ಸಿಇಟಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗೆ ಟ್ರಾಫಿಕ್ ಬಿಸಿ; ನೆರವಾದ ಪೊಲೀಸರು

Prasthutha|

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಹಿನ್ನೆಲೆಯಲ್ಲಿ ಶನಿವಾರ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಸಿಇಟಿ ಪರೀಕ್ಷೆ ಬರೆಯಲು ತೆರಳಿದ ಕೆಲವು ವಿದ್ಯಾರ್ಥಿಗಳೂ ತೊಂದರೆ ಅನುಭವಿಸಿದರು. ಈ ಮಧ್ಯೆ, ಮೆಜೆಸ್ಟಿಕ್​ನಿಂದ ಕೋರಮಂಗಲಕ್ಕೆ ತೆರಳಲು ಪರದಾಡಿದ ವಿದ್ಯಾರ್ಥಿಯೊಬ್ಬನಿಗೆ ಪೊಲೀಸರು ಸಹಾಯ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

- Advertisement -

ಕಂಠೀರವ ಸ್ಟೇಡಿಯಂ ಸುತ್ತಮುತ್ತ ಭಾರಿ ಟಾಫ್ರಿಕ್ ಜಾಮ್ ಇತ್ತು. ಪರಿಣಾಮವಾಗಿ ಮೆಜೆಸ್ಟಿಕ್‌ನಿಂದ ಕೋರಮಂಗಲಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿದ್ದ ವಿದ್ಯಾರ್ಥಿ ಶರವಣ ಕುಮಾರ್‌ಗೆ ಸಮಸ್ಯೆಯಾಗಿತ್ತು. ವಿದ್ಯಾರ್ಥಿ ಶರವಣ ಕುಮಾರ್‌ಗೆ ಸಹಾಯ ಮಾಡಿದ ಪೋಲೀಸರು ಕೇವಲ 15 ನಿಮೀಷದಲ್ಲಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿಬಿಟ್ಟರು. ಹೊಯ್ಸಳ ಚಾಲಕ ಎಸ್.ಟಿ.ಸೋಮಶೇಖರ್, ಹೆಡ್ ಕಾನ್‌ಸ್ಟೆಬಲ್ ಗೌರೀಶ್ ನೇತೃತ್ವದಲ್ಲಿ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲಾಯಿತು.

ವಿದ್ಯಾರ್ಥಿ ಸರವಣ ಕುಮಾರ್ ಮೆಜೆಸ್ಟಿಕ್‌ನಲ್ಲಿ ಸಿಲುಕಿಕೊಂಡಿದ್ದು, ಕೋರಮಂಗಲದಲ್ಲಿರುವ ತನ್ನ ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಪರೀಕ್ಷಾ ಕೇಂದ್ರ 10-11 ಕಿಮೀ ದೂರದಲ್ಲಿರುವುದನ್ನು ಗಮನಿಸಿದ ಹೊಯ್ಸಳ ಪೊಲೀಸರು ಆತನ ನೆರವಿಗೆ ಧಾವಿಸಿದ್ದಾರೆ.

- Advertisement -

ಪ್ರಮಾಣವಚನ ಸ್ವೀಕಾರ ಸಮಾರಂಭದ ಪ್ರಯುಕ್ತ ಹಲವೆಡೆ ವಾಹನ ಸಂಚಾರ ಮಾರ್ಗದಲ್ಲಿ‌ ಬದಲಾವಣೆ ಮಾಡಲಾಗಿತ್ತು. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಈ ಮಧ್ಯೆ, ಸಿಇಟಿ ಪರೀಕ್ಷೆಗೆ ತೆರಳುವ ಯಾವುದೇ ವಿದ್ಯಾರ್ಥಿಗೆ ಸಂಚಾರ ಸಂಬಂಧಿತ ಸಹಾಯ ಬೇಕಿದ್ದಲ್ಲಿ, ರಸ್ತೆಯಲ್ಲಿ ಕರ್ತವ್ಯನಿರತ ಸಂಚಾರ ಪೊಲೀಸರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿತ್ತು.

Join Whatsapp