ಪಠ್ಯ ಪರಿಷ್ಕರಣೆ ವಿವಾದ: ಹೊಸ ಪಠ್ಯವನ್ನು ಕೈಬಿಡುವಂತೆ ಕಾರಣ ಉಲ್ಲೇಖಿಸಿ ಸಿಎಂಗೆ ಪತ್ರ ಬರೆದ ನಿರಂಜನಾರಾಧ್ಯ

Prasthutha|

ಬೆಂಗಳೂರು: ಪರಿಷ್ಕೃತ ಪುಸ್ತಕಗಳಲ್ಲಿನ ವಿಷಯಗಳನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕ ನಿರಂಜನಾರಾಧ್ಯ ವಿ.ಪಿ. ಅವರು ಕಾರಣ ಉಲ್ಲೇಖಿಸಿ ಪತ್ರ ಬರೆದಿದ್ದಾರೆ.

- Advertisement -

ಪತ್ರದ ಪೂರ್ಣರೂಪ ಇಲ್ಲಿದೆ….

ಶ್ರೀಯುತ ಬಸವರಾಜ ಬೊಮ್ಮಾಯಿಯವರು

- Advertisement -

ಸನ್ಮಾನ್ಯ ಮುಖ್ಯ ಮಂತ್ರಿಗಳು,

ಕರ್ನಾಟಕ ಸರ್ಕಾರ,ವಿಧಾನ ಸೌಧ

ಬೆಂಗಳೂರು.

ಗೌರವಾನ್ವಿತ ಸನ್ಮಾನ್ಯರೇ,

ವಿಷಯ: ಪ್ರಸ್ತುತ ಚರ್ಚೆಯಲ್ಲಿರುವ ಪಠ್ಯ ಪರಿಷ್ಕರಣಗೆ ಸಂಬಂಧಿಸಿದ ಎಲ್ಲಾ ತೀರ್ಮಾನಗಳು ಅಪ್ರಬುದ್ಧ-ಅಸಂವಿಧಾನಿಕ-ಅಪ್ರಜಾಸತ್ತಾತ್ಮಕ –ಅಪಾರ ದರ್ಶಕ- ಅಸಿಂಧು –ಅಪಮೌಲ್ಯ ದ ತೀರ್ಮಾನಗಳಾಗಿದ್ದು, ಈ ಪ್ರಕ್ರಿಯೆಯ ಉತ್ಪನ್ನಗಳಾದ ಪರಿಷ್ಕೃತ  ಪುಸ್ತಕಗಳಲ್ಲಿನ ವಿಷಯಗಳನ್ನು ಮಕ್ಕಳು ಕಲಿಯುವುದು ಬೇಡ ಎಂಬ ಬಗ್ಗೆ ತೀರ್ಮಾನಿಸಲು ಸಕಾರಣಗಳನ್ನು ಒದಗಿಸುವ ಬಗ್ಗೆ.

ತಮಗೆ ತಿಳಿದಿರುವಂತೆ, ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲದ ಗೂಡಾಗಿ ಲಕ್ಷಾಂತರ ಮಕ್ಕಳ ಕಲಿಕೆ ನನೆಗುದಿಗೆ ಬಿದ್ದಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ, ಮಕ್ಕಳ ಕಲಿಕೆ ಹಾಗು ಶಿಕ್ಷಣದ ಹಕ್ಕನ್ನು ಗೌರವಿಸಿ ಎತ್ತಿ ಹಿಡಿಯಬೇಕಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ: 24-05-2022ರಂದು ತಮಗೆ ಪತ್ರವೊಂದನ್ನು ಬರೆದಿದ್ದೆ. ತಮ್ಮ ಕಾರ್ಯಾಲಯವು ಆ ಪತ್ರವನ್ನು ಅಂದೇ ಮಾನ್ಯ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಕಾರ್ಯದರ್ಶಿಯವರಿಗೆ ರವಾನಿಸಿ ನಿಯಮಾನುಸಾರ ಅಗತ್ಯಕ್ರಮ ವಹಿಸಲು ಸೂಚಿಸಿತ್ತು.

ಈ ವಿಷಯದಲ್ಲಿ ಅನಗತ್ಯ ವಿಳಂಬ ಮತ್ತು ಗೊಂದಲ ಮುಂದುವರಿದಿದ್ದು, ದಿನಾಂಕ: 22-06-2022ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಪರಿಷ್ಕೃತ ಪುಸ್ತಕಗಳನ್ನು ಕೈಬಿಡುವ ಬಗ್ಗೆ ತೀರ್ಮಾನಕ್ಕೆ ಬರಲಾಗಲಿಲ್ಲವೆಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಈ ಹಿನ್ನೆಲೆಯಲ್ಲಿ,  ಅಪ್ರಬುದ್ಧ -ಅಸಂವಿಧಾನಿಕ-ಅಪ್ರಜಾಸತ್ತಾತ್ಮಕ –ಅಪಾರದರ್ಶಕ- ಅಸಿಂಧು –ಅಪಮೌಲ್ಯದ ಪ್ರಕ್ರಿಯೆಯ ಮೂಲಕ ನಡೆದ ಪಠ್ಯ ಪರಿಷ್ಕರಣಾ ವಿಷಯದಲ್ಲಿ ತಾವು ಒಂದು ವಸ್ತುನಿಷ್ಟ ತೀರ್ಮಾನ ತೆಗೆದುಕೊಳ್ಳಲು, ಕಳೆದ 35 ವರ್ಷಗಳಿಂದ ಶಾಲಾ ಶಿಕ್ಷಣದಲ್ಲಿ ಕೆಲಸ ನಿರ್ವಹಿಸುತ್ತಿರುವ ನಾನು, ನನ್ನ ಅನುಭವದಲ್ಲಿ ಕೆಲವೊಂದು  ಸತ್ಯ ಆಧಾರಿತ ವಸ್ತುನಿಷ್ಠ ಮುಖ್ಯಾಂಶಗಳನ್ನು ಸಕಾರಣಗಳೊಂದಿಗೆ ತಮ್ಮ ಗಮನಕ್ಕೆ ತರಬಯಸುತ್ತೇನೆ.

ಮೇಲಿನ  ವಿಷಯದಲ್ಲಿ ಪ್ರಸ್ತಾಪಿಸಿದ 6 ಪ್ರಮುಖ ಅಂಶಗಳಿಗೆ ಸಂಕ್ಷಿಪ್ತ ವಿವರಣೆ ಈ ಕೆಳಕಂಡಂತಿದೆ .

