ಹುಡುಗಿಯರ ಮದುವೆಯ ವಯಸ್ಸು 21 ಕ್ಕೆ ಏರಿಕೆಗೆ WIM ವಿರೋಧ

Prasthutha|

ನವದೆಹಲಿ: ಹುಡುಗಿಯರ ವಿವಾಹ ವಯಸ್ಸನ್ನು 18 ವರ್ಷದಿಂದ 21ಕ್ಕೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿಮೆನ್ ಇಂಡಿಯಾ ಮೂವ್ ಮೆಂಟ್ (ವಿಮ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಇಸ್ಲಾಂ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಹುಡುಗರ ಮದುವೆಯ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಲು ಜನರು ಯೋಚಿಸುತ್ತಿರುವಾಗ ಕೇಂದ್ರ ಸರ್ಕಾರ ಹುಡುಗಿಯರ ವಯಸ್ಸನ್ನು ಹೆಚ್ಚಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹುಡುಗಿಯರ ಮದುವೆಯ ವಯಸ್ಸನ್ನು ಹೆಚ್ಚಿಸುವ ಉದ್ದೇಶವಾದರೂ ಏನು ಎಂಬುದು ಅರ್ಥವಾಗುತ್ತಿಲ್ಲ. ಹುಡುಗಿಯರ ಆರೋಗ್ಯವನ್ನು ಸುಧಾರಿಸುವ ಉದ್ದೇಶವಿದ್ದರೆ ಅವರ ಮದುವೆ ವಯಸ್ಸನ್ನು ಹೆಚ್ಚಿಸುವುದು ಅದಕ್ಕೆ ಪರಿಹಾರವಲ್ಲ. ಅವರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ಮೂಲಕ, ಉತ್ತಮ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವ ಮೂಲಕ ಮತ್ತು ಅವರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಮೂಲಕ ಅವರ ಆರೋಗ್ಯ ಸುಧಾರಿಸಬಹುದು. ಈ ಕಾನೂನಿನ ಮೂಲಕ ಹುಡುಗಿಯರ ಸ್ವಾತಂತ್ರ್ಯದ ಬಗ್ಗೆ ಕಾಳಜಿ ಇದ್ದರೆ ಅದು ಕೂಡ ಈಡೇರುವುದಿಲ್ಲ. ಏಕೆಂದರೆ ಈ ನಿರ್ಧಾರವು ಹುಡುಗಿಯರು 21 ವರ್ಷ ಪ್ರಾಯ ತಲುಪುವವರೆಗೆ ಅವರ ಸ್ವಾತಂತ್ರ್ಯವನ್ನು ತಡೆಯುತ್ತದೆ. ಆದ್ದರಿಂದ, ಹೊಸ ನಿರ್ಧಾರದಿಂದ ಹುಡುಗಿಯರ ಆರೋಗ್ಯ ಸುಧಾರಣೆ ಅಥವಾ ಯೋಗಕ್ಷೇಮಕ್ಕೆ ಯಾವುದೇ ರೀತಿಯಲ್ಲಿಯೂ ಸಹಾಯವಾಗುವುದಿಲ್ಲ. ಆದರೆ 21ಕ್ಕಿಂತ ಮೊದಲು ಕಾನೂನುಬದ್ಧ ವಿವಾಹವಾದರೆ ಅಂತಹವರ ವಿರುದ್ಧ ದೇಶದಲ್ಲಿ ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗಬಹುದಷ್ಟೇ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

