ಮಂಡಿಯೂರಿದ ಫ್ಯಾಶಿಸ್ಟ್ ಪ್ರಭುತ್ವ

Prasthutha: December 3, 2021
✍️ಎನ್. ರವಿಕುಮಾರ್

ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ. ರೈತ ಹೋರಾಟ ಎಂಬುದು ಈಗ ರೈತರಿಗೆ ಸೀಮಿತವಾಗಿ ಉಳಿದಿಲ್ಲ. ಅದು ಈ ದೇಶದ ಕಾರ್ಪೊರೇಟ್ ಪರ ವ್ಯವಸ್ಥೆಯಿಂದ ನೊಂದಿರುವ, ಆತಂಕಿತರಾಗಿರುವ ಎಲ್ಲಾ ಜನಸಾಮಾನ್ಯರ ಜನಾಂದೋಲನವಾಗಿ ಬದಲಾಗಿದೆ. ನಮ್ಮ ಹೋರಾಟ ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧವಲ್ಲ, ಜನಸಾಮಾನ್ಯರ ಬದುಕನ್ನು ನಾಶ ಮಾಡುತ್ತಿರುವ ಮತ್ತು ಅದೇ ಹೊತ್ತಿಗೆ ಕೆಲವೇ ಮಂದಿ ಕಾರ್ಪೊರೇಟ್ ಕುಳಗಳು ದೇಶದ ಸಮಗ್ರ ಸಂಪತ್ತಿನ ಲೂಟಿಗೆ ಮಣೆ ಹಾಕುತ್ತಿರುವ ಇಡೀ ಭ್ರಷ್ಟ ವ್ಯವಸ್ಥೆಯ ವಿರುದ್ಧದ ಹೋರಾಟವಿದು. ಈ ಹೋರಾಟ ಇದೀಗ ದೇಶವ್ಯಾಪಿ ಜನಾಂದೋಲನವಾಗಿ ಬದಲಾಗಿದ್ದು, ಜನಾಂದೋಲನವೊಂದು ತಾನೇತಾನಾಗಿ ಮುಂದುವರೆಯಲಿದೆ.

ವ್ಯವಸ್ಥೆಯ ಬದಲಾವಣೆಗೆ ನಾಂದಿ ಹಾಡಲಿದೆ. ಆ ಬದಲಾವಣೆ ತತಕ್ಷಣಕ್ಕೇ ಆಗದೇ ಹೋದರೂ ಅದು ಆಗಿಯೇ ಆಗುತ್ತದೆ. ಬಹಳ ಮುಖ್ಯವಾಗಿ ನಾವು ರಾಜಕಾರಣಿಗಳಲ್ಲ, ರಾಜಕಾರಣಕ್ಕಾಗಿ ಇದನ್ನು ಮಾಡುತ್ತಿಲ್ಲ. ಮತಕ್ಕಾಗಿ ಮಾಡುತ್ತಿಲ್ಲ. ದೇಶದ ರೈತರಿಗೆ, ಜನಸಾಮಾನ್ಯರಿಗೆ ಮತ್ತು ಮುಖ್ಯವಾಗಿ ದೇಶದ ಭವಿಷ್ಯಕ್ಕಾಗಿ ಈ ಹೋರಾಟ. ಇದು ಜನರಿಗೆ ಅರ್ಥವಾಗಿದೆ. ಹಾಗಾಗಿ ನಾವು ಬಯಸಿದ ಬದಲಾವಣೆ ಖಂಡಿತವಾಗಿಯೂ ಬರಲಿದೆ ಎಂಬ ವಿಶ್ವಾಸವಿದೆ. ನಾವು ಶತಮಾನಗಳ ಕಾಲದಿಂದಲೂ ಹೋರಾಡುತ್ತಲೇ ಬಂದಿದ್ದೇವೆ. ನಮಗೆ ಈ ಎಲ್ಲದರ ಅರಿವಿದೆ. ನಮಗೆ ಅವಸರವೇನಿಲ್ಲ. ಅಷ್ಟು ಸುಲಭವಾಗಿ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ. ನಾವು ಭೂಮಿಯನ್ನು ಉತ್ತಿ-ಬಿತ್ತಿ, ಮೊಳಕೆಯಿಂದ ಫಸಲಿನವರೆಗೆ ಜತನ ಮಾಡಿ, ಒಕ್ಕಲು ಮಾಡುವ ಸಹನೆ ಮತ್ತು ಸೈರಣೆ ಉಳ್ಳವರು. ಹಾಗಾಗಿ ನಾವು ಅಂದುಕೊಂಡಿದ್ದನ್ನು ಸಾಧಿಸಲು ನಮಗೆ ಕಾಲಮಿತಿಯ ಪರಿವೆ ಇಲ್ಲ. ಭೂಮಿಗೆ ಬಿತ್ತಿದ ಬೀಜ ಮೊಳಕೆಯೊಡೆದು ಫಲ ಕೊಟ್ಟೇ ಕೊಡುತ್ತದೆ ಎಂಬ ವಿಶ್ವಾಸ ನಮಗಿದೆ. ಅಲ್ಲಿಯವರೆಗೂ ಕಾಯುವ ಸಹನೆಯೂ ನಮಗಿದೆ.


ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಅವರು ನಾನು ಸಂದರ್ಶಿಸಿದ ಸಂದರ್ಭದಲ್ಲಿ ಆಡಿದ ಅಪರಿಮಿತ ವಿಶ್ವಾಸದ ಮಾತುಗಳಿವು. ಯುದ್ಧವೀರ್ ಸಿಂಗ್ ಅವರ ಮಾತುಗಳು ಎಂಟು ತಿಂಗಳ ನಂತರ ನಿಜವಾದವು. ಬಿತ್ತಿದ ಚಳವಳಿಯ ಬೀಜ ಮೊಳಕೆಯೊಡೆದು ತೆನೆ ತೂಗಿತ್ತು. ಪ್ರಧಾನಿ ಪಟ್ಟದಲ್ಲಿ ಕುಳಿತ ನರೇಂದ್ರ ಮೋದಿ ಎಂಬ ನಿರ್ದಯಿ ನಾಯಕನೊಬ್ಬನ ಸರ್ಕಾರ ತಲೆಬಾಗಿ ತಪ್ಪೊಪ್ಪಿಕೊಳ್ಳುವ ಕಾಲ ಇಷ್ಟು ಬೇಗ ಬರುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ. ಹಠಮಾರಿ ಮೋದಿ ಅಷ್ಟು ಸುಲಭವಾಗಿ ಮಣಿಯಲಾರರು ಎಂದು ಭಾವಿಸಿದ್ದ ಅವರ ಭಕ್ತ ಸಮೂಹಕ್ಕೆ ದಿಗ್ಭ್ರಮೆಯಾಗುವಂತೆ ಮೋದಿ ನವೆಂಬರ್ 19ರಂದು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯವುದಾಗಿ ಘೋಷಿಸಿದ್ದಾರೆ. ಇದು ಜನಶಕ್ತಿಗೆ ಸಿಕ್ಕ ಅಭೂತಪೂರ್ವ ಜಯ. ಭಾರತದಲ್ಲಿ ನಡೆದ ಈ ಅನ್ನದಾತರ ಚಳವಳಿ 21ನೇ ಶತಮಾನದ ಜಗತ್ತಿನ ಮಹಾ ಆಂದೋಲನವಾಗಿ ಹೀಗೆ ಇತಿಹಾಸದಲ್ಲಿ ದಾಖಲಾಗುತ್ತದೆ.

ನರೇಂದ್ರ ಮೋದಿ ಸರ್ಕಾರದ ದುರಹಂಕಾರವನ್ನು ಕೊನೆಗೂ ಈ ದೇಶದ ರೈತ ಚಳವಳಿ ಬಗ್ಗು ಬಡಿದಿದೆ. ಬಿತ್ತ ಬೀಜ ಮೊಳಕೆಯೊಡೆದು ಫಲ ನೀಡುವವರೆಗೂ ಸಹನೆಯಿಂದ ಕಾಯುವ ರೈತರು ಚಳವಳಿಯ ಕಾಲಕ್ಕೂ ಅಷ್ಟೇ ಸಹನೆಯಿಂದ ಎದುರಾಳಿಯನ್ನು ಹಿಮ್ಮೆಟ್ಟಿಸಿದ್ದಾರೆ. ಮಹಾತ್ಮ ಗಾಂಧಿಯ ಅಹಿಂಸಾ ತತ್ವಕ್ಕೆ ಇನ್ನಷ್ಟು ಹೊಳಪು ಮೂಡಿದೆ. ಎನ್‌ ಆರ್‌ ಸಿ/ಸಿಎಎಯಂತಹ ಮತೀಯ ದ್ವೇಷದ ಕಾಯ್ದೆಗಳನ್ನು ಜಾರಿಗೊಳಿಸಿ ದಕ್ಕಿಸಿಕೊಂಡ ಗರ್ವದಲ್ಲಿದ್ದ ಮೋದಿ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಧೋರಣೆ ರೈತರ ಹೋರಾಟದ ಮುಂದೆ ಸಫಲವಾಗಲಿಲ್ಲ.