ಅಪ್ರಬುದ್ಧ-ಪರಿಶೀಲನೆಗೆ ಸಮಿತಿ ರಚಿಸುವ ಮುನ್ನವೇ ಇಲಾಖೆಯು ವಿವಾದಿತ ವಿಷಯಾಂಶಗಳನ್ನು ಬೋಧನೆ-ಕಲಿಕೆಗೆ/ಮೌಲ್ಯ ಮಾಪನಕ್ಕೆ ಪರಿಗಣಿಸದಿರಲು ಇಲಾಖೆಯು ಸುತ್ತೋಲೆ ಹೊರಡಿಸಿದ ಕ್ರಮ. (ದಿನಾಂಕ: 17-02-2021). ಸಮಾಲೋಚನೆ-ಪರಿಶೀಲನೆಯೇ ಇಲ್ಲದೆ ಏಕಾಏಕಿ ಸುತ್ತೋಲೆ ಹೊರಡಿಸಿದ್ದು ಆತುರದ ಸರ್ವಾಧಿಕಾರದ ಅಪ್ರಬುದ್ಧ ತೀರ್ಮಾನವಾಗಿದೆ .

ಅಸಂವಿಧಾನಿಕ-  ದಿನಾಂಕ: 18-19-2021ರಂದು  ಸರ್ಕಾರ ಸಮಿತಿ ರಚಿಸಲು ಹೊರಡಿಸಿದ  ಆದೇಶವು,  ಸಮಿತಿಗೆ ಕೇವಲ ಪರಿಶೀಲಿಸಿ ಒಂದು ತಿಂಗಳ ಒಳಗಾಗಿ ವರದಿ ನೀಡುವ ಅಧಿಕಾರವನ್ನು ಮಾತ್ರ ನೀಡಿತ್ತು. ಹೀಗಾಗಿ, ಪರಿಷ್ಕರಣೆಗೆ ಸರ್ಕಾರದ ಅನುಮತಿ ಇಲ್ಲವಾದ್ದರಿಂದ , ಪರಿಷ್ಕರಣಾ ಪ್ರಕ್ರಿಯೆ ಅಸಂವಿಧಾನಿಕ-ಆದೇಶರಹಿತ  .

ಅಪ್ರಜಾಸತ್ತಾತ್ಮಕ- ಆದೇಶವೇ ಇರಲಿಲ್ಲ. ಜೊತೆಗೆ, ಯಾವುದೇ ಒಪ್ಪಿತ  ಪಠ್ಯಕ್ರಮ ಚೌಕಟ್ಟು, ಪಠ್ಯವಸ್ತು  ಮತ್ತು ನಿರ್ಧಿಷ್ಟ ಮಾರ್ಗ ಸೂಚಿಯಿಲ್ಲದೆ ಹಾಗು ನೀತಿ-ನಿಯಮಗಳಿಲ್ಲದೆ  ಪರಿಷ್ಕರಣೆಯನ್ನು ಮಾಡಿದ್ದು ಒಪ್ಪಿತ ವಿಧಾನವಲ್ಲ. ಈ ಹಿಂದೆ ರೂಪಿಸಿದ ಭಾಷಾ ಹಾಗು ಸಮಾಜ ವಿಜ್ಞಾನ ಪುಸ್ತಕಗಳಲ್ಲಿ ದೋಷಗಳಿದ್ದರೆ , ಅಯಾ ಲೇಖಕರು ಮತ್ತು ಇತಿಹಾಸಕಾರರರ ಜೊತೆ ಮುಖಾಮುಖಿಯಾಗಿ ಚರ್ಚಿಸಿ, ಸರಿ-ತಪ್ಪುಗಳನ್ನು ಪ್ರಜಾಸತ್ತಾತ್ಮಕವಾಗಿ ಸಮಾಲೋಚಿಸಿ ಪರಿಷ್ಕರಣೆ ನಡೆಯಬೇಕಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ಹಿಂದಿನ ಪರಿಷ್ಕರಣೆಯಲ್ಲಿ ದೋಷಗಳಿದ್ದರೆ ಅದು ಸಹಜ ನ್ಯಾಯ ತತ್ವಗಳನ್ನು ಅನುಸರಿಸಿ ತೀರ್ಮಾನಿಸಬೇಕಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ಸಮಿತಿ ಸದಸ್ಯರ ಅಭಿಪ್ರಾಯಗಳನ್ನು ಗೌರವಿಸಿ ಅದರಂತೆ ಪ್ರಜಾಸತ್ತಾತ್ಮಕವಾಗಿ ನಡೆಯಬೇಕಿತ್ತು. ಇದಾವ ಪ್ರಕ್ರಿಯೆ  ನಡೆದಿಲ್ಲದ ಕಾರಣ, ಇದು ಅಪ್ರಜಾಸತ್ತಾತ್ಮಕ.

ಅಪಾರದರ್ಶಕ-  ಪರಿಶೀಲನೆ/ಪರಿಷ್ಕರಣೆ ಪ್ರಾರಂಭವಾದಾಗಿನಿಂದಲೂ, ಪರಿಶೀಲನೆ/ಪರಿಷ್ಕರಣೆಗೆ ಸಕಾರಣಗಳಾಗಲಿ, ಪ್ರಕ್ರಿಯೆ ನಡೆದ ನಡಾವಳಿಗಳಾಗಳಿ, ಪರೀಶೀಲಿಸಿದ ನಂತರ ಪರಿಶೀಲನೆಯ ವರದಿಯಾಗಲಿ, ಎಲ್ಲಾ ಆದೇಶ-ವರದಿಗಳನ್ನು ಸಾರ್ವಜನಿಕ ಚರ್ಚೆಗಾಗಲಿ ದೊರಕದಂತೆ ಮಾಡುವ ಮೂಲಕ ಇಡೀ ಪ್ರಕ್ರಿಯೆಯನ್ನು ಗೌಪ್ಯವಾಗಿ ಮಾಡಲಾಗಿದೆ. ಆದ್ದರಿಂದ ಇದು ಅಪಾರದರ್ಶಕ.

