ಮಂಗಳೂರು | ಪಠ್ಯಪುಸ್ತಕ ಬದಲಾವಣೆಗೆ ಸಿಎಫ್ಐ ವಿರೋಧ; ಹೆಡ್ಗೇವಾರ್ ಫೋಟೋಗೆ ಬೆಂಕಿ ಹಚ್ಚಿ ಪ್ರತಿಭಟನೆ!

Prasthutha|

ಮಂಗಳೂರು: ಎಸ್ಎಸ್ಎಲ್ಸಿ ಪಠ್ಯಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕ ಹೆಡ್ಗೇವಾರ್ ಪಠ್ಯ ಅಳವಡಿಸಿದ್ದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.

- Advertisement -

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಫ್ಐ ಮಂಗಳೂರು ನಗರ ಅಧ್ಯಕ್ಷ ಶರ್ಫುದ್ದೀನ್, “ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ, ನಾರಾಯಣ ಗುರು, ಭಗತ್ ಸಿಂಗ್ ರಂತಹ ಮಹನೀಯರ ಪಾಠವನ್ನು ಕೈಬಿಡಲಾಗಿದೆ. ಅದರ ಬದಲಿಗೆ, ದೇಶದ್ರೋಹಿಗಳ ಪಠ್ಯವನ್ನು ಅಳವಡಿಸಲಾಗಿದೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರಿಗೆ ಮಕ್ಕಳಿಗೆ ಮೌಲ್ಯಯುತ ಪಾಠವನ್ನು ಕಲಿಸುವ ಆಸಕ್ತಿಯಿಲ್ಲ. ಆದ್ದರಿಂದ ದೇಶದಲ್ಲಿ ಕೋಮು ಸಂಘರ್ಷ ಹುಟ್ಟು ಹಾಕಿದ ಸಂಘಟನೆಗಳ ಸ್ಥಾಪಕರ ಬಗ್ಗೆ ಪಾಠವನ್ನು ಹೇಳಿಕೊಡಲು ಮುಂದಾಗಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಶೀಘ್ರವೇ ಹೆಡ್ಗೇವಾರ್ ಪಠ್ಯವನ್ನು ಕೈ ಬಿಡುವಂತೆ ಹಾಗೂ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪರಿಷ್ಕರಣಾ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

- Advertisement -

ಇದೇ ಸಂದರ್ಭ ಪ್ರತಿಭಟನಾಕಾರರು ಹೆಡ್ಗೇವಾರ್ ಭಾವಚಿತ್ರಕ್ಕೆ ಹಾಗೂ ಪಠ್ಯ ಭಾಗದ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಿಎಫ್ಐ ದ.ಕ. ಜಿಲ್ಲಾಧ್ಯಕ್ಷ ತಾಜುದ್ದೀನ್, ಕಾರ್ಯದರ್ಶಿ ಶಂಸುದ್ದೀನ್, ಜಿಲ್ಲಾ ನಾಯಕಿಯರಾದ ಇಫ್ರತ್, ಅಝ್ಮಿಯಾ, ಸಿಎಫ್ಐ ಮಂಗಳೂರು ಗ್ರಾಮಾಂತರ ಅಧ್ಯಕ್ಷ ಅಶ್ರಫ್, ಕಾರ್ಯದರ್ಶಿ ಸರ್ಫರಾಝ್, ನಗರ ಕಾರ್ಯದರ್ಶಿ ಹಫೀಜ್ ಉಪಸ್ಥಿತರಿದ್ದರು.

Join Whatsapp