ಮಲಪ್ಪುರಂ ಲೋಕಸಭಾ ಉಪಚುನಾವಣೆ । SDPI ಅಭ್ಯರ್ಥಿಯಾಗಿ ಡಾ. ತಸ್ಲೀಮ್ ರಹ್ಮಾನಿ ಘೋಷಣೆ

Prasthutha|

ಮಲಪ್ಪುರಂ : ಮಲಪ್ಪುರಂ ಲೋಕಸಭಾ ಉಪಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷದ ಅಭ್ಯರ್ಥಿಯಾಗಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಾ. ತಸ್ಲೀಮ್ ರಹ್ಮಾನಿ ಅವರನ್ನು ಆಯ್ಕೆ ಮಾಡಲಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆಯವರು ಇದನ್ನು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.  ಸಂಸತ್ತಿನಲ್ಲಿ ಬಿಜೆಪಿ ಪೌರತ್ವ ತಿದ್ದುಪಡೆ ಕಾಯ್ದೆಯನ್ನು ಮಂಡಿಸಿದ ಅದೇ ದಿನ ಮಸೂದೆಯ ಪ್ರತಿಯನ್ನು ಡಾ. ತಸ್ಲೀಮ್ ರಹ್ಮಾನಿಯವರು ಬಹಿರಂಗ ಸಭೆಯೊಂದರಲ್ಲಿ ಹರಿದು ಹಾಕಿದ್ದು ಬಹುದೊಡ್ಡ ಸುದ್ದಿಯಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ ಮೊತ್ತ ಮೊದಲ ಘಟನೆ ಅದಾಗಿತ್ತು. ಆ ನಂತರ ಇಡೀ ದೇಶದಾದ್ಯಂತ ಸಂಸತ್ತಿನ ಒಳಗೆ ಮತ್ತು ಹೊರಗೆ ಈ ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದಿತ್ತು.

- Advertisement -

ದೇಶದಲ್ಲಿ ಲೋಕಸಭಾ ಚುನಾವಣೆ ನಡೆದು ಕೇವಲ ಎರಡು ವರ್ಷಗಳಷ್ಟೇ ಆಗಿದೆ. ಆದರೆ ಅಲ್ಲಿನ ಸಂಸದರಾಗಿದ್ದ ಮುಸ್ಲಿಮ್ ಲೀಗಿನ ಪಿ ಕೆ ಕುಂಞಾಲಿಕುಟ್ಟಿಯವರು ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮಹದಾಸೆಯಿಂದ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದು ಬಹಳಷ್ಟು ಟೀಕೆಗೂ ಗುರಿಯಾಗಿತ್ತು. ದೇಶದಲ್ಲಿ ಫ್ಯಾಶಿಸಂ ವಿರುದ್ದ ಗಟ್ಟಿಯಾಗಿ ನಿಂತು ಧ್ವನಿ ಎತ್ತಬೇಕಾಗಿದ್ದ ಸಂಸದರೊಬ್ಬರು ಅಧಿಕಾರದ ಆಸೆಯಿಂದ ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತು ಸ್ವಪಕ್ಷೀಯರೇ ಅಪಸ್ವರಗಳನ್ನು ಎತ್ತಿದ್ದರು. ಮುಸ್ಲಿಂ ಲೀಗ್ ಒಳಗೊಂಡಂತೆ ಇರುವ ಯುಡಿಎಫ್ , ಸಂಸದರಾಗಿರುವವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದೂ ಕೂಡಾ ಘೋಷಿಸಿತ್ತು.

