ಮುಂಬೈಯನ್ನು ಮತ್ತೆ ‘ಪಿಒಕೆ’, ‘ಪಾಕಿಸ್ತಾನ’ಕ್ಕೆ ಹೋಲಿಸಿದ ಕಂಗನಾ ರಾಣಾವತ್ | ಪೊಲೀಸರನ್ನು ‘ಬಾಬರನ ಸೇನೆ’ ಎಂದ ನಟಿ !

Prasthutha|

ಮುಂಬೈ : ಬಾಲಿವುಡ್ ನಟಿ ಕಂಗನಾ ರಾಣಾವತ್ ಇಂದು ಮತ್ತೊಮ್ಮೆ ಮುಂಬೈಯನ್ನು ‘‘ಪಾಕಿಸ್ತಾನ’’ ಮತ್ತು ‘’ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)’’ ಕ್ಕೆ ಹೋಲಿಕೆ ಮಾಡಿ ಭಾರಿ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. ಕಂಗನಾಳ ಕಚೇರಿಯು ಅಕ್ರಮವೆಂದು ಆಪಾದಿಸಿ ಮುಂಬೈ ಅಧಿಕಾರಿಗಳು, ಅದನ್ನು ಇಂದು ತೆರವಿಗೆ ಆರಂಭಿಸಿದ್ದಾರೆ ಎಂದು ತಿಳಿಸಿರುವ ನಟಿ, ಸರಣಿ ಟ್ವೀಟ್ ಗಳ ಮೂಲಕ ಮುಂಬೈ ಪೊಲೀಸ್ ಹಾಗೂ ಬ್ರಹನ್ಮುಂಬಯಿ ಪಾಲಿಕೆ ಅಧಿಕಾರಿಗಳನ್ನು ಗುರಿಯಾಗಿಸಿದ್ದಾರೆ.

“ನಾನು ಮುಂಬೈ ದರ್ಶನಕ್ಕಾಗಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿರಬೇಕಾದರೆ, ಮಹಾರಾಷ್ಟ್ರ ಸರಕಾರ ಮತ್ತು ಅದರ ಗೂಂಡಾಗಳು ಆಸ್ತಿಯನ್ನು ಕೆಡವಲು ಮುಂದಾಗಿದ್ದಾರೆ. ಮುಂದೆ ಸಾಗಿರಿ! ಮಹಾರಾಷ್ಟ್ರದ ಘನತೆಗಾಗಿ ನಾನು ರಕ್ತವನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದೇನೆ. ಇದರಿಂದ ನನ್ನ ಸ್ಫೂರ್ತಿ ಇನ್ನೂ ಹೆಚ್ಚಾಗುತ್ತಲೇ ಇರುತ್ತದೆ’’ ಎಂದು ಕಂಗನಾ ಟ್ವೀಟ್ ಮಾಡಿದ್ದಾಳೆ.
ಕೆಲವು ನಿಮಿಷಗಳ ಮತ್ತೊಂದು ಟ್ವೀಟ್ ಮಾಡಿರುವ ಕಂಗನಾ, ಕೆಲವು ಪೊಲೀಸರು ಮತ್ತು ಪಾಲಿಕೆ ಸಿಬ್ಬಂದಿಯ ಫೋಟೊ ಹಾಕಿ, “ಬಾಬರ ಮತ್ತು ಅವನ ಸೇನೆ’’ ಎಂದು ಟ್ವೀಟ್ ಮಾಡಿದ್ದಾಳೆ.

