ದೇಶದಲ್ಲಿ ಮುಸ್ಲಿಮ್ ವಂಶಹತ್ಯೆಗೆ ಸಿದ್ಧತೆ ನಡೆಯುತ್ತಿದೆಯೇ?

Prasthutha: November 24, 2021
✍️ದಬಾಶಿಷ್ ರಾಯ್ ಚೌದರಿ

ಇಂಡಿಯಾ ಶಾಂತಿಯ ಮತ್ತು ಪ್ರೀತಿಯ ನಾಡು ಎಂಬ ಸಾಮಾನ್ಯ ಗ್ರಹಿಕೆಗೆ ಒಪ್ಪುವ ರೀತಿಯಲ್ಲಿ ಭಾರತದ ನಾಯಕರು ಗಾಂಧೀಜಿಯ ಕುರಿತು ಮಾತನಾಡುವುದಿದೆ. ಜವಾಬ್ದಾರಿಯುತ ಪ್ರಜಾಪ್ರಭುತ್ವ ಎಂಬ ಮೂಲಭೂತ ಹಕ್ಕುಗಳನ್ನು ಅದು ಎತ್ತಿ ಹಿಡಿಯುತ್ತದೆ. ಇದರಿಂದಾಗಿ ಇತ್ತೀಚೆಗೆ ಕಳೆದ ಒಂದೂವರೆ ವರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ವಿದೇಶಕ್ಕೆ ತೆರಳಿದಾಗ ಗಾಂಧೀಜಿ ಮತ್ತು ಅವರ ಆಶಯಗಳು ಎದ್ದು ಬಂದವು.

ಸೆಪ್ಟಂಬರ್ 24ರಂದು ಮೋದಿ ಪ್ರೆಸಿಡೆಂಟ್ ಜೋಬೈಡನ್‌ ರನ್ನು ವೈಟ್ ಹೌಸ್‌ ನಲ್ಲಿ ಭೇಟಿಯಾದಾಗ ಗಾಂಧೀಜಿಯ ‘‘ನ್ಯಾಯ, ವಿನಯ ಭಾವ ಮತ್ತು ಸಹಿಷ್ಣುತೆಯ ಸಂದೇಶ’’ವನ್ನು  ಹೇಳಿದ್ದರು. ಇಂದು ಗಾಂಧೀಜಿಯ ಈ ಸಂದೇಶ ಅತ್ಯಗತ್ಯವಾಗಿದೆ. ಮೋದಿ ವಿಶ್ವಸಂಸ್ಥೆಯಲ್ಲಿ ನಡೆಸಿದ ಭಾಷಣದಲ್ಲಿ ಜಗತ್ತು ಪ್ರತಿಗಾಮಿ ಚಿಂತನೆ ಮತ್ತು ಉಗ್ರವಾದದ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ ತನ್ನ ದೇಶದ ಪ್ರಜಾಪ್ರಭುತ್ವ ಹೆಗ್ಗಳಿಕೆಯನ್ನು ಒತ್ತಿ ಹೇಳಿದ್ದರು. ಅದರ ಜತೆಗೆ ಈ ವಾದವನ್ನು ಸಮರ್ಥಿಸಲು ಭಾರತ ಎಲ್ಲಾ ಪ್ರಜಾಪ್ರಭುತ್ವ ದೇಶದ ತಾಯಿ ಎಂಬ ಹೊಸ ವ್ಯಾಖ್ಯಾನವನ್ನೂ ನೀಡಿದರು. ಇದರ ಅರ್ಥವೇನೆಂದು ನಮಗಾರಿಗೂ ತಿಳಿಯದು. ಒಟ್ಟು ಹೇಳುವುದಾದರೆ ದೇಶದಲ್ಲಿ ತಾಯಿಯೊಬ್ಬಳು ತನ್ನ 12 ವರ್ಷದ ಮಗನ ಸಾವಿಗೆ ಕಾರಣ ಹುಡುಕುತ್ತಿದ್ದಾಳೆ.