ವೃತ್ತಿಯಲ್ಲಿ ಡಾಕ್ಟರ್ ಆಗಿರುವ ತಸ್ಲೀಮ್ ರಹ್ಮಾನಿಯವರು ಓರ್ವ ನುರಿತ ರಾಜಕೀಯ ವಿಶ್ಲೇಷಕರು ಕೂಡಾ ಆಗಿದ್ದಾರೆ. ಹಲವು ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸಿರುವ ರಹ್ಮಾನಿಯವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕರಾರುವಕ್ಕಾಗಿ ಧ್ವನಿ ಎತ್ತಿದವರಾಗಿದ್ದರು. ಮಲಪ್ಪುರಂ ಕ್ಷೇತ್ರದ ಇತಿಹಾಸದಲ್ಲಿ ಲೋಕಸಭೆಯ ಮೂರು, ನಾಲ್ಕು ಮತ್ತು ಐದನೇ ಅವಧಿಯಲ್ಲಿ ತಮಿಳುನಾಡು ತಿರುನೇಲ್ವಿ ಮೂಲದ ಮುಹಮ್ಮದ್ ಇಸ್ಮಾಯೀಲ್ ಅವರು ಪ್ರತಿನಿಧಿಸಿದ್ದರು. 6,7, 8 ಮತ್ತು 9ನೇ ಅವಧಿಗೆ ಕರ್ನಾಟಕ ಮೂಲದ ಇಬ್ರಾಹೀಮ್ ಸುಲೇಮಾನ್ ಸೇಠ್ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇದೀಗ ದೆಹಲಿ ಮೂಲದ ವೈದ್ಯರಾಗಿರುವ ಡಾ. ತಸ್ಲೀಮ್ ರಹ್ಮಾನಿಯವರನ್ನು ಎಸ್ಡಿಪಿಐ ತನ್ನ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದೆ. ಕುಂಞಾಲಿಕುಟ್ಟಿಯ ವೈಫಲ್ಯ ಹಾಗೂ ಅಧಿಕಾರಕ್ಕಾಗಿ ಕ್ಷೇತ್ರದ ಜನತೆಗೆ ಮತ್ತೊಮೆ ಚುನಾವಣೆಯ ಹೊರೆಯನ್ನು ಎದುರಿಸುವಂತೆ ಮಾಡಿದ ಅಪಕೀರ್ತಿ ಕುಂಞಾಲಿಕುಟ್ಟಿಯ ಮೇಲಿದೆ. ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ನಿಕಟ ಸ್ಪರ್ಧೆಗೆ ಅವಕಾಶ ಸಿಕ್ಕಂತಾಗಿದೆ. ಖಡಕ್ ಮಾತಿನ ಮೂಲಕ ಸಂಸತ್ತಿನ ಹೊರಗಡೆ ಬಿಜೆಪಿ ಸರ್ಕಾರದ ಫ್ಯಾಶಿಸಂ ಪರ ಒಲವುಳ್ಳ ಕರಾಳ ನಡೆಗಳ ವಿರುದ್ಧ ನೇರವಾಗಿ ಧ್ವನಿ ಎತ್ತಿರುವ ತಸ್ಲೀಮ್ ರಹ್ಮಾನಿ ಪರ ಜನತೆ ಒಲವು ತೋರಿಸಿದ್ದಾರೆ ಎನ್ನಲಾಗಿದೆ.

- Advertisement -

ದೇಶದ ಮೊದಲ ಲೋಕಸಭಾ ಚುನಾವಣೆಯಲ್ಲಿ ಮಲಪ್ಪುರಂ ಕ್ಷೇತ್ರ ಮೊದಲಿಗೆ ಮಲಬಾರ್ ಜಿಲ್ಲೆಗಳನ್ನು ಒಳಗೊಂಡ ಮಲಪ್ಪುರಂ ಎಂದು ಹೆಸರಿನಿಂದ ಗುರುತಿಸಲ್ಪಟ್ಟಿತ್ತು. ಆ ನಂತರ ಅದು 2004ರ ಚುನಾವನೆಯ ವರೆಗೆ ಮಂಜೇರಿ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು. 2009ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಕ್ಕೆ ಮತ್ತೆ ಮಲಪ್ಪುರಂ ಕ್ಷೇತ್ರವಾಗಿ ಬದಲಾಯಿತು.



Join Whatsapp