ರಾಜಕೀಯದಲ್ಲಿ ಮಹಿಳೆಯರ ಪಾತ್ರ

Prasthutha|

ಎಫ್. ನುಸೈಬಾ ಕಲ್ಲಡ್ಕ

- Advertisement -

ತಂತ್ರಜ್ಞಾನವು ಮುಂದುವರಿದಂತೆ ಮಹಿಳೆಯರು ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಸಮಾಜದ ಕಣ್ಣು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಮನೆಯೆ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು.. ಈ ತೆರನಾದ ನಾಣ್ಣುಡಿಗಳು ಸಮಾಜದ ಅಭ್ಯುದಯದಲ್ಲಿ ಹೆಣ್ಣಿನ ಅಗತ್ಯತೆಯನ್ನು, ಮಹತ್ವವನ್ನು ಎತ್ತಿ ತೋರಿಸುತ್ತದೆ. ಆಕೆ ಸಕ್ರಿಯವಾದರೆ ಸಮಾಜದಲ್ಲಿ ಒಂದು ಉತ್ತಮ ಬದಲಾವಣೆ ತರಲು ಖಂಡಿತ ಸಾಧ್ಯ. ಇದಕ್ಕಾಗಿಯೇ ರಾಜಕೀಯ ಪ್ರಬುದ್ದತೆಯು ಇಂದಿನ ಅನಿವಾರ್ಯವಾಗಿದೆ.


