ಬೆಂಗಳೂರು: ಭಾರತೀಯ ಸೇನಾ ಪಡೆಯ ವೀರ ಸೇನಾನಿ ಮತ್ತು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಅಕಾಲಿಕ ಸಾವಿನ ಕುರಿತು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವವರ ವಿರುದ್ಧ ಯಾವುದೇ ವಿಳಂಬವಿಲ್ಲದಂತೆ, ಪತ್ತೆ ಹಚ್ಚಿ ತೀವ್ರ ಕ್ರಮ ಕೈಕೊಳ್ಳಬೇಕೆಂದು, ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ದೇಶದ ಹೆಮ್ಮೆಯ ಸೇನಾನಿಯ ಸಾವಿನ ಬಗ್ಗೆ, ಸಂಭ್ರವಿಸುವಂಥ ಭಾವನೆಗಳನ್ನು ಜಾಲತಾಣದಲ್ಲಿ ಹರಿಬಿಡುವ ದುಷ್ಕರ್ಮಿಗಳು, ದೇಶವಿರೋಧಿಗಳಾಗಿದ್ದು, ಅವರ ವಿಳಾಸವನ್ನು ಪತ್ತೆ ಹಚ್ಚಿ ವಿಕೃತ ಮನಸ್ಸುಗಳಿಗೆ ತಕ್ಕ ಶಿಕ್ಷೆ ಆಗಬೇಕು, ಎಂದಿರುವ ಸಚಿವರು, ಈ ಕುರಿತು ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರೊಂದಿಗೆ ಮಾತನಾಡಿ, ಕೂಡಲೇ ಕ್ರಮ ಆಗಬೇಕು ಎಂದು ಸೂಚಿಸಿದ್ದಾರೆ.
ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ಸಾವು, ದೇಶಕ್ಕೆ ಭರಿಸಲಾಗದ ಅತಿ ದೊಡ್ಡ ನಷ್ಟ ಎಂದಿರುವ ಸಚಿವರು, “ರಾವತ್ ಅವರು ದೇಶಕ್ಕೆ ಸಲ್ಲಿಸಿರುವ ಸೇವೆ ಅಸಾಧಾರಣ” ಮತ್ತು ದಿವಂಗತರ ಬಗ್ಗೆ ವಿಕೃತ ಪೋಸ್ಟ್ ಮಾಡುವವರನ್ನು ಸಹಿಸುವುದಿಲ್ಲ, ಅವರಿಗೆ ಶಿಕ್ಷೆ ಯಾಗಬೇಕು, ಎಂದು ತಿಳಿಸಿದ್ದಾರೆ.