ಕೋಮುಗಲಭೆ ಸೃಷ್ಟಿಸಲು ಗೃಹ ಸಚಿವರ ಕುತಂತ್ರ: ಕಿಮ್ಮನೆ ರತ್ನಾಕರ್

Prasthutha|

ತೀರ್ಥಹಳ್ಳಿ: ಗೃಹಸಚಿವ ಆರಗ ಜ್ಞಾನೇಂದ್ರ ಜನರನ್ನು ದಿಕ್ಕು ತಪ್ಪಿಸಿ ತಾಲ್ಲೂಕಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರ ಆರೋಪ ಮಾಡಿದ್ದಾರೆ.

- Advertisement -


ಅಕ್ರಮ ಜಾನುವಾರು ಸಾಗಣೆ ಘಟನೆ ಖಂಡಿಸಿ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಈ ಹಿಂದೆ ಆರಗ ಜ್ಞಾನೇಂದ್ರ ಅವರು ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣ ತಿರುಚಿ 2018ರ ಚುನಾವಣೆ ಗೆದ್ದರು. 2023ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಇರುವುದರಿಂದ ಮತ್ತೆ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಜಾನುವಾರು ಅಕ್ರಮ ಸಾಗಣೆ ದಂಧೆಯಲ್ಲಿ ಬಿಜೆಪಿಗರು ಶಾಮೀಲಾಗಿದ್ದಾರೆ. ಅನೇಕ ಪ್ರಕರಣಗಳಲ್ಲಿ ಅವರ ಇಬ್ಬಗೆಯ ನೀತಿ ಸಾಬೀತಾಗಿದೆ. ಬಿಜೆಪಿ, ಆರ್‌ ಎಸ್‌ ಎಸ್‌ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಜಾನುವಾರು ಸಾಗಣೆ ತಡೆಯಲು ಮುಂದಾದ ಬಜರಂಗದಳದ ಮುಖಂಡ ಪ್ರವೀಣ್ ಪೂಜಾರಿ ಅವರನ್ನು ಬಿಜೆಪಿಗರೇ ಕೊಲೆ ಮಾಡಿಸಿದರು. ಕೇಂದ್ರ, ರಾಜ್ಯ ಸರ್ಕಾರ ಯಾರ ನೇತೃತ್ವದಲ್ಲಿ ಇದೆ ಎಂದು ಆರ್‌ ಎಸ್‌ ಎಸ್‌ ಜನರಿಗೆ ಉತ್ತರಿಸಬೇಕು’ ಎಂದು ಅವರು ಆಗ್ರಹಿಸಿದರು.
‘ಜಾನುವಾರು ಅಕ್ರಮ ಸಾಗಣೆ, ಹಲ್ಲೆ ಪ್ರಕರಣ, ಬಿಜೆಪಿ ಪಿತೂರಿ ಖಂಡಿಸಿ ಡಿ. 20ರಂದು ತೀರ್ಥಹಳ್ಳಿ ತಾಲ್ಲೂಕು ಕಚೇರಿಯ ಎದುರು ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಜನರಿಗೆ ನಿಜ ವಿಷಯ ತಿಳಿಸುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇನೆ. ಅಧಿಕಾರಕ್ಕಾಗಿ ಬಿಜೆಪಿಗರು ನಡೆಸುತ್ತಿರುವ ಕುತಂತ್ರಗಳು ಜನರಿಗೆ ತಿಳಿಯಬೇಕು’ ಎಂದು ಕಿಮ್ಮನೆ ಹೇಳಿದರು.

- Advertisement -

ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರಾದ ರಹಮತುಲ್ಲಾ ಅಸಾದಿ, ಗೀತಾ, ಸುಶೀಲ ಶೆಟ್ಟಿ, ಮಂಜುಳಾ, ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್, ಕೆಳಕೆರೆ ಪೂರ್ಣೇಶ್ ಇದ್ದರು.

Join Whatsapp