ಟಿ20 ವಿಶ್ವಕಪ್‌ | ಭಾರತ – ಇಂಗ್ಲಂಡ್‌ ಸೆಮಿಫೈನಲ್‌ ಮುಖಾಮುಖಿಗೆ ಕ್ಷಣಗಣನೆ

Prasthutha|

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ 2ನೇ ಸೆಮಿಫೈನಲ್‌ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಅಡಿಲೇಡ್‌ನಲ್ಲಿ ಫೈನಲ್‌ ಗುರಿಯಾಗಿಸಿ ಟೀಮ್‌ ಇಂಡಿಯಾ-ಇಂಗ್ಲೆಂಡ್‌ ತಂಡಗಳು ಕಣಕ್ಕಿಳಿಯಲಿವೆ.

- Advertisement -

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಚೊಚ್ಚಲ ಆವೃತ್ತಿಯಲ್ಲಿ ʻಯುವʼ ಟೀಮ್‌ ಇಂಡಿಯಾ, ಧೋನಿ ಸಾರಥ್ಯದಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಟಿ20 ವಿಶ್ವಕಪ್‌ನಲ್ಲಿ ಭಾರತದ ಸಂಭ್ರಮ ಅದೇ ಮೊದಲು ಮತ್ತು ಕೊನೆ. ಆ ನಂತರದಲ್ಲಿ ಈವರೆಗೆ ನಡೆದ 6 ಆವೃತ್ತಿಗಳಲ್ಲಿ ಟೀಮ್‌ ಇಂಡಿಯಾ ಒಮ್ಮೆಯೂ ಚಾಂಪಿಯನ್‌ ಪಟ್ಟಕ್ಕೇರಿಲ್ಲ. 2014ರಲ್ಲಿ ಬಾಂಗ್ಲಾದೇಶ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ, ಫೈನಲ್‌ ಹಂತಕ್ಕೇರಿತ್ತಾದರೂ, ಶ್ರೀಲಂಕಾಗೆ ಶರಣಾಗಿತ್ತು.

8ನೇ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ 4ನೇ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದೆ.

- Advertisement -

ಸೂಪರ್‌ 12ರ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿ 8 ಅಂಕಗಳೊಂದಿಗೆ ಟೀಮ್‌ ಇಂಡಿಯಾ ಗ್ರೂಪ್‌- 2ರಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಿದೆ. ಮತ್ತೊಂದೆಡೆ ಗ್ರೂಪ್‌-1ರಲ್ಲಿ ನ್ಯೂಜಿಲೆಂಡ್‌, ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳು ತಲಾ 7 ಅಂಕಗಳಿಸಿದ್ದರೂ, ಉತ್ತಮ ರನ್‌ರೇಟ್‌ ಆಧಾರದಲ್ಲಿ ನ್ಯೂಜಿಲೆಂಡ್‌, ಇಂಗ್ಲೆಂಡ್‌ ತಂಡಗಳು ಸೆಮಿಫೈನಲ್‌ ಹಂತಕ್ಕೆ ಅರ್ಹತೆ ಪಡೆದಿತ್ತು.

ಭಾರತ – ಇಂಗ್ಲೆಂಡ್‌ ಹಣಾಹಣಿ ಗುರುವಾರ ಮಧ್ಯಾಹ್ನ 1.30ಕ್ಕೆ ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ಉಭಯ ತಂಡಗಳು ಇದುವರೆಗೂ 22 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 12 ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಮತ್ತು 10 ಪಂದ್ಯಗಳಲ್ಲಿ ಇಂಗ್ಲೆಂಡ್‌ ಗೆಲುವು ಸಾಧಿಸಿದೆ. ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿನ ಮೂರು ಪಂದ್ಯಗಳಲ್ಲಿ 2ರಲ್ಲಿ ಭಾರತ ಮತ್ತು 1 ಪಂದ್ಯಗಳಲ್ಲಿ ಇಂಗ್ಲೆಂಡ್‌ ಗೆಲುವು ಕಂಡಿದೆ.

Join Whatsapp