ತುಮಕೂರು: ಹಿಜಾಬ್ ಧರಿಸಿ ಶಾಲಾ ಆವರಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿದ ಸಿಬ್ಬಂದಿಗಳ ನಡೆಯನ್ನು ತರಗತಿ ಬಹಿಷ್ಕರಿಸುವ ಮೂಲಕ ವಿದ್ಯಾರ್ಥಿಗಳು ಪ್ರತಿಭಟಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಇತ್ತೀಚೆಗೆ ಹಿಜಾಬ್ ಧರಿಸದಂತೆ ಒತ್ತಡ ಹೇರಿದ ಪ್ರಕರಣದ ವಿಚಾರಣೆಯು ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ವಿವಾದವಿರುವ ಕಾಲೇಜಿನಲ್ಲಿ ಮುಂದಿನ ಆದೇಶದ ವರೆಗೆ ಧಾರ್ಮಿಕ ಆಚರಣೆಯನ್ನು ಮುಂದುವರಿಸದಂತೆ ಮಧ್ಯಂತರ ಆದೇಶ ನೀಡಿತ್ತು. ನ್ಯಾಯಾಲಯದ ಈ ಆದೇಶವನ್ನು ದುರುಪಯೋಗ ಪಡಿಸಿಕೊಂಡ ಕಾಲೇಜು ಆಡಳಿತ ಮಂಡಳಿ, ಕರ್ನಾಟಕದ ಎಲ್ಲಾ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಪ್ರವೇಶಿಸದಂತೆ ಗೇಟ್ ಮುಂಭಾಗದಲ್ಲಿ ತಡೆಯುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಸರ್ಕಾರ ಮತ್ತು ಕಾಲೇಜು ಆಡಳಿತ ಮಂಡಳಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಮಧ್ಯೆ ಪಿಯು ಮತ್ತು ಪದವಿ ಕಾಲೇಜುಗಳು ಬುಧವಾರ ಪ್ರಾರಂಭಗೊಂಡಿದ್ದು, ಹಿಜಾಬ್ ಧರಿಸಿಕೊಂಡು ತುಮಕೂರು ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ಸಿಬ್ಬಂದಿ ಗೇಟ್ ನಲ್ಲಿಯೇ ತಡೆದು ನಿಲ್ಲಿಸಿದ್ದಾರೆ. ಇದರಿಂದ ಆಕ್ರೋಶಿತ ವಿದಾರ್ಥಿಗಳು ತರಗತಿ ಬಹಿಷ್ಕರಿಸಿ, ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.