September 15, 2021

ರಾಷ್ಟ್ರೀಯ ಶಿಕ್ಷಣ ನೀತಿ – 2020 ಎಂಬ ಅಂಗೈಯಲ್ಲಿನ ಆಕಾಶ

✍️-ಆಶಿಕ್ ಮಾಚಾರ್

ಒಂದು ರಾಷ್ಟ್ರದ ಬೆಳವಣಿಗೆ ಹಾಗೂ ಅದರ ಪ್ರಗತಿಯ ವೇಗದಲ್ಲಿ ಶಿಕ್ಷಣದ ಪಾತ್ರ ಅಪಾರ. ಒಂದು ರಾಷ್ಟ್ರವು ಅತಿ ಶೀಘ್ರವಾಗಿ ಅಭಿವೃದ್ಧಿ ಹೊಂದಬೇಕಾದಲ್ಲಿ ಆ ದೇಶದ ಪ್ರಜೆಗಳ ಶಿಕ್ಷಣಮಟ್ಟ ಮುಖ್ಯ ಮಾನದಂಡವಾಗಿರುತ್ತದೆ. ಶಿಕ್ಷಣವೆನ್ನುವುದು ಕೇವಲ ಉದ್ಯೋಗವನ್ನು ಪಡೆಯಲು ಬೇಕಾದ ಒಂದು ಕರಾರಲ್ಲ, ಬದಲಾಗಿ ಓರ್ವ ವ್ಯಕ್ತಿಯ ಸಂಪೂರ್ಣ ಸಬಲೀಕರಣವನ್ನು ನಿರ್ಧರಿಸುವ ಒಂದು ಹಾದಿಯಾಗಿದೆ. ದೇಶದ ಪ್ರಸಕ್ತ ಸಾಕ್ಷರತೆಯ ಶೇಕಡ 69.3 ಆಗಿದ್ದು, ಸುಮಾರು 30 ಶೇಕಡಕ್ಕೂ ಅಧಿಕ ಜನಸಂಖ್ಯೆ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎನ್ನುವುದು ಬಹಳ ಕಳವಳಕಾರಿಯಾದಂತಹ ಅಂಶವಾಗಿದೆ. ದೇಶದ ಪ್ರಗತಿಯ ಗತಿಯ ಪ್ರಮುಖ ರೂವಾರಿಯಾದ ಶಿಕ್ಷಣ ಹಾಗೂ ಶೈಕ್ಷಣಿಕ ಕೇಂದ್ರಗಳನ್ನು ಆಯಾ ಸಮಯದ ಸರ್ಕಾರಗಳು ತಮ್ಮ ಅಜೆಂಡಾವನ್ನು ಪ್ರಚುರಪಡಿಸಲು ಬಳಸಿವೆ ಎಂದರೆ ಅತಿಶಯೋಕ್ತಿಯಾಗಲಾರದು.

ವಿಶ್ವದ ಇತಿಹಾಸವನ್ನು ತೆಗೆದು ನೋಡಿದರೆ ಬಹುತೇಕ ಎಲ್ಲಾ ಚಳುವಳಿಗಳಿಗೆ ಮತ್ತು ಕ್ರಾಂತಿಗಳಿಗೆ ಕಿಚ್ಚನ್ನು ಹತ್ತಿಸಿರುವುದು ವಿದ್ಯಾರ್ಥಿ ಸಮೂಹವಾಗಿದೆ. ಅದನ್ನು ಚೀನಾದ ತಿಯನ್ಮಾನ್ ಚೌಕ್ ನಿಂದ ಹಿಡಿದು ಈಜಿಪ್ಟ್ನ ತಹೀರೆ ಚೌಕ್ ಸೇರಿದ ಹಲವಾರು ಕ್ರಾಂತಿಗಳಲ್ಲಿ ನಮಗೆ ಕಾಣಲು ಸಾಧ್ಯವಾಗುತ್ತದೆ. ಆದುದರಿಂದ ಸರ್ಕಾರಗಳು ಯಾವಾಗಲೂ ವಿದ್ಯಾರ್ಥಿಗಳನ್ನು ಪರೀಕ್ಷೆಯೆಂಬ ಗುಮ್ಮನ ಹಿಂದೆ ನಿರತರಾಗಿರುವಂತೆ ಮಾಡುವ ಪ್ರಯತ್ನಗಳನ್ನು ಮಾಡುತ್ತಾ ಬಂದಿವೆ. ಇನ್ನು ಇಂಡಿಯಾದ ಇತಿಹಾಸವನ್ನು ತೆಗೆದು ನೋಡಿದರೆ, ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇತ್ತೀಚಿನ ಎನ್ ಆರ್ಸಿ/ಸಿಎಎ ವಿರೋಧಿ ಚಳುವಳಿಗಳಲ್ಲಿಯೂ ವಿದ್ಯಾರ್ಥಿಗಳು ಹೋರಾಟದ ಮುಂಚೂಣಿಯಲ್ಲಿರುವುದನ್ನು ಕಾಣಲು ನಮಗೆ ಸಾಧ್ಯವಾಯಿತು. ಒಂದು ಶಿಕ್ಷಿತ ನಾಗರಿಕ ಸಮೂಹ ಹಾಗೂ ವಿದ್ಯಾರ್ಥಿ ಶಕ್ತಿಯು ಒಂದುಗೂಡಿದರೆ ಆ ರಾಷ್ಟ್ರವು ಅದ್ಭುತವನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.


ಪ್ರಸ್ತುತ ಶಿಕ್ಷಣ ವ್ಯವಸ್ಥೆ:
6 – 14 ವಯೋಮಾನದ ಎಲ್ಲಾ ಮಕ್ಕಳಿಗೂ ಸಾರ್ವತ್ರಿಕ ಮತ್ತು ಕಡ್ಡಾಯ ಶಿಕ್ಷಣವು ಭಾರತದ ಗಣರಾಜ್ಯದ ಕನಸಾಗಿತ್ತು. ಸಂವಿಧಾನದ ಪರಿಚ್ಛೇದ 45ರಲ್ಲಿ ಇದನ್ನು ನಿರ್ದೇಶನ ನೀತಿಯನ್ನಾಗಿ ಸೇರಿಸಲಾಗಿದೆ. ಆದರೆ ಅರ್ಧ ಶತಮಾನ ಕಳೆದ ನಂತರವೂ ವಾಸ್ತವದಲ್ಲಿ ಈ ನಿರ್ದೇಶನವು ಇನ್ನೂ ಸಾಧಿಸಲಾಗದ ಒಂದು ಕನಸಾಗಿ ಬಾಕಿ ಉಳಿದಿದೆ. ಭಾರತದ ಸಂವಿಧಾನದ ಪ್ರಕಾರ, ಶಾಲಾ ಶಿಕ್ಷಣವು ಮೂಲತಃ ಒಂದು ರಾಜ್ಯ ವಿಷಯವಾಗಿತ್ತು-ಅಂದರೆ, ನೀತಿಗಳನ್ನು ನಿರ್ಧರಿಸುವ ಮತ್ತು ಅವುಗಳ ಅನುಷ್ಠಾನಕ್ಕೆ ರಾಜ್ಯಗಳಿಗೆ ಸಂಪೂರ್ಣ ಅಧಿಕಾರವಿತ್ತು. ಭಾರತ ಸರ್ಕಾರದ (ಕೇಂದ್ರ) ಪಾತ್ರ ಉನ್ನತ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುವುದಕ್ಕೆ ಸೀಮಿತವಾಗಿತ್ತು. 1976ರಲ್ಲಿ ಸಾಂವಿಧಾನಿಕ ತಿದ್ದುಪಡಿಯೊಂದಿಗೆ ಇದನ್ನು ಬದಲಾಯಿಸಲಾಯಿತು ಹಾಗೂ ತದನಂತರ ಶಿಕ್ಷಣವನ್ನು ಸಮವರ್ತಿ ಪಟ್ಟಿಯಲ್ಲಿ ಪರಿಗಣಿಸಲಾಯಿತು. ಅಂದರೆ, ಶಾಲಾ ಶಿಕ್ಷಣ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಸರ್ಕಾರದಿಂದ ರಾಷ್ಟ್ರೀಯ ಮಟ್ಟದಲ್ಲಿ ಸೂಚಿಸಲಾದರೂ ಅವುಗಳನ್ನು ಅನುಷ್ಠಾನಗೊಳಿಸುವ ಸ್ವಾತಂತ್ರ್ಯ ರಾಜ್ಯ ಸರ್ಕಾರಗಳಿಗೆ ನೀಡಲಾಯಿತು. ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವಲ್ಲಿ ರಾಷ್ಟ್ರೀಯ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಎಂದು ಕರೆಯಲಾಗುತ್ತದೆ. ಇದು ರಾಷ್ಟ್ರೀಯ ಪಠ್ಯಕ್ರಮವನ್ನು ಸಿದ್ಧಪಡಿಸುತ್ತದೆ. ಕೇಂದ್ರದಂತೆ ಪ್ರತಿಯೊಂದು ರಾಜ್ಯಕೂಡ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗಳನ್ನು ಹೊಂದಿವೆ. ಇವುಗಳು ಮೂಲಭೂತವಾಗಿ ರಾಜ್ಯಗಳ ಶಿಕ್ಷಣ ಇಲಾಖೆಗಳಿಗೆ ಶೈಕ್ಷಣಿಕ ತಂತ್ರಗಳು, ಪಠ್ಯಕ್ರಮಗಳು, ಶಿಕ್ಷಣ ಯೋಜನೆಗಳು ಮತ್ತು ಮೌಲ್ಯಮಾಪನ ವಿಧಾನಗಳನ್ನು ಪ್ರಸ್ತಾಪಿಸುವ ಸಂಸ್ಥೆಗಳಾಗಿವೆ.