ಜನರಿಂದಲೇ ಪಡೆದ ಅಧಿಕಾರ ಗದ್ದುಗೆಯನ್ನು ಸ್ವೇಚ್ಛಾಚಾರ ಮತ್ತು ಅಪ್ರಜಾತಾಂತ್ರಿಕ ಧೋರಣೆಗಳಿಂದ ಏನು ಮಾಡಿದರೂ ಸರಿ ಎಂದು ಹೊರಟ ಮೋದಿಯನ್ನು ಬೀಡಾಡಿ ದನವ ಬಡಿದು ಕೊಟ್ಟಿಗೆಗೆ ಕಟ್ಟಿದಂತೆ ರೈತರು ಬಿಗಿದಿದ್ದಾರೆ.


ಇಡೀ ದೇಶ ಕೊರೋನಾ ಮಹಾಮಾರಿಯ ಆತಂಕ, ಅಧ್ವಾನ ಗಳ ಅಸಹಾಯಕ ಸನ್ನಿವೇಶವನ್ನು ಎದುರಿಸುತ್ತಿತ್ತು. ದೇಶಕ್ಕೆ ಲಾಕ್‌ ಡೌನ್ ಹೇರಿದ ಒಕ್ಕೂಟ ಸರ್ಕಾರ ಉರಿವ ಮನೆಯ ಗಳ ಇರಿಯುವಂತಹ ನೀಚತನದಿಂದ ತನ್ನ ಜನವಿರೋಧಿ ಅಜೆಂಡಾಗಳನ್ನು ಅನುಷ್ಠಾನಗೊಳಿಸಿಕೊಳ್ಳುವ ಹುನ್ನಾರ ನಡೆಸಿತ್ತು. ಜೂ. 5/2020ರಂದು ಕೃಷಿ ಕಾಯ್ದೆಗಳಿಗೆ ತಿದ್ದುಪಡಿಯ ಸುಗ್ರೀ ವಾಜ್ಞೆಯ ನಿರ್ಣಯ ಕೈಗೊಂಡಿತು. ಪ್ರಜಾಸತ್ತಾತ್ಮಕ ನಡವಳಿಕೆಗಳೆಲ್ಲವನ್ನೂ ಧಿಕ್ಕರಿಸಿ ಒಂದು ನಾಗರೀಕ ಸರ್ಕಾರ ಅಪ್ಪಟ ಸರ್ವಾಧಿಕಾರಿ ಧೋರಣೆಯನ್ನು ಮೈಗೂಡಿಸಿಕೊಂಡಿದ್ದು ಅಕ್ಷಮ್ಯ. ದೇಶಕ್ಕೆ ದೇಶವೇ ಕೊರೋನಾ ಸಂಕಷ್ಟದಿಂದ ನಲುಗುತ್ತಿರುವಾಗ ಚರ್ಚೆ, ಸಂವಾದ, ಪ್ರಶ್ನೋತ್ತರಗಳ ಪ್ರಜಾಪ್ರಭುತ್ವದ ಯಾವ ನಡವಳಿಗಳಿಗೂ ಕೃಷಿ ಕಾಯ್ದೆ ತಿದ್ದುಪಡಿಗಳನ್ನು ಒಳಪಡಿಸದೆ. ಜನಾಭಿಪ್ರಾಯವನ್ನಾಗಲಿ, ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆಗಳನ್ನಾಗಲಿ ಕೇಳದ ಪ್ರಧಾನಿ ನರೇಂದ್ರ ಮೋದಿ ಸೆ.17ರಂದು ಕೃಷಿ ಕಾಯ್ದೆ ತಿದ್ದುಪಡಿಯನ್ನು ಸಂಸತ್ತಿನಲ್ಲಿನ ತನ್ನ ಬಲದ ಮೇಲೆ ಅಂಗೀಕರಿಸಿ, ಸೆ. 27ರಂದು ದೇಶಾದ್ಯಂತ ಜಾರಿಗೊಳಿಸಿದರು.


