ಸ್ವಾತಂತ್ರ್ಯದ 75ನೇ‌ ವರ್ಷಾಚರಣೆಯನ್ನು ದೇಶಾದ್ಯಂತ ವೈವಿಧ್ಯಮಯವಾಗಿ ಆಚರಿಸಲು ಪಾಪ್ಯುಲರ್ ಫ್ರಂಟ್ ಯೋಜನೆ

Prasthutha|

ಕೇರಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕರ ಸಭೆ ಇತ್ತೀಚೆಗೆ ಕೇರಳದ ಪುತ್ತನಥಾನಿಯ ಮಲಬಾರ್ ಹೌಸ್ ನಲ್ಲಿ ನಡೆದಿದ್ದು, ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಯೋಜನೆ ರೂಪಿಸಿದೆ. ರಾಷ್ಟ್ರವ್ಯಾಪಿ ಪ್ರಚಾರ ಕಾರ್ಯಕ್ರಮಗಳು ಗಣರಾಜ್ಯೋತ್ಸವ ದಿನವಾದ 2022 ಜನವರಿ 26ರಂದು ಪ್ರಾರಂಭವಾಗಲಿದ್ದು, ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ದಿನವಾದ 2022ರ ಆಗಸ್ಟ್ 15ರಂದು ಸಮಾರೋಪಗೊಳ್ಳಲಿದೆ.

- Advertisement -

ಸಭೆಯಲ್ಲಿ ರಾಷ್ಟ್ರೀಯ ನಾಯಕರು, ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ವಿವಿಧ ರಾಜ್ಯಗಳ ನಾಯಕರು ಭಾಗವಹಿಸಿದ್ದರು. ನಮ್ಮ ಗಣರಾಜ್ಯದ ಮೂಲ ಮೌಲ್ಯಗಳು ಮತ್ತು ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ಮೂಲಭೂತ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈಗ ನಾಗರಿಕ ಜವಾಬ್ದಾರಿಯಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.

ನಮ್ಮ ಗಣರಾಜ್ಯದ ಮೂಲ ಮೌಲ್ಯಗಳಾದ ಸಾರ್ವಭೌಮತ್ವ, ಸಮಾಜವಾದ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವದಂತಹ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಜವಾಬ್ದಾರಿಯುತ ಸರ್ಕಾರದಿಂದಲೇ ಈ ಮೌಲ್ಯಗಳು ಬೆದರಿಕೆಗಳನ್ನು ಎದುರಿಸುತ್ತಿರುವ ಪರಿಸ್ಥಿತಿಯನ್ನು ನಮ್ಮ ದೇಶ ಹಿಂದೆಂದೂ ಕಂಡಿರಲಿಲ್ಲ. ಸಂವಿಧಾನ ಮತ್ತು ವ್ಯವಸ್ಥೆಯನ್ನು ಮೂಕ ಪ್ರೇಕ್ಷಕವಾಗಿ ಇಡುವ ಮೂಲಕ, ಆರೆಸ್ಸೆಸ್ ನಿಯಂತ್ರಿತ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಲು ಮತ್ತು ರಾಜಕೀಯ ಭಿನ್ನಾಭಿಪ್ರಾಯದ ಎಲ್ಲಾ ಧ್ವನಿಯನ್ನು ಹತ್ತಿಕ್ಕಲು ಅಧಿಕಾರವನ್ನು ಸಂಪೂರ್ಣ ದುರುಪಯೋಗಪಡಿಸುವಲ್ಲಿ ನಿರತವಾಗಿದೆ.