ಆದರೆ ನಮ್ಮ ಸಮುದಾಯದ ಮಹಿಳೆಯರು ಓರ್ವ ಜನಪ್ರತಿನಿಧಿಯಾಗಿ ಮುಂದೆ ಬರುವುದು ಒತ್ತಟ್ಟಿಗಿರಲಿ, ಒಬ್ಬ ಪ್ರಬುದ್ದ ಜನನಾಯಕನನ್ನು ಆರಿಸಬೇಕಾದ ಮಹತ್ವದ ಘಟ್ಟವಾದ ಮತದಾನದ ಬಗ್ಗೆಯೇ ನಿರ್ಲಕ್ಷಿತರಾಗಿದ್ದಾರೆ. ಹಲವರಲ್ಲಿ ಹದಿನೆಂಟು ದಾಟಿದರೂ ವೊಟರ್ ಐಡಿನೇ ಇಲ್ಲ. ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ. ಹೆಸರಿದ್ದರೂ ಮತದಾನ ಮಾಡುವುದಕ್ಕೂ ನಿರ್ಲಕ್ಷ್ಯ. ಯಾತಕ್ಕಾಗಿ ಮತದಾನ ಮಾಡಬೇಕು? ಇದರಿಂದಾಗುವ ಲಾಭವೇನು? ನನ್ನ ಒಂದು ಮತ ನನ್ನ ಸಮಾಜವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಬಹುದು..? ಅನ್ಯಾಯ, ಅಕ್ರಮ. ಅನೀತಿಗಳಿಲ್ಲದ ಒಂದು ಸುಭದ್ರ ಸಮಾಜದಲ್ಲಿ ಬದುಕಬೇಕಾದರೆ ಆ ಸಮಾಜವನ್ನು ಮುನ್ನಡೆಸುವ ಓರ್ವ ಪ್ರಬುದ್ಧ ನಾಯಕನನ್ನು ಆರಿಸುವಲ್ಲಿ ನನ್ನ ಪಾತ್ರವೇನು? ಈ ತೆರನಾದ ಆಲೋಚನೆಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳದೆ ಈ ರಾಜಕೀಯ ಉಸಾಬರಿಯೇ ಬೇಡವೆಂದು ದೂರ ಸರಿಯುವ ಮಹಿಳೆಯರು ಇಲ್ಲಿ ನಡೆಯುವ ಅಕ್ರಮ ಅನ್ಯಾಯಗಳಿಗೆ ನಾನೂ ಕಾರಣಳಾಗುತ್ತಿದ್ದೇನೆ ಎಂಬುವುದನ್ನು ನಿರಾಕರಿಸುವಂತಿಲ್ಲ. ಹೌದು.. ಕುರ್ ಆನಿನಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ ” ಓ ಸತ್ಯವಿಶ್ವಾಸಿಗಳೇ, ನೀವು ಸ್ವತಃ ನಿಮ್ಮ ಕುರಿತು ಚಿಂತಿಸಿರಿ. ನೀವು ಸನ್ಮಾರ್ಗದಲ್ಲಿದ್ದರೆ, ದಾರಿ ತಪ್ಪಿದವನಿಂದ ನಿಮಗೇನೂ ನಷ್ಟವಾಗದು…” (ಅಲ್ ಮಾಇದಾ :105 ). ಅಂದರೆ ಪರರಿಗೆ ಧರ್ಮೋಪದೇಶ ಮಾಡುವುದು ಕೆಡುಕಿಗೆ ವಿರೋಧ ವ್ಯಕ್ತಪಡಿಸುವುದು ಬೇಡ ಎಂದರ್ಥವಲ್ಲ. ಈ ಸಂದೇಹವನ್ನು ನೀಗಿಸುವ ಸಲುವಾಗಿ ಅಬೂಬಕರ್ (ರ. ಅ) ಹೀಗೆ ಹೇಳಿದ್ದಾರೆ” ಜನರೇ ನೀವು ಈ ಸೂಕ್ತವನ್ನು ಓದುತ್ತೀರಿ ಮತ್ತು ಅಪಾರ್ಥ ಮಾಡಿಕೊಳ್ಳುತ್ತೀರಿ. ಕೆಡುಕನ್ನು ಕಂಡೂ ಜನರು ಅದನ್ನು ಪರಿವರ್ತಿಸಲು ಪ್ರಯತ್ನಿಸದಿದ್ದಲ್ಲಿ ಅಲ್ಲಾಹನ ಶಿಕ್ಷೆ ಎಲ್ಲರಿಗೂ ವ್ಯಾಪಿಸುವುದು ಎಂದು ಪ್ರವಾದಿ ಸ. ಅ. ರು ಹೇಳಿದ್ದಾಗಿ ನಾನು ಕೇಳಿದ್ದೇನೆ. ಈ ಸೂಕ್ತವನ್ನು ಕಂಡು ನಾನು ನನ್ನದು ಮಾತ್ರ ನೋಡಿಕೊಳ್ಳುತ್ತೇನೆ ಎಂದು ಸುಮ್ಮನಿದ್ದರೆ ಅಪಾಯ. ಒಳಿತಿನ ಉಪದೇಶ ಹಾಗೂ ಕೆಡುಕಿನ ವಿರೋಧ ಮುಂದುವರಿಸಿದರೆ ಸರಿ, ಇಲ್ಲವಾದರೆ ಅಲ್ಲಾಹನು ನಿಮ್ಮ ಅಧಿಕಾರವನ್ನು ಕೆಟ್ಟವರಿಗೆ ಒಪ್ಪಿಸುವನು. ಆಗ ನಿಮಗೆಲ್ಲರಿಗೂ ಶಿಕ್ಷೆ ತಟ್ಟುವುದು. ಆಗ ನಿಮ್ಮ ಪೈಕಿ ಉತ್ತಮರು ಪ್ರಾರ್ಥಿಸಿದರೂ ಉತ್ತರ ದೊರೆಯದು. “
ಚಿಂತಿಸುವ ಹೃದಯಗಳನ್ನು ಎಚ್ಚರಿಸುವ ಸಾಲುಗಳು!!
ಇನ್ನು,
ಇದನ್ನೆಲ್ಲ ನೋಡಲು ಪುರುಷರಿದ್ದಾರೆ, ನಮಗೆ ಅಗತ್ಯವಿಲ್ಲ ಎಂದುಕೊಳ್ಳುವವರು ಒಮ್ಮೆ ಯೋಚಿಸಬೇಕಿದೆ. ಒಳಿತನ್ನು ಉಪದೇಶಿಸುವ ಕೆಡುಕನ್ನು ವಿರೋಧಿಸುವ ಆಯತ್ ಹದೀಸ್ ಗಳಲ್ಲಿ ಎಲ್ಲಿಯೂ ಪುರುಷರನ್ನು ಮಾತ್ರ ಕರೆದು ಸಂಬೋಧಿಸಲಾಗಿಲ್ಲ. ಬದಲಾಗಿ ಓ ಜನರೇ, ಓ ಸತ್ಯವಿಶ್ವಾಸಿಗಳೇ, ಎಂದೇ ಕರೆನೀಡಲಾಗುತ್ತದೆ. ಹೀಗಿರುವಾಗ ನಾವು ಈ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಹೇಗೆ ಸಾಧ್ಯ.?

- Advertisement -


ಉನ್ನತ ಶಿಕ್ಷಣದಲ್ಲಿ Political since (ರಾಜ್ಯಶಾಸ್ತ್ರ) ಒಂದು ಪ್ರಮುಖ ಭಾಗವಾಗಿದೆ. ಈ ರಾಜ್ಯಶಾಸ್ತ್ರವು ರಾಜ್ಯ ಸರ್ಕಾರ ಹಾಗೂ ರಾಜಕೀಯ ವ್ಯವಸ್ಥೆಗೆ ಸಂಬಂಧಿಸಿದ ಅಂಶಗಳನ್ನು ಒಳಗೊಂಡಿದೆ. ರಾಜ್ಯದ ಜನತೆಯ ಹಿತಾಸಕ್ತಿಗಳನ್ನು, ಮಾನವ ಬದುಕಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಶಾಸನಗಳ ಮೂಲಕ ರಚಿಸಿ ಅಂಗಗಳ ಮೂಲಕ ಅನುಷ್ಠಾನಕ್ಕೆ ತರುವುದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದು, ದುರ್ವರ್ತನೆಗಳನ್ನು ನಿಯಂತ್ರಿಸುವುದು, ಶಾಂತಿ ಸುವ್ಯವಸ್ಥೆ ಕಾಪಾಡುವುದು ಹೀಗೆ ರಾಜ್ಯ – ಸರ್ಕಾರ ಹಾಗೂ ಜನರ ನಡುವಿನ ಅನ್ಯೋನ್ಯ ಸಂಬಂಧಗಳ ಬಗ್ಗೆ ರಾಜ್ಯಶಾಸ್ತ್ರದಲ್ಲಿ ಅಧ್ಯಯನಿಸಲಾಗುತ್ತದೆ. ಆದರೆ ಇಂದಿನ ಸರ್ಕಾರಗಳು ಮೂಲಭೂತ ಅಗತ್ಯಗಳಿಗೆ ಆದ್ಯತೆ ನೀಡದೆ ಭ್ರಷ್ಟಾಚಾರಿಗಳನ್ನು ಪೋಷಿಸುವ ಕೆಲಸ ಮಾಡುತ್ತಿದೆ. ಜಾತಿ ವಿಷ ಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಇದನ್ನು ಪ್ರಶ್ನಿಸಬೇಕಾದ ಯುವ ಸಮೂಹದ ವಿದ್ಯೆಯು ಕೇವಲ ಪ್ರಶ್ನಾಪತ್ರಿಕೆಗೆ ಉತ್ತರ ನೀಡಲು ಮಾತ್ರ ಸೀಮಿತವಾಗುತ್ತಿದೆ ಎಂಬುವುದೇ ಖೇದಕರ. ಆಧುನಿಕ ಮುಸ್ಲಿಂ ಮಹಿಳೆಯರು ಪೈಪೋಟಿಗೆ ಬಿದ್ದು IAS IPS ನಂತ ಸರ್ಕಾರಿ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಪೈಲಟ್ ಗಳು , ಇಂಜಿನಿಯರ್ ಗಳಾಗಿ ಮಿಂಚುತ್ತಿದ್ದಾರೆ. ಆದರೆ ಈ ಸಂದರ್ಭಗಳಲ್ಲಿ ಇಲ್ಲದ ಧರ್ಮದ ಲೇಪ ರಾಜಕೀಯವಾಗಿ ಮುಖ್ಯವಾಹಿನಿಗೆ ಬರುವಾಗ ಮಾತ್ರ ಏಕೆ?! ಖಲೀಫ ಉಮರ್ ರ. ಅ. ಅವರ ಆಡಳಿತ ಕಾಲದಲ್ಲಿ ಮಹಿಳೆಯರು ತಮ್ಮ ಮಹರಿನ ಮೊತ್ತವನ್ನು ನಿಶ್ಚಯಿಸುವುದು ಪುರುಷರಿಗೆ ತಲೆನೋವಾಗಿತ್ತು. ಅವರು ಉಮರ್ ಅವರ ಬಳಿ ಅವಲತ್ತುಕೊಂಡರು. ಆ ಸಮಯದಲ್ಲಿ ಖಲೀಫ ಉಮರ್ ರ. ಅ. ಮಹಿಳೆಯರು ಸಭೆ ಕರೆದು ಮಹರಿನ ಮೊತ್ತವನ್ನು ನಿಶ್ಚಯಿಸಬಾರದೆಂದು ಆದೇಶಿಸಿದರು. ಆಗ ಸಭೆಯ ಮಧ್ಯೆಯಿಂದ ಓರ್ವ ಮಹಿಳೆ ಎದ್ದು ನಿಂತು “ಅಲ್ಲಾಹನು ನಮಗೆ ನೀಡಿದ ಹಕ್ಕಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಉಮರ್ ಯಾರು ಎಂದು ” ಕೇಳಿದರು. ಉಮರ್ ಅವರಿಗೆ ತನ್ನ ತಪ್ಪಿನ ಅರಿವಾಗಿ ಆದೇಶವನ್ನು ಮರಳಿ ಪಡೆದರು. ಇದಾಗಿದೆ ಇಸ್ಲಾಂ!!! ಇಲ್ಲಿ ಪ್ರಶ್ನಿಸಿದ ಆ ಮಹಿಳೆಯ ಮೇಲೆ ಉಮರ್ ಕೋಪಿತರಾಗಲಿಲ್ಲ. ನಾನು ಹೇಳಿದ್ದೇ ವೇದವಾಕ್ಯವೆಂದು ಆ ಮಹಿಳೆಯನ್ನು ನಿಂದಿಸಲಿಲ್ಲ.

