ಪ್ರಧಾನಿ ಮೋದಿ ಭಾಷಣ | ಮುಂದುವರಿದ ‘ಡಿಸ್ ಲೈಕ್’ ಅಭಿಯಾನ | ಎರಡೇ ಗಂಟೆಯಲ್ಲಿ ಎಷ್ಟು ‘ಡಿಸ್ ಲೈಕ್’ ಗಳು ಬಿದ್ದವು ಇಲ್ಲಿ ನೋಡಿ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳ ಯೂಟ್ಯೂಬ್ ಪ್ರಸಾರಕ್ಕೆ ‘ಡಿಸ್ ಲೈಕ್ ಅಭಿಯಾನ’ ಇಂದೂ ದೊಡ್ಡ ಪ್ರಮಾಣದಲ್ಲಿ ಮುಂದುವರಿದಿದೆ. ಕೆಲವು ದಿನಗಳಿಂದ ಪ್ರಧಾನಿ ಮೋದಿ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುತ್ತಿದ್ದಂತೆ, ನೆಟ್ಟಿಗರು ದೊಡ್ಡ ಮಟ್ಟದ ಡಿಸ್ ಲೈಕ್ ಗಳನ್ನು ಕೊಡುತ್ತಿರುವುದು ಅಚ್ಚರಿಯನ್ನು ಮೂಡಿಸಿದೆ. ಬಿಜೆಪಿಗೆ ದೊಡ್ಡ ಮಟ್ಟದ ಸಾಮಾಜಿಕ ಜಾಲತಾಣ ಬಳಕೆದಾರರ ಬೆಂಬಲವಿದ್ದಾಗ್ಯೂ, ಇದು ಸತತವಾಗಿ ಮುಂದುವರಿಯುತ್ತಿರುವುದರಿಂದ ಪ್ರಧಾನಿ ಮೋದಿ ಅವರಿಗೆ ಹಾಗೂ ಆಡಳಿತಾರೂಢ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ.

ಪ್ರಧಾನಿ ಮೋದಿ ಅವರು ಇಂದು ‘ಪ್ರಧಾನಿ ಬೀದಿಬದಿ ವ್ಯಾಪಾರಸ್ಥರ ಆತ್ಮನಿರ್ಭರ ನಿಧಿ’ಯ ಮಧ್ಯಪ್ರದೇಶದ ಫಲಾನುಭವಿಗಳನ್ನುದ್ದೇಶಿಸಿ ವರ್ಚುವಲ್ ಸಂವಾದ ನಡೆಸಿದರು. ಈ ಕಾರ್ಯಕ್ರಮದ ಯೂಟ್ಯೂಬ್ ಪ್ರಸಾರದ ವೀಡಿಯೊ ಭಾರತೀಯ ಜನತಾ ಪಾರ್ಟಿಯ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಈ ವೀಡಿಯೊಗೂ ನೆಟ್ಟಿಗರು ದೊಡ್ಡ ಪ್ರಮಾಣದ ಡಿಸ್ ಲೈಕ್ ಅಭಿಯಾನ ಮುಂದುವರಿಸಿದ್ದಾರೆ.