- Advertisement -

ಇನ್ನೊಂದು ಪೋಸ್ಟ್ ನಲ್ಲಿ ಸಿಬ್ಬಂದಿ ಅಕ್ರಮ ಕಚೇರಿ ತೆರವುಗೊಳಿಸುತ್ತಿರುವ ಫೋಟೊ ಪೋಸ್ಟ್ ಮಾಡಿ, “ಪಾಕಿಸ್ತಾನ’’ ಎಂದು ಟ್ವೀಟ್ ಮಾಡಿದ್ದಾಳೆ. “ನಾನು ಯಾವತ್ತೂ ತಪ್ಪು ಮಾಡಿಲ್ಲ ಮತ್ತು ನನ್ನ ಮುಂಬೈ ಈಗ ಯಾಕೆ ಪಿಒಕೆ ಆಗಿದೆ ಎಂಬುದನ್ನು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ’’ ಎಂದು ಮತ್ತೊಂದು ಟ್ವೀಟ್ ನಲ್ಲಿ ಕಂಗನಾ ತಿಳಿಸಿದ್ದಾಳೆ.

ಅಕ್ರಮ ಕಟ್ಟಡ ತೆರವು : ಮುಂಬೈಯ ಬಾಂದ್ರಾದ ಪಾಲಿಹಿಲ್ ಪ್ರದೇಶದಲ್ಲಿ ಇತ್ತೀಚೆಗೆ ನವೀಕರಣಗೊಳಿಸಿರುವ ಕಂಗನಾಳ ಮನೆಯ ಅಕ್ರಮ ನಿರ್ಮಾಣವನ್ನು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್(ಬಿಎಂಸಿ) ಸಿಬ್ಬಂದಿ ಇಂದು ತೆರವುಗೊಳಿಸಿದ್ದಾರೆ. ಪಾಲಿ ಹಿಲ್ಸ್ ನಲ್ಲಿರುವ ಕಂಗನಾಳ ಬಂಗ್ಲೆಯಲ್ಲಿ ಅಕ್ರಮ ನಿರ್ಮಾಣದ ಕುರಿತು ಆಕೆಗೆ ಬಿಎಂಸಿ ನಿನ್ನೆ ನೋಟಿಸ್ ಜಾರಿಗೊಳಿಸಿತ್ತು. ಬಂಗ್ಲೆಯ ‘ಕಾನೂನು ಬಾಹಿರ ನಿರ್ಮಾಣ’ವನ್ನು ತೆರವುಗೊಳಿಸುವುದಾಗಿ ಪಾಲಿಕೆ ಸಿಬ್ಬಂದಿಯೊಬ್ಬರು ತಿಳಿಸಿದ್ದರು. ಈ ಸಂಬಂಧ ಕಟ್ಟಡದಲ್ಲಿ ನೋಟಿಸ್ ಅಂಟಿಸಲಾಗಿದೆ ಎಂದೂ ಅವರು ಹೇಳಿದ್ದರು.

ಹೈಕೋರ್ಟ್ ಮೆಟ್ಟಿಲೇರಿದ ಕಂಗನಾ : ತಮ್ಮ ಮುಂಬೈ ಬಂಗ್ಲೆಯನ್ನು ತೆರವುಗೊಳಿಸುತ್ತಿರುವ ಬಗ್ಗೆ ಕಂಗನಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಂಗನಾಳ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಆರಂಭಿಸಿದೆ.

ಕಟ್ಟಡ ತೆರವಿಗೆ ತಡೆ : ತಮ್ಮ ಮುಂಬೈ ಬಂಗ್ಲೆ ತೆರವಿಗೆ ಮುಂದಾದ ಬಿಎಂಸಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಗನಾಗೆ ಕೊಂಚ ಸಮಾಧಾನ ಸಿಕ್ಕಿದೆ. ಕಟ್ಟಡ ತೆರವು ನಿಲ್ಲಿಸುವಂತೆ ಕೋರ್ಟ್ ಆದೇಶಿಸಿದ್ದು, ಕಂಗನಾಳ ಅರ್ಜಿ ಆಲಿಸುವಂತೆ ಬಿಎಂಸಿಗೆ ಸೂಚಿಸಿದೆ. ವಿಚಾರಣೆ ನಾಳೆ ಮಧ್ಯಾಹ್ನ 3 ಗಂಟೆಗೆ ಮುಂದುವರಿಯಲಿದೆ.  

- Advertisement -