ಅತ್ಮನಿರ್ಭರ ಎಂಬ ಭಾರತ ಎಂಬ ಪೊಳ್ಳು ಘೋಷಣೆಯ ಪುಂಗಿ ಊದುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ ಡಿಎ ಸರ್ಕಾರ ಇಡೀ ದೇಶವನ್ನು ಕಾರ್ಪೋರೇಟ್ ಕುಳಗಳಿಗೆ ಅಡವಿಡಲು ಹೊರಟಿರುವುದು ನಿಚ್ಚಳವಾಗಿತ್ತು. ಸರ್ಕಾರ ಮತ್ತು ರೈತರ ನಿಗಾದಲ್ಲಿದ್ದ ಎಪಿಎಂಸಿ ಮಾರುಕಟ್ಟೆಗಳ ಕತ್ತು ಹಿಸುಕಿ ಇದರ ಭಾಗವಾಗಿಯೇ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕುಳಗಳಿಗೆ ಒಪ್ಪಿಸುವ ಮೂಲಕ ಈ ದೇಶದ ಅನ್ನದಾತರನ್ನು ಬಂಡವಾಳ ಶಾಹಿಗಳ ಗುಲಾಮರನ್ನಾಗಿಸಲು ಒಕ್ಕೂಟ ಸರ್ಕಾರ ಕೃಷಿ ಕಾಯ್ದೆಗೆ ತಿದ್ದುಪಡಿಯನ್ನು ಸುಗೀವಾಜ್ಞೆ ಮೂಲಕ ತಂದಿತ್ತು. ಇದನ್ನು ವಿರೋಧಿಸಿ 40 ಸಂಘಟನೆಗಳ ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ನ.25ರಿಂದಲೇ ಚಳವಳಿಗಿಳಿದವು. ಆರಂಭದಲ್ಲಿ ಚಳವಳಿಯನ್ನು ನಿರ್ಲಕ್ಷಿಸಿದ ಮೋದಿ ಸರ್ಕಾರ ಚಳವಳಿಯ ಕಾವು ವಿಸ್ತರಿಸುತ್ತಿದ್ದಂತೆ ಮಾತುಕತೆಯ ನೆಪಗಳನ್ನು ಹೂಡಿತು. 11 ಸುತ್ತಿನ ಮಾತುಗಳಲ್ಲಿ ಮೋದಿ ಮಾತಿಗೆ ಅನ್ನದಾತರು ಮರುಳಾಗಲಿಲ್ಲ. ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ಕಚೇರಿಯ ಒಂದು ಲೋಟ ನೀರನ್ನು ಕುಡಿಯದೆ, ತಾವೆ ಬುತ್ತಿ ಕಟ್ಟಿಕೊಂಡು ಹೋಗಿ ತಿಂದು ಬಂದದ್ದು ಈ ದೇಶದ ರೈತರ ಸ್ವಾಭಿಮಾನದ ದಿವ್ಯ ದ್ಯೋತಕ. ಅಲ್ಲಿಗೆ ರೈತರು ಕೈಗೊಂಡ ಚಳವಳಿಯ ದಿಕ್ಕು ಮತ್ತು ನಿರ್ಧಾರ ಸ್ಪಷ್ಟವಾಗಿತ್ತು.


ನಮ್ಮ ಬದುಕನ್ನೆ ನಾಶ ಮಾಡ ಹೊರಟ ಪ್ರಭುತ್ವದ ಹಂಗನ್ನು ನಿರಾಕರಿಸುವ ಮೂಲಕ ರೈತರು ಆರಂಭದಲ್ಲಿ ಮೋದಿ ಎಂಬ ಹಠಮಾರಿಗೆ ಘಾತುಕ ಪ್ರತಿರೋಧವನ್ನೇ ಒಡ್ಡಿದರು. ಈ ದೇಶಕ್ಕೆ ಅನ್ನ ಕೊಟ್ಟ ರೈತರನ್ನು ಭಯೋತ್ಪಾದಕರು, ನಕ್ಸಲರು, ಖಲಿಸ್ತಾನಿಗಳು, ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಿ ರೈತರನ್ನು ವಿಚಲಿತರನ್ನಾಗಿಸುವ ಪ್ರಯತ್ನವನ್ನು ಮರೆಯಲಾಗದು. ಆಡಳಿತರೂಢ ಪಕ್ಷದ ಸಚಿವರುಗಳೇ ನಾಲಿಗೆ ಹರಿಯಬಿಟ್ಟು ಚಳವಳಿಯನ್ನು ಅವಮಾನಿಸಿದರು, ಬಿಜೆಪಿಯ ಕಾಲಾಳು ಸಂಘಟನೆಗಳು ಗಡಿಯಲ್ಲಿ ಧರಣಿ ನಿರತ ರೈತರ ಗುಂಪಿನ ಮೇಲೆ ಕಲ್ಲು ತೂರಿದವು, ನಿಂದಿಸಿದವು. ಅನ್ನ -ನೀರು ದಕ್ಕದಂತೆ ಕಡಿವಾಣ ಹಾಕಲು ಯತ್ನಿಸಿದವು. ಕಿಡಿಗೇಡಿತನಗಳಿಂದ ಆಂದೋಲನವನ್ನು ಛಿದ್ರಗೊಳಿಸಲು ನಡೆಸಿದ ಸಂಚುಗಳು ಕೊನೆಗೂ ವಿಫಲವಾದವು. ಕೊರೋನಾವನ್ನು ತಬ್ಲಿಘಿಗಳ ತಲೆಗೆ ಕಟ್ಟಿ ಈ ದೇಶದ ಅಲ್ಪಸಂಖ್ಯಾತ ಜನಸಮುದಾಯವನ್ನು ದ್ವೇಷದ ಕುಲುಮೆಗೆ ಒಡ್ಡಲು ನಡೆಸಿದ ಸಂಚಿನ ಮಾದರಿಯನ್ನೇ ರೈತ ಚಳವಳಿಯ ಮೇಲೂ ಪ್ರಯೋಗಿಸಲಾಯಿತು. ಜಡಿಮಳೆ, ರಣ ಬಿಸಿಲು, ಕೊರೆವ ಚಳಿಯಲ್ಲಿ ರೈತರು ನಲುಗಿ ಹೋರಾಟ ಬಿಟ್ಟು ತೊಲಗಲಿ ಎಂದು ನಿರ್ದಯವಾಗಿ ಸರ್ಕಾರ ನಡೆದುಕೊಂಡಿತು. ರಸ್ತೆಗಳಿಗೆ ಉಕ್ಕಿನ ಮೊಳೆ ಜಡಿದು, ಮುಳ್ಳುತಂತಿಯ ಬೇಲಿ ಬಿಗಿದು ಸರಿಗಟ್ಟಲಾಯಿತು. ತನ್ನದೇ ಜನರನ್ನು ಈ ಸರ್ಕಾರ ಅಕ್ಷರಶಃ ಶತ್ರುಗಳಂತೆ ಕಂಡಿತು. ಇದು ರೈತರ ಕಿಚ್ಚನ್ನು ಬಡಿದೆಬ್ಬಿಸಿತು. ಆದರೆ ರೈತರು ಹಿಂಸೆಯಿಂದ ಹತ್ತಿಕ್ಕುವ ಮೋದಿ ಸರ್ಕಾರದ ಷಡ್ಯಂತ್ರ ರೈತರ ಅಹಿಂಸೆಯ ಅಸ್ತದಿಂದ ನಿಷ್ಪಲಗೊಂಡಿತು. ಇತ್ತೀಚೆಗೆ ಲಖೀಂಪುರದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವರೊಬ್ಬರ ಮಗ ಮತ್ತವರ ಬೆಂಗಲಿಗರು ಜೀಪಿನ ದಾಳಿ ನಡೆಸಿ ಎಂಟು ರೈತರನ್ನು ಹತ್ಯೆ ಮಾಡಿದರು. ಇವೆಲ್ಲವೂ ಅಧಿಕಾರ ಮದದಲ್ಲಿ ನಡೆಸಿದ್ದಕ್ಕೆ ಕಣ್ಣಿಗೆ ಕಟ್ಟುವ ಸಾಕ್ಷಿಗಳೇ ಆಗಿದ್ದವು. ಆದರೆ ಇದಾವುದಕ್ಕೂ ರೈತರು ಜಗ್ಗಲಿಲ್ಲ. ಕುಗ್ಗಲಿಲ್ಲ. ನಿಂತ ನೆಲ ಕದಲದಂತೆ ಕಾಲೂರಿದ್ದರು. ಉತ್ತರ ಧ್ರುವಕೂ ದಕ್ಷಿಣ ಧ್ರುವಕೂ…..ರೈತ ಮಹಾಪಂಚಾಯತ್‌ ಗಳ ಮೂಲಕ ತನ್ನ ಚಳವಳಿಯನ್ನು ವಿಸ್ತರಿಸಿಕೊಂಡಿತು.