ಅಮೆರಿಕಾದಲ್ಲಿ ಮೋದಿ ಈ ರೀತಿಯ ಹೇಳಿಕೆಗಳನ್ನು ನೀಡುವಾಗ ಭಾರತದ ಈಶಾನ್ಯ ರಾಜ್ಯವಾದ ಅಸ್ಸಾಮ್‌ ನಲ್ಲಿ ಆ ಹುಡುಗ ಪೊಲೀಸರ ‘ಹಾದಿ ತಪ್ಪಿ ಬಂದ’ ಬುಲೆಟ್‌ ಗೆ ಬಲಿಯಾಗಿದ್ದನು. ಬ್ರಹ್ಮಪುತ್ರಾ ನದಿಯ ತೀರದ ಒಂದು ಕುಗ್ರಾಮವನ್ನು ಪತ್ರಕರ್ತರು ಭೇಟಿಯಾದಾಗ ಬೆದರಿದ ಹಸೀನಾ ಬಾನು ಗದ್ಗದಿತಳಾಗಿ ಅವರು ನನ್ನ ಮಗನನ್ನು ಕೊಂದರು ಎಂದು ಹೇಳಿದ್ದರು.

ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಬಲವಂತವಾಗಿ ಒಕ್ಕಲೆಬ್ಬಿಸಿ ಅವರ ಸ್ಥಳವನ್ನು ಹಿಂದೂಗಳಿಗೆ ಹಂಚಿಕೊಡುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದಾಗ ಶೇಖ್ ಫರೀದ್ ಎಂಬ ಬಾಲಕ ಸಾವಿಗೀಡಾಗುತ್ತಾನೆ. ಫರೀದ್ ಸಾಯುವ ಸ್ವಲ್ಪ ಮೊದಲು ಅಂಚೆ ಕಚೇರಿಯಿಂದ ತನ್ನ ಪೌರತ್ವವನ್ನು ಸಾಬೀತು ಪಡಿಸುವ ಆಧಾರ್ ಕಾರ್ಡ್ ತಂದಿದ್ದನು. ಓರ್ವ ಬಾಲಕನ ಈ ರೀತಿಯ ದಾರುಣ ಸಾವು ದೇಶಕ್ಕೆ ಅವಮಾನವಾಗುವ ವಿಚಾರವಾಗಬೇಕಿತ್ತು. ಪೊಲೀಸರು ಫರೀದ್ ಮತ್ತು ಇತರ 5000 ಮಂದಿಯ ಮನೆಗಳನ್ನು ಕೆಡವಿ ಹಾಕಿತು. ಮನೆಯ ಮೇಲೆ ದಾಳಿ ಮಾಡಿದ ಪೊಲೀಸನನ್ನು ಫರೀದನ ನೆರೆಮನೆಯಾತ ದೊಣ್ಣೆಯಿಂದ ಹೊಡೆದಿರುವುದು ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಭೀಕರಗೊಳಿಸಿತು.

ಸಾಕಷ್ಟು ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿದ್ದ ಭಾರೀ ಪೊಲೀಸ್ ಪಡೆಗೆ ಮುಈನುಲ್ ಹಖ್‌ ನನ್ನು ಶರಣಾಗಿಸಲು ಸಾಧ್ಯವಿತ್ತು. ಆದರೆ ಪೊಲೀಸರು ಅವನ ಸಮೀಪಕ್ಕೆ ತೆರಳಿ ಗುಂಡಿಕ್ಕಿ ಕೊಂದು ಹಾಕಿದ್ದರು. ಗುಂಡಿನ ದಾಳಿಗೆ ಬಲಿಯಾಗಿ ಬಿದ್ದ ಮುಈನುಲ್ ಹಕ್‌ನ ದೇಹದ ಮೇಲೆ ಪೊಲೀಸರು ಲಾಠಿಯಿಂದ ನಿರಂತರ ಹೊಡೆಯುವ ದೃಶ್ಯವನ್ನು ದೇಶ ಕಂಡಿತು. ಪೊಲೀಸರನ್ನು ಹಿಂಬಾಲಿಸಿದ್ದ ಬಿಜೋಯ್ ಬನಿಯಾ ಎಂಬ ಫೋಟೋಗ್ರಾಪರ್‌ ನ ಆಗಮನದೊಂದಿಗೆ ದೃಶ್ಯ ಭಯಾನಕ ಹಂತಕ್ಕೆ ತಲುಪಿತು.  ಹಕ್ ಪ್ರಾಣ ಕಳೆದುಕೊಳ್ಳುವ ಸಂದರ್ಭದಲ್ಲಿ ಬನಿಯಾ ಮೃತದೇಹದ ಮೇಲೆ ಕುಣಿದು ಕುಪ್ಪಳಿಸುವ ಮೂಲಕ ರಾಕ್ಷಸೀಯ ವರ್ತನೆ ತೋರುತ್ತಾನೆ. ಬನಿಯಾ, ರಾಷ್ಟ್ರ ನಿರ್ಮಿಸಿದ ಹಿಂದೂ ಭಯೋತ್ಪಾದಕನ ಅತ್ಯಂತ ಹೊಸ ಮುಖವಾಗಿದ್ದ.