- Advertisement -

31 ಲಕ್ಷಕ್ಕೂ ಹೆಚ್ಚು ಬಿಜೆಪಿ ಬೆಂಬಲಿಗರು ಈ ಯೂಟ್ಯೂಬ್ ಚಾನೆಲ್ ಖಾತೆಯಲ್ಲಿದ್ದರೂ, ಪ್ರಧಾನಿಯವರ ಭಾಷಣಕ್ಕೆ ಕೇವಲ 2 ಗಂಟೆಗಳಲ್ಲಿ 10 ಸಾವಿರಕ್ಕೂ ಅಧಿಕ ಡಿಸ್ ಲೈಕ್ ಗಳು ಬಂದಿವೆ. ಇದೇ ಅವಧಿಯಲ್ಲಿ ಪ್ರಧಾನಿಯವರ ಭಾಷಣವನ್ನು ಲೈಕ್ ಮಾಡಿದವರ ಸಂಖ್ಯೆ ಎರಡೂವರೆ ಸಾವಿರವನ್ನೂ ದಾಟಿಲ್ಲ. ಈ ವರದಿ ಪ್ರಕಟವಾಗುವ ಹೊತ್ತಿಗೆ ಪ್ರಧಾನಿ ಮೋದಿಯವರ ಭಾಷಣಕ್ಕೆ ಡಿಸ್ ಲೈಕ್ ನೀಡಿದವರ ಸಂಖ್ಯೆ 16 ಸಾವಿರ ದಾಟಿತ್ತು. ಇದೇ ವೇಳೆ ಲೈಕ್ ಕೊಟ್ಟವರ ಸಂಖ್ಯೆ ಇನ್ನೂ 3 ಸಾವಿರ ದಾಟಿಲ್ಲ.

ಪ್ರಧಾನಿ ಮೋದಿ ಅವರ ಭಾಷಣಕ್ಕೆ ಡಿಸ್ ಲೈಕ್ ಗಳು ಮಾತ್ರವಲ್ಲದೆ, ಕಾಮೆಂಟ್ ಗಳನ್ನೂ ಸರಕಾರ ಹಾಗೂ ಪ್ರಧಾನಿ ವಿರುದ್ಧ ಹಾಕಲಾಗುತ್ತಿದೆ. ಉದ್ಯೋಗ ನೀಡುವಂತೆ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಡಿಸ್ ಲೈಕ್ ನೀಡುತ್ತಿರುವವರು ವಿದೇಶಿಯರು ಎಂದು ಬಿಂಬಿಸುತ್ತಿರುವ ಬಿಜೆಪಿಗರಿಗೆ ಸೆಡ್ಡು ಹೊಡೆದು, ಕಾಂಮೆಂಟ್ ಬಾಕ್ಸ್ ಗಳಲ್ಲಿ ಕಾಮೆಂಟ್ ಹಾಕುವವರು, ‘ಡಿಸ್ ಲೈಕ್ ಬಿಹಾರದಿಂದ, ಪಶ್ಚಿಮ ಬಂಗಾಳದಿಂದ’ ತಮಿಳುನಾಡಿನಿಂದ’ ಹೀಗೆ ಬರೆದು, ಅದರೊಂದಿಗೆ ಅದು ಈಗ ಟರ್ಕಿ, ಸಿಂಗಾಪುರದಲ್ಲಿದೆ ಎಂಬಂತೆ ವ್ಯಂಗ್ಯವಾಡುತ್ತಿದ್ದಾರೆ. ಪ್ರಧಾನಿ ಮೋದಿ ಭಾಷಣದ ವಿರುದ್ಧ ಡಿಸ್ ಲೈಕ್ ನೀಡುತ್ತಿರುವುದು ಟರ್ಕಿಯಿಂದ ಎಂದು ಬಿಜೆಪಿ ಮೂಲಗಳು ತಿಳಿಸಿರುವುದಾಗಿ ಕೆಲವು ವರದಿಗಳು ಇತ್ತೀಚೆಗೆ ಪ್ರಕಟಗೊಂಡಿದ್ದವು. ಹೀಗಾಗಿ, ಇದೀಗ ಇದನ್ನೂ ವ್ಯಂಗ್ಯವಾಡಲಾಗುತ್ತಿದೆ.

ಪ್ರಧಾನಿ ಮೋದಿ ಅವರ ಇತ್ತೀಚಿನ ‘ಮನ್ ಕೀ ಬಾತ್’ ಭಾಷಣದ ಯೂಟ್ಯೂಬ್ ವೀಡಿಯೊಗೆ 10 ಲಕ್ಷಕ್ಕೂ ಹೆಚ್ಚು ಡಿಸ್ ಲೈಕ್ ಗಳು ವ್ಯಕ್ತವಾಗಿದ್ದವು ಎಂಬುದು ಇಲ್ಲಿ ಗಮನಾರ್ಹ.