ಸರ್ಕಾರ ಕದ್ದು ಮುಚ್ಚಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಿದೆ: ಸಿದ್ದರಾಮಯ್ಯ

Prasthutha|

ಇದು ಆರ್.ಎಸ್.ಎಸ್ ನವರ ಅಜೆಂಡಾ ಎಂದ ವಿಪಕ್ಷ ನಾಯಕ

- Advertisement -

ಬೆಳಗಾವಿ: ಸರ್ಕಾರ ಸಭಾಧ್ಯಕ್ಷರ ಮೂಲಕ ಕದ್ದುಮುಚ್ಚಿ ಮತಾಂತರ ನಿಷೇಧ ಮಸೂದೆ ಮಂಡಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಲಾಪದ ಇಂದಿನ ಅಜೆಂಡಾದಲ್ಲಿ ಮತಾಂತರ ನಿಷೇಧ ಕಾಯ್ದೆಯ ಪ್ರಸ್ತಾಪ ಇರಲಿಲ್ಲ, ಇಂದು ಮಧ್ಯಾಹ್ನ ಊಟದ ವಿರಾಮಕ್ಕೆ ತೆರಳುವ ಮೊದಲು ಆರ್. ಅಶೋಕ್ ಅವರು ನೆರೆ, ಅತಿವೃಷ್ಟಿ ಪರಿಹಾರ ಕಾರ್ಯದ ಉತ್ತರ ನೀಡಲು ಆರಂಭ ಮಾಡಿದ್ದರು. ಉತ್ತರ ಮುಗಿದ ಮೇಲೆ ಬೇರೆ ವಿಷಯ ಕೈಗೆತ್ತಿಕೊಳ್ಳುವುದು ನಿಯಮ. ಆದರೆ ಸರ್ಕಾರ ಹೆಚ್ಚುವರಿ ಅಜೆಂಡಾವನ್ನು ಸೇರಿಸಿ ಇದ್ದಕ್ಕಿದ್ದಂತೆ ಮತಾಂತರ ನಿಷೇಧ ಕಾಯಿದೆಯನ್ನು ಪ್ರಸ್ತಾಪ ಮಾಡಿ, ಸದನದ ಮತಕ್ಕೆ ಹಾಕಿತು ಎಂದು ತಿಳಿಸಿದರು.

- Advertisement -

ಸರ್ಕಾರ ಸಭಾಧ್ಯಕ್ಷರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಕದ್ದು ಮುಚ್ಚಿ ಮಸೂದೆಯನ್ನು ಮಂಡಿಸಿದೆ. ಈ ಮಸೂದೆ ಮಂಡನೆಗೆ ಅಂತಹಾ ತುರ್ತು ಏನಿತ್ತು? ನಾಳೆ ಅಥವಾ ನಾಡಿದ್ದು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲು ಸರ್ಕಾರದ ಬಳಿ ಸಮಯವಿತ್ತು. ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಈ ಕಾನೂನು ಜಾರಿ ಮಾಡಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಗುಜರಾತ್ ನ್ಯಾಯಾಲಯ ಮತಾಂತರ ನಿಷೇಧ ಕಾನೂನಿಗೆ ತಡೆಯಾಜ್ಞೆ ನೀಡಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಕಾಯ್ದೆ ಜಾರಿಯನ್ನು ತಡೆಹಿಡಿಯಲಾಗಿದೆ. ಸಂವಿಧಾನದ 25ನೇ ಆರ್ಟಿಕಲ್ ವ್ಯಕ್ತಿಗೆ ಯಾವುದೇ ಧರ್ಮವನ್ನು ಅನುಸರಿಸುವ, ಸ್ವೀಕರಿಸುವ, ಪ್ರಚಾರ ಮಾಡುವ ಹಕ್ಕು ನೀಡಿದೆ. ಮಹಿಳೆ ಅಥವಾ ಪುರುಷನ ಸಂಗಾತಿ ಆಯ್ಕೆಯ ಹಕ್ಕನ್ನು ಈ ಕಾಯ್ದೆ ಕಸಿಯಲು ಹೊರಟಿದೆ. ಯಾರು ಯಾರನ್ನು ಮಧುವೆಯಾಗಬೇಕು ಎಂದು ಸರ್ಕಾರ ನಿರ್ಧಾರ ಮಾಡಲು ಬರುತ್ತಾ? ಎಂದು ಪ್ರಶ್ನಿಸಿದರು.