ಅಸಿಂಧು-ಅಮಾನ್ಯ-       2 ಮತ್ತು 4ನೇ ತರಗತಿಯ ಪರಿಸರ ಅಧ್ಯಯನ, 1ರಿಂದ 10ನೇ ತರಗತಿಯ ಕನ್ನಡ  ಭಾಷಾ  ವಿಷಯಗಳು ಮತ್ತು  6ರಿಂದ 10ನೇ ತರಗತಿಯ  ಸಮಾಜ ವಿಜ್ಞಾನ  ಪುಸ್ತಕಗಳನ್ನು ಆದೇಶವಿಲ್ಲದೆ ಪರಿಷ್ಕರಿಸಿ, ನಂತರ ದಿನಾಂಕ 27-01-2022ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ , ಆದೇಶರಹಿತ ಪರಿಷ್ಕರಣೆಯನ್ನು ತಮ್ಮ ಗಮನಕ್ಕಾಗಲಿ ಅಥವಾ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯ ಮುಂದೆ ಮಂಡಿಸಿ ಅನುಮೋದನೆ ಪಡೆಯದೆ ಸಚಿವರೇ ಅನುಮೋದಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಎಲ್ಲಕ್ಕಿಂತ  ಮಿಗಿಲಾಗಿ, ಈ ತೀರ್ಮಾನದಂತೆ, ದಿನಾಂಕ 19-03-2022ರಂದು ಪಠ್ಯ ಪುಸ್ತಕಗಳನ್ನು ಪರಿಷ್ಕೃತಗೊಳಿಸಿರುವುದಕ್ಕೆ ಘಟನೋತ್ತರ ಅನುಮತಿ ನೀಡಿದ ಸರ್ಕಾರಿ ಆದೇಶವು, ಈ ರೀತಿ ಹೇಳುತ್ತದೆ:

* ಕನ್ನಡ ಭಾಷೆ, ಪರಿಸರ ಅಧ್ಯಯನ ಮತ್ತು ಸಮಾಜ ವಿಜ್ಞಾನ ವಿಷಯದ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿರುವ ಎಲ್ಲ ವಿಷಯಾಂಶಗಳು, ಲೇಖಕರು/ಕವಿಗಳು, ಚಿತ್ರಗಳು, ಭೂಪಟಗಳು, ನಕ್ಷೆಗಳು ಹಾಗು ಆಧಾರಗಳಿಗೆ ಸಮಿತಿ ಅಧ್ಯಕ್ಷರು ಹಾಗು ಸದಸ್ಯರು ಜವಾಬ್ದಾರರಾಗಿದ್ದು, ಪಠ್ಯಪುಸ್ತಕಗಳಲ್ಲಿರುವ ವಿಷಯಗಳಿಗೆ ಮುಂದಿನ ದಿನಗಳಲ್ಲಿ ಆಕ್ಷೇಪಣೆ ಬಂದಲ್ಲಿ ರೋಹಿತ್ ಚಕ್ರತೀರ್ಥ, ಸಮಿತಿ ಅಧ್ಯಕ್ಷರು ಉತ್ತರಿಸುವ ಜವಾಬ್ದಾರಿ ಹೊಂದಿರುತ್ತಾರೆ.

ಇದು ಸರಕಾರದ ಅಧಿಕೃತ ತೀರ್ಮಾನವಾದರೆ, ಪಠ್ಯಪುಸ್ತಕಗಳ ಪರಿಷ್ಕರಣೆ ಅಸಿಂಧು ಹಾಗು ಅಮಾನ್ಯ .

ಅಪಮೌಲ್ಯ-ಅಪ್ರಬುದ್ಧ-ಅಸಂವಿಧಾನಿಕ-ಅಪ್ರಜಾಸತ್ತಾತ್ಮಕ –ಅಪಾರದರ್ಶಕ- ಅಸಿಂಧು-ಅಮಾನ್ಯವಾದ ಈ ಪ್ರಕ್ರಿಯು ಪರಿಷ್ಕರಣೆಯ ಹೆಸರಲ್ಲಿ ನಾಡಿನ ಹಾಗು ದೇಶದ ದಾರ್ಶನಿಕರನ್ನು ಅವಮಾನಿಸಿ , ಅವರ ವಿಚಾರಗಳನ್ನು ತಿರುಚಿರುವುದಲ್ಲದೆ, ಇತಿಹಾಸವನ್ನು ತನಗೆ ಇಷ್ಟಬಂದ ರೀತಿಯಲ್ಲ ಯಾವುದೇ ಸಾಕ್ಷಿ-ಆಧಾರ ಪುರಾವೆಗಳಿಲ್ಲದೆ  ಬದಲಾಯಿಸಿದೆ. ಭಾಷಾ  ವಿಷಯಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಗೌಣಗೊಳಿಸಿ ವಿವಾದಾತ್ಮಕ  ಪಾಠಗಳನ್ನು ಸೇರಿಸಿ , ಹಿಂದಿನ ಲೇಖಕರ ಪಾಠ/ಪದ್ಯಗಳನ್ನು ಕೈಬಿಟ್ಟಿದೆ. ಒಟ್ಟಾರೆ, ಈ ಪ್ರಕ್ರಿಯೆ ಮೂಲಕ ಪಠ್ಯಪುಸ್ತಕ ಹಾಗು ಅವುಗಳಲ್ಲಿನ ವಿಷಯಗಳನ್ನು ಅಪಮೌಲ್ಯಗೊಳಿಸಿದೆ.

ಮೇಲಿನ ವಿಷಯಕ್ಕೆ ಸಂಬಂಧಿಸದಂತೆ ಪೂರ್ಣ ವಿವರಣೆ:

1. ಪಠ್ಯಪುಸ್ತಕವನ್ನು ಸಿದ್ಧಪಡಿಸುವಾಗ ಅಥವಾ ಪರಿಷ್ಕರಿಸುವಾಗ ಒಂದು ಪ್ರಮಾಣೀಕರಿಸಿದ ಪ್ರಜಾಸತ್ತಾತ್ಮಕ ಪಠ್ಯಕ್ರಮ ಚೌಕಟ್ಟನ್ನು ಅನುಸರಿಸಬೇಕಿದೆ. ಒಂದು ವಿಶಾಲ ತಳಹದಿ  ಮತ್ತು ಶಿಕ್ಷಣದ ಮೂಲ ಗುರಿ-ಉದ್ದೇಶಗಳಿಗನುಗುಣವಾದ ಚೌಕಟ್ಟನ್ನು ನಾವು ಪಠ್ಯಕ್ರಮ ಚೌಕಟ್ಟು ಎಂದು ಕರೆಯುತ್ತೇವೆ. ಅದರಲ್ಲಿ,ಬಹಳ ಮುಖ್ಯವಾದದ್ದು ಶಿಕ್ಷಣವನ್ನು ಪರಿಭಾವಿಸುವ ರೀತಿ; ಶಿಕ್ಷಣದ ಮೂಲ ಗುರಿ ಮತ್ತು ಉದ್ದೇಶಗಳು; ಗುರಿ-ಉದ್ದೇಶಗಳನ್ನು ಸಾಧಿಸಲು  ಆಯ್ಕೆ ಮಾಡಿಕೊಳ್ಳಬೇಕಾದ ವಿಷಯ ; ಗುರಿ-ಉದ್ದೇಶಗಳನ್ನು ಸಾಕಾರಗೊಳಿಸಲು ಕಟ್ಟಿಕೊಡಬೇಕಾದ ಕಲಿಕಾ ಅನುಭವಗಳು ; ಸ್ವಾಭಾವಿಕ ಹಾಗು ಆಸಕ್ತಿದಾಯಕ ಕಲಿಕಾ ಅನುಭವಗಳನ್ನು ಕಟ್ಟಿಕೊಡಲು ಶಿಕ್ಷಕರಿಗೆ ನೀಡಬೇಕಾದ ಶಿಕ್ಷಕರ ಶಿಕ್ಷಣ  ಹಾಗು ಬೆಂಬಲಿತ ವ್ಯವಸ್ಥೆಗಳು; ಅಗತ್ಯವಾದ ಕಲಿಕಾ ಪರಿಕರಗಳು ಮತ್ತು ಗುರುತಿಸಿಕೊಂಡಿರುವ ಗುರಿ/ಉದ್ದೇಶಗಳ ಈಡೇರಿಕೆಯನ್ನು ಖಚಿತಪಡಿಸಿಕೊಳ್ಳುವ ಅನುಸರಿಸಬೇಕಾದ ಮೌಲ್ಯಮಾಪನ  ವಿಧಿ-ವಿಧಾನಗಳು , ಹೀಗೆ ಹತ್ತು – ಹಲವು ಆಯಾಮಗಳನ್ನು ಅದು ಒಳಗೊಂಡಿರುತ್ತದೆ.

2.       ಈ ಬಗೆಯ ಪಠ್ಯಕ್ರಮ ಚೌಕಟ್ಟನ್ನು ರೂಪಿಸುವಾಗ ವಿಶಾಲ ತಳಹದಿ  ಮತ್ತು ಶಿಕ್ಷಣದ ಮೂಲ ಗುರಿ ಉದ್ದೇಶಗಳ ಭಾಗವಾಗಿ ನಾವು ಅಂತಾರಾಷ್ಟ್ರೀಯ ಶಿಕ್ಷಣ ಮಾರ್ಗಸೂಚಿ, ಆಯಾ ರಾಷ್ಟ್ರದ ಸಂವಿಧಾನದ ಮೌಲ್ಯಗಳು , ಶಿಕ್ಷಣ ನೀತಿ  ಹಾಗು ಶಿಕ್ಷಣ ಒಂದು ಮೂಲಭೂತ ಮಾನವ ಹಕ್ಕಾಗಿ ಅದನ್ನು ಕೊಡಮಾಡುವ ರಾಷ್ಟ್ರಗಳ ರಾಜಕೀಯ ಇಚ್ಛಾಸಕ್ತಿ ಇತ್ಯಾದಿಗಳು ರಾಜಿಯಿಲ್ಲದ ಬುನಾದಿ ತತ್ವಗಳಾಗಿರುತ್ತವೆ.

2.       ಯುನೆಸ್ಕೊ ಸಂಸ್ಥೆಯು ರಚಿಸಿದ್ದ 21ನೇ ಶತಮಾನದ ಶಿಕ್ಷಣಕ್ಕಾಗಿ ಅಂತರಾಷ್ಟ್ರೀಯ ಶಿಕ್ಷಣ ಆಯೋಗದ  (1996)  ವರದಿ ಒಂದು ರಾಷ್ಟ್ರ/ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವಾಗ ಯಾವ ಆಯ್ಕೆಗಳನ್ನು ಮಾಡಬೇಕು ಎಂಬುದನ್ನು ಪ್ರತಿಪಾದಿಸಿ, ನಾವು ಯಾವ ರೀತಿಯ ಸಮಾಜದಲ್ಲಿ ಬದುಕಲು ಬಯಸುತ್ತೇವೆ ಎಂಬುದರ ಆಧಾರದಲ್ಲಿ ಶಿಕ್ಷಣದ ಆಯ್ಕೆಗಳನ್ನು ನಿರ್ಧರಿಸಲಾಗುತ್ತದೆ. ಒಟ್ಟಿಗೆ ಬದುಕುವ ಸಹಬಾಳ್ವೆಯ ಮೌಲ್ಯದ ಭಾಗವಾಗಿ , ನಮ್ಮೊಂದಿಗಿನ ಇತರ ಜನರ ಬಗ್ಗೆ ತಿಳುವಳಿಕೆ ಮತ್ತು ಪರಸ್ಪರ ಅವಲಂಬನೆಯ ಅಗತ್ಯತೆಯ ಮೆಚ್ಚುಗೆಯನ್ನು ಅಭಿವೃದ್ಧಿಪಡಿಸುವ ಮೂಲಕ ಒಟ್ಟಿಗೆ ಬದುಕಲು ಕಲಿಯುವುದು. ಬಹುತ್ವ, ಪರಸ್ಪರ ತಿಳುವಳಿಕೆ ಮತ್ತು ಶಾಂತಿಯ ಮೌಲ್ಯಗಳನ್ನು ಗೌರವಿಸುವ ಭಾಗವಾಗಿ, ಎದರಾಗಬಹುದಾದ ಸಂಘರ್ಷಗಳನ್ನು ನಿರ್ವಹಿಸಲು ಸಹಕಲಿಕೆಯ ಯೋಜನೆಗಳನ್ನು   ರೂಪಿಸಿ ಜಾರಿಗೊಳಿಸುವ ಪ್ರಾಮುಖ್ಯತೆಯನ್ನು ವರದಿ ಪ್ರತಿಪಾದಿಸುತ್ತದೆ.

