ಆಸ್ಟಿನ್: 8 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಐವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಹೂಸ್ಟನ್ ಸಮೀಪದ ಕ್ಲೇವ್ಲ್ಯಾಂಡ್ ಪಟ್ಟಣ ದಲ್ಲಿ ನಡೆದಿದೆ.
ರಾತ್ರಿ ವೇಳೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವ್ಯಕ್ತಿಯ ಬಳಿ ನಿದ್ದೆಯ ಸಮಯವಾಗಿರುವ ಕಾರಣ ತಮ್ಮ ಅಂಗಳದಲ್ಲಿ ಗುಂಡು ಹಾರಿಸಬೇಡ ಎಂದು ನೆರೆಮನೆಯ ಮಂದಿ ಕೇಳಿಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ವ್ಯಕ್ತಿ, ತನ್ನ ಎಆರ್-ಸ್ಟೈಲ್ ರೈಫಲ್ನಿಂದ ಮನೆಯೊಳಗೆ ನುಗ್ಗಿ, 8 ವರ್ಷದ ಬಾಲಕನ ಸಹಿತ ಕುಟುಂಬದ ಐವರು ಸದಸ್ಯರ ಮೇಲೆ ಗುಂಡು ಹಾರಿಸಿ, ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.