ಶೇಕಡ 84 ಹಿಂದೂಗಳು ಶೇಕಡ 14 ಮುಸ್ಲಿಮರಿರುವ ಒಂದು ದೇಶದಲ್ಲಿ ಮೋದಿಯ ಭಾರತೀಯ ಜನತಾ ಪಕ್ಷವು ಆಶ್ಚರ್ಯಕರ ಮಟ್ಟದಲ್ಲಿ ಹಿಂದೂಗಳ ಭಾವನೆಯನ್ನು ಕೆರಳಿಸಲು ಶಕ್ತವಾಯಿತು. ತಪ್ಪು ಮಾಹಿತಿಗಳನ್ನು ನೀಡಿ, ಮುಸ್ಲಿಮರನ್ನು ಅನ್ಯಗೊಳಿಸಿ ದ್ವೇಷ ಭಾಷಣಗಳನ್ನು ನಡೆಸಿ ಹಳೆಯ ಧರ್ಮ ದ್ವೇಷವನ್ನು ತೀವ್ರಗೊಳಿಸಿ, ಮಾಧ್ಯಮಗಳನ್ನು ವಶಪಡಿಸಿ, ಪ್ರಗತಿಪರ ಧ್ವನಿಗಳನ್ನು ದಮನಿಸಿ, ಹಿಂದೂ ಮೇಲ್ಜಾತಿ ಜಾಗರಣಾ ಗುಂಪುಗಳನ್ನು ಬಲಪಡಿಸಿ ಇದನ್ನು ಅವರು ಸಾಧ್ಯವಾಗಿಸಿದರು. ‘ಹಿಂದೂಗಳು ಅಪಾಯದಲ್ಲಿದ್ದಾರೆ’ ಎಂಬ ಬಲಪಂಥೀಯ ಸೃಷ್ಟಿ ದೇಶದೆಲ್ಲೆಡೆ ಅಲೆಯಾಗಿದೆ. ಇದರಿಂದಾಗಿ ದೇಶದ ದೊಡ್ಡ ಸಮಸ್ಯೆ ಮುಸ್ಲಿಮರೆಂದು ಹೆಚ್ಚಿನ ಹಿಂದೂಗಳು ನಂಬಲು ಕಾರಣವಾಯಿತು. ಮೋದಿ 2004ಕ್ಕೆ ಆಡಳಿತಕ್ಕೇರುವ ಮೊದಲು ಜನರ ಸಮಸ್ಯೆ ಬಡತನ, ಆರ್ಥಿಕ ಮುಗ್ಗಟ್ಟು ಮತ್ತು ಭ್ರಷ್ಟಾಚಾರವಾಗಿತ್ತು. ಇದನ್ನು ಪರಿಹರಿಸಲಾಗುವುದು ಎಂಬ ಭರವಸೆ ನೀಡಿ ಮೋದಿ ಅಧಿಕಾರಕ್ಕೇರುತ್ತಾರೆ. ಆದರೆ ಮೋದಿ ಆಡಳಿತದಲ್ಲಿ ಆರ್ಥಿಕ ಮುಗ್ಗಟ್ಟು ಚಿಂತಾಜನಕವಾಗಿ ಮುಂದುವರಿದು, ನಿರುದ್ಯೋಗ, ಬಡತನ ಹೆಚ್ಚಾದಾಗ ಜನರ ಗಮನ ಬೇರೆಡೆಗೆ ಸೆಳೆದು ಹೊಣೆಗಾರಿಕೆಯಿಂದ ಜಾರಿಗೊಳ್ಳಲು ಬಿಜೆಪಿಯು ಮೇಲ್ಜಾತಿ ರಾಜಕೀಯಕ್ಕೆ ತಿರುಗಿತು. ಮುಸ್ಲಿಮರು ಹಿಂದೂ ಹೆಣ್ಮಕ್ಕಳನ್ನು ಆಕರ್ಷಿಸಿ ಸಂತಾನ ಹೆಚ್ಚಿಸಿ ಹಿಂದೂ ಜನಸಂಖ್ಯೆಯನ್ನು ಮೀರುತ್ತಾರೆ ಮತ್ತು ಮುಸ್ಲಿಮ್ ರಾಷ್ಟ್ರ ನಿರ್ಮಿಸುತ್ತಾರೆ. ಆದುದರಿಂದ ಲವ್ ಜಿಹಾದ್ ವಿರುದ್ಧ ಹೊಸ ಕಾನೂನುಗಳ ಅಗತ್ಯವಿದೆ ಎಂದು ಪ್ರಚಾರ ಮಾಡಲಾಗುತ್ತದೆ. ಚುನಾವಣೆಯಲ್ಲಿ ಜಯಿಸಲು ಮುಸ್ಲಿಮರ ವಿರುದ್ಧ ಹಿಂದೂ ಮತದಾರರನ್ನು ಓಲೈಸಿ ಮುಸ್ಲಿಮರನ್ನು ದುಷ್ಟರೆಂದು ಪ್ರಚಾರ ಮಾಡಲಾಗುತ್ತದೆ.