ಈ ಕಾನೂನು ಸಂವಿಧಾನ ಬಾಹಿರವಾಗಿದೆ ಎಂದು ಹೇಳಲು ನಮಗೆ ಅವಕಾಶವನ್ನೇ ನೀಡಿಲ್ಲ. ಕದ್ದುಮುಚ್ಚಿ ಕಾಯಿದೆ ಜಾರಿ ಮಾಡುವ ಅಗತ್ಯವೇನಿದೆ? ಈಗ ಆರ್. ಅಶೋಕ್ ಅವರು ಅತಿವೃಷ್ಟಿ, ಪ್ರವಾಹ ಪರಿಹಾರ ಕಾರ್ಯದ ಬಗ್ಗೆ ಉತ್ತರ ನೀಡುತ್ತಿದ್ದಾರೆ, ಸಂವಿಧಾನ ಬಾಹಿರವಾಗಿರುವ ಸರ್ಕಾರ ನೀಡುವ ಉತ್ತರ ನಾವು ಕೇಳಲು ಸಿದ್ಧರಿಲ್ಲ. ಹೀಗಾಗಿ ಸಭಾತ್ಯಾಗ ಮಾಡಿದ್ದೇವೆ. ನಾಳೆ ನಡೆಯುವ ಕಲಾಪದ ಚರ್ಚೆಯಲ್ಲಿ ಭಾಗವಹಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಕೊರೊನಾದಿಂದ ಸತ್ತವರಿಗೆ ಪರಿಹಾರ ನೀಡಿಲ್ಲ, ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕೊಟ್ಟಿಲ್ಲ, ಬೆಳೆ ಪರಿಹಾರ ನೀಡಿಲ್ಲ, ಅಂಗನವಾಡಿ, ಶಾಲೆ, ರಸ್ತೆ, ಸೇತುವೆಗಳು ಬಿದ್ದುಹೋಗಿವೆ ಅದನ್ನು ಸರಿ ಮಾಡಿಲ್ಲ. ಅವೆಲ್ಲಾ ಬಿಟ್ಟು ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಮತಾಂತರ ನಿಷೇಧ ಕಾಯಿದೆಗೆ ಕದ್ದುಮುಚ್ಚಿ ಅನುಮೋದನೆ ಪಡೆಯಲು ಹೊರಟಿದ್ದಾರೆ. ಒಟ್ಟಿನಲ್ಲಿ ಜನರ ಗಮನ ಬೇರೆಕಡೆ ಸೆಳೆಯುವುದೇ ಕಾಯಿದೆಯ ಉದ್ದೇಶ.

ನಾಳೆ ನಡೆಯುವ ಚರ್ಚೆಯಲ್ಲಿ ಭಾಗವಹಿಸಿ, ತೀವ್ರವಾಗಿ ವಿರೋಧ ಮಾಡುತ್ತೇವೆ. ಸದನದಲ್ಲಿ ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ.
ಸದನವನ್ನು ಶುಕ್ರವಾರವೇ ಮುಗಿಸಬೇಕು ಎಂಬ ನಿಯಮವಿದೆಯೇ? ಇನ್ನೂ ಒಂದು ವಾರ ವಿಸ್ತರಿಸಲು ಅವಕಾಶ ಇಲ್ಲವಾ?
ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನ ವಿರೋಧಿ ಕಾನೂನು. ಇದು ಆರ್.ಎಸ್.ಎಸ್ ನವರ ಅಜೆಂಡಾ. ಈ ಸರ್ಕಾರಕ್ಕೆ ಸಾಧನೆ ಎಂದು ಹೇಳಿಕೊಳ್ಳಲು ಯಾವ ಕೆಲಸಗಳನ್ನು ಮಾಡಿಯೇ ಇಲ್ಲ, ಹಾಗಾಗಿ ಇಂಥದ್ದೊಂದ ವಿವಾದಾತ್ಮಕ ಕಾನೂನು ಜಾರಿ ಮಾಡಿ ಎಂದು ಆರ್.ಎಸ್.ಎಸ್ ನವರೇ ಸರ್ಕಾರಕ್ಕೆ ಹೇಳಿರುತ್ತಾರೆ. ಪರಿಷತ್ ಚುನಾವಣೆಯ ಫಲಿತಾಂಶ ಇಂಥದ್ದೊಂದು ವಿವಾದಾತ್ಮಕ ಕಾನೂನು ಜಾರಿ ಮಾಡಲು ಕಾರಣ. ನಮಗೆ 45% ಮತ ಬಿದ್ದಿದೆ, ಬಿಜೆಪಿ ಗೆ 41% ಮತ ಬಿದ್ದಿದೆ.

ಹೋದ ಮಾನ ಉಳಿಸಿಕೊಳ್ಳಲು ಸರ್ಕಾರ ಸಂವಿಧಾನ ಬಾಹಿರ ಕಾನೂನು ಜಾರಿ ಮಾಡಲು ಹೊರಟಿದೆ. ಇಲ್ಲಿನ ಸರ್ಕಾರ ಭಾರತದ ಸಂವಿಧಾನದ ಆಧಾರದ ಮೇಲೆ ಸರ್ಕಾರ ನಡೆಸಬೇಕು, ಪಾಕಿಸ್ತಾನದ ಸಂವಿಧಾನ ನೋಡಿಕೊಂಡಲ್ಲ. ಈಶ್ವರಪ್ಪ ಅವರಿಗೆ ನಮ್ಮ ಸಂವಿಧಾನದ ಬಗ್ಗೆ ಗೊತ್ತಿಲ್ಲ ಎಂದು ಕಾಣುತ್ತದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.



Join Whatsapp