ಬೆಳ್ತಂಗಡಿ: ಆಟೋ ಚಾಲಕ, ಸಹೋದರನ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನ- ಮೂವರ ಬಂಧನ

Prasthutha|

ಬೆಳ್ತಂಗಡಿ: ಆಟೋ ಚಾಲಕ ಮತ್ತು ಆತನ ಸಹೋದರನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ಕಳೆದ ರಾತ್ರಿ ನಡೆದಿದೆ.

- Advertisement -

ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಬಳಿಯ ನೆಲ್ಲಿಗುಡ್ಡೆ ನಿವಾಸಿಯಾದ ಆಟೋ ಚಾಲಕ ಹೈದರ್ ಯಾನೆ ಜಾಕ್ ಹೈದರ್ ಮತ್ತು ಅವರ ಅಣ್ಣನಾದ ರಫೀಕ್ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದರ್ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ಆರೋಪಿಗಳನ್ನು ಆಶುತೋಶ್, ಲತನ್ ಮತ್ತು ಚಂದ್ರಹಾಸ ಎಂದು ಗುರುತಿಸಲಾಗಿದೆ.

- Advertisement -

ಹೈದರ್ ಅವರು ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಆಟೋ ರಿಕ್ಷಾದಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ   ಅದೇ ಗ್ರಾಮದ ವಿಶ್ವನಾಥ ಪೂಜಾರಿ ಎಂಬವರ ಮಗ ಅಶುತೋಷ್ ಮತ್ತು ಇತರ ಮೂರು ಮಂದಿ ಕಾರು ಮತ್ತು ಬೈಕ್ ಗಳೊಂದಿಗೆ ಅಟೋ ರಿಕ್ಷಾವನ್ನು ಅಡ್ಡಕಟ್ಟಿ ಕಣ್ಣಿಗೆ ಮೆಣಸಿನ ಹುಡಿ ಎರಚಿ ತಲವಾರು, ಮಚ್ಚು, ಲಾಂಗು, ತ್ರಿಶೂಲಗಳೊಂದಿಗೆ ಇಬ್ಬರಿಗೂ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.

  ಗಾಯಾಳುಗಳ ಬೊಬ್ಬೆ ಕೇಳಿ ಸ್ಥಳೀಯ ಪ್ರತ್ಯಕ್ಷದರ್ಶಿಗಳಾದ ನೌಫಲ್  ಸಂತೋಷ್ ಮೊರಾಸ್, ಮತ್ತು ಇತರ ಸ್ಥಳೀಯ ನಿವಾಸಿಗಳು ಓಡಿ ಬಂದಿದ್ದು, ಅವರನ್ನು ಕಂಡ ಆರೋಪಿಗಳು ಮಾರಾಕಾಯುಧಗಳೊಂದಿಗೆ ನಿಮ್ಮನ್ನು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎ೦ದು ಬೆದರಿಕೆ ಒಡ್ಡಿ ಪರಾರಿಯಾಗಿರುತ್ತಾರೆ ಎನ್ನಲಾಗಿದೆ.

 ಗಾಯಾಳುಗಳನ್ನು ಸ್ಥಳೀಯರು ಸೇರಿ ಆಟೋ ರಿಕ್ಷಾದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.  

 ಬೆಳ್ತಂಗಡಿ ಪೋಲಿಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮತ್ತು ಸಾರ್ವಜನಿಕರ ಸಹಕಾರದಲ್ಲಿ ಕೇವಲ 2 ಗಂಟೆಯಲ್ಲಿ ಮೂವರು ಆರೋಪಿಗಳನ್ನು ಗೇರುಕಟ್ಟೆ ಜನತಾ ಕಾಲೋನಿಯ ಹತ್ತಿರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

 ಈ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ನೇತತ್ವದ ತಂಡದ ಹೆಡ್ ಕಾನ್ಸ್ಟೇಬಲ್ ಗಳಾದ ವೆಂಕಪ್ಪ, ಇಬ್ರಾಹಿಂ ಗರ್ಡಾಡಿ, ಕಾನ್ಸ್ಟೇಬಲ್ ಗಳಾದ ಬಸವರಾಜ್, ಹೆಡ್ ಕಾನ್ಸ್ ಸ್ಟೆಬಲ್ ಗಳಾದ ಲತೀಫ್, ಪಿ.ಸಿ. ಮಹಂತೇಶ್, ಚರಣ್, ವೆಂಕಟೇಶ್, ಮಲ್ಲಕಾರ್ಜುನ್ ಮತ್ತಿತರರು ಭಾಗವಹಿಸಿದ್ದರು.

Join Whatsapp