ಮತಾಂತರ, ಗೋಹತ್ಯೆಯ ವಿರುದ್ಧ ಸಮಾನವಾದ ನಿಯಂತ್ರಣ, ಕಾನೂನು ಕೈಗೆತ್ತಿಕೊಳ್ಳಲು ಹಿಂದೂಗಳಿಗೆ ಪ್ರೇರಣೆ ನೀಡಲಾಗುತ್ತದೆ. ಮುಸ್ಲಿಮರ ವ್ಯಾಪಾರವನ್ನು ತಡೆಯಲು ಕರೆ ನೀಡುವ ಹಿಂದೂ ಮೇಲ್ವರ್ಗದ ದಾಳಿಗೆ ಮುಸ್ಲಿಮ್ ವ್ಯಾಪಾರಿಗಳು, ನೌಕರರು ಬಲಿಯಾಗುತ್ತಿದ್ದಾರೆ. ಇಂದಿನ ಭಾರತದಲ್ಲಿ ಸಾಮಾಜಿಕ ಜಾಲತಾಣಗಳು ಸ್ವತಃ ವಿರಾಜಮಾನರಾದ ರಕ್ಷಕರ ವಿಡೀಯೋಗಳಿಂದ ಸಮೃದ್ಧಿಯಾಗಿದೆ. ಅವುಗಳು ಇಂದು ಸಾಮಾನ್ಯವಾಗಿರುವ ಇನ್ನೂ ಸುದ್ದಿಯಾಗದ ಮುಸ್ಲಿಮರ ಥಳಿಸಿಹತ್ಯೆಗಳಿಗೆ ಕರೆ ನೀಡುತ್ತಿದೆ. ಉನ್ನತ ಹಿಂದೂ ಮೇಲ್ಜಾತಿ ವರ್ಗವು ಅವರ ದ್ವೇಷ ಭಾಷಣ ನಡೆಸಿದ ಕಾರಣಕ್ಕೆ ಶಿಕ್ಷಿಸಲ್ಪಡುವುದಿಲ್ಲ. ಜಾನುವಾರು ಸಾಗಾಟ, ಹಿಂದೂ ಮಹಿಳೆಯ ಜತೆ ಕುಳಿತುಕೊಂಡಿರುವ ಕಾರಣಕ್ಕೆ ನಿರಂತರವಾಗಿ ಮುಸ್ಲಿಮರ ಮೇಲೆ ದಾಳಿಯಾಗುತ್ತಿವೆ.

