ಶಿರವಸ್ತ್ರದಡಿ ಮುಖ ಮುಚ್ಚಿಕೊಳ್ಳಲು ಯತ್ನಿಸುತ್ತಿರುವ ಸರ್ಕಾರ

Prasthutha|

ಮನುಷ್ಯ ವರ್ಗದಲ್ಲಿ ಅತ್ಯುನ್ನತ ನೈತಿಕತೆ ಎಂದೇ ಪರಿಗಣಿಸಲಾಗಿರುವ ವಸ್ತ್ರಧಾರಣೆ ಇಂದು ಚರ್ಚಾ ವಸ್ತುವಾಗಿರುವುದು ಹಾಸ್ಯಾಸ್ಪದ. ಅದು ನ್ಯಾಯಾಲಯದ ಕಟಕಟೆ ಹತ್ತಿರುವುದಂತೂ ವಿಪರ್ಯಾಸ. ವೈಫಲ್ಯಗಳಿಂದ ಅವಮಾನಿತಗೊಂಡು ಜರ್ಜರಿತಗೊಂಡವರು ಮಾತ್ರ ಇಂತಹ ಶಿರವಸ್ತ್ರವನ್ನು ವಿವಾದವಾಗಿಸಿ ತಮ್ಮ ಮುಖಮುಚ್ಚಿ ಕೊಳ್ಳಲು ಪ್ರಯತ್ನಿಸುತ್ತಾರೆ. ಕರ್ನಾಟಕದಲ್ಲಿ ಉದ್ಭವಿಸಿರುವ ಶಿರವಸ್ತ್ರ ವಿವಾದದ ಹಿನ್ನೆಲೆಯನ್ನು ಗಮನಿಸುವಾಗ ರಾಜ್ಯ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಸೃಷ್ಟಿಸಿದ ಒಂದು ವಿವಾದ ಎನ್ನುವುದಕ್ಕೆ ಸಂಶೋಧನೆಯ ಅಗತ್ಯವಿಲ್ಲ.

- Advertisement -

ಕುಂದಾಪುರದಲ್ಲಿ ನಡೆದ ಕೊರಗರ ಮೇಲಿನ ದೌರ್ಜನ್ಯ, ಸಮಾಜ ಸುಧಾರಕ ನಾರಾಯಣ ಗುರುವಿಗೆ ಆದ ಅವಮಾನ, ಜನವಿರೋಧಿ ಕೇಂದ್ರ ಬಜೆಟ್, ಮಿತಿಮೀರಿದ ನಿರುದ್ಯೋಗ, ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಂತಾದ ಸಮಸ್ಯೆಗಳಿಂದ ಹತಾಶರಾಗಿರುವ ಜನಸಾಮಾನ್ಯರ ಆಕ್ರೋಶ ದಿನದಿಂದ ದಿನಕ್ಕೆ  ತೀವ್ರಗೊಳ್ಳುತ್ತಿರುವಾಗ ಏಕಾಏಕಿ ವ್ಯವಸ್ಥಿತವಾಗಿ ಹಿಜಾಬ್ ವಿವಾದ ಭುಗಿಲೇಳುತ್ತದೆ. ಈ ಸಂದರ್ಭವನ್ನು ಬಳಸಿಕೊಂಡ ಸರ್ಕಾರ ತನ್ನ ತಲೆಯನ್ನು ಹಿಜಾಬ್ನೊಳಗೆ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ.