ವಿರೋಧಿಸಲಿಲ್ಲ. ಬದಲಾಗಿ ತನ್ನನ್ನು ತಾನು ತಿದ್ದಿಕೊಂಡರು. ಇದಾಗಿದೆ ನೈಜ ಇಸ್ಲಾಮಿನ ಆದರ್ಶ. ಆದರೆ ಇಂದು ಮಾತ್ರ ಮಹಿಳೆಯರು ಪ್ರಶ್ನಿಸಲು ಕೂಡ ಅರ್ಹರಲ್ಲ ಎಂಬಂತೆ ಬಿಂಬಿಸಲಾಗುತ್ತದೆ.
ಇತ್ತೀಚೆಗಿನ ಹಿಜಾಬ್ ವಿವಾದದ ಸಂದರ್ಭದಲ್ಲಿ ಪ್ರಜ್ಞಾವಂತ ಪ್ರಜೆಗಳು ಅರ್ಥೈಸಿಕೊಂಡ ಪ್ರಮುಖ ಅಂಶ ಮುಸ್ಲಿಂ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಎಷ್ಟು ಅಗತ್ಯ ಎಂಬುವುದು. ಕಾರಣ ಹಿಜಾಬ್ ನಿರಾಕರಿಸಲ್ಪಟ್ಟ ವಿಧ್ಯಾರ್ಥಿನಿಯರ ನೋವನ್ನು ಓರ್ವ ಹಿಜಾಬ್ ಧಾರಿಣಿ ಮಾತ್ರವೇ ಅರ್ಥೈಸಲು ಸಾಧ್ಯ. ರಾಜಕೀಯ ಪ್ರಾತಿನಿಧ್ಯವಿಲ್ಲದೆ ಕೇವಲ ಬೀದಿಹೋರಾಟಗಳಿಂದ ಮಾತ್ರ ಸಂಪೂರ್ಣ ನ್ಯಾಯವನ್ನು ನಿರೀಕ್ಷಿಸಲಾಗದು. ಪಂಚಾಯತ್ ಗಳಲ್ಲಿ, ವಿಧಾನಸಭೆಗಳಲ್ಲಿ ಲೋಕಸಭೆಯಲ್ಲಿ ಶೋಷಿತರ ಪರ ಮೊಳಗುವ ಧ್ವನಿಗಳನ್ನು ಆರಿಸಿ ಕಳುಹಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಈ ಸಮಾಜದ ಪ್ರತಿಯಾಗಿ ತನಗೂ ಕೆಲವೊಂದು ಬದ್ಧತೆಗಳಿವೆ ಎಂದು ಪ್ರತಿಯೊಬ್ಬ ಹೆಣ್ಣು ಅರ್ಥಮಾಡಿಕೊಳ್ಳಬೇಕು. ರಾಜ ಹಾರೂನ್ ರಶೀದರ ಪತ್ನಿ ಬೀವಿ ಝುಬೈದಾ ಪತಿಯ ಅನುಪಸ್ಥಿತಿಯಲ್ಲಿ ರಾಜ್ಯದ ಆಡಳಿತವನ್ನು ನಿಭಾಯಿಸುತ್ತಿದ್ದರು. ಪತಿಯ ಮರಣಾನಂತರ ಒಮ್ಮೆ ಹಜ್ ಯಾತ್ರೆ ಕೈಗೊಂಡಿದ್ದಾಗ ಮಕ್ಕಾದಲ್ಲಿ ಜನ ಕುಡಿಯಲು ನೀರಿಲ್ಲದೆ ಪರದಾಡುತ್ತಿರುವುದನ್ನು ಕಂಡರು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕೆಂದು ತನ್ನ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿ ನೀರಾವರಿ ಯೋಜನೆಗೆ ಚಾಲನೆ ನೀಡಿದರು. ಝುಬೈದಾ ಕಾಲುವೆ ಎಂದೇ ಪ್ರಸಿದ್ಧಿ ಪಡೆದ ಈ ನೀರಾವರಿ ಯೋಜನೆ 1200 ವರ್ಷಗಳ ಕಾಲ ಮಕ್ಕಾ ಜನತೆಯ ಪಾಲಿಗೆ ನೀರಿನ ಅಭಾವವನ್ನು ನೀಗಿಸಿತ್ತು. ಆ ಮರುಭೂಮಿಯಲ್ಲಿ ಇಂತಹದೊಂದು ನೀರಾವರಿ ಯೋಜನೆ ಕೈಗೂಡಲು ಬರೋಬ್ಬರಿ ಹತ್ತು ವರ್ಷಗಳು ಬೇಕಾಗಿತ್ತು ಎನ್ನುವುದು ಈ ಯೋಜನೆಯು ಅದೆಷ್ಟರ ಮಟ್ಟಿಗೆ ಪ್ರಯಾಸಕರವಾಗಿತ್ತು ಎಂಬುದಕ್ಕೆ ನಿದರ್ಶನವಾಗಿದೆ. ಆದರೆ ಛಲ ಬಿಡದ ಬೀವಿ ಝುಬೈದಾ ಅದನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದರು. , ಧರ್ಮ ನಿಷ್ಠೆ, ದೈವ ಭಕ್ತೆಯೂ ಆದ ಬೀವಿ ಝುಬೈದಾ ತನ್ನ ಸಂಸಾರದಿಂದ ಆಚೆಗೂ ಈ ನಾಡಿನ ಪ್ರತಿ ತನಗೂ ಜವಾಬ್ದಾರಿಗಳಿವೆ ಎಂದು ತೋರಿಸಿಕೊಟ್ಟಿದ್ದರು.


