✍️ ಶಾಹಿದಾ ತಸ್ನೀಮ್
ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಸ್ವತಂತ್ರಗೊಳಿಸಲು ಲಕ್ಷಾಂತರ ಜನರು ನಡೆಸಿದ ನಿರಂತರ ಹೋರಾಟ, ತ್ಯಾಗ, ಬಲಿದಾನಗಳ ಸ್ಮರಣೆಯು ನಮಗೆ ಸ್ಫೂರ್ತಿದಾಯಕವಾಗಿದೆ. ಅಂಥವರ ಪೈಕಿ ಬೇಗಮ್ ಹಜ್ರತ್ ಮಹಲ್ ರವರ ಇತಿಹಾಸ ತಿಳಿದವರು ಬಹಳ ವಿರಳ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ದೇಶವೇ ಒಂದಾಗಿ ಹೋರಾಡಿತ್ತು. ಆಗ ಹಝ್ರತ್ ಮಹಲರು 1.5ಲಕ್ಷ ಸೈನಿಕರನ್ನು ಈ ಸಂಗ್ರಾಮದಲ್ಲಿ ತೊಡಗಿಸಿಕೊಂಡು ಬಹಳ ದೊಡ್ಡ ಮಟ್ಟದ ಹೋರಾಟವನ್ನು ಕಾಣಿಕೆಯಿತ್ತರು. ಆ ಪ್ರದೇಶದ ಅತ್ಯಂತ ದೊಡ್ಡ ಸೇನಾ ತುಕುಡಿ ಅದಾಗಿತ್ತು. ಇವರ ಸಂಘಟನಾ ಚತುರತೆ, ಅದಮ್ಯ ಸಾಹಸ, ಕುಶಲ ನೇತೃತ್ವದ ಕಾರಣ 1857ರ ಈ ಕ್ರಾಂತಿಯ ಸಂದರ್ಭ ಜಯಲಾಲ್, ಮಾನ್ ಸಿಂಗ್ ರಂಥ ರಾಜರು ಇವರಿಗೆ ಸಾಥ್ ನೀಡಿದರು.
1856ರ ಫೆಬ್ರವರಿ 7ರಂದು ಬ್ರಿಟಿಷರು ಲಕ್ನೋ ಮೇಲೆ ದಾಳಿ ನಡೆಸಿ ಅವದ್ ನ ನವಾಬ ವಾಜಿದ ಅಲೀ ಶಾಹನನ್ನು ಪದಚ್ಯುತಿಗೊಳಿಸಿದರು. ಪೆನ್ಶನ್ ನೀಡಿ ಕೊಲ್ಕತ್ತಾಗೆ ಗಡಿಪಾರು ಮಾಡಿದರು. ಆದರೆ ಅವರ ಪತ್ನಿ ಬೇಗಮ್ ಹಜ್ರತ್ ಮಹಲ್ ಇದನ್ನು ಒಪ್ಪದೆ ಹೋರಾಟವನ್ನು ಮುಂದುವರಿಸಿದರು. 1857ರ ಜುಲೈ 5ರಂದು ತನ್ನ 14 ವರ್ಷದ ಪುತ್ರ ಬಿರ್ಜಿಸ್ ಖಾದರ್ ನನ್ನು ಅವದ್ ನ ರಾಜನೆಂದು ಘೋಷಿಸಿ ತಾನು ರಾಜನ ಪ್ರತಿನಿಧಿ ಸ್ಥಾನವನ್ನು ತುಂಬಿಕೊಂಡರು. ಬ್ರಿಟಿಷರ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಲಕ್ನೋ ನಗರದ 4 ದಿಕ್ಕುಗಳಲ್ಲಿ ರಕ್ಷಣಾ ಗೋಡೆಗಳನ್ನು ಕಟ್ಟಲು 5 ಲಕ್ಷ ರೂಪಾಯಿ ಬಿಡುಗಡೆ ಗೊಳಿಸಿದರು. ಲಕ್ನೋವನ್ನು ಬ್ರಿಟಿಷರಿಂದ ರಕ್ಷಿಸಲು ಯುದ್ಧ ಕೌಶಲ್ಯದಲ್ಲಿ ನಿಪುಣಿಯಾಗಿದ್ದ ಈಕೆ ಓರ್ವ ಸರ್ವ ಸನ್ನಾಹ ಯೋಧನಂತೆ ಸುಮಾರು ಹತ್ತು ತಿಂಗಳುಗಳ ಕಾಲ ಹೋರಾಡಿದರು. ಸ್ವತಃ ರಣರಂಗಕ್ಕಿಳಿದು ಸೈನಿಕರಿಗೆ ಸ್ಫೂರ್ತಿ ನೀಡುತ್ತಿದ್ದರು. ಮುಸಾಬಾಗ್ ಯುದ್ಧದಲ್ಲಿ 9000 ಸೈನಿಕರ ನೇತೃತ್ವವನ್ನು ಸ್ವತಃ ಹಜರತ್ ಮಹಲ್ ವಹಿಸಿದ್ದರು. ಮಹಿಳಾ ಸೈನಿಕ ಶಕ್ತಿಯು ಅವರೊಂದಿಗಿತ್ತು. ಗೂಢಚರ್ಯೆಗಾಗಿ ಮಹಿಳೆಯರನ್ನು ನೇಮಿಸಿದ್ದರು.
1857ರ ಸಿಪಾಯಿ ದಂಗೆಯ ಪ್ರಾರಂಭದಿಂದ ಹಿಡಿದು ಕೊನೆಯ ತನಕ ಅತ್ಯಂತ ಚಾಕಚಕ್ಯತೆಯಿಂದ ಪ್ರಭಾವಯುತವಾಗಿ ಅವದ್ ನ ರಾಜಕೀಯವನ್ನು ನಿರ್ವಹಿಸಿದ್ದರು. ಭಾರತೀಯ ಸೇನೆಗೆ ಅಂತಿಮ ಸೋಲಾದಾಗ ಹಿಂದಿರುಗುವವರ ಪೈಕಿ ಕಟ್ಟ ಕಡೆಯವರು ಬೇಗಂ ಹಜರತ್ ಮಹಲ್ ಆಗಿದ್ದರು. ಸಂಗ್ರಾಮದ ಪ್ರಾರಂಭದಲ್ಲಿ ಯುದ್ದ ನಿಲ್ಲಿಸಿದರೆ ಶುಜಾ ಉದ್ ದೌಲನ ಭೂಪ್ರದೇಶವನ್ನು ಹಿಂದಿರುಗಿಸುವುದಾಗಿ ಬ್ರಿಟಿಷರು ವಾಗ್ದಾನ ಮಾಡಿದರು. ಆದರೆ ಬೇಗಂ ಹಜರತ್ ಮಹಲ್ ದೇಶದ ಸ್ವಾತಂತ್ರ್ಯಕ್ಕೆ ಪ್ರಾಶಸ್ತ್ಯ ನೀಡಿ ಬ್ರಿಟಿಷ್ ಅಧಿಕಾರಿಯ ಆಮಿಷವನ್ನು ತಿರಸ್ಕರಿಸಿದರು. ಯುದ್ಧ ಸೋತ ಮೇಲೆಯೂ ಹಜ್ರತ್ ಮಹಲ್ ಗೆ ವಾರ್ಷಿಕ 15 ಲಕ್ಷ ಮತ್ತು ರಾಜಕುಮಾರ ಬಿರ್ಜಿಸ್ ಖಾದರ್ ಗೆ 5 ಲಕ್ಷ ನೀಡುವುದಾಗಿ ಮೂರನೇ ಬಾರಿ ಸಂಧಾನ ಪತ್ರವನ್ನು ಗವರ್ನರ್ ಜನರಲ್ ಕಳುಹಿಸಿದ್ದರು. ಆದರೆ ಸ್ವಾಭಿಮಾನದ ಸಂಕೇತವಾಗಿದ್ದ ಹಜ್ರತ್ ಮಹಲ್ ಅದನ್ನು ತಿರಸ್ಕರಿಸಿದ್ದರು. ಉನ್ನತ ಬುದ್ದಿಮತ್ತೆ,ಗುಣ ಸಂಪನ್ನೆ ಮಾತೃ ಹೃದಯಿ, ಉತ್ಕಟ ದೇಶಪ್ರೇಮಿ ಮತ್ತು ಬ್ರಿಟಿಷರ ವಿರುದ್ಧ ಹೋರಾಡುವ ಅಚಲ ನಿರ್ಧಾರವು ಅವದ್ ನ ಜನಸಾಮಾನ್ಯರು, ಸೈನಿಕರು, ರೈತರು, ಯುವಕರು, ವರ್ತಕರು ಮತ್ತು ಜಮೀನ್ದಾರರು ಅವರೊಂದಿಗೆ ನಿಲ್ಲುವಂತೆ ಮಾಡಿತ್ತು. ಬ್ರಿಟಿಷರ ಕುಟಿಲತೆ, ಸಾಧನ ಸಂಪನ್ನತೆ ಕುತಂತ್ರಗಳ ಮುಂದೆ ರಾಜ ಮಹಾ ರಾಜರು ಕಂಗೆಟ್ಟಿದ್ದಾಗ ಹಜ್ರತ್ ಮಹಲ್ ತನ್ನದೇ ಆದ ರೀತಿಯಲ್ಲಿ ಕುತಂತ್ರಗಳನ್ನು ಹೆಣೆದರು.
ಬ್ರಿಟಿಷ್ ತುಕಡಿಯಲ್ಲಿದ್ದ ಕಾನ್ಪುರದ ಇಂಡಿಯನ್ ರೆಜಿಮೆಂಟಿನ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ದಾಳಿಯ ದಿಕ್ಕನ್ನು ಬ್ರಿಟಿಷರ ಕಡೆಗೆ ತಿರುಗಿಸಲು ಮನವೊಲಿಸಿದರು. ನೇಪಾಳದ ರಾಜರಿಗೆ ಗೋರಕ್ ಪುರ, ಆರಾ, ಅಝಂಗಡ ಒಳಗೊಂಡಂತೆ ತನ್ನ ರಾಜ್ಯದ ಕೆಲವು ಪ್ರಾಂತ್ಯಗಳನ್ನು ನೀಡಿ ಅವರ ಬೆಂಬಲ ಗಳಿಸಿದರು. ಯಾವುದೇ ಕಾರಣಕ್ಕೂ ಬ್ರಿಟಿಷರಿಗೆ ಕೈದಿಯಾಗಿ ಸಿಗಬಾರದೆಂದು ನಿರ್ಧರಿಸಿದ್ದರಿಂದಾಗಿ ಕೋಟೆ ತೊರೆಯಬೇಕಾಗಿ ಬಂತು. ಸಿಂಹಾಸನ ತೊರೆದ ಬಳಿಕವೂ ಅವದ್ ನ ಜನಮನದಲ್ಲಿ ಬ್ರಿಟಿಷರ ವಿರುದ್ಧ ಎರಡೂವರೆ ವರುಷದ ತನಕ ಕ್ರಾಂತಿಯ ಕಿಡಿ ಹಚ್ಚಿದರು ಅದಕ್ಕಾಗಿ ಅವರು ಹಿಮಾಲಯಕ್ಕೆ ತಾಗಿಕೊಂಡಿರುವ ಅವಧ್ ನ ಘೋರ ಕಾಡನ್ನು ತನ್ನ ಟಿಕಾಣಿಯಾಗಿ ಬಳಸಿದರು. ಅಲ್ಲಿ ಅಲೆಮಾರಿಯಂತೆ ಜೀವಿಸಿದರೂ, ಅಲ್ಲಿಂದಲೇ ಸೇನೆಯನ್ನು ಸಂಘಟಿಸಿ ಗೆರಿಲ್ಲಾ ಯುದ್ಧ ಮಾಡಿ ಬ್ರಿಟಿಷರ ಮೂಗು ಮುರಿಯುವಂತೆ ಮಾಡಿದರು. ಭಾರತದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿತ್ತು. ಬ್ರಿಟಿಷರ ದೌರ್ಜನ್ಯ ಹೆಚ್ಚುತ್ತಲಿತ್ತು. ಬಹದೂರ್ ಷಾ ಜಾಫರ್ ನನ್ನು ರಂಗೂನ್ ಗೆ ಗಡಿಪಾರು ಮಾಡಲಾಯಿತು. ಮೌಲ್ಯವಿ ಅಹ್ಮದ್ ಸಾಹೇಬ್ ರನ್ನು ಹತ್ಯೆ ಮಾಡಲಾಯಿತು. ಆದ್ದರಿಂದ ಹಜ್ರತ್ ಮಹಲ್ ರಿಗೆ ಲಕ್ನೋದ ಕಾಡುಗಳನ್ನು ತೊರೆದು ನೇಪಾಳಕ್ಕೆ ಪಲಾಯನಗೈಯ್ಯುವುದು ಅನಿವಾರ್ಯವಾಯಿತು. ನೇಪಾಳದ ರಾಜ ರಾಣಾ ಚಂದ್ ಬಹದ್ದೂರ್ ಇವರ ಸಾಹಸಗಳನ್ನು ಕೇಳಿ ಪ್ರಭಾವಿತರಾಗಿದ್ದರು. ಜೊತೆಗೆ ರಾಣಾ ಚಂದರಿಗೆ ಭಾರೀ ಪ್ರಮಾಣದ ವಜ್ರ ವೈಡೂರ್ಯಗಳನ್ನು ಕಾಣಿಕೆಯಾಗಿಯೂ ನೀಡಿದ್ದರು. ಆದ್ದರಿಂದ ಕೆಲವು ಶರತ್ತುಗಳ ಮೇರೆಗೆ ಹಜ್ರತ್ ಮಹಲ್ ನೇಪಾಳದಲ್ಲಿ ರಾಜಕೀಯ ಆಶ್ರಯ ಪಡೆದರು. ಕಠ್ಮಂಡುವಿನಲ್ಲಿ ಸಾಧಾರಣ ಮಹಿಳೆಯಂತೆ ಜೀವನ ಸಾಗಿಸಿದ ಅವರು 1879ರ ಏಪ್ರಿಲ್ ನಲ್ಲಿ ಅಲ್ಲೇ ಕೊನೆಯುಸಿರೆಳೆದರು.
1820ರಲ್ಲಿ ಫೈಝಾಬಾದ್ ನಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಬಳಿಕ ರಾಣಿಯಾಗಿ ಧೈರ್ಯ, ಶೌರ್ಯ, ತ್ಯಾಗ ಬಲಿದಾನಗಳ ಮೂಲಕ ಇತಿಹಾಸದಲ್ಲಿ ಸ್ಮರಣೀಯರಾದರು. ಅತ್ಯಂತ ಸಂಘರ್ಷಭರಿತ ಜೀವನದಲ್ಲೂ ಎದೆಗುಂದದೆ ಮುನ್ನಡೆದರು. ಬ್ರಿಟಿಷ್ ಇತಿಹಾಸಕಾರರು ಇವರನ್ನು ಹಾಡಿಹೊಗಳಿದ್ದಾರೆ ಧೈರ್ಯ, ಸಾಹಸದಲ್ಲಿ ಝಾನ್ಸಿ ರಾಣಿಗೆ ಪ್ರತಿಸ್ಪರ್ಧಿಯಾಗಿದ್ದರು ಎಂದು ಹೋಮ್ಸ್ ಹೊಗಳಿದ್ದರು. ಹಜ್ರತ್ ಮಹಲ್ ರ ಗೌರವಾರ್ಥ ಭಾರತ ಸರ್ಕಾರವು ಉತ್ತರಪ್ರದೇಶದ ವಿಕ್ಟೋರಿಯಾ ಪಾರ್ಕಿಗೆ ಬೇಗಮ್ ಹಜ್ರತ್ ಮಹಲ್ ಪಾರ್ಕ್ ಎಂದು ಮರು ನಾಮಕರಣ ಮಾಡಲಾಯಿತು 1962ರಲ್ಲಿ ಅವರ ಸ್ಮಾರಕವೊಂದನ್ನು ಅಲ್ಲಿ ನಿರ್ಮಿಸಲಾಗಿದೆ. 