ರಾತ್ರೋರಾತ್ರಿ ಮೂರುಕಡೆ ನುಗ್ಗಿದ ಕಳ್ಳ;  ಸಿ.ಸಿ.ಕ್ಯಾಮಾರದಲ್ಲಿ ದೃಶ್ಯ ಸೆರೆ

ಮೂಡಿಗೆರೆ:  ರಾತ್ರೋರಾತ್ರಿ ಗ್ರಾಮ ಪಂಚಾಯಿತಿ, ಅಂಗನವಾಡಿ, ಹಾಗೂ ಲೈಬ್ರರಿ ಸಹಿತ  ಮೂರುಕಡೆ ನುಗ್ಗಿದ ಕಳ್ಳ  ಒಂದು ಫೈಲ್ ಮತ್ತು ಲ್ಯಾಪ್ಟಾಪ್ ದೋಚಿಕೊಂಡು ಪರಾರಿಯಾದ ಘಟನೆ ಮೂಡಿಗೆರೆ ತಾಲ್ಲೂಕಿನ  ತರುವೆ ಪ್ರದೇಶದಲ್ಲಿ ನಡೆದಿದೆ.

ಬುಧವಾರ ನಡುರಾತ್ರಿ 1.20 ರ ವೇಳೆ  ತರುವೆ ಗ್ರಾಮ ಪಂಚಾಯಿತಿ ಬೀಗ ಹೊಡೆದು ಒಳ ನುಗ್ಗಿದ  ಕಳ್ಳ ಪಂಚಾಯಿತಿಯಲಿದ್ದ ಪ್ರತಿಯೊಂದು ಕಪಾಟು ಓಪನ್ ಮಾಡಿ ಯಾವುದೋ ಒಂದು ಫೈಲ್ ದೋಚಿಕೊಂಡು ಪರಾರಿಯಾಗುವ ದೃಶ್ಯ  ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

- Advertisement -

ಕಚೇರಿಯಲ್ಲಿ ದಾಖಲೆ ಚೆಲ್ಲಾಪಿಲ್ಲಿಯಾಗಿರುವ ಬಗ್ಗೆ ಸಿಬ್ಬಂದಿಗಳು ಗುರುವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದಾಗ ಗಮನಕ್ಕೆ ಬಂದಿದ್ದು ಕೂಡಲೇ ಬಣಕಲ್ ಪೊಲೀಸ್ ಠಾಣೆಗೆ ತರುವೆ  ಗ್ರಾ.ಪಂ.ಕಾರ್ಯದರ್ಶಿ ಜೋಕಿಂ ಕೊರ್ಡೇರೊ ದೂರು ನೀಡಿದ್ದಾರೆ.ಬಣಕಲ್ ಪೊಲೀಸ್ ಸಹಾಯಕ ಸಬ್ ಇನ್ ಸ್ಪೆಕ್ಟರ್ ಟಿ.ಕೆ.ಶಶಿ, ಪೊಲೀಸ್ ಸಿಬ್ಬಂದಿ ಸಚಿನ್, ಜಿಲ್ಲಾ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಮತ್ತಿತರ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತನಿಖೆ ಮುಂದುವರೆದಿದೆ.