ಮುಸ್ಲಿಂ ದ್ವೇಷದ ಕಿಚ್ಚು ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಬಹಿರಂಗವಾಗಿಯೇ ಮುಸ್ಲಿಂ ನರಮೇಧಕ್ಕೆ ಕರೆನೀಡಲಾಗುತ್ತಿದ್ದರೂ ಅವರ ಮೇಲೆ ಯಾವುದೇ ಕಾನೂನು ಕ್ರಮಗಳು ಜಾರಿಯಾಗುವುದಿಲ್ಲ. ಪಠ್ಯ ಕ್ರಮಗಳ ಬದಲಾವಣೆಯ ಮೂಲಕ ಜನಾಂಗೀಯ ದ್ವೇಷವನ್ನು ಹರಡಿಸಲಾಗುತ್ತಿದೆ. ಒಂದೊಂದಾಗಿಯೇ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡು ಮುಸ್ಲಿಮರ ಅಸ್ತಿತ್ವಕ್ಕೆ ಕೊಡಲಿಯೇಟು ನೀಡಲಾಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಇವುಗಳ ಪ್ರತಿರೋಧಕ್ಕೆ ರಾಜಕೀಯ ಪ್ರಾಬಲ್ಯವು ಅತೀ ಅಗತ್ಯವಾಗಿದೆ. ಯಾವ ರಾಜಕೀಯ ಪ್ರಾಬಲ್ಯವನ್ನು ಬಳಸಿಕೊಂಡು ಫ್ಯಾಸಿಸ್ಟ್ ಶಕ್ತಿಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿ ಸುತ್ತಿದೆಯೋ ಅದೇ ರಾಜಕೀಯ ಪ್ರಾಬಲ್ಯದಿಂದ ಮಾತ್ರವೆ ಸುಸ್ಥಿರ ಸಮಾಜವನ್ನು ಕಟ್ಟುವುದಕ್ಕೆ ಸಾಧ್ಯ.ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯ ಕಾರ್ಯಪ್ರವೃತ್ತರಾಗಬೇಕಿದೆ.

Join Whatsapp