ದುಬೈ | ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಪಾರ್ಟಿ | ಮಹಿಳೆಗೆ 10,000 ದಿರ್ಹಮ್ಸ್ ದಂಡ!

Prasthutha|

ಕೊರೋನ ವೈರಸ್ ಕುರಿತ ನಿಯಮಾವಳಿಗಳನ್ನು ಗಾಳಿಗೆ ತೂರಿ ಲೈವ್ ಬ್ಯಾಂಡ್‌ನೊಂದಿಗೆ ಖಾಸಗಿ ಪಾರ್ಟಿಯನ್ನು ಆಯೋಜಿಸಿದ ಕಾರಣಕ್ಕಾಗಿ ದುಬೈ ಪೊಲೀಸರು ಮಹಿಳೆಯೊಬ್ಬರಿಗೆ ಬರೋಬ್ಬರಿ 10,000 ದಿರ್ಹಮ್ಸ್ ದಂಡ (2 ಲಕ್ಷ ರೂ. ) ವಿಧಿಸಿದ್ದಾರೆ. ಪಾರ್ಟಿಯಲ್ಲಿ ಹಾಜರಿದ್ದವರು ಸಾಮಾಜಿಕ ಅಂತರ ಕಾಪಾಡಿಕೊಳ್ಳವ ನಿಯಮಗಳನ್ನು ಪಾಲಿಸಿರಲಿಲ್ಲ ಮತ್ತು ವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಫೇಸ್ ಮಾಸ್ಕ್ ಧರಿಸಲಿಲ್ಲ ಎಂಬುದಾಗಿ ವರದಿಯಾಗಿದೆ.

- Advertisement -

ಇದಲ್ಲದೇ, ಬ್ಯಾಂಡ್‌ನ ಸದಸ್ಯರು ಮತ್ತು ಪಾರ್ಟಿಯಲ್ಲಿ ಭಾಗಿಯಾಗಿದ್ದ ಅತಿಥಿಗಳಿಗೆ ತಲಾ 5,000 ದಿರ್ಹಮ್ಸ್ ದಂಡವನ್ನು ವಿಧಿಸಲಾಗಿದೆ. ನಿಯಮಾವಳಿಗಳನ್ನು ಉಲ್ಲಂಘಿಸುವವರಿಗೆ 2020ರ ನಿರ್ಣಯ ಸಂಖ್ಯೆ (38) ರ ಪ್ರಕಾರ ದಂಡ ವಿಧಿಸಲಾಗಿದ್ದು, ಈ ರೀತಿಯ ಕೂಟಗಳು, ಸಭೆಗಳು, ಖಾಸಗಿ ಮತ್ತು ಸಾರ್ವಜನಿಕ ಆಚರಣೆಗಳನ್ನು ಆಯೋಜಿಸುವ ಹೋಸ್ಟ್‌ಗಳಿಗೆ ಹಾಗೂ ಆಯೋಜಕರಿಗೆ 10 ಸಾವಿರ ದಿರ್ಹಮ್ಸ್ ದಂಡ ವಿಧಿಸಲಾಗುವುದು ಎಂಬುದಾಗಿ ದುಬೈ ಪೊಲೀಸರ ಅಪರಾಧ ತನಿಖಾ ವಿಭಾಗದ ನಿರ್ದೇಶಕ ಬ್ರಿಗೇಡಿಯರ್ ಜಮಾಲ್ ಸಲೀಮ್ ಅಲ್ ಜಲ್ಲಾಫ್‌ ಹೇಳಿದ್ದಾರೆ.

ಸ್ಥಳೀಯ ಅಧಿಕಾರಿಗಳು ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮತ್ತು ಉಲ್ಲಂಘಿಸುವವರ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಕಾನೂನಿನ ಪಾಲನೆಗೆ ಸಹಕರಿಸಬೇಕೆಂದು ಅವರು ಕರೆ ನೀಡಿದ್ದಾರೆ.

Join Whatsapp