ನ.19 ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಘೋಷಣೆಯನ್ನು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ರೈತರ ಐತಿಹಾಸಿಕ ದೃಢ ಹೋರಾಟದ ಮುಂದೆ ಮಂಡಿಯೂರಿದರು. ಕೃಷಿ ಕಾಯ್ದೆಗಳು ದೀಪದ ಬೆಳಕಿನಷ್ಟು ಸ್ಪಷ್ಟವಾಗಿದ್ದವು, ಇದನ್ನು ಕೆಲವು ರೈತರಿಗೆ ಅರ್ಥಮಾಡಿಸಲು ಸಾಧ್ಯವಾಗಲಿಲ್ಲ. ‘ಕ್ಷಮೆ ಇರಲಿ’ ಎನ್ನುವ ಮೋದಿಯ ಮಾತುಗಳಲ್ಲಿ ತನ್ನೊಳಗಿನ ಅಧಿಕಾರದ ಮೋಹ, ದಾಷ್ಟ್ಯ ಮಾತ್ರವೆ ಇಣುಕಿತ್ತು. ಇಂತಹದ್ದೊಂದು ಜನವಿರೋಧಿ ಕಾಯ್ದೆಗಳನ್ನು ತಂದ ಲವಲೇಶವೂ ಪಶ್ಚಾತ್ತಾಪವಾಗಲಿ, 680 ಜನ ರೈತರ ಸಾವಿಗೆ ಕಾರಣನಾದೆನೆಂಬ ಪಾಪಪ್ರಜ್ಞೆಯಾಗಲಿ ಕಂಡು ಬರಲಿಲ್ಲ. ಜನರ ನೋವಿಗೆ ನೋಯದವನು ಎಂದಿಗೂ ನಾಯಕನಾಗಲಾರ ಎಂಬ ಮಾತಿನ ಮೂರ್ತ ಆಕಾರವೆಂಬಂತೆ ಮೋದಿ ಕಾಣತೊಡಗಿರುವುದು ಈ ದೇಶದ ದುರಂತ.


ಮೋದಿ ಹೊಳಪು ದಿನೇ ದಿನೇ ಮಸುಕಾಗತೊಡಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮೇನಿಯಾ ತುಕ್ಕು ಹಿಡಿದು ನೆಲಕ್ಕಚ್ಚುವ ಸನ್ನೆಃಗಳು ನಿಚ್ಚಳವಾಗತೊಡಗಿವೆ. ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಮೋದಿ ಮೇನಿಯಾ ನೆಲಕಚ್ಚಿರುವುದು ಬಹಿರಂಗಗೊಂಡಿತು. ಡೀಸಲ್, ಪೆಟ್ರೋಲ್, ಎಲ್‌ ಪಿಜಿ ದರಗಳು ಬಡವರ ಬದುಕನ್ನು ಬರ್ಬರವಾಗಿಸಿದರೆ, ದೇಶದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ ಕುಸಿದು ನೆಲಕಚ್ಚಿರುವುದು ಎಲ್ಲವೂ ಮೋದಿ ವಿರೋಧಿ ಅಲೆ ಬೀಸುವ ಮುನ್ಸೂಚನೆಯಾಗಿ ಮೋದಿಯನ್ನು ಕೆಂಗೆಡಿಸಿದೆ. ಸದ್ಯದಲ್ಲೇ ನಡೆಯಲಿರುವ ಉತ್ತರಾಖಂಡ, ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಗಳಲ್ಲಿ ಬಿಜೆಪಿ ತನ್ನ ಧೋರಣೆಗೆ ಭಾರೀ ಬೆಲೆ ತೆರಬೇಕಾಗಿದೆ. ಅದರಲ್ಲೂ ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳು 2024ರ ಲೋಕಸಭಾ ಚುನಾವಣೆಯ ಮೇಲೂ ಗಂಭೀರ ಪರಿಣಾಮ ಬೀರುವುದನ್ನು ಮೋದಿಯ ಯಾವ ಷಡ್ಯಂತ್ರಗಳೂ ತಡೆಯಲಾರವು ಎಂಬುದರ ಸೂಚನೆಯೂ ಸಿಕ್ಕಿತ್ತು.


