ಯಾದಗಿರಿ: ಹಣ ನೀಡಲಿಲ್ಲವೆಂದು ಹೆರಿಗೆ ಮಾಡಿಸಲು ತಡಮಾಡಿದ ಹಿನ್ನೆಲೆಯಲ್ಲಿ ಮಗು ಗರ್ಭದಲ್ಲೇ ಸಾವನ್ನಪ್ಪಿದ್ದು, ಜಿಲ್ಲಾಸ್ಪತ್ರೆಯ ವೈದ್ಯೆಯೊಬ್ಬರನ್ನು ಅಮಾನತು ಮಾಡಲಾಗಿದೆ.
ಹೆರಿಗೆ ಮಾಡಿಸಲು ಹಣ ಕೇಳಿರುವ ಯಾದಗಿರಿ ಜಿಲ್ಲಾಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಪಲ್ಲವಿ ಪೂಜಾರಿಯವರನ್ನ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರು ಅಮಾನತುಗೊಳಿಸಿದ್ದಾರೆ.
ಗುರುವಾರ(ಮಾ.16) ಹೆರಿಗೆಗಾಗಿ ಸಂಗೀತ ಎಂಬ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಆಗಮಿಸಿದ್ದು, ಈ ವೇಳೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲು 10 ಸಾವಿರ ಹಣವನ್ನ ವೈದ್ಯೆ ಡಾ.ಪಲ್ಲವಿ ಪೂಜಾರಿ ಕೇಳಿದ್ದಾರೆ. ಅಷ್ಟೊಂದು ಹಣ ಸಂಗೀತಾ ಬಳಿ ಇರದ ಕಾರಣ, ಬೇರೆ ಕಡೆಯಿಂದ ವಹಿವಾಟು ಮಾಡಿ ಹಣವನ್ನು ತರುವಾಗ ತಡವಾಗಿದೆ. ಅಲ್ಲಿಯವರೆಗೆ ಈ ವೈದ್ಯೆ ಹೆರಿಗೆ ಮಾಡಿಲ್ಲ. ಬಳಿಕ ಹಣ ಕೊಟ್ಟ ಮೇಲೆ ಹೆರಿಗೆ ಮಾಡಿದ್ದಾರೆ. ಆದರೆ ಹೆರಿಗೆಗೆ ತಡವಾಗಿದ ಕಾರಣ ಮಗು ಗರ್ಭದಲ್ಲೇ ಸಾವನ್ನಪ್ಪಿತ್ತು.
ಬಳಿಕ ಮಗುವಿನ ಸಾವಿಗೆ ವೈದ್ಯೆಯ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಜಿಲ್ಲಾಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿ ಅಮಾನತಿಗೆ ಆಗ್ರಹಿಸಿದ್ದರು. ಇದೀಗ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ತೋರಿದ್ದಕ್ಕೆ ಜಿಲ್ಲಾಧಿಕಾರಿಯವರು ವೈದ್ಯೆಯನ್ನು ಸಸ್ಪೆಂಡ್ ಮಾಡಿದ್ದಾರೆ.