►ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಕಾರ್ಯಕರ್ತರ ಸಭೆ
ಸುರತ್ಕಲ್: “ಸಮಾಜವನ್ನು ಒಡೆದು ಆಳುವ ಶಕ್ತಿಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಬೇಕಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಹೇಳಿದರು. ಬಂದಲೆಯಲ್ಲಿರುವ ಕಾರಣಿಕ ಕ್ಷೇತ್ರ ಶ್ರೀಮಂತ ರಾಜಗುಳಿಗ ಸನ್ನಿಧಾನಕ್ಕೆ ಭೇಟಿ ಕೊಟ್ಟು ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿ ಮಾಧ್ಯಮದ ಜೊತೆ ಮಾತಾಡಿದ ಅವರು, ಮಂಗಳೂರು ಉತ್ತರ ಕ್ಷೇತ್ರಕ್ಕೆ ಕೋಮು ಘರ್ಷಣೆ, ಗಲಭೆ, ಅಮಾಯಕರ ಹತ್ಯೆ, ಹಲ್ಲೆ ಇತ್ಯಾದಿ ಘಟನೆಗಳು ಕಪ್ಪು ಚುಕ್ಕಿಯಾಗಿ ಪರಿಣಮಿಸಿದೆ. ಹಿಂದೂ ಮುಸ್ಲಿಂ ಕ್ರೈಸ್ತರ ಮಧ್ಯೆ ಭಾವನಾತ್ಮಕ ಕೊಂಡಿ ಕಳಚಿ ಬೀಳದಂತೆ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಶಾಂತಿ, ಸೌಹಾರ್ದತೆಯ ಹೊಸ ನಾಡನ್ನು ಕಟ್ಟಬೇಕು ಎಂದರು.
ಕೋಮು ಸಾಮರಸ್ಯ, ಮತೀಯ ಸೌಹಾರ್ದತೆಗೆ ಒತ್ತುಕೊಟ್ಟು ಸಮಾಜವನ್ನು ಒಂದುಗೂಡಿಸುವ ಮಹತ್ವದ ಜವಾಬ್ದಾರಿ ನನ್ನ ಮೇಲಿದೆ ಎಂದ ಅವರು, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರ ಮಧ್ಯೆ ಬೇಧಭಾವ ಕಾಣದೆ ಎಲ್ಲರನ್ನೂ ಜೊತೆಗೆ ಕರೆದೊಯ್ಯಲು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಆದಿತ್ಯವಾರ ಬೆಳಗ್ಗೆ 6:30ಯಿಂದಲೇ ಕ್ಷೇತ್ರದಾದ್ಯಂತ ಸಂಚರಿಸಿದ ಇನಾಯತ್ ಅಲಿ ಸುರತ್ಕಲ್ ಚರ್ಚ್, ಬೋಂದೆಲ್ ಚರ್ಚ್, ಗುರುಪುರ ಚರ್ಚ್, ಕೆಲರಾಯ್ ಚರ್ಚ್, ಪಾಲ್ದನೆ ಚರ್ಚ್, ನೀರುಮಾರ್ಗದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ಕೊಟ್ಟು ಪ್ರಾರ್ಥಿಸಿದರು. ಬಳಿಕ ಕೋಡಿಕಲ್, ಮುಲ್ಲಕಾಡು, ಕೊಂಚಾಡಿ, ಪದವು ವಾರ್ಡ್ ನಲ್ಲಿ ಮನೆ ಮನೆ ಭೇಟಿ ಕೊಟ್ಟು ಪ್ರಚಾರ ಕಾರ್ಯದಲ್ಲಿ ಭಾಗಿಯಾದರು.
ಈ ವೇಳೆ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆ.ಅಶ್ರಫ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ ಮತ್ತಿತರರು ಉಪಸ್ಥಿತರಿದ್ದರು.