ನಿರುದ್ಯೋಗ, ಖಾಸಗೀಕರಣ ವಿರೋಧಿಸಿ ರಾತ್ರಿ 9ಕ್ಕೆ ದೀಪ, ಲಾಟೀನು ಬೆಳಗಲು ತೇಜಸ್ವಿ ಯಾದವ್ ಕರೆ

Prasthutha|

ಪಾಟ್ನಾ : ನಿರುದ್ಯೋಗ ಮತ್ತು ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ಇಂದು (ಬುಧವಾರ) ರಾತ್ರಿ 9 ಗಂಟೆಗೆ ಜನರು ತಮ್ಮ ಮನೆಯ ಹೊರಗೆ, ಬಾಲ್ಕನಿ, ಟೆರೇಸ್ ಗಳಲ್ಲಿ ದೀಪ ಅಥವಾ ಲಾಟೀನು ಬೆಳಗುವಂತೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಕರೆ ನೀಡಿದ್ದಾರೆ. ಬಿಹಾರದಲ್ಲಿ ಆರ್ ಜೆಡಿ ಕಾರ್ಯಕರ್ತರು, ನಿರುದ್ಯೋಗಿಗಳು ಇಂದು ಕಾರ್ಯಕ್ರಮ ಯಶಸ್ವಿಗೊಳಿಸುವ ಬಹು ನಿರೀಕ್ಷೆ ವ್ಯಕ್ತವಾಗಿದೆ.

- Advertisement -

“ನಾನು ಮತ್ತು ನನ್ನ ತಾಯಿ ರಾಬ್ಡಿ ದೇವಿ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ವರೆಗೆ ನಮ್ಮ ಮನೆಯ ಟೆರೇಸ್ ನಲ್ಲಿ, ನಿರುದ್ಯೋಗದ ವಿರುದ್ಧ ತಮ್ಮ ಆಕ್ರೋಶ ಹೊರಹಾಕುತ್ತಿರುವ ನಿರುದ್ಯೋಗಿ ಯುವಕರು ಮತ್ತು ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸುತ್ತಿರುವ ಸ್ವಸಹಾಯ ಗುಂಪುಗಳಿಗೆ ಬೆಂಬಲವಾಗಿ ಲಾಟೀನು ಬೆಳಗಲಿದ್ದೇವೆ’’ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗ, ಖಾಸಗೀಕರಣವನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿಸಲು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಯತ್ನಿಸುತ್ತಿದ್ದಾರೆ. ಬಿಹಾರದಲ್ಲಿ ಜೆಡಿಯು-ಬಿಜೆಪಿ ನೇತೃತ್ವದ ನಿತೀಶ್ ಕುಮಾರ್ ಸರಕಾರವನ್ನು ಕೆಳಗಿಳಿಸಲು ಆರ್ ಜೆಡಿ ಈಗಾಗಲೇ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಕೊರೋನ ಲಾಕ್ ಡೌನ್ ವೇಳೆ, ಕೊರೋನ ಓಡಿಸಲು ಪ್ರಧಾನಿ ಮೋದಿ ರಾತ್ರಿ 9 ಗಂಟೆಗೆ ಇದೇ ರೀತಿ ಮನೆಗಳ ಹೊರಗೆ, ಬಾಲ್ಕನಿಗಳಲ್ಲಿ ದೀಪ ಬೆಳಗಲು ಹೇಳಿದ್ದುದು ಟೀಕೆಗೆ ಗುರಿಯಾಗಿತ್ತು. ಪ್ರಧಾನಿ ಮೋದಿ ಅವರು ನಿರುದ್ಯೋಗದ ಬಗ್ಗೆ ಮಾತನಾಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ನಡೆಯುತ್ತಿರುವಾಗ, ತೇಜಸ್ವಿಯವರ ಈ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಲಿದೆ.

Join Whatsapp