1984ರಲ್ಲಿ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಗೊಳಿಸಲಾಯಿತು. ಭಾರತ ಸರಕಾರದ ಅಲ್ಪಸಂಖ್ಯಾತ ಸಚಿವಾಲಯದ ವತಿಯಿಂದ 9 ರಿಂದ 12 ತರಗತಿಯಲ್ಲಿ ಕಲಿಯುವ ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗಾಗಿ ಬೇಗಂ ಹಜರತ್ ಮಹಲ್ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಬ್ರಿಟಿಷರ ಗುಲಾಮಗಿರಿಯನ್ನು ಒಪ್ಪಿಕೊಂಡು ವಿಲಾಸಿ ಜೀವನ ನಡೆಸುವ ಅವಕಾಶ ಅವರಿಗಿತ್ತು. ಆದರೆ ಅವರು ಸ್ವಾಭಿಮಾನಿಯಾಗಿ, ಸ್ವತಂತ್ರವಾಗಿ ಜೀವಿಸಲು ಬಯಸಿದರು. ಆದ್ದರಿಂದಲೇ ಜನರನ್ನು ಸಂಘಟಿಸಿ ವೀರಾವೇಶದಿಂದ ಹೋರಾಡಿದರು. ಓರ್ವ ಚತುರ ರಾಜಕಾರಣಿಯಾಗಿ ಬ್ರಿಟಿಷರ ನಿದ್ದೆಗೆಡಿಸಿದ್ದರು.
ಸ್ವಾತಂತ್ರ್ಯ ಎಂಬುದು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಅದನ್ನು ಇಂದು ಕಸಿಯಲಾಗುತ್ತಿದೆ. ಮಕ್ಕಳು, ಮಹಿಳೆಯರು, ಅಹಿಂದ ವರ್ಗದವರು, ಆದಿವಾಸಿಗಳು ವಿವಿಧ ರೀತಿಯ ಗುಲಾಮಗಿರಿಗೆ ತಲ್ಲಲ್ಪಡುತ್ತಿದ್ದಾರೆ. ಫ್ಯಾಸಿಸ್ಟರ, ಕಾರ್ಪೊರೇಟ್ ಉದ್ಯಮಿಗಳ ಕಪಿಮುಷ್ಠಿಯಿಂದ ದೇಶವನ್ನು ರಕ್ಷಿಸಬೇಕಾಗಿದೆ. ಅದಕ್ಕಾಗಿ ಪ್ರಾರಂಭಗೊಂಡ ಹೋರಾಟದ ಹುಟ್ಟಡಗಿಸಲು ಆಡಳಿತವರ್ಗ ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ಸನ್ನಿವೇಶದಲ್ಲಿ ಬೇಗಂ ಹಜರತ್ ಮಹಲ್ ರ ಶೌರ್ಯ ನಮಗೆ ಸ್ಫೂರ್ತಿಯಾಗಲಿ. ನಾವು ಒಂದಾಗಿ ಹೋರಾಡೋಣ, ನಾವು ಒಂದಾಗಿ ಹೋರಾಡಲು ಯಶಸ್ಸು ಅದರಲ್ಲೇ ಅಡಗಿದೆ ಎಂಬುದನ್ನು ಮರೆಯದಿರೋಣ.