ಬೆಂಗಳೂರು : ಕನ್ನಡ ಹೋರಾಟಗಾರರು, ಸಾರಿಗೆ ನೌಕರರ ಮುಷ್ಕರ ಮುಗಿದ ಬೆನ್ನಲ್ಲೇ, ಇದೀಗ ರಾಜ್ಯ ಸರಕಾರಕ್ಕೆ ಮತ್ತೊಂದು ಬಿಸಿ ಮುಟ್ಟಿಸಲು ಖಾಸಗಿ ಶಾಲಾ ಶಿಕ್ಷಕರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಶಿಕ್ಷಕರು ಪ್ರತಿಭಟನೆಗಿಳಿದಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರು ತಳ್ಳುಗಾಡಿಗಳಲ್ಲಿ ತರಕಾರಿ ತಂದು, ವಿನೂತನ ಪ್ರತಿಭಟನೆ ನಡೆಸಲಾರಂಭಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡಿ, ಕೋವಿಡ್ 19 ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರುಗಳ ನೆರವಿಗೆ ಧಾವಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.
ಶಿಕ್ಷಕರನ್ನು ಕೋವಿಡ್ ಯೋಧರೆಂದು ಪರಿಗಣಿಸಬೇಕು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ವಿಮಾ ಸೌಲಭ್ಯ, ಶಾಲಾ ಶುಲ್ಕ ಬಾಕಿ ಉಳಿಸಿಕೊಂಡಿರುವ ಪೋಷಕರು ತಕ್ಷಣ ಬಾಕಿ ಶುಲ್ಕ ಪಾವತಿಗೆ ಆದೇಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಶಿಕ್ಷಕರು ಒತ್ತಾಯಿಸಿದ್ದಾರೆ.
ಫೋಟೊ ಕೃಪೆ : ನ್ಯೂಸ್ 18 ಕನ್ನಡ