ಪುಟ್ಟ ಕಂದಮ್ಮನ ಕುತ್ತಿಗೆ, ಬಲಗೈ ಕೊಯ್ದ ತಂದೆ!

Prasthutha|

ಚೆನ್ನೈ:  ತಂದೆಯೊಬ್ಬ ತನ್ನ 26 ದಿನದ ಪುಟ್ಟ ಕಂದಮ್ಮನ ಕುತ್ತಿಗೆ ಹಾಗೂ ಬಲಗೈ ತೋಳನ್ನು ಹರಿತವಾದ ಆಯುಧದಿಂದ ಕೊಯ್ದು ವಿಕೃತಿ ಮೆರೆದ ಘಟನೆಯೊಂದು ತಮಿಳುನಾಡಿನ ವಲ್ಲೂರಿನಲ್ಲಿ ನಡೆದಿದೆ.

- Advertisement -

ಆರೋಪಿಯನ್ನು ಮಣಿಕಂದನ್ (29) ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ಹೇಮಾ (21) ಎಂಬಾಕೆಯ ಜೊತೆ ಸಪ್ತಪದಿ ತುಳಿದಿದ್ದಾನೆ. ದಂಪತಿಗೆ ಇತ್ತೀಚೆಗೆ ಗಂಡು ಮಗು ಹುಟ್ಟಿತ್ತು.

ತಾಂಬರಂನಲ್ಲಿ ವಾಯುಪಡೆಯ ಕ್ಯಾಂಟೀನ್‍ನ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮಣಿಕಂದನ್, ವೆಲ್ಲೂರಿನ ಅನೈಕಟ್ ತಾಲೂಕಿನ ದೇವಿ ನೆಲ್ಲಿಕುಳಂ ಪ್ರದೇಶದಲ್ಲಿ ವಾಸವಿದ್ದನು. ತನ್ನ ಕೆಲಸದ ಕಾರಣದಿಂದಾಗಿ ಮಣಿಕಂದನ್ ತಿಂಗಳಿಗೊಮ್ಮೆ ಪತ್ನಿಯನ್ನು ಭೇಟಿಯಾಗುತ್ತಿದ್ದನು. ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಪತಿ ಪತ್ನಿಯ ಮೇಲೆ ಅನುಮಾನಪಡುತ್ತಿದ್ದನು.

- Advertisement -

ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಪರಿಣಾಮ ಹೇಮಾಳ ಮುಂದೆಯೇ ಮಣಿಕಂದನ್ ಚಾಕುವಿನಿಂದ ಹಸುಗೂಸಿನ ಬಲಗೈ ಮತ್ತು ಕುತ್ತಿಗೆಯನ್ನು ಕೊಯ್ದಿದ್ದಾನೆ. ತಕ್ಷಣವೇ ಹೇಮಾ ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಂತೆಯೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವನ್ನು ಪರೀಕ್ಷಿಸಿದ ವೈದ್ಯರು, ಕುತ್ತಿಗೆ ಮತ್ತು ಬಲಗೈಯಲ್ಲಿ ಗಾಯಗಳಾಗಿದ್ದು ಹೊಲಿಗೆ ಹಾಕಬೇಕಾಗುತ್ತದೆ. ಉಳಿದಂತೆ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಇತ್ತ ಪತ್ನಿಯ ದೂರಿನ ಆಧಾರದ ಮೇಲೆ ಮಣಿಕಂದನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಕೃತ್ಯದ ಬಳಿಕ ಮಣಿಕಂದನ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.