ಒರ್ವ ವ್ಯಕ್ತಿ ಮುಸ್ಲಿಮನಂತೆ ವೇಷಭೂಷಣ ಧರಿಸಿದ್ದರೂ ಆತ ದಾಳಿಗೆ ತುತ್ತಾಗುತ್ತಾನೆ. ‘‘ದಾಳಿಯನ್ನು ಮಾಡುವವರನ್ನು ಅವರ ಉಡುಪುಗಳಿಂದಲೆ ಗುರುತಿಸಬಹುದು’’ ಎಂದು ಸ್ವತಃ ಮೋದಿಯೇ ಒಂದು ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು. ಅಸ್ಸಾಮ್‌ ನಲ್ಲಿ ಮುಸ್ಲಿಮರ ಮೇಲೆ ನಡೆಯುವ ಕೋಮು ದಾಳಿ ಒಂದು ಪ್ರಾರಂಭ ಮಾತ್ರವಾಗಿದೆ. ಅದೇ ವೇಳೆ ಬಿಜೋಯ್ ಬನಿಯಾನ ಕ್ರೌರ್ಯಕ್ಕೆ ಒಂದು ಚರಿತ್ರೆಯಿದೆ. ದ್ವೇಷದ ಆಳಕ್ಕೆ ಭಾರತಕ್ಕಿಂತ ದೊಡ್ಡ ಇತಿಹಾಸವಿದೆ. ಓರ್ವ ಮುಸ್ಲಿಮ್ ಮೃತ ದೇಹದ ಮೇಲೆ ಬಿಜೋಯ್ ಬನಿಯಾ ನಡೆಸಿದ ನೃತ್ಯ ತಾಂಡವವು, ಅಸ್ಸಾಮ್‌ ನ ಮುಸ್ಲಿಮರು ಉಪಯೋಗವಿಲ್ಲದವರು, ಅಪಾಯಕಾರಿಗಳು ಮತ್ತು ಪರದೇಶಿಗಳು ಎಂಬ ಘೋಷಣೆಯನ್ನು ನಡೆಸಿತು ಮತ್ತು ಮುಖ್ಯವಾಹಿನಿಯಲ್ಲಿ ಅದು ಸ್ಥಾಪಿತವಾಯಿತು.

ಬ್ರಿಟಿಷರು ಅಲ್ಲಿನ ಸಮೃದ್ಧ ಕಾಡುಗಳನ್ನು ಕಡಿದು ಚಹಾ ಮತ್ತು ಇತರ ಕೃಷಿಗಳಿಗಾಗಿ ತೊಡಗಿದ ಅಂದಿನಿಂದಲೂ ‘ಈ ನಾಡು ವಿದೇಶಿಯರ  ವಶದಲ್ಲಿದೆ’ ಎಂಬ ಭಯ ನೂರಾರು ವರ್ಷಗಳಿಂದ ಅಲ್ಲಿನ ನಿವಾಸಿಗಳಲ್ಲಿ ಹುದುಗಿ ಹೋಗಿದೆ. ಜನಸಾಂಧ್ರತೆಯ ಪ್ರದೇಶದಿಂದ ಬಂಗಾಳಿ ರೈತರು ಭೂಮಿಯನ್ನು ಹುಡುಕಿ ಸುಲಭದಲ್ಲಿ ಲಭಿಸುವ ಫಲವೃಷ್ಟಿಯ ಒಳ ಪ್ರದೇಶಗಳಿಗೆ ವಲಸೆಯನ್ನು ತ್ವರಿತಗೊಳಿಸಿದರು. ಉಪಭೂಖಂಡದ ಆಕ್ರಮಣಕಾರಿ ವಿಭಜನೆ, ಬಾಂಗ್ಲಾದೇಶದ ಆರ್ಥಿಕ ಮುಗ್ಗಟ್ಟು, ರಾಜಕೀಯ ಅಸ್ಥಿರತೆ, ಯುದ್ಧ ಮೊದಲಾದವುಗಳಿಂದ ಇತ್ತೀಚೆಗೆ ನಡೆದ ವಲಸೆಯು ಅಸ್ಸಾಮಿ ವಂಶಜರ ಅಸಂತೃಪ್ತಿಗೆ ಕಾರಣವಾದವು. ಅದೇ ರೀತಿ ವಾತಾವರಣ ವ್ಯತ್ಯಯ, ನೆರೆ ಭೀತಿಯ ಡೆಲ್ಟಾ ಪ್ರದೇಶವಾದ ಬಾಂಗ್ಲಾದೇಶದಿಂದ ಸಾಮೂಹಿಕ ವಲಸೆ ಹೆಚ್ಚಾದವು.