ಮುಸ್ಲಿಮ್ ಮಹಿಳೆಯರು ಹಿಜಾಬ್ ಧರಿಸುವುದು ಸಾವಿರಾರು ವರ್ಷಗಳಿಂದ ರೂಢಿಯಲ್ಲಿರುವ ಸಂಪ್ರದಾಯ. ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸುವ ಪರಂಪರೆ ಎಲ್ಲೆಡೆ ನಡೆದುಕೊಂಡು ಬರುತ್ತಿದೆ. ಸಮವಸ್ತ್ರದ ಬಣ್ಣಕ್ಕೆ ಒಪ್ಪುವ ಶಿರವಸ್ತ್ರವನ್ನು ನಿಗದಿಪಡಿಸಿ ಸಮಸ್ಯೆಯನ್ನು ನಿವಾರಿಸಿರುವ ಹಲವು ನಿದರ್ಶನಗಳೂ ಇವೆ. ಆದರೆ ಚುನಾವಣೆಯ ಹೊತ್ತಿನಲ್ಲಿ ಹಿಜಾಬ್ ಅನ್ನು ವಿವಾದವಾಗಿಸಿರುವುದರ ಹಿಂದೆ ದುಷ್ಟ ಆಲೋಚನೆಯಿದೆ. ಶಿರವಸ್ತ್ರಕ್ಕೆ ಪ್ರತಿಯಾಗಿ ಕೇಸರಿ ಶಾಲು ಹಾಕಿಸುವ ಮೂಲಕ ಸಂಘಪರಿವಾರದ ನಾಯಕರು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಲು ಪ್ರಾರಂಭಿಸಿದ್ದಾರೆ. ಶಿಕ್ಷಕರು ಕೂಡ ಈ ಸಂದರ್ಭದಲ್ಲಿ ನಡೆದುಕೊಂಡ ರೀತಿ ಅವರ ವೃತ್ತಿ ಗೌರವಕ್ಕೆ ಚ್ಯುತಿ ತಂದಿದೆ. ತಮ್ಮ ಹಕ್ಕುಗಳನ್ನು ಕೇಳಿದ ವಿದ್ಯಾರ್ಥಿಗಳನ್ನೇ ಕಟಕಟೆಯಲ್ಲಿ ನಿಲ್ಲಿಸುವ, ಅವರದ್ದೇ ತಪ್ಪು ಎಂದು ಶರಾ ಬರೆಯುವ ಮಾಧ್ಯಮಗಳ ಹಿಡನ್ ಅಜೆಂಡಾ ಏನು ಎಂಬುದು ಎಲ್ಲರಿಗೂ ಅರಿವಾಗಿದೆ.

- Advertisement -

ಇತ್ತೀಚೆಗೆ ಮುಸ್ಲಿಮ್ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮ್ ಮಹಿಳೆಯರು ಸಾಧನೆಗೆಯ್ಯಲು ಸಾಧ್ಯವಾಗಿದೆ. ಇದನ್ನು ಸಹಿಸದ ದುಷ್ಟ ಶಕ್ತಿಗಳು ಹಿಜಾಬ್ ಹೆಸರಿನಲ್ಲಿ ಅವರ ಶಿಕ್ಷಣಕ್ಕೆ ಕೊಳ್ಳಿ ಇಡಲು ಮುಂದಾಗಿರುವುದರ ಮುಂದಿನ ಭಾಗವೇ ಹಿಜಾಬ್ ವಿವಾದ. ಸಾವಿರಾರು ವರ್ಷಗಳಿಂದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಶಿಕ್ಷಣದಿಂದ ವಂಚಿಸಿದ್ದ ಮನುವಾದಿಗಳಿಗೆ, ಇತ್ತೀಚಿನ ವರ್ಷಗಳಲ್ಲಿ ಈ ವರ್ಗಗಳು ಉನ್ನತ ಶಿಕ್ಷಣ ಪಡೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ದಲಿತರು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನೇ ಬಳಸಿಕೊಂಡು ಹಿಜಾಬ್ ‘ಭೂತ’ ತೋರಿಸಿ ಅವರ ದಾರಿ ತಪ್ಪಿಸಲಾಗಿದೆ. ಈ ಮೂಲಕ ಮನುವಾದಿಗಳು ಒಂದೇ ಕಲ್ಲಿಗೆ ಎರಡು ಹಕ್ಕಿ ಎಂಬಂತೆ ತಮ್ಮ ಗುರಿ ಸಾಧಿಸಿದ್ದಾರೆ. ಈ ಮೂರು ವರ್ಗದ ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಬೇಕು ಎಂಬ ದುಷ್ಟ ಚಿಂತನೆಯನ್ನು ಸಾಧಿಸಿದ್ದಾರೆ.

ಈ ವಾಸ್ತವವನ್ನು ಅಹಿಂದ ವರ್ಗ ಅರ್ಥ ಮಾಡಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸರ್ಕಾರ ಕೂಡ ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸದೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಶಿಕ್ಷಣದ ಹೆಸರಿನಲ್ಲಿ ಸಂವಿಧಾನ ಕೊಡಮಾಡಿದ ಧಾರ್ಮಿಕ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಂಡು ಶೈಕ್ಷಣಿಕ ವಾತಾವರಣವನ್ನು ಪೂರ್ವ ಸ್ಥಿತಿಗೆ ತರಬೇಕು. ಇದಕ್ಕೆ ಸರ್ಕಾರ ತನ್ನ ಕೋಮು ಅಜೆಂಡಾ ಕೈಬಿಟ್ಟು ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಜ್ಯದ ಭವಿಷ್ಯದ ಹಿತಾಸಕ್ತಿಯನ್ನು ರಕ್ಷಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

Join Whatsapp