ಸಿದ್ದೀಕ್ ಕಾಪ್ಪನ್ ರ ಮತ್ತಷ್ಟು ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

Prasthutha|

ಕಾನ್ಪುರ: ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರಿಂದ ಹೆಚ್ಚಿನ ಹೇಳಿಕೆಯನ್ನು ಪಡೆಯಲು ಅನುಮತಿ ಕೋರಿ ಉತ್ತರ ಪ್ರದೇಶದ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಮಥುರಾ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ಕಾಪ್ಪನ್ ಅವರನ್ನು ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಮಥುರಾ ಜೈಲಿನಲ್ಲಿಡಲಾಗಿದೆ.

- Advertisement -

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಅನಿಲ್ ಕುಮಾರ್ ಪಾಂಡೆ ಅವರು ಇಂದು ಪತ್ರಕರ್ತ ಕಾಪ್ಪನ್ ರನ್ನು ಹೆಚ್ಚಿನ ವಿಚಾರಣೆಯನ್ನು ಒಳಪಡಿಸುವ ಪೊಲೀಸರ ಬೇಡಿಕೆಯನ್ನು ತಳ್ಳಿಹಾಕಿ ಅರ್ಜಿಯನ್ನು ವಜಾಗೊಳಿಸಿದರು.

ಕಾಪ್ಪನ್ ಅವರು ತನ್ನ ಸಂಗಡಿಗರೊಂದಿಗೆ ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಲು ಹತ್ರಾಸ್ ಕಡೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಹತ್ರಾಸ್ ನಲ್ಲಿ ಉದ್ವಿಗ್ನತೆ ಸೃಷ್ಟಿಸುವ ಸಂಚು ನಡೆಸಿದ ಆರೋಪದಡಿಯಲ್ಲಿ ಸಿದ್ದೀಕ್ ಸೇರಿ ಇತರ ಮೂವರನ್ನು ಅಕ್ಟೋಬರ್ 5, 2020 ರಂದು ಮಥುರಾದಲ್ಲಿ ಮಾರ್ಗಮಧ್ಯೆ ಪೊಲೀಸರು ಬಂಧಿಸಿದ್ದರು.

- Advertisement -

ಬಂಧಿತ ಆರೋಪಿಗಳಿಂದ ನಿಷೇಧಿತ ಸಿಮಿ ಸಂಘಟನೆ ಸಂಬಂಧಪಟ್ಟ ಪುಸ್ತಕ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾತ್ರವಲ್ಲ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಾಮಾನ್ಯ ಸಭೆಯಲ್ಲಿ ಕಾಪ್ಪನ್ ಅವರಿಗೆ ವಹಿಸಲಾಗಿರುವ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆಯಲು ವಿಚಾರಣೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಸಿರೋಹಿ ಅರ್ಜಿಯಲ್ಲಿ ಮನವಿ ಮಾಡಿದ್ದರು. ಆದರೆ ನ್ಯಾಯಾಲಯವು ಇಂದು ವಜಾಗೊಳಿಸಿದೆ.

ಆರೋಪಿ ಪರ ಮಿಲ್ಸ್ ಮ್ಯಾಥ್ಯೂಸ್ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಪೊಲೀಸರು ಈಗಾಗಲೇ ತನಿಖೆ ಪೂರ್ತಿಗೊಳಿಸಿ ಏಪ್ರಿಲ್ 3, 2021 ರಂದು ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದಾರೆ. ಎಫ್.ಐ.ಆರ್ ದಾಖಲಿಸಿ 10 ತಿಂಗಳ ನಂತರ ಮತ್ತೆ ವಿಚಾರಣೆಗೆ ಒಳಪಡಿಸಲು ಅರ್ಜಿ ಸಲ್ಲಿಸುವುದು ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ವಿರುದ್ಧವಾಗಿದೆ ಮತ್ತು ಆರೋಪಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯೆಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಪ್ಪನ್ ಅವರನ್ನು ಏಪ್ರಿಲ್ 4, 2021 ರಂದು ಸುಳ್ಳು ಪತ್ತೆ ಅಥವಾ ಬ್ರೈನ್ ಮ್ಯಾಪಿಂಗ್ ಮಾಡುವ ಯೋಜನೆಯನ್ನು ಪೊಲೀಸರು ಇಟ್ಟುಕೊಂಡಿದ್ದಾರೆ ಎಂದು ವಕೀಲರಾದ ಮ್ಯಾಥ್ಯೂಸ್ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಮಾತ್ರವಲ್ಲದೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಕಾಪ್ಟನ್ ದೃಷ್ಟಿ, ಕಣ್ಣು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದಿಷ್ಟ ನಿರ್ದೇಶನದ ಹೊರತಾಗಿಯೂ ಚಿಕಿತ್ಸೆ ನಿರಾಕರಿಸಲಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ನ್ಯಾಯಾಲಯವು ಸಿ.ಆರ್.ಪಿ.ಸಿ ಸೆಕ್ಷನ್ 167 ಅಡಿಯಲ್ಲಿ ಜಾಮೀನು ನೀಡದಿರುವ ಕುರಿತು ಜೈಲಾಧಿಕಾರಿಗಳಿಂದ ವರದಿ ಕೇಳಲು ನಿರ್ಧರಿಸಿದೆ.

Join Whatsapp