ಮೋದಿಯ ಆಗಮನದೊಂದಿಗೆ ಅಸ್ಸಾಮೇತರ ಭಾಷೆ ಮಾತನಾಡುವ ಜನರೊಡನೆ ಅಸ್ಸಾಮಿಗಳಿಗಿರುವ ದ್ವೇಷವು ಹಿಂದೂ ರಾಷ್ಟ್ರ ವಾದದೊಂದಿಗೆ ತಳುಕು ಹಾಕಿ ಅಪಾಯಕಾರಿಯಾಗಿ ಬೆಳೆಯಿತು. ಒಂದು ಮೃತದೇಹವನ್ನು ತುಳಿದಿರುವುದಕ್ಕೆ ಈಗ ‘ರಾಷ್ಟ್ರ ಪ್ರೇಮದ’ ಸ್ಥಾನಮಾನ ದೊರಕಿದೆ. ಧರ್ಮ ಭ್ರಾಂತಿ ಈಗ ಘನತೆಯಾಗಿದೆ. ಬನಿಯಾನ ಕೃತ್ಯ ಆತನ ಪ್ರಕಾರ ಇಂಡಿಯಾದ ರಕ್ಷಣೆಯಾಗಿತ್ತು. ಹಖ್‌ ನ ಮರಣದ ಬಳಿಕ ಬನಿಯಾನನ್ನು ಪೊಲೀಸರು ಅಪ್ಪಿಕೊಳ್ಳುವುದು ವೀಡಿಯೋದಲ್ಲಿ ಕಾಣಬಹುದು. ಆತನ ವರ್ತನೆಯಿಂದ ಇತಿಹಾಸವನ್ನು ಆಯುಧವನ್ನಾಗಿಸುವ ದ್ವೇಷವನ್ನು ಮೌಲ್ಯವಾಗಿಸಿ ಪ್ರೋತ್ಸಾಹಿಸುವ ಮೋದಿಯನ್ನು ಕಾಣಲು ಸಾಧ್ಯ.

ಅಸ್ಸಾಮ್ ಮೋದಿಯ ದೊಡ್ಡ ಪರೀಕ್ಷಾ ಶಾಲೆಯಾಗಿದೆ. ಪೌರತ್ವ ಪರಿಶೀಲನಾ ಯೋಜನೆ ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸುವ ಮೊದಲು ಅಲ್ಲಿ  ಮುಸ್ಲಿಮರ ಲಿಟ್‌ ಮಸ್ ಟೆಸ್ಟಿಗೆ ವಿಧೇಯ ಮಾಡಲಾಗುತ್ತಿದೆ. ಇಂಡಿಯಾದಿಂದ ಬಾಂಗ್ಲಾದೇಶಿಗಳನ್ನು ಹೊರ ಹಾಕುವುದು ಮಾತ್ರ ಅವರ ಗುರಿ ಎಂದು ಬಿಜೆಪಿ ಹೇಳುತ್ತದೆ. ಬಿಜೆಪಿ ಅದನ್ನು ಭಾರತದ ಮುಸ್ಲಿಮರ ವಿರುದ್ಧ ಕಾನೂನಾಗಿ ಬಳಸುತ್ತಿದೆ.

ತಮ್ಮ ಭವಿಷ್ಯ ಏನಾಗಬಹುದು ಎಂದು ಸ್ಪಷ್ಟವಿಲ್ಲದ ಈ ರಾಜ್ಯದಲ್ಲಿ ಎರಡು ಮಿಲಿಯನ್ ಜನರು ತಮ್ಮ ಮತದಾನ ಹಕ್ಕನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಸರಕಾರದ ಆದೇಶ ಪ್ರಕಾರ ದೊಡ್ಡ ಮಟ್ಟದಲ್ಲಿ ನಡೆದ ಪೌರತ್ವ ನಿರಾಕರಣೆಯು 1982ರಲ್ಲಿ ಮ್ಯಾನ್ಮಾರ್‌ ನಲ್ಲಿ ರೋಹಿಂಗ್ಯನ್ ಜನತೆಯ ಪೌರತ್ಯ ನಿಷೇಧಕ್ಕೆ ಸಮಾನವಾಗಿದೆ. ಇದರ ಬಳಿಕ ಅವರ ಸಾಮೂಹಿಕ ಹತ್ಯಾಕಾಂಡ ಮತ್ತು ಸಾಮೂಹಿಕ ಪಲಾಯನ ನಡೆಯಿತು.

ಬಿಹಾರದಲ್ಲಿ ಸಂಶಯಾಸ್ಪದ ಕಾನೂನು ಬಾಹಿರ ವಲಸಿಗರ ವರದಿ ನೀಡುವಂತೆ ಜನರಿಗೆ ಸರಕಾರ ತಿಳಿಸಿರುವುದು ಒಂದು ಪ್ರಾರಂಭ ಮಾತ್ರವಾಗಿದೆ. ಈ ವಿಚಾರದಲ್ಲಿ ತುರ್ತು ಸಿದ್ಧತೆಯಲ್ಲಿರುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾಜ್ಯ ಹೈಕೋರ್ಟು ಗಡಿಪಾರು ಬಹು ಮುಖ್ಯವೆಂದು ನೆನಪಿಸಿ ವಲಸಿಗರಿಗಾಗಿ ಡಿಟೆನ್ಸನ್ ಸೆಂಟರ್ ತೊಡಗಲು ಸಲಹೆ ನೀಡಿದೆ. ಬಿಹಾರದ ಹದಿನೇಳು ಮಿಲಿಯನ್ ಮುಸ್ಲಿಮರು  ತಮ್ಮ ಭವಿಷ್ಯದ ಕುರಿತು ಆತಂಕದಲ್ಲಿದ್ದಾರೆ. ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ 25 ಮಿಲಿಯನ್ ಜನರಿರುವ ಪಶ್ಚಿಮ ಬಂಗಾಲ ಅದರ ಹತ್ತಿರವೇ ಇದೆ. ಅಧಿಕಾರ ಲಭಿಸಿದರೆ ಅಸ್ಸಾಮ್‌ ನಂತೆ ಬಿಹಾರದಲ್ಲೂ ಪೌರತ್ವ  ಕಾನೂನನ್ನು ಜಾರಿಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.

ಭಾರತದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಸ್ಲಿಮರು ರಾಜ್ಯದ ಆಹಾರ ಸಬ್ಸಿಡಿಯನ್ನು ಹಾಳುಗೆಡಹುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಅಸ್ಸಾಮ್‌ ನಂತೆ ಉತ್ತರ ಪ್ರದೇಶವು ರಾಜ್ಯದ ಹಿಂದುಳಿಯುವಿಕೆಗೆ ಮುಸ್ಲಿಮರ ಜನಸಂಖ್ಯೆ ಹೆಚ್ಚಳವೇ ಕಾರಣವೆಂದು ಹೇಳಿ ಎರಡು ಮಕ್ಕಳು ಎಂಬ ಕಾನೂನು ತಂದಿತು. ಈ ವಾದ ಸತ್ಯಕ್ಕೆ ದೂರವಾಗಿದೆ. ವಾಸ್ತವದಲ್ಲಿ ಮುಸ್ಲಿಮರ ಜನಸಂಖ್ಯೆಯ ಅನುಪಾತ ಕಡಿಮೆಯಾಗುತ್ತಿದೆ. ಆದರೆ ಸತ್ಯಕ್ಕೆ ಇಲ್ಲಿ ಬೆಲೆಯಿಲ್ಲ. 1945ರಲ್ಲಿ ಜರ್ಮನಿಯಲ್ಲಿ ಯಹೂದಿಯರನ್ನು ಇಲಿಗಳು ಎಂದು 1990ರಲ್ಲಿ ರುವಾಂಡದಲ್ಲಿ ಟುಟ್ಸಿಗಳನ್ನು ಹಾಥೆಗಳೆಂದು ಕರೆದಂತೆ ಇಂಡಿಯಾದಲ್ಲಿ ಮುಸ್ಲಿಮರನ್ನು ಬಿಜೆಪಿಯು ಹಿಂದೂಗಳ ಹಕ್ಕುಗಳನ್ನು ಕಬಳಿಸುವ ಗೆದ್ದಲುಗಳೆಂದು ಕರೆಯುತ್ತಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!