- Advertisement -

ಪ್ರಚಾರದ ವೇಳೆ, ದೇಶದ ವಿವಿಧ ಭಾಗಗಳಲ್ಲಿನ ಪಾಪ್ಯುಲರ್ ಫ್ರಂಟ್ ಯೂನಿಟ್ ಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ಥಳೀಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಳನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ನಡೆಸಲಿವೆ. ಬ್ರಿಟಿಷ್ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ವಿವಿಧ ಸ್ಥಳೀಯ ಸಮುದಾಯಗಳ ಪಾತ್ರವನ್ನು ಕೂಡ ಬೆಳಕಿಗೆ ತರಲಿವೆ. ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಯಲ್ಲಿ ದೇಶಭಕ್ತಿಯ ಪ್ರಜ್ಞೆಯನ್ನು ಉತ್ತೇಜಿಸುವುದಲ್ಲದೆ, ಸಮಾಜದ ವಿವಿಧ ವರ್ಗಗಳಲ್ಲಿ ಒಗ್ಗಟ್ಟಿನ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕೃಷಿ ವಲಯದಲ್ಲಿ ಬಂಡವಾಳಶಾಹಿಗಳು ಮತ್ತು ಕಾರ್ಪೊರೇಟ್ ಗಳ ಶೋಷಣೆಗೆ ಅವಕಾಶ ಕಲ್ಪಿಸಲು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಕಾನೂನುಗಳ ವಿರುದ್ಧ ಅನೇಕ ತಿಂಗಳುಗಳ ಕಾಲ ಬೀದಿಗಳಲ್ಲಿ ಸ್ಥಿರವಾಗಿ ನಿಂತು ಹೋರಾಟ ಮುಂದುವರಿಸಿದ ಭಾರತೀಯ ರೈತರಿಗೆ ಪಾಪ್ಯುಲರ್ ಫ್ರಂಟ್ ನಾಯಕರ ಸಭೆಯು ಅಭಿನಂದನೆ ಸಲ್ಲಿಸುತ್ತದೆ ಎಂದು ಮತ್ತೊಂದು ನಿರ್ಣಯದಲ್ಲಿ ತಿಳಿಸಲಾಗಿದೆ. ರೈತರ ಪ್ರತಿಭಟನೆಯ ವಿಜಯವು ದಮನಕಾರಿ ಕಾನೂನುಗಳಾದ ಯುಎಪಿಎ, ಎನ್.ಎಸ್.ಎ, ದೇಶದ್ರೋಹ ಮುಂತಾದ ಪ್ರಸ್ತುತ ಕೇಂದ್ರದ ಬಿಜೆಪಿ ಸರ್ಕಾರದ ಇತರ ಜನವಿರೋಧಿ ನಡೆಗಳ ವಿರುದ್ಧ ಮತ್ತು ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್.ನಂತಹ ಪೌರತ್ವದ ಮೇಲಿನ ದಾಳಿಯ ವಿರುದ್ಧ ಇದೇ ರೀತಿಯ ಪ್ರತಿಭಟನೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಸಭೆಯು ಅಭಿಪ್ರಾಯಿಸಿದೆ.

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಕೈಗೊಂಡ ಸೇವೆಗಳನ್ನು ಸಭೆಯು ಶ್ಲಾಘಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಮಾರಣಾಂತಿಕ ಸೋಂಕಿನ ಪರಿಸ್ಥಿತಿಯ ವೇಳೆ ಸರ್ಕಾರಗಳು ನಿರ್ಲಕ್ಷ್ಯ ತೋರಿದಾಗ ನಮ್ಮ ಕಾರ್ಯಕರ್ತರು ತಮ್ಮ ನಾಗರಿಕ ಜವಾಬ್ದಾರಿಯನ್ನು ಎತ್ತಿ ಹಿಡಿದಿದ್ದರು. ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ 7,146 ಮೃತದೇಹಗಳ ಅಂತ್ಯಸಂಸ್ಕಾರಗಳನ್ನು ಗೌರವಯುತವಾಗಿ ನೆರವೇರಿಸಿದ್ದಾರೆ. 2,897 ಆಮ್ಲಜನಕ ಸಿಲಿಂಡರ್ ಗಳ ಪೂರೈಕೆ, 2,173 ಆಸ್ಪತ್ರೆ ಹಾಸಿಗೆಗಳು ಮತ್ತು 2,635 ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸಿದ್ದಾರೆ. 1,22,175 ಆಹಾರ ಪೊಟ್ಟಣಗಳು ಮತ್ತು ಪಡಿತರ ಕಿಟ್ ಗಳನ್ನು ವಿತರಿಸಲಾಗಿದೆ. ಇತ್ತೀಚೆಗೆ ಅಸ್ಸಾಂ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ, ಕರ್ನಾಟಕ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಿಗೆ ಅಪ್ಪಳಿಸಿದ ಪ್ರವಾಹದ ಸಮಯದಲ್ಲಿಯೂ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕಾರ್ಯದರ್ಶಿ
ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ

Join Whatsapp