4.       ನಮ್ಮ ಸಂವಿಧಾನವು ನಾವು ಭಾರತವನ್ನು ಹೇಗೆ ಕಟ್ಟಿಕೊಳ್ಳಬೇಕು ಮತ್ತು ತನ್ನ ನಾಗರೀಕರಿಗೆ ಏನು ಕೊಡಮಾಡಬೇಕೆಂಬುದನ್ನು, ತನ್ನ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ಹೇಳಿದೆ.ಸಂವಿಧಾನದ ಪೀಠಿಕೆ ನಮ್ಮ ಶಿಕ್ಷಣದ ಗುರಿ-ಉದ್ದೇಶದ ದಿಕ್ಸೂಚಿಯಾಗಿದೆ. ಅದರಂತೆ, “ಭಾರತದ ಪ್ರಜೆಗಳಾದ ನಾವು ,ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಮತ್ತು ಭಾರತದ ಎಲ್ಲಾ ಪ್ರಜೆಗಳಿಗೆ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು; ವಿಚಾರ, ಅಭಿವ್ಯಕ್ತಿ, ನಂಬಿಕೆ, ವಿಶ್ವಾಸ ಮತ್ತು ಉಪಾಸನೆಗಳ ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ: ವ್ಯಕ್ತಿ ಗೌರವ, ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ಧೃಢ ಸಂಕಲ್ಪ ಮಾಡಿ; ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ೧೯೪೯ ನೇಯ ಇಸವಿಯ ನವೆಂಬರ್ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ , ಶಾಸನವಾಗಿ ವಿಧಿಸಿಕೊಂಡಿದ್ದೇವೆ.

5.       ಇದೇ ಮೌಲ್ಯಗಳನ್ನು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಗಳೂ ಸಹ ಪ್ರತಿಪಾದಿಸಿವೆ. 1886ರ ಶಿಕ್ಷಣ ನೀತಿಯು, ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯು ಯಾವ ತತ್ವಗಳನ್ನು  ಒಳಗೊಳ್ಳಬೇಕೆಂಬುದನ್ನು ನಮ್ಮ ಸಂವಿಧಾನವು ಮೂರ್ತರೂಪಗೊಳಿಸಿದೆ (ಪ್ಯಾರಾ-3.1) ಎಂದು ಹೇಳುತ್ತದೆ .

6.       ಮೌಲ್ಯ ಶಿಕ್ಷಣದ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಿರುವ ಈ ಕಾಲದಲ್ಲಿ , ಶಿಕ್ಷಣ ನೀತಿಯು ಮೌಲ್ಯ ಶಿಕ್ಷಣ ಏನನ್ನು ಒಳಗೊಳ್ಳಬೇಕೆಂಬುದನ್ನು ಖಚಿತ ಪಡಿಸಿದೆ. ಸಾಂಸ್ಕೃತಿಕವಾಗಿ ನಮ್ಮ ಬಹುತ್ವದ ಸಮಾಜದಲ್ಲಿ, ನಮ್ಮ ಜನರನ್ನು ಏಕತೆ ಮತ್ತು ಸಮಗ್ರತೆಯ ಕಡೆ ಕೊಂಡೊಯ್ಯಲು , ಶಿಕ್ಷಣವು ಸಾರ್ವತ್ರಿಕ ಮತ್ತು ಶಾಶ್ವತ ಮೌಲ್ಯಗಳನ್ನು ಪೋಷಿಸಬೇಕು.ಅಂತಹ ಮೌಲ್ಯಯುತ ಶಿಕ್ಷಣವು ಪ್ರಗತಿ ವಿರೋಧ ಮನೋವೃತ್ತಿ , ಧಾರ್ಮಿಕ ಮತಾಂಧತೆ, ಹಿಂಸೆ, ಮೂಢನಂಬಿಕೆ ಮತ್ತು ದೈವಾಯುತ್ತ ವಾದವನ್ನು ತೊಡೆದುಹಾಕಲು ಸಹಾಯಕವಾಗಬೇಕು (ಪ್ಯಾರಾ 8.5)

೭.       ಮೇಲಿನ ಎಲ್ಲ ಮೌಲ್ಯಗಳನ್ನು ಒಳಮಾಡಿಕೊಂಡ ಪಠ್ಯಕ್ರಮ ಚೌಕಟ್ಟನ್ನು ರೂಪಿಸಿ, ಆ ಮೂಲಕ ಪಠ್ಯವಸ್ತು ಹಾಗು ಪಠ್ಯಪುಸಕಗಳನ್ನು ಸಿದ್ಧಪಡಿಸುವ ಒಂದು ಪ್ರಜಾಸತ್ತಾತ್ಮಕ ಹಾಗು ಸಾಂವಿಧಾನಿಕ ಪರಂಪರೆಯನ್ನು ನಾವು ಭಾರತದಲ್ಲಿ ಹಲವು ದಶಕಗಳಿಂದ ಪಾಲಿಸುತ್ತಾ ಬಂದಿದ್ದೇವೆ. ಇದಕ್ಕೆ, ಎರಡು ಸ್ಪಷ್ಟ ಉದಾರಣೆಗಳನ್ನು ಕೊಡುವುದಾದರೆ, 1975ರಲ್ಲಿ ಮೊದಲ ಬಾರಿಗೆ ಸಿದ್ಧಪಡಿಸಿಕೊಂಡ , ’10 ವರ್ಷದ ಶಾಲಾ ಶಿಕ್ಷಣಕ್ಕಾಗಿ ಪಠ್ಯಕ್ರಮ-ಒಂದು ಚೌಕಟ್ಟುʼ, ಮೇಲಿನ ಎಲ್ಲಾ ಮೌಲ್ಯಗಳನ್ನು ಒಳಮಾಡಿಕೊಂಡಿದೆ . ಈ ಚೌಕಟ್ಟು ಪ್ಯಾರಾ 1.1ರಲ್ಲಿ ಹೇಳುವಂತೆ, ʼನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ನಾವು ಒಂದು ಬಹುತ್ವತೆಯ ಮುಕ್ತ ಸಮಾಜ ಮತ್ತು ಜಾತ್ಯತೀತ, ಪ್ರಜಾಸತ್ತಾತ್ಮಕ ಮತ್ತು ಸಮಾಜವಾದಿ ನೆಲೆಯಲ್ಲಿ ರೂಪಿಸುವತ್ತ ಸಾಗಬೇಕೆಂದು ತಿಳಿಸುತ್ತವೆ. ಶಾಲಾ ಪಠ್ಯಕ್ರಮವು ಈ ಗುರಿ ಮತ್ತು ಮೌಲ್ಯಗಳನ್ನು ಅದರ ಸಂರಚನೆ, ವಿಷಯ, ಸೂಚಿತ ವಿಧಾನದಲ್ಲಿ ಪ್ರತಿಬಿಂಬಿಸಬೇಕು. ನಿಜ ಹೇಳಬೇಕೆಂದರೆ, ಅದರ ಸಂಪೂರ್ಣ ವಿನ್ಯಾಸವೇ ಇದಾಗಿರಬೇಕುʼ.

8.       ಈ ಪರಂಪರೆಯನ್ನೇ ಮುಂದುವರಿಸಿದ , ೨೦೦೫ರ  ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ʼನಮ್ಮ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯು  ಸಾಮಾನ್ಯ ತಿರಳುಳ್ಳ ವಿಷಯಗಳ ಜೊತೆಗೆ ನಮ್ಯತೆಯಿಂದ ಕೂಡಿದ ಉಳಿದ ಅಂಶಗಳನ್ನು ಒಳಗೊಂಡ ಒಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಧಾರದ ಮೇಲೆ ರೂಪಗೊಳ್ಳಬೇಕು. ಸಾಮಾನ್ಯ ತಿರುಳು ಭಾರತದ ಸ್ವಾತಂತ್ರ್ಯ ಚಳುವಳಿಯ ಇತಿಹಾಸ, ಸಾಂವಿಧಾನಿಕ ಕಟ್ಟುಪಾಡುಗಳು ಮತ್ತು ರಾಷ್ಟ್ರೀಯ ಅನನ್ಯತೆ ಪೋಷಿಸಲು ಅಗತ್ಯವಾದ ಇತರ ವಿಷಯಗಳನ್ನು ಒಳಗೊಂಡಿರುತ್ತದೆʼ.

ಮುಂದುವರಿದು, ಈ ಎಲ್ಲಾ ಅಂಶಗಳು ವಿವಿಧ ವಿಷಯ ಕ್ಷೇತ್ರಗಳಾದ್ಯಂತ ಅಡ್ಡಹಾಯ್ದು ಮತ್ತು ಭಾರತದ ಸಾಮಾನ್ಯ ಸಾಂಸ್ಕೃತಿಕ ಪರಂಪರೆ, ಸಮಾನತಾವಾದ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ, ಲಿಂಗ ಸಮಾನತೆ, ಪರಿಸರದ ರಕ್ಷಣೆ, ಸಾಮಾಜಿಕ ಅಡೆತಡೆಗಳ ನಿವಾರಣೆ , ಸಣ್ಣ ಕೌಟುಂಬಿಕ ನಿಯಮಗಳ ಅನುಸರಣೆ ಮತ್ತು ವೈಜ್ಞಾನಿಕ ಮನೋಭಾವವನ್ನು ಅಳವಡಿಸುವಂತಹ ಮೌಲ್ಯಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ.ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾತ್ಯತೀತ ಮೌಲ್ಯಗಳೊಂದಿಗೆ ಕಟ್ಟುನಿಟ್ಟಾದ ಅನುಸರಣೆಯಲ್ಲಿ ನಡೆಸಲಾಗುವುದು ಎಂದು ಪ್ರತಿಪಾದಿಸಿತು .

9.       ಸಾಮಾನ್ಯವಾಗಿ ಪಠ್ಯ ಪುಸ್ತಕಗಳ ರಚನೆ ಅಥವಾ ಪರಿಷ್ಕರಣೆಯ ಸಂದರ್ಭದಲ್ಲಿ ಭಾಷಾ ಹಾಗು ಸಮಾಜ ವಿಜ್ಞಾನದ ವಿಷಯಗಳಲ್ಲಿ, ವಿಷಯಗಳಲ್ಲಿನ ವಿಷಯದ ಜೊತೆಗೆ ವಸ್ತುನಿಷ್ಠತೆ, ಸಾಕ್ಷಾಧಾರಗಳು ಮತ್ತು ಪಠ್ಯದ ಮೂಲಕ ಮಕ್ಕಳಲ್ಲಿ ಬೆಳೆಸಬೇಕಾದ ಮೌಲ್ಯಗಳು ಪ್ರಾಮುಖ್ಯತೆ ಪಡೆಯುತ್ತವೆ.ವಿಷಯ ಆಯ್ಕೆಯ ಜೊತೆಗೆ ಲೇಖಕರ ಹಿನ್ನೆಲೆ ಮತ್ತು ಅದನ್ನು ಸಮರ್ಥಿಸಬಹುದಾದ ಸಂಶೋಧನಾತ್ಮಕ ಪುರಾವೆ ಮಕ್ಕಳಿಗೆ ಆದರ್ಶವಾಗುತ್ತದೆ.ಈ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳನ್ನು ರಚಿಸುವಾಗ ಸ್ವಾತಂತ್ರ್ಯ, ಭಾತೃತ್ವ, ನಂಬಿಕೆ ,ಪರಸ್ಪರ ಗೌರವ ಮತ್ತು ಬಹುತ್ವವನ್ನು ಗೌರವಿಸುವುದು ಮತ್ತು ಮಾನವೀಯ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸುವ ಮೂಲಕ ಪ್ರಜ್ಞಾವಂತ ನಾಗರೀಕರನ್ನಾಗಿ ರೂಪಿಸುವ ಪಠ್ಯವನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಒಂದು ವಸ್ತುನಿಷ್ಠ ವೈಚಾರಿಕ ವಿಷಯ ತಜ್ಞತೆಯ ಸಮಿತಿಯ ಮೇಲಿರುತ್ತದೆ.

10.      ಸಮಕಾಲೀನ ಕಾಳಜಿಗಳ ಭಾಗವಾಗಿ ಲಿಂಗ ಕಾಳಜಿಗಳನ್ನು ಚರ್ಚಿಸುವಾಗ ಲಿಂಗ ಸಮಾನತೆ ಮತ್ತು ಸಂವೇದನಾಶೀಲತೆಯನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ನೋಡಬೇಕಾಗುತ್ತದೆ. ಈಗಿನ ಭಾಷಾ/ಸಮಾಜ ವಿಜ್ಞಾನದಲ್ಲಿನ ಪಿತೃ ಪ್ರಧಾನ ವ್ಯವಸ್ಥೆಯ ಪೂರ್ವಾಗ್ರಹಪೀಡಿತ ಜ್ಞಾನಮೀಮಾಂಸೆಯ ಚೌಕಟ್ಟಿನಿಂದ ಪೂರ್ಣ ಹೊರನಿಂತು ನೋಡುವ ಅವಶ್ಯಕತೆಯಿದೆ.

11.       ಮಾನವ ಹಕ್ಕುಗಳ ಪರಿಕಲ್ಪನೆಗೆ ಒಂದು ಸಾರ್ವತ್ರಿಕ ಚೌಕಟ್ಟಿದೆ. ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಈ ಸಾರ್ವತ್ರಿಕ ಮೌಲ್ಯಗಳನ್ನು ಅವರ ವಯಸ್ಸಿಗೆ ಅನುಗುಣವಾದ ಪರಿಭಾಷೆಯಲ್ಲಿ ಪರಿಚಯಿಸುವುದು ಅಗತ್ಯವಿದೆ. ಸಮಕಾಲೀನ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ದೇಶ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗು ಸಾಂಸ್ಕೃತಿಕ ಸವಾಲುಗಳನ್ನು ವಿಶ್ಲೇಷಿಸಿ ತೀರ್ಮಾನಿಸುವ ಆಳವಾದ ಜ್ಞಾನವನ್ನು ಒದಗಿಸಬೇಕು. ಜ್ಞಾನ ಗ್ರಹಿಕೆಯ ಪಲ್ಲಟವನ್ನು ಗಮನದಲ್ಲಿಟ್ಟಿಕೊಂಡು, ವರ್ತಮಾನ ಭಾರತವನ್ನು ಆದಿವಾಸಿ, ದಲಿತ ಮತ್ತು ಇನ್ನಿತರ ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸುವಂತಾಗಬೇಕು.

ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಆಧುನಿಕ ಚರಿತ್ರೆಯ ಸಂಗತಿಗಳನ್ನು ಹಾಗು ಜಾಗತಿಕ ಮಟ್ಟದಲ್ಲಿನ ಮಹತ್ವದ ಬೆಳವಣಿಗೆಗಳನ್ನು ಚರಿತ್ರೆಯಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಸುತ್ತಲಿನ ಪ್ರಪಂಚದಲ್ಲಿ ಬದಲಾವಣೆ ಮತ್ತು ನಿರಂತರತೆಯ ಪ್ರಕ್ರಿಯೆಗಳನ್ನು ಅನ್ವೇಷಿಸಲು ಮತ್ತು ಅಧಿಕಾರ ಮತ್ತು ಹತೋಟಿ ಇವುಗಳನ್ನು ಅಂದು ಹಾಗೂ ಇಂದು ಯಾವ ಬಗೆಯಲ್ಲಿ ಬಳಸಲಾಗಿದೆ ಎಂಬುವುದನ್ನು ತುಲನಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ ನೋಡುವುದನ್ನು ಚರಿತ್ರೆಯ ಮುಖಾಂತರ ತಿಳಿಸಿಕೊಡಬೇಕು.

12.       ಎಲ್ಲಕ್ಕಿಂತ ಮಿಗಿಲಾಗಿ, ಭಾರತೀಯ ಸಂವಿಧಾನದ ತಾತ್ವಿಕ ಬುನಾದಿ ಮತ್ತು ಅದರಲ್ಲಿ ಪ್ರಸ್ತಾಪವಾಗಿರುವ ವಿಶಿಷ್ಟ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಭಾತೃತ್ವ, ಜಾತ್ಯತೀತತೆ, ಘನತೆ, ಬಹುತ್ವ ಮತ್ತು ಶೋಷಣೆ ಮುಕ್ತಿ ಸಮ-ಸಮಾಜದ ಬಗ್ಗೆ ಆಳವಾದ ಚರ್ಚೆ ಶಿಕ್ಷಣ ಪ್ರಕ್ರಿಯೆಯ ಕೇಂದ್ರಬಿಂದುವಾಗಿರಬೇಕು. ಭಾರತದಲ್ಲಿ ಪ್ರಜಾಪ್ರಭುತ್ವ ಪ್ರವೃದ್ಧಮಾನಕ್ಕೆ ಬಂದಿದ್ದು, ಪ್ರಜಾಪಭುತ್ವವನ್ನು ಗಟ್ಟಿಗೊಳಿಸುವ ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿದೆ. ಅದರಲ್ಲೂ ವಿಶೇಷವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಮಾಜವನ್ನು ವಿಶ್ಲೇಷಿಸಲು ಅಗತ್ಯವಾದ ಜ್ಞಾನವನ್ನು ಮಕ್ಕಳಿಗೆ ಕಟ್ಟಿಕೊಡಬೇಕಿದೆ.

ಈ ಎಲ್ಲ ಅಂಶಗಳ ಹಿನ್ನೆಯಲ್ಲಿ,  ನಮ್ಮ ರಾಜ್ಯದಲ್ಲಿ  ನಡೆದ ಪಠ್ಯ ಪರಿಷ್ಕರಣೆಯನ್ನು  ಮೇಲಿನ ಮೌಲ್ಯಗಳು ಹಾಗು ಪ್ರಜಾಸತ್ತಾತ್ಮಕ ವಿಧಾನದ ನೆಲೆಯಲ್ಲಿ ವಿಶ್ಲೇಷಿಸಿ ನೋಡಿದಾಗ  ಅಪ್ರಬುದ್ಧ-ಅಸಂವಿಧಾನಿಕ-ಅಪ್ರಜಾಸತ್ತಾತ್ಮಕ –ಅಪಾರದರ್ಶಕ- ಅಸಿಂಧು –ಅಪಮೌಲ್ಯಗೊಳಿಸುವ ಪ್ರಕ್ರಿಯೆಯಾಗಿದೆ. 18-09-2021ರಂದು ಸರಕಾರಿ ಆದೇಶದ ಮೂಲಕ ರಚಿಸಲಾದ  ಸಮಿತಿಗೆ ಪಠ್ಯ ಪರಿಶೀಲಿಸಿ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸುವ ಹೊಣೆಗಾರಿಕೆ ಇತ್ತೇ ಹೊರತು   ಪಠ್ಯ ಪರಿಷ್ಕರಣೆಗೆ  ಆದೇಶವಿರಲಿಲ್ಲ.. ಪಾಠ ಸೇರಿಸುವುದು  ಅಥವಾ ಪಾಠ ತೆಗೆಯುವುದು ಪಠ್ಯ ಪರಿಷ್ಕರಣೆಯಲ್ಲ. ಅದು ಕಟ್ಟುನಿಟ್ಟಾಗಿ ಪಠ್ಯಕ್ರಮ ಚೌಕಟ್ಟಿನ ಪ್ರಮಾಣೀಕರಿಸಿದ ಮೌಲ್ಯಗಳನ್ನು ಸಾಕಾರಗೊಳಿಸುವ ಸಾಧನ ಎಂಬುದು ಮುಖ್ಯವಾಗುತ್ತದೆ. ಹೀಗಾಗಿ, ಪಠ್ಯಕ್ರಮ , ಪಠ್ಯವಸ್ತು ಮತ್ತು ಪಠ್ಯಪುಸ್ತಕವನ್ನು ಕ್ರಮವನ್ನು ರೂಪಿಸುವಾಗ ಅಥವಾ ಪರಿಷ್ಕರಿಸುವಾಗ , ಒಂದು ಪ್ರಮಾಣೀಕರಿಸಿದ ಚೌಕಟ್ಟು ಪ್ರಜಾಸತ್ತಾತ್ಮಕ ವಿಧಾನ, ಪಾರದರ್ಶಕತೆ, ವಿಷಯ ತಜ್ಞರ ಒಳಗೊಳ್ಳುವಿಕೆ , ಆರೋಗ್ಯಕರ ಚರ್ಚೆ, ಪಠ್ಯ ಬಿಡುವ ಸೇರಿಸುವ ಭಾಗವಾಗಿ  ಸಹಜ ನ್ಯಾಯ ಧರ್ಮದ ತತ್ವಗಳನ್ನು ಅನುಸರಿಸಬೇಕಿದೆ. ದುರಾದೃಷ್ಟವೆಂದರೆ  , ನಮ್ಮ ರಾಜ್ಯದಲ್ಲಿ ನಡೆದ  ಪಠ್ಯಪರಿಷ್ಕಣೆ ಪ್ರಕ್ರಿಯೆಯು, ಇದೆಲ್ಲವನ್ನೂ ಗಾಳಿಗೆ ತೂರಿ , ಕೇವಲ ಪಾಠ ಸೇರಿಸುವ- ಪಾಠ ತೆಗೆಯುವ ಬಾಲಿಶ ಪ್ರಕ್ರಿಯೆಯಾಗಿತ್ತು. ಜೊತೆಗೆ, ಮಾರ್ಪಟ್ಟಿದೆ .

