ಸಂಸತ್ ಅಧಿವೇಶನದಲ್ಲಿ ದೇಶದ ಸಮಸ್ಯೆಗಳ ಚರ್ಚೆಗೆ ಸರ್ಕಾರ ಅವಕಾಶ ನೀಡಿಲ್ಲ: ಡಾ.ಎಲ್.ಹನುಮಂತಯ್ಯ

Prasthutha|

ಬೆಂಗಳೂರು: ಮುಂಗಾರು ಸಂಸತ್ ಅಧಿವೇಶನದಲ್ಲಿ ರೈತರ ಸಮಸ್ಯೆ, ಪೆಗಾಸಸ್ ಹಗರಣ, ಬೆಲೆ ಏರಿಕೆ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡದೆ ಸರ್ಕಾರ ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಿದೆ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

- Advertisement -

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್. ಹನುಮಂತಯ್ಯ, ವಿರೋಧ ಪಕ್ಷಗಳು ಸಂಸತ್ ಕಾರ್ಯಕಲಾಪ ನಡೆಯಲು ಬಿಡಲಿಲ್ಲ, ಆಮೂಲಕ ದೊಡ್ಡ ಅಪರಾಧ ಮಾಡಿವೆ. ಇದು ದೇಶದ್ರೋಹ ಎಂಬ ರೀತಿಯಲ್ಲಿ ಬಿಜೆಪಿ ಮಂತ್ರಿಗಳು ಹಾಗೂ ನಾಯಕರು ಎಂದು ಬಿಂಬಿಸುತ್ತಿದ್ದಾರೆ. ಬಿಜೆಪಿ ನಾಯಕರು ಸತ್ಯಾಂಶವನ್ನು ಮರೆಮಾಚಿ ಕೇವಲ ಪ್ರತಿಭಟನೆಯನ್ನೇ ಮುಂದಿಟ್ಟುಕೊಂಡು ಸುಳ್ಳು ಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿವೆ ಎಂದು ಹೇಳಿದರು.

ಜುಲೈ 19ರಿಂದ ಆಗಸ್ಟ್ 13ರವರೆಗೆ ಮುಂಗಾರು ಅಧಿವೇಶನ ನಡೆಸಲು ಕಾರ್ಯಕಲಾಪ ಸಮಿತಿ, ಲೋಕಸಭೆ ಹಾಗೂ ರಾಜ್ಯಸಭೆ ಅಧ್ಯಕ್ಷರು ತೀರ್ಮಾನಿಸಿದ್ದರು. ಎರಡೂ ಸದನಗಳ 14 ವಿರೋಧ ಪಕ್ಷಗಳು ಸೇರಿ ಈ ಚರ್ಚೆಯಲ್ಲಿ ಭಾಗವಹಿಸಬೇಕಾದರೆ ದೇಶದ ಜ್ವಲಂತ ಸಮಸ್ಯೆಗಳನ್ನು ಚರ್ಚೆ ಮಾಡಬೇಕು. ಒಂದು ವೇಳೆ ಅವರು ಚರ್ಚೆ ಮಾಡದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದೆವು. ಇಡೀ ದೇಶದ ಪ್ರಮುಖರು ಹಾಗೂ ಪತ್ರಕರ್ತರನ್ನು ಪೆಗಾಸಸ್ ತಂತ್ರಾಂಶದ ಮೂಲಕ ಕದ್ದಾಲಿಕೆ ಮಾಡಿ ಗೂಢಚಾರಿಕೆ ಮಾಡಿರುವುದು, 8 ತಿಂಗಳಿಂದ ದೆಹಲಿ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ 500 ಕ್ಕೂ ಹೆಚ್ಚು ರೈತರು ಮೃತಪಟ್ಟಿರುವ ಬಗ್ಗೆ, ಜನಸಾಮಾನ್ಯರಿಗೆ ಹೊರೆಯಾಗಿರುವ ತೈಲ ಬೆಲೆ ಹಾಗೂ ದಿನಬಳಕೆ ವಸ್ತುಗಳ ಬೆಲೆ ದುಬಾರಿ ವಿಚಾರ ಚರ್ಚೆ ಮಾಡಬೇಕು ಎಂದು ನಾವು ಸರ್ಕಾರಕ್ಕೆ ಒತ್ತಾಯಿಸಿದ್ದೆವು. ಈ ವಿಚಾರವಾಗಿ ಚರ್ಚೆ ನಡೆಯಬೇಕು ಎಂದು ವಿರೋಧ ಪಕ್ಷದ ಸಂಸದರು ನೋಟೀಸ್ ಕೊಟ್ಟಿದ್ದರೂ ಸರ್ಕಾರ ಈ ಯಾವ ವಿಚಾರವಾಗಿ ಚರ್ಚೆ ಮಾಡಲು ಮುಂದಾಗಲಿಲ್ಲ ಎಂದು ಆರೋಪಿಸಿದರು.

- Advertisement -

ಬಿ.ಕೆ. ಹರಿಪ್ರಸಾದ್ ಮಾತನಾಡಿ, ಲೋಕಸಭೆ ಹಾಗೂ ರಾಜ್ಯಸಭೆ ಸದನವನ್ನು ಸರ್ಕಾರ ಹೇಗೆ ನಡೆಸಲಾಗಿದೆ ಎಂದು ದೇಶದ ಜನ ನೋಡಿದ್ದಾರೆ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ತಮಗೆ ಬೇಕಾದ ಕಾನೂನು ತರಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ನ್ಯೂನ್ಯತೆ ತಪ್ಪುಗಳನ್ನು ಗಮನಕ್ಕೆ ತರುವುದು ವಿರೋಧ ಪಕ್ಷದ ಜವಾಬ್ದಾರಿ. ವಿರೋಧ ಪಕ್ಷದವರ ಹೇಳಿಕೆ, ಅನಿಸಿಕೆಗಳಿಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಸದನದಲ್ಲಿ ಚರ್ಚೆಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ದೂರಿದರು.



Join Whatsapp