ಸಾಮಾನ್ಯವಾಗಿ ರಾಜ್ಯ ಸಂಸ್ಥೆಯು ಕೇಂದ್ರೀಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸಿದರೂ ತಮ್ಮ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುವ ಸ್ವಾತಂತ್ರ್ಯವನ್ನು ಹೊಂದಿದ್ದವು. 1986 ರ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆ ಹಾಗೂ 1992ರ ಪ್ರೋಗ್ರಾಮ್ ಆಫ್ ಆ್ಯಕ್ಷನ್ ಪ್ರಕಾರ 14 ವರ್ಷ ವಯೋಮಾನಕ್ಕಿಂತ ಕೆಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲು ಕಲ್ಪಿಸಿತು. ಮಾತ್ರವಲ್ಲ ಆ ಸಮಯದಲ್ಲಿ ಸರ್ಕಾರವು ಜಿಡಿಪಿಯ 6 % ವನ್ನು ಶಿಕ್ಷಣಕ್ಕಾಗಿ ಮೀಸಲಿಡುವುದಾಗಿ ಹೇಳಿಕೊಂಡಿತು ಹಾಗೂ ಅದರ ಅರ್ಧ ಭಾಗವನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಖರ್ಚು ಮಾಡುವ ಸಂಕಲ್ಪವನ್ನೂ ಮಾಡಿತು. ಆದಾಗ್ಯೂ ಸರ್ಕಾರವು 1997 -98ರ ಅವಧಿಗೆ ಶಿಕ್ಷಣಕ್ಕಾಗಿ ಜಿಡಿಪಿಯ 3.6 % ವನ್ನು ಮೀಸಲಿಟ್ಟಿತು. ಸದ್ಯ ಇಂದಿನವರೆಗೂ ಶಿಕ್ಷಣಕ್ಕಾಗಿ ಜಿಡಿಪಿಯ ಸರಿಸುಮಾರು ಇದೇ ಶೇಕಡವನ್ನು ನೀಡಲಾಗುತ್ತಾ ಬಂದಿದ್ದು ಸರ್ಕಾರಗಳ ಭರವಸೆಗಳು ಕೇವಲ ಕಡತಗಳಿಗೆ ಹಾಗೂ ಭಾಷಣಗಳಿಗೆ ಸೀಮಿತವಾದದ್ದು ಎಂದು ಇದರಿಂದ ನಾವು ತಿಳಿದುಕೊಳ್ಳಬಹುದು. ಭಾರತೀಯ ಶಿಕ್ಷಣವನ್ನು ಸುಧಾರಿಸುವ ಉದ್ದೇಶದಿಂದ ಒಟ್ಟು 3 ಬಾರಿ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಹಾಗೂ ಅದರಲ್ಲಿ ತಿದ್ದಪಡಿಗಳನ್ನು ತರಲಾಗಿದೆ. 1968ರಲ್ಲಿ ಇಂದಿರಾ ಗಾಂಧಿ ಸರ್ಕಾರದ ಸಂದರ್ಭದಲ್ಲಿ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸಿದರೆ 1986ರ ರಾಜೀವ್ ಗಾಂಧಿ ಸರ್ಕಾರದ ಸಂದರ್ಭದಲ್ಲಿ ಎರಡನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಯಿತು. ಇದನ್ನು 1992ರ ನರಸಿಂಹ ರಾವ್ ಸರ್ಕಾರದ ಸಂದರ್ಭದಲ್ಲಿ ತಿದ್ದುಪಡಿ ಮಾಡಲಾಯಿತು. ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇದೀಗ ನರೇಂದ್ರ ಮೋದಿ ಸರ್ಕಾರದಲ್ಲಿ ಜಾರಿಗೆ ತರಲಾಗಿದೆ.


ರಾಷ್ಟ್ರೀಯ ಶಿಕ್ಷಣ ಆಯೋಗ (2019):
ಮಾಜಿ ಇಸ್ರೋ ಚೆಯರ್ ಮ್ಯಾನ್ ಡಾ. ಕೆ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ಆಯೋಗವನ್ನು ಪ್ರಕಾಶ್ ಜಾವಡೇಕರ್ ಮಾನವ ಸಂಪನ್ಮೂಲ ಅಭಿವೃದ್ಧಿ (2020ರಲ್ಲಿ ಇದನ್ನು ಶಿಕ್ಷಣ ಸಚಿವಾಲಯ ಎಂದು ಮರುನಾಮಕರಣ ಮಾಡಲಾಗಿದೆ) ಸಚಿವರಾಗಿದ್ದ ಸಂದರ್ಭದಲ್ಲಿ (2017) ರಚಿಸಲಾಯಿತು. ಡಾ.ಕೆ. ಕಸ್ತೂರಿ ರಂಗನ್ ರನ್ನು ಸೇರಿಸಿ ಒಟ್ಟು 9 ಮಂದಿಯ ಈ ಆಯೋಗದಲ್ಲಿ ಪ್ರೊ. ವಸುಧಾ ಕಾಮತ್(ಮಾಜಿ ಉಪಕುಲಪತಿ, ಎಸ್ ಎಡಿಟಿ ಮಹಿಳಾ ಕಾಲೇಜು, ಮುಂಬಯಿ), ಪ್ರೊ. ಮಂಜುಳ ಭಾರ್ಗವ (ಗಣಿತ ವಿಭಾಗ ಪ್ರಾಧ್ಯಾಪಕರು , ಪ್ರಿನ್ಸ್ ಟನ್ ವಿಶ್ವವಿದ್ಯಾಲಯ, ಅಮೆರಿಕಾ), ಡಾ. ರಾಮ ಶಂಕರ್ ಕುರೀಲ್ (ಮಾಜಿ ಸಂಸ್ಥಾಪಕ ಉಪಕುಲಪತಿ, ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ವಿಜ್ಞಾನ ವಿಶ್ವವಿದ್ಯಾಲಯ, ಮಧ್ಯಪ್ರದೇಶ) , ಪ್ರೊ. ಟಿ.ವಿ. ಕಟ್ಟಿಮನಿ (ಉಪಕುಲತಿ, ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ, ಮಧ್ಯಪ್ರದೇಶ ), ಕೃಷ್ಣ ಮೋಹನ್ ತ್ರಿಪಾಠಿ (ಮಾಜಿ ಅಧ್ಯಕ್ಷ , ಹೈಸ್ಕೂಲ್ ಹಾಗೂ ಮಧ್ಯಂತರ ಪರೀಕ್ಷಾ ಮಂಡಳಿ, ಉತ್ತರ ಪ್ರದೇಶ ), ಪ್ರೊ. ಮಝ್ಹರ್ ಆಸಿಫ್ (ಡೀನ್, ಪರ್ಶಿಯನ್ ಹಾಗೂ ಮಧ್ಯ ಏಷಿಯಾ ಅಧ್ಯಯನ ಕೇಂದ್ರ ಸಾಹಿತ್ಯ ಮತ್ತು ಸಂಸ್ಕೃತಿ ವಿಭಾಗ, ಜೆಎಯು), ಪ್ರೊ, ಎಂ.ಕೆ ಶ್ರೀಧರ್ ( ಮಾಜಿ ಸದಸ್ಯ ಕಾರ್ಯದರ್ಶಿ , ಕರ್ನಾಟಕ ಜ್ಞಾನ ಆಯೋಗ, ಬೆಂಗಳೂರು), ಡಾ . ಶಕೀಲ ಟಿ ಶಂಸು ( ಓಎಸ್ ಡಿ ಎನ್ ಇಪಿ, ಉನ್ನತ ಶಿಕ್ಷಣ ಇಲಾಖೆ, ರಾಷ್ಟ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ನವದೆಹಲಿ)ಇದ್ದಾರೆ.


ರಾಷ್ಟ್ರೀಯ ಶಿಕ್ಷಣ ನೀತಿ 2020:
ಡಾ.ಕೆ ಕಸ್ತೂರಿ ರಂಗನ್ ಅಧ್ಯಕ್ಷತೆಯ ಆಯೋಗವು 2019ರಲ್ಲಿ 484 ಪುಟಗಳ ವರದಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯನ್ನು ಮೊದಲು 60 ಪುಟಕ್ಕೆ ಸೀಮಿತಗೊಳಿಸಿದ್ದ ಕೇಂದ್ರ ಸರ್ಕಾರವು ತದನಂತರ ರಾತ್ರೋರಾತ್ರಿ ತಮ್ಮ ಅಧಿಕೃತ ವೆಬ್ ಸೈಟ್ ನಿಂದ ಅದನ್ನು ತೆಗೆದುಹಾಕಿ 66 ಪುಟದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಿಡುಗಡೆಗೊಳಿಸಿತು. ಬನ್ನಿ ಈ ಹೊಸ ಶಿಕ್ಷಣ ನೀತಿಯು ಏನನ್ನು ಪ್ರತಿಪಾದಿಸುತ್ತಿದೆ ಹಾಗೂ ಅದರ ಪರಿಣಾಮಗಳ ಕುರಿತು ಅರಿಯೋಣ.


ಇನ್ನು ಮುಂದಿನ ಶೈಕ್ಷಣಿಕ ಕಲಿಕೆ ಯಾವ ರೀತಿಯಲ್ಲಿರುವುದು?
ಈಗ ಇರುವಂತಹ 10 + 2 + 3 ಅಂದರೆ 4 ವರ್ಷಗಳ ಕಿರಿಯ ಪ್ರಾಥಮಿಕ ಕಲಿಕೆ, 3 ವರ್ಷಗಳ ಹಿರಿಯ ಪ್ರಾಥಮಿಕ ಕಲಿಕೆ. 3 ವರ್ಷಗಳ ಹೈಸ್ಕೂಲ್, 2 ವರ್ಷಗಳ ಪೂರ್ವ ವಿಶ್ವವಿದ್ಯಾಲಯ ಕಲಿಕೆ ಹಾಗೂ 3 ವರ್ಷಗಳ ವಿಶ್ವವಿದ್ಯಾಲಯ ಕಲಿಕೆಗಳ ಬದಲು 5 + 3 + 3 + 4 ಎಂಬ ನೀತಿಯನ್ನು ಪರಿಚಯಿಸಲಾಗಿದೆ. ಹೊಸ ನೀತಿಯ ಪ್ರಕಾರ ಮಕ್ಕಳು ಇನ್ನು ಮುಂದೆ 3 ವರ್ಷವಾದಂತೆಯೇ ಶಾಲೆಯನ್ನು ಸೇರಬೇಕಾಗಿದೆ. ಮೊದಲ 5 ವರ್ಷಗಳನ್ನು ಫೌಂಡೇಶನ್ (foundation), ನಂತರದ 3 ವರ್ಷಗಳನ್ನು ಪ್ರಿಪರೇಟರಿ (preparatory), ನಂತರದ 3 ವರ್ಷಗಳನ್ನು ಎಲಿಮೆಂಟರಿ (Elementary) ಹಾಗೂ ಕೊನೆಯ 4 ವರ್ಷಗಳನ್ನು ಸೆಕೆಂಡರಿ (secondary ) ಶಿಕ್ಷಣಗಳೆಂಬಂತೆ ವಿಂಗಡಿಸಲಾಗಿದೆ.


ಹೊಸ ಶಿಕ್ಷಣ ನೀತಿಗಳು ಹಾಗೂ ಅದರಲ್ಲಿನ ತಾಂತ್ರಿಕ ಲೋಪದೋಷಗಳು:

  1. ಮಕ್ಕಳು ಫೌಂಡೇಶನ್ ಹಂತಕ್ಕೆ 3ನೇ ವರ್ಷದಲ್ಲಿ ದಾಖಲಾಗಬೇಕಾಗಿದೆ ಹಾಗೂ ಈ ಹಂತ 5 ವರ್ಷಗಳದ್ದಾಗಿರುತ್ತದೆ. ಅಂದರೆ ಮಕ್ಕಳು 8 ವರ್ಷಗಳಾಗುವವರೆಗೆ ಈ ಹಂತದಲ್ಲಿ ವಿದ್ಯಾಭ್ಯಾಸವನ್ನು ಪಡೆಯಬೇಕಾಗುತ್ತದೆ. ಈ ಹಂತದಲ್ಲಿ ಯಾವುದೇ ರೀತಿಯ ಪರೀಕ್ಷೆಗಳಿರುವುದಿಲ್ಲ ಎಂದು ತಿಳಿಸಲಾಗಿದೆ. ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಅಂಗನವಾಡಿ ಪದ್ಧತಿಯನ್ನು ಸಂಪೂರ್ಣವಾಗಿ ಮುಚ್ಚುವ ಪರಿಸ್ಥಿತಿಯಾಗಿರುತ್ತದೆ ಈ ಹಂತದಿಂದ ಉಂಟಾಗುವ ಅನಾಹುತ. ಯಾಕೆಂದರೆ ಕೇವಲ ಅಂಗನವಾಡಿ ಕೇಂದ್ರಗಳಿರುವ ಪ್ರದೇಶಗಳಲ್ಲಿ ಪೋಷಕರು ತಮ್ಮ ಮಗುವನ್ನು ಅಲ್ಲಿ ದಾಖಲಾತಿ ಮಾಡದೆ ನಿರಂತರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕನಿಷ್ಠ ಪ್ರಿಪರೇಟರಿ ಹಂತದವರೆಗಿನ ತರಗತಿ ಇರುವ ಶಾಲೆಗೆ ದಾಖಲಾತಿಯನ್ನು ಮಾಡುವ ಅಪಾಯ ಇರುವ ಕಾರಣ ಸ್ವತಂತ್ರ್ಯ ಅಂಗನವಾಡಿಗಳು ಅವನತಿಯತ್ತ ಸಾಗುವ ಪರಿಸ್ಥಿತಿಯನ್ನು ಅಲ್ಲಗಳೆಯುವಂತಿಲ್ಲ. ದೇಶವು ಅತ್ಯಂತ ಹೆಚ್ಚು ಮಟ್ಟದಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಆಧರಿಸಿ 1975ರಲ್ಲಿ ಅಂಗನವಾಡಿಯನ್ನು ಆರಂಭಿಸಲಾಯಿತು. ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಹಾಗೂ ಅಗತ್ಯ ಆಹಾರ ಪದಾರ್ಥಗಳ ಉಪಯೋಗವನ್ನು ಬಡತನ ರೇಖೆಗಿಂತ ಕೆಳಗಿರುವ ಅದೆಷ್ಟೋ ಕುಟುಂಬಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಮಕ್ಕಳು ಪಡೆದರು, ಆದರೆ ಪ್ರಸ್ತುತ ಶಿಕ್ಷಣ ನೀತಿಯಲ್ಲಿ ಕೇವಲ ಮಧ್ಯಾಹ್ನದ ಊಟ ಹಾಗೂ ಬೆಳಗ್ಗಿನ ಉಪಹಾರದ ಕುರಿತು ಮಾತ್ರವೇ ಹೇಳಲಾಗಿದೆ. ಮೊದಲು ಗರ್ಭಿಣಿಯರಿಗೆ ಹಾಗೂ ಅಂಗನವಾಡಿ ಸೇರುವುದಕ್ಕಿಂತ ಮೊದಲೇ ಮಕ್ಕಳಿಗೆ ಸಿಗುತ್ತಿದ್ದ ಪೌಷ್ಟಿಕ ಆಹಾರದ ಕುರಿತು ಯಾವುದೇ ರೀತಿಯ ವಿವರಣೆಯನ್ನು ಈ ನೀತಿಯಲ್ಲಿ ನೀಡಲಾಗಿಲ್ಲ.
  2. ಅಷ್ಟೇ ಅಲ್ಲದೆ ಪ್ರಸ್ತುತ ಅಂಗನವಾಡಿ ಕಾರ್ಯಕರ್ತರಲ್ಲಿ 10 + 2 ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಉಳ್ಳವರಿಗೆ 6 ತಿಂಗಳ ಪ್ರಮಾಣಪತ್ರ ತರಬೇತಿ. 10 + 2 ಕ್ಕಿಂತ ಕೆಳಗಿನ ವಿದ್ಯಾರ್ಹತೆ ಉಳ್ಳವರಿಗೆ 1 ವರ್ಷದ ಡಿಪ್ಲೊಮಾ ತರಬೇತಿಯನ್ನು ನೀಡಲಾಗುವುದೆಂದು ಹೇಳಲಾಗಿದೆ. ತರಬೇತಿಯನ್ನು ಡಿಜಿಟಲ್ ಮಾಧ್ಯಮ ( ಡಿಟಿಎಚ್ / ಸ್ಮಾರ್ಟ್ ಫೋನ್ ) ಮುಖಾಂತರ ನೀಡಲಾಗುವುದೆಂದು ವಿವರಿಸಲಾಗಿದೆ. ಆದರೆ ಇಂದಿಗೂ ಮೊಬೈಲ್ ನೆಟ್ವರ್ಕ್ ಇಲ್ಲದ, ವಿದ್ಯುತ್ ಸರಬರಾಜು ಮುಟ್ಟದ ಅದೆಷ್ಟೋ ಹಳ್ಳಿಗಳು ಇಂಡಿಯಾದಲ್ಲಿವೆ. ಅಂತಹ ಪ್ರದೇಶಗಳಲ್ಲಿ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಕುರಿತೂ ಎಲ್ಲೂ ವಿವರಣೆ ನೀಡಲಾಗಿಲ್ಲ ,
  3. 2015-16ರ ನ್ಯಾಶನಲ್ ಫ್ಯಾಮಿಲಿ ಹೆಲ್ತ್ ಸಮೀಕ್ಷೆಯ (NFHS) ಪ್ರಕಾರ ದೇಶದಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕಡಿಮೆ ತೂಕದ ಸಮಸ್ಯೆ 35.7 %, ಕುಂಠಿತ ಬೆಳವಣಿಗೆ 38.4 % ಹಾಗೂ ವಯೋಮಿತಿಗೆ ಸರಿಯಾದ ಬೆಳವಣಿಗೆ ಇಲ್ಲದ ಸಮಸ್ಯೆಯು 21 % ದಷ್ಟು ಇರುವುದು ಕಂಡುಬಂದಿದ್ದು ಇದನ್ನು ಹೋಗಲಾಡಿಸುವ ಕುರಿತಾದ ಒಂದು ಸಮಗ್ರ ಪರಿಹಾರವನ್ನು ವಿವರಿಸುವುದರಲ್ಲಿ ಹೊಸ ಶಿಕ್ಷಣ ನೀತಿಯು ವಿಫಲವಾಗಿದೆ.
  4. ಹೊಸ ನೀತಿಯಲ್ಲಿ ವಿವಿಧ ಹಂತಗಳ ಶಿಕ್ಷಣವನ್ನು ವಿಶಿಷ್ಟ ರೂಪದ ತರಬೇತಿಯ ಮೂಲಕ ಅಂತಾರಾಷ್ಟ್ರೀಯ ಮಾದರಿಯಲ್ಲಿ ನೀಡುವ ಭರವಸೆಯನ್ನು ನೀಡಲಾಗಿದೆ. ಆದರೆ ನಾವು ಪ್ರಸಕ್ತ ದೇಶದ ಶಿಕ್ಷಣ ವ್ಯವಸ್ಥೆ, ಪ್ರಗತಿ ಹಾಗೂ ತಳಮಟ್ಟದ ಸಮಸ್ಯೆಗಳನ್ನು ಅರಿಯದಿದ್ದಲ್ಲಿ ಈ ಭರವಸೆಯು ಕೇವಲ ಅಂಗೈಯಲ್ಲಿ ಆಕಾಶ ತೋರಿಸಿದಂತಹ ಗಾದೆ ಮಾತಿನಂತಾಗಬಹುದು. ಯಾಕೆಂದರೆ ಸ್ವಾತಂತ್ರ್ಯ ಪಡೆದು ಇಂದಿಗೆ 75 ವರ್ಷಗಳು ಕಳೆದರೂ ಕೂಡ, ಇದುವರೆಗೆ ನಮ್ಮನ್ನಾಳಿದ ಸರ್ಕಾರಗಳಿಗೆ ಸರಿಯಾದ ಶಾಲಾ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ನಿರ್ಮಿಸಿದ ಕಟ್ಟಡಗಳಲ್ಲಿ ಜಾನುವಾರುಗಳು ಅಡ್ಡಾಡುವಂತಹ ಅದೆಷ್ಟೋ ದೃಶ್ಯಗಳನ್ನು ನಾವು ಕಂಡಿದ್ದೇವೆ. ಮಾತ್ರವಲ್ಲ ಶಾಲೆಗಳಲ್ಲಿ ಮಕ್ಕಳ ಅನುಪಾತಕ್ಕೆ ಅನುಗುಣವಾದ ಶಿಕ್ಷಕರನ್ನು ಒದಗಿಸಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಹಾಗೆಯೇ ಪೋಷಕರಲ್ಲಿ ಶಿಕ್ಷಣದ ಕುರಿತಾದ ಜಾಗತಿಯನ್ನು ಮೂಡಿಸುವಲ್ಲಿ ಸಾಕಷ್ಟು ಎಡವಿದೆ.
  5. 2016, ನವೆಂಬರ್ 15ರ ‘ಇಂಡಿಯಾ ಟುಡೇ’ ವರದಿಯ ಪ್ರಕಾರ ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳ ಕೊರತೆಯನ್ನು ಕಾರಣವಾಗಿಟ್ಟುಕೊಂಡು ಸುಮಾರು 13,817 ಶಾಲೆಗಳನ್ನು ಮುಚ್ಚುವ ಆದೇಶವನ್ನು ನೀಡಲಾಗಿದೆ. 2021 ಮಾರ್ಚ್ 18ರ ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ ಹಲ್ಯಾಣ ಸರ್ಕಾರವು ಈಗಾಗಲೇ 2,500 ರಾಜ್ಯ ಸರ್ಕಾರ ಅಧೀನದ ಶಾಲೆಗಳನ್ನು ಮುಚ್ಚಿದ್ದು ಇನ್ನೂ 1,057 ಶಾಲೆಗಳನ್ನು ಮುಚ್ಚಲು ಪಟ್ಟಿಯನ್ನು ತಯಾರಿಸಿದೆ. ಇಂಡಿಯನ್ ಎಕ್ಸ್ ಪ್ರೆಸ್ ನ 2018 ಜುಲೈ 6ರ ವರದಿಯ ಪ್ರಕಾರ ಕರ್ನಾಟಕದಲ್ಲಿ 28,847 ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ತೆಗೆಯಲಾಗಿದೆ. ಮಾತ್ರವಲ್ಲ ನ್ಯಾಶನಲ್ ಫೋರಂನ ವರದಿಯ ಪ್ರಕಾರ, ಒಟ್ಟು ದೇಶದಲ್ಲಿ ಇದುವರೆಗೆ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ಶಾಲೆಗಳನ್ನು ಮುಚ್ಚಲಾಗಿದೆ. ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ದೇಶದಲ್ಲಿ ಇಂತಹ ಘನಘೋರ ಹಂತದಲ್ಲಿರುವಾಗ ಸರ್ಕಾರವು ತರಾತುರಿಯಲ್ಲಿ 2021-22ರ ಅವಧಿಯಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಯನ್ನು ಮಾಡುವ ನಿರ್ಧಾರವನ್ನು ಮಾಡಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು 75 ವರ್ಷಗಳಿಂದ ಅಭಿವೃದ್ಧಿ ಪಡಿಸಲಾಗದೆ ಪರದಾಡುತ್ತಿರುವ ಸರ್ಕಾರಗಳು ‘ಅಂತಾರಾಷ್ಟ್ರೀಯ ಗುಣಮಟ್ಟ’ ಎಂದು ಎದೆ ಬಿರಿಯುತ್ತಿರುವ ಶಾಲೆಗಳನ್ನು ಯಾವ ರೀತಿಯಲ್ಲಿ ತಯಾರು ಮಾಡುತ್ತಾರೆ ಎನ್ನುವುದನ್ನು ಈ ಹೊಸ ನೀತಿಯಲ್ಲಿ ವಿವರಿಸಲಾಗಿಲ್ಲ.
  6. ಮಾತ್ರವಲ್ಲ ಆಟಿಇ ಫೋರಂನ ರಾಷ್ಟ್ರೀಯ ಸಂಚಾಲಕ ಅಂಬರೀಶ್ ರೈ ಅವರು ಹೇಳುವಂತೆ, ದೇಶದಲ್ಲಿ ಸುಮಾರು 12 ಲಕ್ಷದಷ್ಟು ಅಧ್ಯಾಪಕರುಗಳಿದ್ದು ಅದರಲ್ಲಿ ಸುಮಾರು 10 ಶೇಕಡದಷ್ಟು ಶಾಲೆಗಳನ್ನು ಓರ್ವ ಅಧ್ಯಾಪಕರು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೇಡಿಕೆಗೆ ಅನುಸಾರವಾಗಿ ಅಧ್ಯಾಪಕರುಗಳನ್ನು ಯಾವ ರೀತಿ ಒದಗಿಸಲಾಗುವುದು ಎನ್ನುವ ವಿಚಾರವನ್ನು ಹೊಸ ನೀತಿಯಲ್ಲಿ ತಿಳಿಸಲಾಗಿಲ್ಲ. ಹಾಗೆಯೇ ಪ್ರತಿ ವರ್ಷ ಸರ್ಕಾರವು ಎಷ್ಟು ಹೊಸ ಅಧ್ಯಾಪಕರುಗಳ ನೇಮಕಾತಿಯನ್ನು ಮಾಡುತ್ತಿದ್ದು ಇದೇ ರೀತಿಯಲ್ಲಿ ಮುಂದುವರೆದರೆ ಬೇಡಿಕೆಗೆ ತಕ್ಕಂತೆ ಶಾಲೆಗಳಿಗೆ ಅಧ್ಯಾಪಕರುಗಳನ್ನು ನೇಮಕಗೊಳಿಸಲು ಎಷ್ಟು ಸಮಯ ತಗಲಬಹುದೆಂಬ ಲೆಕ್ಕಾಚಾರವೂ ಕೂಡ ನಮಗೆ ಹೊಸ ನೀತಿಯಲ್ಲಿ ಕಾಣಲು ಸಾಧ್ಯವಾಗಿಲ್ಲ.
  7. 71ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ (National sample survey) 2014ರ ಪ್ರಕಾರ 40 % ಗಂಡು ಹಾಗೂ 44.8 ಹೆಣ್ಣು ಮಕ್ಕಳು ‘ಪ್ರಸ್ತುತ ದಾಖಲಾಗಿಲ್ಲ’ (currently not admitted ) ಎಂಬ ಪಟ್ಟಿಯಲ್ಲಿ ಬಂದರೆ 1.4 % ಗಂಡು ಹಾಗೂ 1.2 % ಹೆಣ್ಣು ಮಕ್ಕಳನ್ನು ದಾಖಲಾಗಿದ್ದಾರೆ ಆದರೆ ಹಾಜರಾಗುತ್ತಿಲ್ಲ (admitted but not attending) ಎಂಬ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣದ ಕುರಿತು ಜಾಗೃತಿಯ ಕೊರತೆ ಎಂದು ವರದಿ ಮಾಡಲಾಗಿದೆ.

ಪ್ರಸ್ತುತ ಶಿಕ್ಷಣ ನೀತಿಯು ಕೇವಲ ದಾಖಲಾತಿಗೊಂಡ ಮಕ್ಕಳೊಂದಿಗಿನ ಪೋಷಕರ ಬೆಳವಣಿಗೆ ಕುರಿತು ಮಾತ್ರವೇ ವಿವರಣೆಯನ್ನು ನೀಡಿದ್ದು ದಾಖಲಾತಿ ಹೊಂದದ ಮಕ್ಕಳ ಹಾಗೂ ಪೋಷಕರ ಕುರಿತು ಹೆಚ್ಚಾಗಿ ಯೋಜನೆಯನ್ನು ಹೊಂದಿಲ್ಲ. ಹೀಗೆ ದೇಶದ ತಳಮಟ್ಟದ ಶೈಕ್ಷಣಿಕ ಸಮಸ್ಯೆಗಳನ್ನು ಅಧ್ಯಯನ ಮಾಡದೇ ಅಥವಾ ಅವುಗಳನ್ನು ಬದಿಗೊತ್ತಿಕೊಂಡು ತರಾತುರಿಯಲ್ಲಿ ಕೇಂದ್ರ ಸರ್ಕಾರವು ಈ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಹೊರಟಿರುವ ಹಿಂದೆ ವಿನಾಶಕಾರಿ ಚಿಂತನೆ ಇದೆ ಎನ್ನುವ ವಿಚಾರವನ್ನು ಅಲ್ಲಗಳೆಯುವಂತಿಲ್ಲ.


ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣ:
ಹೊಸ ಶಿಕ್ಷಣ ನೀತಿಯ ವಿರುದ್ಧ ಈಗಾಗಲೇ ಹಲವಾರು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ತಮ್ಮ ಧ್ವನಿಯನ್ನು ಎತ್ತಿದ್ದು ಪ್ರಸ್ತುತ ನೀತಿಯು ವಿಪರೀತ ಖಾಸಗೀಕರಣವನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಿಸಿದ್ದಾರೆ. ಹೊಸ ಶಿಕ್ಷಣ ನೀತಿಯ ‘ಕ್ಲಸ್ಟರ್ ಆಫ್ ಎಕ್ಸಲೆನ್ಸ್’ (Cluster of excel lence) ಎಂಬ ಯೋಜನೆಯಡಿಯಲ್ಲಿ ಪ್ರತಿ 10 ಕಿ.ಮೀಗೆ ಒಂದು ಶಾಲೆ ಇರಬೇಕೆಂಬ ಪ್ರಸ್ತಾಪವನ್ನಿಟ್ಟಿದ್ದು, ಈ ಪ್ರಕಾರ ದೇಶದಲ್ಲಿರುವ ಸುಮಾರು ಒಟ್ಟು 65,000 ಶಾಲೆಗಳು 15,000ಕ್ಕೆ ಬಂದು ನಿಲ್ಲಲಿದ್ದು ಇದು ಶಿಕ್ಷಣದ ಖಾಸಗೀಕರಣಕ್ಕೆ ಮುಕ್ತ ಅವಕಾಶವನ್ನು ಮಾಡಿಕೊಡುತ್ತದೆ ಎಂದು ಭಾವಿಸಲಾಗಿದೆ. ಅಷ್ಟೇ ಅಲ್ಲದೆ 100ರಷ್ಟು ವಿದೇಶಿ ವಿಶ್ವವಿದ್ಯಾಲಯಗಳಿಗೆ ದೇಶದಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಅವಕಾಶ ಮಾಡಿಕೊಡುವುದಾಗಿ ಇದು ಹೇಳಿಕೊಂಡಿದ್ದು, ಅವುಗಳು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಮೇಲೆ ಬೀರುವ ಪ್ರಭಾವ ಹಾಗೂ ಅದರಿಂದ ಉಂಟಾಗುವ ವ್ಯಾಪಾರೀಕರಣದ ಪರಿಸ್ಥಿತಿಯನ್ನು ಎಲ್ಲೂ ಅವಲೋಕನ ಮಾಡಲಾಗಿಲ್ಲ. ದೆಹಲಿ ವಿಶ್ವವಿದ್ಯಾಲಯದ ಖಜಾಂಜಿಯಾದಂತಹ ಆಭಾ ದೇವಿ ಹಬೀಬ್ ಅವರು ಮೊದಲು ಆಟಿಇ ಒಳಗೊಂಡ 60 ಪುಟಗಳ ಶಿಕ್ಷಣ ನೀತಿಯನ್ನು ಬಿಡುಗಡೆ ಮಾಡಿದ್ದ ಸರ್ಕಾರವು ಅದನ್ನು ಹಿಂಪಡೆದು ಏಕಾಏಕಿ 66 ಪುಟಗಳ ಹೊಸ ನೀತಿಯನ್ನು ಬಿಡುಗಡೆಗೊಳಿಸಿದೆ.