ಪಶ್ಚಿಮ ಬಂಗಾಳದಲ್ಲಿ ರಾಮ, ಹಿಂದುತ್ವದ ಹೆಸರಿನಲ್ಲಿ ನೆಲಯೂರಲು ನಡೆಸಿದ ಶತಗತಾಯ ಯತ್ನಗಳು ಮಣ್ಣುಮುಕ್ಕಿದ ಮೇಲೆ ಪಂಜಾಬ್‌ ನಲ್ಲಿ ಬಿಜೆಪಿಯನ್ನು ಪ್ರತಿಷ್ಠಾಪಿಸುವುದು, ಉತ್ತರ ಪ್ರದೇಶವನ್ನು ಬಿಜೆಪಿ ಕೈಯಿಂದ ಜಾರಿ ಹೋಗದಂತೆ ಕಾಯ್ದುಕೊಳ್ಳುವುದು ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿಗೆ ದೊಡ್ಡ ಸವಾಲು ಆಗಿತ್ತು. ರೈತರ ಚಳವಳಿಗೆ ಪರಿಹಾರ ಕಂಡುಕೊಳ್ಳದೆ ಬಹುತೇಕ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಚಳವಳಿ ಬಾಹುಳ್ಯ ಉತ್ತರ ಪ್ರದೇಶ ಮತ್ತು ಪಂಜಾಬ್‌ ನಲ್ಲಿ ಬಿಜೆಪಿಗೆ ಮತ ಕೇಳುವ ಮುಖವಿಲ್ಲದಂತಾಗಿತ್ತು. ಈ ಎಲ್ಲವನ್ನೂ ಮನಗಂಡ ನರೇಂದ್ರ ಮೋದಿಗೆ ರೈತರ ಮುಂದೆ ತಲೆಬಾಗಿಸದೆ ಬೇರೆ ದಾರಿಯೇ ಇರಲಿಲ್ಲ. 56 ಇಂಚಿನ ನರೇಂದ್ರ ಮೋದಿ ಕೇವಲ ಮೂರು 12 ಇಂಚಿನ ನೇಗಿಲ ಕುಳದ ಮುಂದೆ ಮಂಡಿಯೂರಲೇ ಬೇಕಾಯಿತು. ಆದರೆ ಪಾರ್ಲಿಮೆಂಟ್‌ ನಲ್ಲಿ ಕಾಯ್ದೆಗಳನ್ನು ಹಿಂಪಡೆಯುವ ಸಂಸದೀಯ ನಡವಳಿಕೆಗಳು ನಡೆಯದೆ ಚಳವಳಿಯಿಂದ ಹಿಂದೆ ಸರಿಯದಿರಲು ನಿರ್ಧರಿಸಿದ ರೈತರು ಪ್ರಧಾನಿ ಜನರ ಸೇವಕನೇ ಹೊರತು, ಸಾಮ್ರಾಟನಲ್ಲ. ಅಂತಿಮವಾಗಿ ಜನಶಕ್ತಿಯೇ ಸರ್ವೋಚ್ಚ ಎಂಬುದನ್ನು ತಿದಿಯೊತ್ತಿದ್ದಾರೆ.


ಕೇವಲ ಕಾಯ್ದೆಗಳನ್ನು ಹಿಂಪಡೆದ ಮಾತ್ರಕ್ಕೆ ಈ ಚಳವಳಿ ಮುಗಿಯುವುದಿಲ್ಲ ಎಂಬುದನ್ನು ರೈತರ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ. ಚಳವಳಿಯ ಕಾಲದಲ್ಲಿ ಸರ್ಕಾರ ನಡೆಸಿದ ಎಲ್ಲಾ ದೌರ್ಜನ್ಯಗಳಿಗೆ ಪರಿಹಾರ ಕೊಡಬೇಕು. 700 ರೈತರ ಸಾವಿಗೆ ಹೊಣೆ ಯಾರು ಎಂಬ ಪ್ರಶ್ನೆಯನ್ನು ಚಳವಳಿಗಾರರು ಎತ್ತಿದ್ದಾರೆ. ಇದು ಪ್ರಭುತ್ವವೇ ನಡೆಸಿದ ಮಾರಣಹೋಮ. ರೈತರು ಈ ದೇಶಕ್ಕಾಗಿ ದುಡಿಯತ್ತಲೇ, ಹೋರಾಡುತ್ತಲೇ ಹುತಾತ್ಮರಾಗಿದ್ದಾರೆ. ಈ ಮಾರಣ ಹೋಮದ ಕೊಲೆಗಡುಕರು ಕಟಕಟೆಗೆ ನಿಲ್ಲಬೇಕು. ಅದು ಪ್ರಧಾನಿಯೇ ಆಗಿರಲಿ, ಗೃಹ ಸಚಿವನೇ ಆಗಿರಲಿ ಹೊಣೆ ಹೊರಬೇಕು.
