸಿದೆ.

- Advertisement -

ಎಜುಕೇಶನ್‌ ಸಿಟಿ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 9 ಬದಲಾವಣೆಗಳೊಂದಿಗೆ ಕಣಕ್ಕಿಳಿದ ಫ್ರಾನ್ಸ್‌, ಕೋಚ್‌ ದಿದಿಯರ್ ಡೆಶಾಂಪ್ಸ್ ತೀರ್ಮಾನಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಮೊದಲಾರ್ಧ ಗೋಲು ರಹಿತವಾಗಿ ಕೊನೆಗೊಂಡರೂ, ದ್ವಿತಿಯಾರ್ಧದ 58ನೇ ನಿಮಿಷದಲ್ಲಿ ಫ್ರಾನ್ಸ್‌ ಸಂಜಾತ ವಹ್ಬಿ ಕಝ್ರಿ ಗೋಲು ಗಳಿಸುವ ಮೂಲಕ ಟ್ಯುನೀಷಿಯಾಗೆ ಮುನ್ನಡೆ ತಂದುಕೊಟ್ಟಿದ್ದರು. ಸಮಬಲಕ್ಕಾಗಿ ಫ್ರಾನ್ಸ್‌, ಅಂತಿಮ ಸೆಕೆಂಡ್‌ವರೆಗೂ ನಿರಂತರವಾಗಿ ಟ್ಯುನೀಷಿಯಾ ಗೋಲು ಬಲೆಯನ್ನು ಗುರಿಯಾಗಿಸಿ ಮುನ್ನುಗ್ಗಿದರೂ ಸಹ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಟ್ಯುನೀಷಿಯಾದ ಎಲ್ಲಾ 11 ಆಟಗಾರರು ಡಿ ಬಾಕ್ಸ್‌ನಲ್ಲಿ ಫ್ರಾನ್ಸ್‌ ಮುನ್ನಡೆಗೆ ತಡೆಒಡ್ಡಿದರು.

ಹೆಚ್ಚುವರಿ ಸಮಯದ ಅಂತಿಮ ನಿಮಿಷದಲ್ಲಿ  (90+8) ಎಂಬಾಪೆ ಚಾಣಾಕ್ಷತನದಿಂದ ಗೋಲು ಬಲೆಯತ್ತ ಚೆಂಡನ್ನು ಬಾರಿಸಿದರಾದರೂ ಟ್ಯುನೀಷಿಯಾ ಗೋಲ್‌ಕೀಪರ್‌ ಐಮೆನ್ ದಹ್ಮೆನ್ ಅಮೋಘವಾಗಿ ಚೆಂಡನ್ನು ಹೊರದೂಡುವಲ್ಲಿ ಯಶಸ್ವಿಯಾದರು. ಇದಾದ ಕೆಲ ಸೆಕೆಂಡ್‌ಗಳ ಬಳಿಕ ಆಂಟೊಯಿನ್ ಗ್ರೀಝ್ಮನ್‌ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಟ್ಯುನೀಷಿಯಾ ಅಭಿಮಾನಿಗಳು ಗ್ಯಾಲರಿಯಲ್ಲಿ ಕಣ್ಣೀರಿಟ್ಟಿದ್ದರು. ಆದರೆ ಗೋಲನ್ನು ಖಚಿತಪಡಿಸಿಕೊಳ್ಳಲು ವಿಡಿಯೋ ರಿಪ್ಲೈ ಸಹಾಯ ಪಡೆದ ರೆಫ್ರಿ , ಆಫ್‌ಸೈಡ್‌ ಕಾರಣ ನೀಡಿ ಗ್ರೀಝ್ಮನ್‌ ಗೋಲನ್ನು ನಿರಾಕರಿಸಿದರು.

- Advertisement -

50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫ್ರಾನ್ಸ್‌ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದರೂ ಸಹ, ಕತಾರ್‌ ಫಿಫಾ ವಿಶ್ವಕಪ್‌ ಟೂರ್ನಿಯ ಮುಂದಿನ ಸುತ್ತಿಗೇರಲು ಟ್ಯುನೀಷಿಯಾ ವಿಫಲವಾಗಿದೆ. ಗ್ರೂಪ್‌ ಡಿ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ, ಡೆನ್ಮಾರ್ಕ್‌ ತಂಡವನ್ನು 0-1 ಗೋಲುಗಳ ಅಂತರದಲ್ಲಿ ಮಣಿಸಿದ ಪರಿಣಾಮ ಟ್ಯುನೀಷಿಯಾ ಹೊರನಡೆಯಬೇಕಾಯಿತು.

ಗ್ರೂಪ್‌ ಡಿಯಲ್ಲಿ ತಲಾ 6 ಅಂಕಗಳೊಂದಿಗೆ ಫ್ರಾನ್ಸ್‌ ಮತ್ತು ಆಸ್ಟ್ರೇಲಿಯಾ ಮುಂದಿನ ಸುತ್ತು ಪ್ರವೇಶಿಸಿದ್ದು, ಟ್ಯುನೀಷಿಯಾ (4 ಅಂಕ) ಮತ್ತು ಡೆನ್ಮಾರ್ಕ್‌ (1 ಅಂಕ) ಗುಂಪು ಹಂತದಲ್ಲೇ ಹೊರನಡೆದಿವೆ.



Join Whatsapp