ದೆಹಲಿಯಲ್ಲಿ ಚರ್ಚ್ ಧ್ವಂಸಗೊಳಿಸಿರುವುದು ಕಾನೂನುಬಾಹಿರ, ಜನಾಂಗೀಯ ತಾರತಮ್ಯದ ಕೃತ್ಯ: ಎಸ್ ಡಿಪಿಐ

Prasthutha|

ನವದೆಹಲಿ: ದೆಹಲಿಯ ಚತ್ತರ್ಪುರದ ಚರ್ಚ್ ಅನ್ನು ಧ್ವಂಸಗೊಳಿಸಿರುವುದು ಕಾನೂನುಬಾಹಿರ ಕೃತ್ಯವಾಗಿದ್ದು, ಇದು ಕ್ರಿಶ್ಚಿಯನ್ ಸಮುದಾಯದ ಮೇಲೆ ನಡೆಸುತ್ತಿರುವ ತಾರತಮ್ಯ ನೀತಿಯಾಗಿದೆ, ದೆಹಲಿ ಅಭಿವೃದ್ಧಿ ಪ್ರಾಧಿಕಾರ –ಡಿಡಿಎದ ತಾರತಮ್ಯ ಮತ್ತು ಅನ್ಯಾಯದ ಈ ಕ್ರಮವನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ತಿಳಿಸಿದ್ದಾರೆ.

- Advertisement -


ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕಳೆದ 14 ವರ್ಷಗಳಿಂದ ಈ ಸ್ಥಳದಲ್ಲಿ ಚರ್ಚ್ ಅಸ್ತಿತ್ವದಲ್ಲಿತ್ತು. ಈ ಧ್ವಂಸದ ಘೋರ ಕೃತ್ಯಕ್ಕೆ ಮುಂಚಿತವಾಗಿ ಚರ್ಚ್ ಸಮಿತಿಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಂದ ಯಾವುದೇ ಸೂಚನೆ ಬಂದಿಲ್ಲ ಅಥವಾ ಜಾಗ ತೆರವುಗೊಳಿಸಲು ಯಾವುದೇ ಸಮಯಾವಕಾಶವನ್ನೂ ನೀಡಿರಲಿಲ್ಲ. ಈಗಾಗಲೇ ನೋಟಿಸ್ ನೀಡಲಾಗಿದೆ ಎಂಬ ಡಿಡಿಎ ಅಧಿಕಾರಿಗಳ ಹೇಳಿಕೆ ಅನುಮಾನಾಸ್ಪದವಾಗಿದೆ ಎಂದು ಎಂದು ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.


ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ- ಎನ್ ಎಚ್ ಆರ್ ಸಿ ವ್ಯಾಪ್ತಿಯ ಧಾರ್ಮಿಕ ಸಮಿತಿಯ ಬಳಿ ಈ ಭೂಮಿಯ ವಿವಾದ ಇದ್ದಾಗ್ಯೂ ಡಿಡಿಎ ಅಧಿಕಾರಿಗಳ ಈ ಧ್ವಂಸ ಕೃತ್ಯವು ಹೆಚ್ಚು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಚರ್ಚ್ ನೊಳಗೆ ಇದ್ದ ತಮ್ಮ ಪವಿತ್ರ ಗ್ರಂಥ ಮತ್ತು ವಸ್ತುಗಳನ್ನು ಕೂಡ ತೆಗೆದುಕೊಳ್ಳಲು ಡಿಡಿಎ ಅಧಿಕಾರಿಗಳು ಚರ್ಚ್ ಕೌನ್ಸಿಲ್ ಸದಸ್ಯರಿಗೆ ಅವಕಾಶ ನೀಡದಿರುವುದು ಸಹ ನೋವಿನ ಸಂಗತಿಯಾಗಿದೆ. ಅಧಿಕಾರಿಗಳ ಕಡೆಯಿಂದ ಈ ಘೋರ ಕೃತ್ಯವು ಅವರ ಅಸಹಿಷ್ಣುತೆ ಮತ್ತು ಸಮುದಾಯದ ಬಗ್ಗೆ ಅವರಿಗಿರುವ ಅಗೌರವನ್ನು ತೋರಿಸುತ್ತದೆ ಎಂದು ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ.

- Advertisement -


ಭಾರತವು ವೈವಿಧ್ಯತೆಯಲ್ಲಿ ಏಕತೆಯ ದೇಶವಾಗಿದ್ದು, ಸಾಮಾಜಿಕ ಬಂಧವೇ ಅದರ ಶಕ್ತಿಯಾಗಿದೆ. ನೆಲದ ಕಾನೂನು, ನಿಯಮಗಳು, ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳು ಇತ್ಯಾದಿಗಳು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ದೊರೆಯಬೇಕು ಮತ್ತು ಅವರು ಅದನ್ನು ಅನುಭವಿಸಬೇಕು. ಆಡಳಿತದ ಕಡೆಯಿಂದ ಉಂಟಾಗುವ ಯಾವುದೇ ತಾರತಮ್ಯವು ಸಮಾಜದಲ್ಲಿ ಅಪನಂಬಿಕೆ, ಹತಾಶೆ ಮತ್ತು ಅಭದ್ರತೆಗೆ ಕಾರಣವಾಗುತ್ತದೆ. ಸಮಾಜದಲ್ಲಿ ಇಂತಹ ಅಸಮಾಧಾನ ಮತ್ತು ಪ್ರಕ್ಷುಬ್ಧತೆಗೆ ಕಾರಣವಾಗಿರುವ ಅಧಿಕಾರಿಗಳ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಬ್ದುಲ್ ಮಜೀದ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Join Whatsapp