ಈ ಹೊಸ ನೀತಿಯಲ್ಲಿ ಆರ್ ಟಿಇಯ ಪ್ರಸ್ತಾವನೆಯನ್ನೇ ಕೈಬಿಟ್ಟಿದ್ದು ಶಿಕ್ಷಣದ ಕುರಿತಾದ ಸರ್ಕಾರದ ನಿಯ್ಯತ್ತನ್ನು ಅರ್ಥಮಾಡಿಸುತ್ತದೆ ಎಂದಿದ್ದಾರೆ. ಸರ್ಕಾರವು ನಂತರ ಬಿಡುಗಡೆಗೊಳಿಸಿದ 66 ಪುಟದ ಶಿಕ್ಷಣ ನೀತಿಯಲ್ಲಿ ಶಿಕ್ಷಣದ ಹಕ್ಕು ಕುರಿತ ವಿವರಣೆಯನ್ನು ಅಳಿಸಿದ್ದು ಸರ್ಕಾರವು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿ ವ್ಯಾಪಾರಿಗಳಿಗೆ ಮಾರಾಟಮಾಡುವ ಉದ್ದೇಶವನ್ನು ಹೊಂದಿದೆ ಎಂಬ ಮಾತಿಗೆ ಪುಷ್ಟಿಯನ್ನು ನೀಡುತ್ತದೆ. ಮಾತ್ರವಲ್ಲ ಆಭಾ ದೇವಿ ಹಬೀಬ್ ಅವರು ಹೇಳುತ್ತಾರೆ ‘ಸರ್ಕಾರವು ಪದವಿ ಶಿಕ್ಷಣದಲ್ಲಿ ಹೆಚ್ಚುವರಿ ಒಂದು ವರ್ಷವನ್ನು ಸೇರಿಸುವ ಮೂಲಕ ವಿದ್ಯಾರ್ಥಿಗಳ ಮೇಲೆ ಹೆಚ್ಚು ಶುಲ್ಕದ ಭಾರವನ್ನು ಹೇರುತ್ತಿದೆ. ಖಾಸಗಿ ಶಾಲೆಗಳ ಶುಲ್ಕದ ಗರಿಷ್ಟ ಮಿತಿಯನ್ನು ಸರ್ಕಾರವು ನಿರ್ಧರಿಸುತ್ತದೆ ಎಂದು ಶಿಕ್ಷಣ ನೀತಿಯು ಹೇಳಿದ್ದು ಖಂಡಿತವಾಗಿಯೂ ಇದು ಖಾಸಗಿ ಶಾಲೆಗಳಿಗೆ ವರದಾನವಾಗಿ ಮಾರ್ಪಾಡಾಗಲಿವೆ. ಯಾಕೆಂದರೆ ನಾವು ಇಂದು ಕಾಣುವ ಅತಿ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದೋ ರಾಜಕಾರಣಿಗಳ ಒಡೆತನದಲ್ಲಿ ಅಥವಾ ಬಂಡವಾಳಶಾಹಿಗಳ ಮಾಲಕತ್ವದ ಅಧೀನದಲ್ಲಿ ಇರುವವುಗಳಾಗಿವೆ. ಆದುದರಿಂದ ಖಾಸಗಿ ಶಾಲೆಗಳು ತಮ್ಮ ಮನಸೋ ಇಚ್ಛೆ ಶುಲ್ಕವನ್ನು ನಿರ್ಧರಿಸುವ ಹಾಗೂ ಸರ್ಕಾರವು ಅವರುಗಳಿಗೆ ಬೇಕಾದ ರೀತಿಯಲ್ಲಿ ಗರಿಷ್ಠ ಮಿತಿಯನ್ನು ನಿರ್ಧರಿಸುವ ಭೀತಿ ಖಂಡಿತಾ ಇದೆ. ಅಲ್ಲದೇ ಇಂದಿನ ಕೇಂದ್ರ ಸರ್ಕಾರವು ಹೇಗೆ ಬಂಡವಾಳಶಾಹಿಗಳ ತಾಳಕ್ಕೆ ಕುಣಿಯುತ್ತಿವೆ ಎನ್ನುವುದಕ್ಕೆ ತೈಲ ಹಾಗೂ ಗ್ಯಾಸ್ ಬೆಲೆಯೇರಿಕೆಯೇ ಒಂದು ನಿದರ್ಶನವಾಗಿದ್ದು ಭವಿಷ್ಯದಲ್ಲಿ ಒಂದು ಕಡೆ ಖಾಸಗಿ ಶಾಲೆಗಳ ಶುಲ್ಕವನ್ನು ಭರಿಸಲಾಗದೆ ಇನ್ನೊಂದೆಡೆ ಸರ್ಕಾರೀ ಶಾಲೆಗಳಲ್ಲಿ ಸರಿಯಾದ ಸೌಲಭ್ಯವನ್ನು ಪಡೆಯದೆ ಶಿಕ್ಷಣದಿಂದ ಅತಂತ್ರರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವ ಪರಿಸ್ಥಿತಿಯನ್ನು ಅಲ್ಲಗಳೆಯುವಂತಿಲ್ಲ. ಇಂದಿನ ಸರ್ಕಾರವು ಎಷ್ಟರವರೆಗೆ ಬಂಡವಾಳಶಾಹಿಗಳ ಪರವಾಗಿದೆ ಎಂದರೆ ಕಳೆದ ಎಂಟು ವರ್ಷಗಳಲ್ಲಿ ಒಟ್ಟು 10.8 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮನ್ನಾ ಮಾಡಿದೆ. ಹಾಗೆಯೇ ಬಿಎಸ್ಎನ್ಎಲ್, ರೈಲ್ವೆ, ರಸ್ತೆ, ವಿದ್ಯುತ್ ಪ್ರಸರಣ, ವಿದ್ಯುತ್ ಉತ್ಪಾದಕಗಳು, ಪೈಪ್ ಲೈನ್, ಟೆಲಿಕಾಂ, ಗಣಿಗಾರಿಕೆ, ವಿಮಾನ ನಿಲ್ದಾಣ, ಬಂದರು ಹಾಗೂ ಕ್ರೀಡಾಂಗಣಗಳಿಗೆ ಸೇರಿದ ಸುಮಾರು 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಸೊತ್ತುಗಳನ್ನು ಸರ್ಕಾರವು ಮಾರಾಟಕ್ಕಿಟ್ಟಿದ್ದು ಸಂಪೂರ್ಣವಾಗಿ ದೇಶವನ್ನು ಬಂಡವಾಳಶಾಹಿಗಳ ಬಳಿ ಅಡವಿಡುವತ್ತ ಸಾಗುತ್ತಿದೆ.


ಶಿಕ್ಷಣದ ಕೇಂದ್ರೀಕರಣ ಹಾಗೂ ಕೇಸರೀಕರಣ:
ಹೊಸ ಶಿಕ್ಷಣ ನೀತಿಯ ಅತ್ಯಂತ ಕಳವಳಕಾರಿಯಾದ ಅಂಶವೆಂದರೆ ಶಿಕ್ಷಣದ ಕೇಂದ್ರೀಕರಣ ಹಾಗೂ ಕೇಸರೀಕರಣವಾಗಿದೆ. ಸಮವರ್ತಿ ಪಟ್ಟಿಯಲ್ಲಿರುವ ಅಂದರೆ ರಾಜ್ಯ ಹಾಗೂ ಕೇಂದ್ರದ ಜಂಟಿ ಜವಾಬ್ದಾರಿಯಲ್ಲಿರುವ ಶಿಕ್ಷಣವನ್ನು ಪ್ರಸ್ತುತ ಶಿಕ್ಷಣ ನೀತಿಯ ಮೂಲಕ ಸಂಪೂರ್ಣವಾಗಿ ಕೇಂದ್ರದ ಅಧೀನದಲ್ಲಿ ತರುವ ಪ್ರಯತ್ನವನ್ನು ಮಾಡಲಾಗಿದ್ದು ರಾಜ್ಯಗಳನ್ನು ಸಂಪೂರ್ಣವಾಗಿ ಮೂಲೆಗೆ ಸರಿಸುವ ಮೂಲಕ ತಮ್ಮ ಅಜೆಂಡಾವನ್ನು ಶಿಕ್ಷಣದಲ್ಲಿ ತೂರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರವು ನಡೆಸುತ್ತಿದೆ. ಇದರ ಪ್ರತಿಯಾಗಿ ಸರ್ಕಾರವು ಹೊಸ ನೀತಿಯಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ಯುಜಿಸಿ, ಏಐಸಿಟಿಇ (All india council for technical education) ಹಾಗೂ ಎನ್ಎಎಸಿಯನ್ನು (NAAC- national assessment and accredition council) ವಿಲೀನಗೊಳಿಸಿ ಒಂದು ಕೇಂದ್ರೀಕೃತವಾದ ಹೊಸ ಮಂಡಳಿಯನ್ನು ನಿರ್ಮಿಸುವ ಪ್ರಸ್ತಾಪವನ್ನಿಟ್ಟಿದ್ದು ಇದು ಶಿಕ್ಷಣವನ್ನು ಏಕವಿಭಾಗೀಯವಾಗಿ ನಿಯಂತ್ರಿಸುವ ಮೂಲಕ ತಮ್ಮ ಕೇಸರೀಕರಣದ ಉದ್ದೇಶವನ್ನು ಸಾಕಾರಗೊಳಿಸುವ ಇರಾದೆಯನ್ನು ಹೊಂದಿದೆ. ಸದ್ಯ ಮೇಲೆ ತಿಳಿಸಿದ ಮಂಡಳಿಗಳು ವಿಫಲಗೊಂಡಿದ್ದು ಅದಕ್ಕಾಗಿ ಕೇಂದ್ರೀಕೃತವಾದ ಒಂದು ಮಂಡಳಿಯ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಸರ್ಕಾರ ಹೇಳಿದರೂ, ಯಾಕಾಗಿ ಈ ಮಂಡಳಿಗಳು ವಿಫಲಗೊಂಡವು ಮತ್ತು ಪರಿಹಾರವಾಗಿ ಪರಿಚಯಿಸಿರುವ ಕೇಂದ್ರೀಕೃತ ಮಂಡಳಿಯು ಹೇಗೆ ಸಫಲಗೊಳ್ಳುವುದೆನ್ನುವುದನ್ನು ವಿವರಿಸುವಲ್ಲಿ ಹೊಸ ನೀತಿಯು ವಿಫಲಗೊಂಡಿದೆ. ಮಾತ್ರವಲ್ಲದೆ ಇಡೀ ನೀತಿಯ ಪ್ರತಿಯಲ್ಲಿ ಎಲ್ಲೂ ಕೂಡ ಜಾತ್ಯಾತೀತ, ಒಕ್ಕೂಟ ವ್ಯವಸ್ಥೆ ಹಾಗೂ ಸಮಾಜವಾದಿ ಎಂಬ ಸಾಂವಿಧಾನಿಕ ಶಬ್ದಗಳು ಕಾಣದೇ ಇರುವುದು ಸರ್ಕಾರದ ಕೇಸರೀಕರಣದ ಹುನ್ನಾರವನ್ನು ಬಯಲುಗೊಳಿಸುತ್ತದೆ. ಹಾಗೆಯೇ ಸರ್ಕಾರವು ಇತಿಹಾಸವನ್ನೂ ಕೂಡ ತಮ್ಮ ಅಜೆಂಡಾಗೆ ಹೊಂದುವಂತೆ ಹೆಕ್ಕಿಕೊಂಡಿದ್ದು ಕೇವಲ ಪ್ರಾಚೀನ ಮತ್ತು ಆಧುನಿಕ ಭಾರತೀಯ ಇತಿಹಾಸದ ಕುರಿತು ವಿವರಿಸಲಾಗಿದೆ. ದೇಶದ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಅಭಿವೃದ್ಧಿ ಹಾಗೂ ಉನ್ನತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಮಧ್ಯಕಾಲೀನ ಇತಿಹಾಸವನ್ನು ಹೊಸ ಶಿಕ್ಷಣ ನೀತಿಯಲ್ಲಿ ನಿರ್ಲಕ್ಷಿಸಿರುವುದು ದೇಶದ ಮುಸ್ಲಿಮ್ ಕೊಡುಗೆಗಳನ್ನು ಮುಂದಿನ ತಲೆಮಾರುಗಳಿಗೆ ತಲುಪದಂತೆ ಮಾಡುವ ಷಡ್ಯಂತ್ರದ ಒಂದು ಭಾಗವಾಗಿದೆ. ಹಾಗೆಯೇ ಹೊಸ ಶಿಕ್ಷಣ ನೀತಿಯ ಪ್ರತಿಯಲ್ಲಿ ಸುಮಾರು 30 ಬಾರಿ ‘ಸಾಂಪ್ರದಾಯಿಕ’ ಎನ್ನುವ ಪದವನ್ನು ಬಳಸಲಾಗಿದ್ದು ಇದು ಆರೆಸ್ಸೆಸ್ನ ಸಂಸ್ಕೃತಿ ಹೇರುವಿಕೆಯ ಒಂದು ಭಾಗ ಎನ್ನುವುದನ್ನು ಗ್ರಹಿಸಲು ಹೆಚ್ಚಿನ ಬುದ್ಧಿಯನ್ನು ಉಪಯೋಗಿಸಬೇಕಾದ ಅಗತ್ಯ ಇಲ್ಲ. ಅಷ್ಟೇ ಅಲ್ಲದೆ ಪ್ರಸ್ತುತ ಶಿಕ್ಷಣ ನೀತಿಯು ಕೇವಲ ಉದ್ಯೋಗ ಕೇಂದ್ರಿತ ನೀತಿಯಾಗಿದ್ದು, ಮಕ್ಕಳಿಗೆ ಶಿಕ್ಷಣವನ್ನು ಕೇವಲ ಉದ್ಯೋಗ ಪಡೆಯಲು ಬೇಕಾದ ಸಲಕರಣೆಯೆಂಬಂತೆ ಬಳಸುತ್ತಿದೆ. ಹಾಗೆಯೇ ಇದು ಶಾಲೆಗಳಲ್ಲಿನ ವಿದ್ಯಾರ್ಥಿ ಯೂನಿಯನ್, ಸೆಮಿನಾರ್, ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಾದ ಚರ್ಚೆ, ವಿದ್ಯಾರ್ಥಿ ಚಳುವಳಿ ಇತ್ಯಾದಿಗಳನ್ನು ನಿಗ್ರಹಿಸುವ ಉದ್ದೇಶವನ್ನು ಹೊಂದಿದ್ದು ದೇಶದ ಭವಿಷ್ಯವನ್ನು ಕತ್ತಲಿನತ್ತ ದೂಕಲಿದೆ.

ವಿಶ್ವಾದ್ಯಂತ ಭಾರತೀಯರು ಇಂದು ವಿವಿಧ ಉನ್ನತ ಹುದ್ದೆಗಳು ಸೇರಿದ ಅನೇಕ ಕೆಲಸಗಳನ್ನು ಮಾಡುತ್ತಿರುವುದಕ್ಕೆ ಮುಖ್ಯ ಕಾರಣ, ನಮ್ಮಲ್ಲಿರುವ ವಿವಿಧ ಭಾಷೆಗಳನ್ನು ಅರಿಯುವ ತಾಕತ್ತು ಹಾಗೂ ಇಂಗ್ಲಿಷ್ ಸಂವಹನದ ಶಕ್ತಿಯಾಗಿದೆ. ಆದರೆ ಕೇಂದ್ರ ಸರ್ಕಾರವು ಇಂದು ಅನುಮೋದಿಸುತ್ತಿರುವ ಶಿಕ್ಷಣ ನೀತಿಯಲ್ಲಿ ಇಂಗ್ಲಿಷ್ ಭಾಷೆಯನ್ನು ನಿರ್ಲಕ್ಷಿಸುತ್ತಿದ್ದು ಇದು ಹಿಂದಿ ಭಾಷಾ ಹೇರಿಕೆಯ ಒಂದು ಪ್ರಯತ್ನವೆಂದು ಮೇಲ್ನೋಟಕ್ಕೆ ಅರಿವಾಗುತ್ತಿದೆ. ಶಿಕ್ಷಣ ನೀತಿಯ ಕುರಿತು ಚರ್ಚೆಯನ್ನು ನಡೆಸಲು ಮತ್ತು ಅಭಿಪ್ರಾಯಗಳನ್ನು ಸಲ್ಲಿಸಲು ಸಮಿತಿಯು ಸುಮಾರು 144 ಏಜೆನ್ಸಿಗಳನ್ನು ಸಮೀಪಿಸಿದೆ ಎಂದರೂ ಅದರಲ್ಲಿ ಬಹುತೇಕ ಆರೆಸ್ಸೆಸ್ ಹಾಗೂ ಬಲಪಂಥೀಯ ವೈಚಾರಿಕತೆಯ ಸಂಸ್ಥೆಗಳು ಹಾಗೂ ವ್ಯಕ್ತಿಗಳಾಗಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಬೆಂಗಳೂರಿನ ವೇದ ವಿಜ್ಞಾನ ಶೋಧಾ ಸಂಸ್ಥಾನಂ (VVSS) ಇದರ ನಿರ್ದೇಶಕರಾದ ವಿನಯ ಚಂದ್ರ ಇವರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದ್ದು ಇವರು ಆರೆಸ್ಸೆಸ್ ಸರಸಂಘಚಾಲಕರಾದ ಎಂ.ಎಸ್ ಗೋಳ್ವಾಲ್ಕರ್ ಅವರನ್ನು ಆಧ್ಯಾತ್ಮಿಕ ಮಾರ್ಗದರ್ಶಿಯಾಗಿ ಹೇಳಿಕೊಂಡಿದ್ದು ಇವರಿಂದ ಯಾವ ರೀತಿಯ ಅಭಿಪ್ರಾಯಗಳು ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಬಂದಿರಬಹುದೆಂದು ನಾವು ಅರಿಯಬಹುದಾಗಿದೆ. ಮಾತ್ರವಲ್ಲ ಈ ಸಂಸ್ಥೆಯು ಗುರುಕುಲ ಪದ್ಧತಿಯನ್ನು ಪಾಲಿಸುವ ಸಂಸ್ಥೆಯಾಗಿದ್ದು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಹಂತ ಹಂತವಾಗಿ ಅದೇ ಮಾರ್ಗದತ್ತ ಕೊಂಡೊಯ್ಯುವ ಮೂಲಕ ಸಂವಿಧಾನದ ಬಹುತ್ವ ಆಶಯದ ವಿರುದ್ಧವಾಗಿ ಜಾರಿಗೆ ತರಲು ಬಯಸುತ್ತಿರುವ ‘ಏಕ ಸಂಸ್ಕೃತಿ’ಯ ಸರ್ಕಾರದ ಪ್ರಯತ್ನಗಳಿಗೆ ಒತ್ತಾಸೆಯಾಗಿ ನಿಲ್ಲುವ ಸಂಸ್ಥೆ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ವಿದ್ಯಾರ್ಥಿ ಸಂಘಟನೆ ಎಂಬ ನೆಲೆಯಲ್ಲಿ ಆರೆಸ್ಸೆಸ್ಸಿನ ವಿದ್ಯಾರ್ಥಿ ಬಣವಾದ ಎಬಿವಿಪಿಯನ್ನು ಮಾತ್ರವೇ ಸಮಿತಿಯು ಸಮೀಪಿಸಿದ್ದು, ಹೊಸ ಶಿಕ್ಷಣ ನೀತಿಯನ್ನು ಯಾವ ಮಟ್ಟಕ್ಕೆ ಕೇಸರೀಕರಣಗೊಳಿಸುವ ಇರಾದೆಯನ್ನು ಸರ್ಕಾರವು ಹೊಂದಿದೆ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ.

