ರಾಜ್ಯದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಮುಂದೂಡಿಕೆಗೆ ಚಿಂತನೆ : ಸಚಿವ ಈಶ್ವರಪ್ಪ

Prasthutha|

ರಾಜ್ಯದಲ್ಲಿ ಕೊರೋನಾ ಉಲ್ಬಣಿಸುತ್ತಿದ್ದು, ಈಗಾಗಲೇ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಂದಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂಬರುವ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳ ಚುನಾವಣೆ ಕೂಡ ಮುಂದೂಡಿಕೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

- Advertisement -

ರಾಜ್ಯದಲ್ಲಿ ಜಿ.ಪಂ, ತಾ.ಪಂ ಚುನಾವಣೆ ನಡೆಸಬೇಕಾಗಿದೆ. ಕೋವಿಡ್ ಹೆಚ್ಚಳದಿಂದ ಚುನಾವಣೆ ಬೇಡವೆಂಬ ಸಲಹೆ ಇದೆ. ಹಾಗಾಗಿ ಸದ್ಯಕ್ಕೆ ಚುನಾವಣೆ ಮುಂದಕ್ಕೆ ಹಾಕಲು ಚಿಂತನೆ ನಡೆಸಲಾಗಿದೆ. ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇವೆ ನಂತರ ಇದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದ ಅವರು, ಅವಧಿ ಮುಗಿದ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳಲ್ಲಿ ಆಡಳಿತಾಧಿಕಾರಿ ಹಾಕಬೇಕು. ಈ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ. ಕೋವಿಡ್ ಹೆಚ್ಚು ಉಲ್ಬಣವಾಗುತ್ತಿದೆ. ಮೂರುವರೆ ಕೋಟಿ ಜನ ಇದರಲ್ಲಿ ಭಾಗಿಯಾಗಬೇಕು. ಹಾಗಾಗಿ ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ಇದೆ. ಇದನ್ನ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದು ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

- Advertisement -

ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಕೊರೋನಾ ಸೋಂಕಿನ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡುವ ಚಿಂತನೆ ಕೊನೆಯ ಹಂತದಲ್ಲಿದೆ. ಮುಂದೂಡಿಕೆ ಮಾಡಲು ಸರ್ಕಾರದ ಚಿಂತನೆ ನಡೆಸಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ನಂತರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗುತ್ತದೆ. ಚುನಾವಣೆ ಮುಂದೂಡಿಕೆ ಬಗ್ಗೆ ನಮ್ಮ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಅವರು ಮುಂದೂಡಿಕೆ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಹಾಗಾಗಿ ಜಿ.ಪಂ,ತಾ.ಪಂ ಚುನಾವಣೆ ನಡೆಸುವುದಿಲ್ಲ. ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

Join Whatsapp