ಮತಧ್ರುವೀಕರಣಕ್ಕಾಗಿ ಬಿಜೆಪಿ ಈ ದೇಶದಲ್ಲಿ ಏನೆಲ್ಲಾ ಮಾಡಿದೆ, ದೇವರು, ಧರ್ಮ, ದನ, ಜಾತಿ, ಗಾಂಧಿ, ಅಂಬೇಡ್ಕರ್ ..ಯಾರನ್ನೂ ಬಿಟ್ಟಿಲ್ಲ. ಕೊರೋನಾದಂತಹ ರೋಗವನ್ನು ಧರ್ಮಾಧಾರಿತವಾಗಿ ಆರೋಪಿಸಿ ನಿರ್ಲಜ್ಜ ರಾಜಕಾರಣ ಮಾಡುತ್ತಲೇ ಬಂದಿದೆ. ಜನರ ಸಮಾಧಿಗಳ ಮೇಲೆ ಅಧಿಕಾರಸೌಧವನ್ನು ಕಟ್ಟಿ ನಿಲ್ಲಿಸಿದೆ. ಹುಸಿ ದೇಶಪ್ರೇಮ, ನೀತಿರಹಿತ, ಸತ್ವರಹಿತ ವಾಗಾಡಂಬರ ಮತ್ತು ಕ್ಷುದ್ರ ಸಿದ್ಧಾಂತಗಳಿಂದ ಜನರನ್ನು ಮೋಸಗೊಳಿಸುವ ಪ್ರಭುತ್ವ ಒಂದಲ್ಲ ಒಂದು ದಿನ ಪ್ರಪಾತಕ್ಕೆ ಜಾರಲೇಬೇಕು.


ಪ್ರಧಾನಮಂತ್ರಿ ನರೇಂದ್ರ ಮೋದಿಯ ಮನ್ ಕಿ ಬಾತ್‌ ನಲ್ಲಿ ಪ್ರಾಣತ್ಯಾಗ ಮಾಡಿದ ರೈತರಿಗೆ ಕನಿಷ್ಠ ಪದಗಳಿರಲಿಲ್ಲ. ಪಾರ್ಲಿಮೆಂಟ್‌ ನಲ್ಲಿ ಎದುರಾಳಿ ಪಕ್ಷದ ಗುಲಾಂ ನಬಿ ಆಝಾದ್ ಅವರ ಸ್ನೇಹ ಸಂಕೇತವಾಗಿ ಸುರಿಸಿದ ಕಣ್ಣೀರಲ್ಲಿ ಒಂದೆರೆಡು ಹನಿಗಳಾದರೂ ಗಡಿಗಳಲ್ಲಿ ಮಳೆ, ಚಳಿ, ಬಿರು ಬಿಸಿಲಿನಲ್ಲಿ ಬೆಂದು ಜೀವ ಬಿಟ್ಟ ರೈತರಿಗಾಗಿ ತೊಟ್ಟಿಕ್ಕಲಿಲ್ಲ. ಸತ್ತವರನ್ನು ಈ ದೇಶದ ಪ್ರಜೆಗಳು ಎನ್ನುವ ಕನಿಷ್ಠ ಹೊಣೆಗಾರಿಕೆಯನ್ನು ಸರ್ಕಾರ ತೋರಲಿಲ್ಲ. ಅಧಿಕಾರದ ತೇಜಸ್ಸಿನಿಂದ ಮಂಜಾದ ಮೋದಿ ಕಣ್ಣುಗಳಿಗೆ ಸಾಮ್ರಾಟರಂತೆ ಮೆರೆದವರು ಈ ಮಣ್ಣಲ್ಲಿ ಮಣ್ಣಾದ ಮತ್ತು ಜನಶಕ್ತಿಯ ಮುಂದೆ ಅಧಿಕಾರಶಕ್ತಿಗಳು ನಾಮಾವಶೇಷವಾದ ಚರಿತ್ರೆ ಕಾಣದಾಗಿದೆಯೇನೋ.


ತಲೆ ಮೇಲೆ ಬಿದ್ದ ನೀರು ಮೊಳಕಾಲಿನ ವರೆಗೂ ಹರಿಯಲೇಬೇಕೆಂಬ ಭೌತ ನಿಯಮದಂತೆ ಅಧಿಕಾರ ದುರಹಂಕಾರದ ಮತ್ತಿನಲ್ಲಿ ತಲೆ ಎತ್ತಿ ಮೆರೆದಾಡುತ್ತಿದ್ದವರ ತಲೆ ಅಂತಿಮವಾಗಿ ಜನಸಾಮಾನ್ಯರ ಮುಂದೆ ತಗ್ಗಿಸಿ ನಡೆಯಲೇ ಬೇಕಾದ್ದನ್ನು ಕಾಲವೇ ನಿರ್ಧರಿಸುತ್ತದೆ. ರೈತ ಚಳವಳಿಯ ಗೆಲುವು ಪ್ರಜಾಪ್ರಭುತ್ವದ ಗೆಲುವೇ ಆಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!