ಸರ್ಕಾರವು ಈ ಮೂಲಕ ಸಾಧಿಸ ಬಯಸುವುದು ಲಿಂಗ ಸಮಾನತೆಯಾಗಿದ್ದರೆ, ಅದು ಕೂಡ ಮೂರ್ಖತನದ್ದಾಗಿದೆ. ಏಕೆಂದರೆ ಪುರುಷ ಮತ್ತು ಮಹಿಳೆ ಇಬ್ಬರೂ ದೈಹಿಕವಾಗಿ, ಮಾನಸಿಕವಾಗಿ ಮತ್ತು ಜೈವಿಕವಾಗಿ ಭಿನ್ನರಾಗಿದ್ದಾರೆ. ಲಿಂಗ ಸಮಾನತೆಯು ಕೇವಲ ಕಾಲ್ಪನಿಕ ಆಲೋಚನೆಯಾಗಿದೆ, ಅದು ಪ್ರಾಯೋಗಿಕವಲ್ಲ. ವಾಸ್ತವವಾಗಿ, ಹುಡುಗಿಯರೇ ಹುಡುಗರಿಗಿಂತ ಮುಂಚಿತವಾಗಿ ಪ್ರೌಢಾವಸ್ಥೆಗೆ ತಲುಪುತ್ತಾರೆ. ಆದ್ದರಿಂದ, ಮದುವೆಗಾಗಿ ಹುಡುಗಿಯರ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವ ಬದಲು, ಮದುವೆಗೆ ಹುಡುಗರ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಬೇಕು, ಹುಡುಗಿಯರ ವಯಸ್ಸನ್ನು ಈಗಿನಂತೆ 18 ಕ್ಕೆ ಇಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಸಿವು, ಅಪೌಷ್ಟಿಕತೆ, ಶಿಶು ಮರಣ, ತಾಯಂದಿರ ಮರಣ ಸೇರಿದಂತೆ ಪ್ರತಿಯೊಂದು ಜಾಗತಿಕ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯ ಸೂಚ್ಯಂಕದಲ್ಲಿ ದೇಶವು ಕುಸಿಯುತ್ತಿರುವಾಗ ಈ ಕಾನೂನನ್ನು ಜಾರಿಗೆ ತರುವುದು ಸಂಪೂರ್ಣವಾಗಿ ಅನಗತ್ಯವಾಗಿದೆ. ದೇಶದಲ್ಲಿ ಈ ಪರಿಸ್ಥಿತಿಗಳನ್ನು ಉತ್ತಮಗೊಳಿಸಲು ಸರ್ಕಾರ ಆದ್ಯತೆ ನೀಡಬೇಕು. ಯಾವುದೇ ಸಕಾರಾತ್ಮಕ ಉದ್ದೇಶವನ್ನು ಪೂರೈಸದ ಈ ಕಾನೂನುಗಳನ್ನು ಜಾರಿಗೆ ತರಬಾರದು ಎಂದು ಯಾಸ್ಮಿನ್ ಒತ್ತಾಯಿಸಿದ್ದಾರೆ.

ಹುಡುಗಿಯರ ಮದುವೆಯ ವಯಸ್ಸನ್ನು 21ಕ್ಕೆ ಏರಿಸುವುದು ಮೇಲೆ ಹೇಳಿದ ದೇಶದ ಸಮಸ್ಯೆಗಳಿಗೆ ಪರಿಹಾರವಲ್ಲ. ಉಳಿದ ಮೂಲಸೌಕರ್ಯಗಳನ್ನು ಒದಗಿಸದ ಹೊರತು ಮದುವೆಯ ಕಾನೂನುಬದ್ಧ ವಯಸ್ಸು ಹೆಚ್ಚಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ಹುಡುಗಿಯರ ಮದುವೆಯ ವಯಸ್ಸನ್ನು 18ರಿಂದ 21 ವರ್ಷಗಳಿಗೆ ಹೆಚ್ಚಿಸುವುದೆಂದರೆ, 21 ವರ್ಷ ಪ್ರಾಯ ತಲುಪುವವರೆಗೆ ಹುಡುಗಿಯ ಹಕ್ಕುಗಳನ್ನು ಮತ್ತಷ್ಟು ಹಿಂಸಿಸುವುದು ಎಂದರ್ಥ. ಈ ನಿರ್ಧಾರದ ವಿರೋಧಾಭಾಸವೆಂದರೆ, ಹುಡುಗ ಮತ್ತು ಹುಡುಗಿ ಇಬ್ಬರೂ 18ನೇ ವಯಸ್ಸಿನಲ್ಲಿ ದೇಶ ಮತ್ತು ರಾಜ್ಯದ ಆಡಳಿತಗಾರರನ್ನು ಆಯ್ಕೆ ಮಾಡುವ ಚುನಾವಣೆಗಳಲ್ಲಿ ಭಾಗವಹಿಸಬಹುದು ಮತ್ತು ಮತ ಚಲಾಯಿಸಬಹುದು. ಆದರೆ ಅವರು ಈ ವಯಸ್ಸಿನಲ್ಲಿ ಕಾನೂನುಬದ್ಧ ವಿವಾಹದಲ್ಲಿ ತೊಡಗಲು ಸಾಧ್ಯವಿಲ್ಲ. ಅದೇ ರೀತಿ, ಭಾರತೀಯ ಸಂಸ್ಕೃತಿಯಲ್ಲಿ ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಲಿವಿಂಗ್ ಟುಗೆದರ್ 18ನೇ ವಯಸ್ಸಿನಲ್ಲಿ ಕಾನೂನುಬಾಹಿರವಲ್ಲ. ಆದರೆ 18ನೇ ವಯಸ್ಸಿನಲ್ಲಿ ಮದುವೆಯಾಗುವುದು ಕ್ರಿಮಿನಲ್ ಅಪರಾಧವಾಗಿದೆ. ಇದು ಅಸಂಬದ್ಧವಾಗಿದೆ ಎಂದು ಯಾಸ್ಮಿನ್ ತಿಳಿಸಿದ್ದಾರೆ.

ದೇಶದಲ್ಲಿ ಮಹಿಳೆಯರು ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕು ಮತ್ತು ಈ ಹಾಸ್ಯಾಸ್ಪದ ಕಾನೂನನ್ನು ರದ್ದುಗೊಳಿಸಬೇಕು ಎಂದು ಯಾಸ್ಮಿನ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp