ಮಂಗಳೂರು | ಕಾರ್ಯಾಂಗದ ದಕ್ಷತೆಗೆ ಮಾಧ್ಯಮ ರಂಗದ ಸಹಕಾರ ಅವಶ್ಯಕ: ಜಿ.ಪಂ ಸಿಇಒ ಕುಮಾರ್

Prasthutha|

ಮಂಗಳೂರು: ಪತ್ರಿಕಾರಂಗವು ಸಾಮಾಜಿಕ ಪರಿವರ್ತನೆಯ ಅಸ್ತ್ರವಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಜವಾಬ್ದಾರಿ ಮಹತ್ತರವಾದುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

- Advertisement -

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಪ್ರಶಸ್ತಿ ಪಡೆದ, ಡಾಕ್ಟರೇಟ್ ಪದವಿ ಗಳಿಸಿದ, ವರ್ಗಾವಣೆಗೊಂಡ, ನಿವೃತ್ತಿ ಹೊಂದಿದ ಪತ್ರಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು.

“ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳ ಬಗ್ಗೆ ನನಗೆ ಪ್ರೀತಿ, ಗೌರವ ಇದೆ. ಏಕೆಂದರೆ, ಪತ್ರಿಕಾ ಪ್ರತಿನಿಧಿಗಳು ಸಾಮಾಜಿಕ ಕಳಕಳಿಯಿಂದ ಪ್ರತಿ ಬಾರಿ ನಮ್ಮಿಂದ ಮಾಹಿತಿ ಪಡೆದು ಸುದ್ದಿ ಪ್ರಕಟಿಸುತ್ತಾರೆ. ವಿಚಾರ ಮಂಥನ, ಕಾರ್ಯಾಂಗ ಸರಿದಾರಿಯಲ್ಲಿ ನಡೆಯಲು ಮಾಧ್ಯಮ ರಂಗ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಮೌಲ್ಯ ಇರುವ ಪತ್ರಕರ್ತರಿದ್ದಾರೆ. ಪತ್ರಕರ್ತರ ಸಂಘದಿಂದ ಸಾಧಕ ಪತ್ರಕರ್ತರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

ರಾಜ್ಯ ಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿ, ಕಾಸರಗೋಡು ಪತ್ರಕರ್ತರ ಸಂಘದಿಂದ ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ದತ್ತಿ ಪ್ರಶಸ್ತಿ ಪಡೆದ ಮುಹಮ್ಮದ್ ಆರೀಫ್ ಪಡುಬಿದ್ರಿ, ಡಾಕ್ಟರೇಟ್ ಪದವಿ ಗಳಿಸಿದ ಸತೀಶ್ ಕೊಣಾಜೆ, ಚಂದ್ರಹಾಸ ಚಾರ್ಮಾಡಿ, ನಿವೃತ್ತಿ ಹೊಂದಿದ ಹಿಲರಿ ಕ್ರಾಸ್ತಾ, ಸುಭಾಶ್ ಸಿದ್ದಮೂಲೆ, ಸುಷ್ಮಿತಾ ಕೋಟ್ಯಾನ್, ವರ್ಗಾವಣೆಗೊಂಡ ಮಹೇಶ್ ಕನ್ನೇಶ್ವರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಅತಿಥಿಯಾಗಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಸನ್ಮಾನಿತರ ವಿವರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Join Whatsapp