ಈ ಎಲ್ಲಾ ಬೆಳವಣಿಗೆಗಳನ್ನು ಒಬ್ಬ ಸಾಮಾನ್ಯ ಪ್ರಜ್ಞಾವಂತನಾಗಿ ಯಾವುದೇ ಪಕ್ಷಪಾತವಿಲ್ಲದೆ , ಸಂವಿಧಾನದ ಚೌಕಟ್ಟು ಮೌಲ್ಯಗಳನ್ನು ಹಾಗು 2005ರ ಪಠ್ಯಕ್ರಮ ಚೌಕಟ್ಟಿನ ನೆಲೆಯಲ್ಲಿ ಗಮನಿಸಿದರೆ ಆಘಾತ ಮತ್ತು ಆತಂಕವಾಗುತ್ತಿದೆ. ಒಂದು ಪಠ್ಯಕ್ರಮದ ಚೌಕಟ್ಟೇ ಇಲ್ಲದೆ ಪರಿಷ್ಕರಣೆ ಹೇಗೆ ಸಾಧ್ಯ? ಪಠ್ಯ ಪರಿಷ್ಕರಣೆಗೆ  ಮುಂದಾಗಿರುವವರು, 2005ರ ಪಠ್ಯಕ್ರಮ ಚೌಕಟ್ಟನ್ನು ಬಳಸಬೇಕು ಅಥವಾ ಅದರಲ್ಲಿ ನಂಬಿಕೆ ಇಲ್ಲದಿದ್ದರೆ  ಹೊಸದಾಗಿ ರೂಪಿಸುತ್ತಿರುವ ಹೊಸ ಪಠ್ಯಕ್ರಮ ಚೌಕಟ್ಟು ಸಿದ್ಧವಾಗಿ ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಅಂತಿಮಗೊಳ್ಳುವವರೆಗೆ ,ಯಥಾಸ್ಥಿತಿಯನ್ನು ಮುಂದುವರಿಸಬೇಕು. ಇದಾವುದನ್ನು ಒಳಮಾಡಿಕೊಳ್ಳದೆ ಅಸಂವಿಧಾನಿಕ, ಅಪ್ರಜಾಸತ್ತಾತ್ಮಕ ಮತ್ತು ಅವೈಜ್ಞಾನಿಕವಾಗಿ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದು ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಅತ್ಯಂತ ವಿಷಾದಕರ ಬೆಳವಣಿಗೆ. ಶಿಕ್ಷಕರು, ಮಕ್ಕಳ ಪಾಲಕರು , ಶಿಕ್ಷಣ ತಜ್ಞರು ಹಾಗು ವಿಷಯ ತಜ್ಞರನ್ನು ಒಳಮಾಡಿಕೊಳ್ಳದೆ, ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಕ್ಕಳ ಶಿಕ್ಷಣದ ಜೊತೆಗೆ ಭವಿಷ್ಯವನ್ನು ಬಲಿಕೊಡಲು ಹೊರಟಿರುವುದು ಅತ್ಯಂತ ಅಪಾಯಕರ ಬೆಳವಣಿಗೆ  ಮತ್ತು ಖಂಡನೀಯ.

ಈಗಿನ ಪರಿಷ್ಕರಣಾ ಕ್ರಮ, ವಿಧಾನ ಮತ್ತು ವಿಷಯಗಳ ಆಯ್ಕೆಯಲ್ಲಿ ಗೊಂದಲ ಹಾಗು ಸಾಂವಿಧಾನಿಕ ಸಂಘರ್ಷ ಉಂಟಾಗಿದೆ. ಈ ಎಲ್ಲಾ ಕಾರಣಗಳಿಂದ, ಈಗಿನ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಈ ಹಿಂದೆ ರಚನೆಯಾಗಿದ್ದ ಪಠ್ಯಪುಸ್ತಕಗಳನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ನಾಡಿನ ಪ್ರಜ್ಞಾವಂತ ಜನರ ಪರವಾಗಿ ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತೇನೆ .

ತಮ್ಮ ವಿಶ್ವಾಸಿ ,

ನಿರಂಜನಾರಾಧ್ಯ.ವಿ.ಪಿ.

ಅಭಿವೃದ್ಧಿ ಶಿಕ್ಷಣ ತಜ್ಞರು ಹಾಗು ಕರ್ನಾಟಕ ರಾಜ್ಯ  ಶಾಲಾಭಿವೃದ್ಧಿ  ಮತ್ತು  ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ  ಮಹಾ ಪೋಷಕರು

Join Whatsapp