ವರ್ಷವಾದರೂ ನಿರಂತರ ಬಹಿಷ್ಕಾರ, ಭಯದಲ್ಲೇ ಬದುಕುತ್ತಿರುವ ಹಾತ್ರಾಸ್ ಸಂತ್ರಸ್ತ ಕುಟುಂಬ

Prasthutha|

ಲಕ್ನೋ: ಹತ್ರಾಸ್ ಘಟನೆ ನಡೆದು ಒಂದು ವರ್ಷವಾದರೂ ಸಂತ್ರಸ್ತ ಕುಟುಂಬ ಇನ್ನೂ ಆತಂಕ ಮತ್ತು ಭಯದಿಂದಲೇ ಜೀವನ ದೂಡುತ್ತಿದೆ. ಸಂತ್ರಸ್ತ ಕುಟುಂಬವು ಬಲಿಯಾದ ತನ್ನ 19ರ ಹರೆಯದ ತರುಣಿಯ ಶವಸಂಸ್ಕಾರದ ಬೂದಿಯನ್ನು ಕೋಣೆಯ ಮೂಲೆಯಲ್ಲಿ ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿಟ್ಟಿದೆ. ಆಕೆಯ ಹೊಲಿಗೆ ಯಂತ್ರ ಮತ್ತು ಬಟ್ಟೆಗಳು ಬೀರು ಸೇರಿವೆ. ಸಂತ್ರಸ್ತ ದಲಿತ ಹೆಣ್ಣಿನ ಕುಟುಂಬವು ತಮಗೆ ನ್ಯಾಯ ದೊರೆಯುವವರೆಗೆ ಆಕೆಯ ಕ್ರಿಯಾ ವಿಧಿಗಳನ್ನೆಲ್ಲ ನೆರವೇರಿಸುವುದಿಲ್ಲ ಎಂದು ತೀರ್ಮಾನಿಸಿದೆ.

- Advertisement -


2020ರ ಸೆಪ್ಟೆಂಬರ್ 14ರಂದು ಮೇಲ್ಜಾತಿಯ ನಾಲ್ಕು ಜನರು ಈ 19ರ ತರುಣಿಯನ್ನು ಗ್ಯಾಂಗ್ ರೇಪ್ ಮಾಡಿ, ಕ್ರೂರವಾಗಿ ಹಲ್ಲೆ ನಡೆಸಿ ಗದ್ದೆಯಲ್ಲಿ ಬಿಸಾಕಿ ಹೋಗಿದ್ದರು. ಆಕೆಯ ಗುಪ್ತಾಂಗ ಮತ್ತು ಕುತ್ತಿಗೆಯಲ್ಲಿ ಹಲವು ಗಾಯಗಳಿದ್ದವು. ಕುಟುಂಬದವರು ಆಕೆಯನ್ನು ಹುಡುಕಿ ಆಲಿಗಡ ಆಸ್ಪತ್ರೆಗೆ ದಾಖಲಿಸಿದರು. ತೀವ್ರ ರಕ್ತಸ್ರಾವವಿದ್ದುದರಿಂದ ಆಕೆಯನ್ನು ಬಳಿಕ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸೇರಿಸಲಾಯಿತು. 11 ದಿನಗಳ ಬಳಿಕ ಆಕೆ ಸಾವಿಗೀಡಾದಳು.


ರಾತೋರಾತ್ರಿ ಆಕೆಯ ಶವವನ್ನು ಆಕೆಯ ಊರಿಗೆ ತಂದ ಉತ್ತರ ಪ್ರದೇಶದ ಅಧಿಕಾರಿಗಳು ಮುಂಜಾವ ಮೂರೂವರೆ ಗಂಟೆಯ ಹೊತ್ತಿಗೆ ಆಕೆಯ ಶವವನ್ನು ತಾವೇ ಜಬರ್ ದಸ್ತ್ ನಿಂದ ಸುಟ್ಟು ಹಾಕಿದರು. ಈಗಲೂ ಸಂತ್ರಸ್ತ ಕುಟುಂಬದ ಮನೆಯತ್ತ ಸಿಸಿಟೀವಿ ಕ್ಯಾಮೆರಾಗಳು ನೋಡುತ್ತಿವೆ. 35 ಜನ ಸಿಆರ್ ಪಿಎಫ್ ಜವಾನರು ಮನೆಗೆ ಸುತ್ತ ಕಾವಲಿದ್ದಾರೆ. “ಎಲ್ಲರೂ ನಮ್ಮನ್ನು ಅಪರಾಧಿಗಳಂತೆ ದೂರ ಇಟ್ಟಿದ್ದಾರೆ. ಸಿಆರ್ ಪಿಎಫ್ ಹೋದ ಕೂಡಲೆ ನಮ್ಮ ಮೇಲೆ ಈ ಮೇಲ್ಜಾತಿ ಜನ ದಾಳಿ ಮಾಡುತ್ತಾರೆ. ನಾವು ಹತಾಶರಾಗಿದ್ದೇವೆ. ಘಟನೆ ನಡೆದ ಮರುದಿನವೇ ಕೆಲಸ ಕಳೆದುಕೊಂಡ ಸಂತ್ತಸ್ತೆಯ ಅಣ್ಣ ಕಂಗಾಲಾಗಿದ್ದಾನೆ. 75 ವರುಷಗಳಿಗಿಂತಲೂ ಹಿಂದಿನಿಂದ ನಾವು ಈ ಮನೆಯಲ್ಲಿ ಇದ್ದೇವೆ. ಇದನ್ನು ಬಿಟ್ಟು ಹೋಗುವುದಾದರೂ ಎಲ್ಲಿಗೆ ? ಎಂಬ ಅಳಲು ತೋಡಿಕೊಳ್ಳುತ್ತಿದ್ದಾರೆ.

- Advertisement -


ಅಲಹಾಬಾದ್ ಕೋರ್ಟಿನಲ್ಲಿ ಈ ಸಂಬಂಧ ಪ್ರಕರಣ ನಡೆದಿದೆ. ಆದರೆ ಸರಿಯಾದ ಚಾರ್ಜ್ ಶೀಟ್ ಒಂದು ವರ್ಷವಾದರೂ ಸಲ್ಲಿಕೆಯಾಗಿಲ್ಲ. ಕುಟುಂಬಕ್ಕೆ ಪರಿಹಾರ ಧನ ರೂಪಾಯಿ 25 ಲಕ್ಷ ದೊರಕಿದೆಯಾದರೂ ಯಾರಿಗೂ ಒಂದು ವರ್ಷದಿಂದ ಕೆಲಸ ಸಿಗುತ್ತಿಲ್ಲ. ನಾಲ್ವರು ಠಾಕೂರ್ ಯುವಕರಾದ 20ರ ಸಂದೀಪ್, 35ರ ರವಿ, 23ರ ಲವ್ ಕುಶ್, 26ರ ರಾಮ ಈ ಹೇಯ ಕೃತ್ಯ ಎಸಗಿದವರು. ಆದರೆ ಊರಿನ ಹೆಚ್ಚಿನವರು ಅವರ ಜೊತೆಗಿದ್ದಾರೆ ಎನ್ನುತ್ತಾರೆ ಸಂತ್ತಸ್ತ ಕುಟುಂಬ.

Join Whatsapp