2015ರಲ್ಲಿ ಸ್ಮತಿ ಇರಾನಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಸಮಯದಲ್ಲೇ ರಚನೆಯಾಗಿದ್ದ ಟಿಎಸ್ ಆರ್ ಸುಬ್ರಮಣ್ಯ ನೇತೃತ್ವದ ತಂಡವು 2016 ರಲ್ಲಿ ಹೊಸ ಶಿಕ್ಷಣ ನೀತಿಯ ಕರಡನ್ನು ಸಲ್ಲಿಸಿತ್ತು. ಆ ಕರಡು ಪ್ರತಿಯಲ್ಲೂ ಕೂಡ ಜಾತ್ಯತೀತತೆ ಹಾಗೂ ಸಮಾಜವಾದ ಎಂಬ ಪದಗಳು ಇರಲಿಲ್ಲ ಎಂಬುವುದು ಗಮನಾರ್ಹ. ನಂತರ ಅದರ ವಿರುದ್ಧ ಉಂಟಾದ ವಿರೋಧದ ಕಾರಣದಿಂದ ಹೊಸ ಶಿಕ್ಷಣ ನೀತಿಯನ್ನು ರಚಿಸುವ ಜವಾಬ್ದಾರಿಯನ್ನು ಡಾ. ಕಸ್ತೂರಿ ರಂಗನ್ ರವರ ಹೆಗಲಿಗೆ ಹಾಕಲಾಗಿತ್ತು. ವಿಪರ್ಯಾಸವೆಂದರೆ ಡಾ. ಕಸ್ತೂರಿ ರಂಗನ್ ರವರ ತಂಡ ರಚಿಸಿದ 484 ಪುಟದ ಕರಡು ಪ್ರತಿಯಿಂದ ಹೆಕ್ಕಿ 66 ಪುಟಕ್ಕೆ ಭಟ್ಟಿ ಇಳಿಸಿದ ಹೊಸ ಶಿಕ್ಷಣ ನೀತಿಯಲ್ಲೂ ಕೂಡ ಮೇಲಿನ ಶಬ್ದಗಳು ಮಾಯವಾಗಿದೆ. ಸುಮಾರು 33 ವರ್ಷಗಳ ನಂತರ ರಚಿಸ್ಪಟ್ಟ ಶಿಕ್ಷಣ ನೀತಿ ಆಯೋಗವು ಸಲ್ಲಿಸಿರುವ ವರದಿಯು ದೇಶದ ತಳಮಟ್ಟದ ಸಮಸ್ಯೆಗಳನ್ನು ಅರಿತು, ಅಧ್ಯಯನ ಮಾಡಿ ಅದಕ್ಕೆ ಪರಿಹಾರ ಎನ್ನುವ ರೂಪದಲ್ಲಿ ನೀಡುವಂತಿರಬೇಕಿತ್ತು. ಆದರೆ ಫ್ಯಾಶಿಸ್ಟ್ ಮನೋಸ್ಥಿತಿಯ ಸರ್ಕಾರ ಮತ್ತು ಆರೆಸ್ಸೆಸ್ಸಿನ ಹಸ್ತಕ್ಷೇಪದಿಂದ ಮಲಿನಗೊಂಡಿರುವ ಪ್ರಸ್ತುತ ಹೊಸ ಶಿಕ್ಷಣ ನೀತಿಯು ನಮ್ಮ ದೇಶದ ಭವಿಷ್ಯವನ್ನು ಅಂಧಕಾರಕ್ಕೆ ದೂಕುತ್ತಿದೆ. ಈ ಹೊಸ ಶಿಕ್ಷಣ ನೀತಿಯ ಮೂಲಕ ಸಂಪೂರ್ಣ ಶಿಕ್ಷಣ ಕ್ಷೇತ್ರವು ಕಾರ್ಪೋರೇಟ್ ಕುಳಗಳ ಕೈಯಲ್ಲಿ ಸಿಕ್ಕಿ ಮಧ್ಯಮ ಮತ್ತು ಬಡ ವಿದ್ಯಾರ್ಥಿಗಳ ಕತ್ತಿಗೆ ನೇಣಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಂದು ಕಡೆ ಮಿತಿ ಮೀರಿದ ಖಾಸಗೀಕರಣ, ಇನ್ನೊಂದೆಡೆ ಕೋಮು ಧ್ರುವೀಕರಣಕ್ಕೆ ಆಸ್ಪದವನ್ನುಂಟು ಮಾಡಿಕೊಡುತ್ತಿರುವ ಹೊಸ ಶಿಕ್ಷಣ ನೀತಿಯು ಸಂವಿಧಾನ ಪ್ರತಿಪಾದಿಸಿರುವ ಸಾರ್ವಭೌಮ, ಜಾತ್ಯತೀತ ಹಾಗೂ ಸಮಾಜವಾದದ ವಿರುದ್ಧವಾಗಿದೆ. ಪ್ರಮುಖವಾಗಿ ಮುಸ್ಲಿಮ್ ಕೊಡುಗೆಗಳನ್ನು ಮುಂದಿನ ತಲೆಮಾರಿನಿಂದ ಹಾಗೂ ಮುಸ್ಲಿಮ್ ರಾಜರುಗಳನ್ನು ದರೋಡೆಕೋರರು, ಆಕ್ರಮಣಕಾರರು ಎಂದು ಶಾಲಾ ಪಠ್ಯಕ್ರಮದಲ್ಲಿ ಚಿತ್ರಿಸುವ ಮೂಲಕ ಒಂದು ಕೋಮಿನ ವಿರುದ್ಧ ತನ್ನ ದ್ವೇಷ ಸಾಧನೆಗೆ ದೇಶದ ಭವಿಷ್ಯವಾದ ಮಕ್ಕಳನ್ನು ಬಳಸುವ ಸರ್ಕಾರ ಗೂಢಾಲೋಚನೆ ನಿಜವಾಗಿಯೂ ಆತಂಕಕಾರಿ ನಡೆಯಾಗಿದೆ.

ಈಗಾಗಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲು ಕರ್ನಾಟಕ ರಾಜ್ಯ ಸರ್ಕಾರವು ಒಪ್ಪಿದೆ ಈ ಮೂಲಕ ಇದನ್ನು ಜಾರಿಗೊಳಿಸುವ ರಾಜ್ಯಗಳಲ್ಲಿ ಕರ್ನಾಟಕವು ಪ್ರಥಮ ಸ್ಥಾನವನ್ನು ಪಡೆಯಲಿದೆ. ಮಾತ್ರವಲ್ಲದೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಪಠ್ಯಕ್ರಮವನ್ನು ಸಡಿಲಿಸುವ ನಿಟ್ಟಿನಲ್ಲಿ ಟಿಪ್ಪು ಸುಲ್ತಾನ್ ಕುರಿತ ಪಾಠವನ್ನು ಕೈಬಿಡಲು ರಾಜ್ಯ ಸರ್ಕಾರವು ನಿರ್ಧರಿಸಿತ್ತು ಮಾತ್ರವಲ್ಲ ರಾಷ್ಟ್ರಾದ್ಯಂತ ಟಿಪ್ಪು ಸೇರಿದ ಹಲವಾರು ಮುಸ್ಲಿಮ್ ರಾಜರುಗಳನ್ನು ಕಳಂಕಿತರನ್ನಾಗಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ. ಹೊಸ ಶಿಕ್ಷಣ ನೀತಿಯ ಬಣ್ಣ ಬಣ್ಣದ ಭರವಸೆಗಳನ್ನು ಕಂಡು ದೇಶದ ಹಲವಾರು ಜನರು ಅದರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಈ ಎಲ್ಲಾ ಭರವಸೆಗಳ ಹಿಂದಿರುವ ರಹಸ್ಯ ಕಾರ್ಯಸೂಚಿಯನ್ನು ಅರಿಯುವಲ್ಲಿ ಅವರು ವಿಫಲರಾಗಿದ್ದಾರೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ. ಪಠ್ಯಕ್ರಮ, ಪಠ್ಯವಿಧಾನವನ್ನು ಹೊಸ ಶಿಕ್ಷಣ ನೀತಿಯಂತೆ ಕೇಂದ್ರೀಕೃತ ಮಂಡಳಿಯೊಂದು ಇನ್ನು ಮುಂದೆ ನಿಯಂತ್ರಿಸಲಿದ್ದು ಸಂಪೂರ್ಣವಾಗಿ ಶಿಕ್ಷಣವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಡುವ ಫ್ಯಾಶಿಸ್ಟ್ ವರ್ಗಗಳ ಪ್ರಯತ್ನಗಳು ಫಲಪ್ರದವಾಗಲಾರಂಭಿಸಿವೆ. ದೇಶವನ್ನು ಅಧೋಗತಿಯತ್ತ ಸಾಗುವುದನ್ನು ತಡೆಯಲು ಹಾಗೂ ದೇಶದಲ್ಲಿ ಶಾಂತಿಯನ್ನು ಖಾತರಿಪಡಿಸಲು ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಬೇಕಾದ ಅಗತ್ಯತೆ ಭಾರತೀಯರಾದ ನಮ್ಮೆಲ್ಲರ ಮೇಲಿದ್ದು ಸಾಮಾನ್ಯ ಜನರನ್ನು ಈ ಕುರಿತಾಗಿ ಜಾಗೃತಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!