ಆರೋಪಗಳ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ ‘ಚುಪ್’ ಎಂದು ಗದರಿದ ಬಿಜೆಪಿ ಸಂಸದ ಬ್ರಿಜ್ ಭೂಷಣ್

Prasthutha|

ಹೊಸದಿಲ್ಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳ ಆಧಾರದ ಮೇಲೆ ದೆಹಲಿ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಕುರಿತು ಪ್ರಶ್ನೆ ಕೇಳಿದ ಪತ್ರಕರ್ತೆಗೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಚುಪ್ (ಬಾಯ್ಮುಚ್ಚು) ಎಂದು ಗದರಿದ್ದಾರೆ.

- Advertisement -

12 ವರ್ಷಗಳ ಕಾಲ ಭಾರತದ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥರಾಗಿರುವ ಸಿಂಗ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 , 354 ಎ (ಲೈಂಗಿಕ ಕಿರುಕುಳ) ಮತ್ತು 354 ಡಿ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಸೆಕ್ಷನ್ 354 ರ ಅಡಿಯಲ್ಲಿ ದೋಷಾರೋಪಣೆಯು ಗರಿಷ್ಠ ಐದು ವರ್ಷಗಳು, ಸೆಕ್ಷನ್ 354A ಅಡಿಯಲ್ಲಿ ಮೂರು ವರ್ಷಗಳು ಮತ್ತು ಸೆಕ್ಷನ್ 354D ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಹೊಂದಿರುತ್ತದೆ.

ಟೈಮ್ಸ್ ನೌ ವರದಿಗಾರ್ತಿ, ನೀವು ಸಂಸತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಕೇಳಿದಾಗ, ಸಿಟ್ಟಿನಿಂದಲೇ ಉತ್ತರಿಸಿದ ಸಂಸದ,“ನಾನೇಕೆ ರಾಜೀನಾಮೆ ನೀಡಬೇಕು? ನೀವೇಕೆ ರಾಜೀನಾಮೆ ಕೇಳುತ್ತಿದ್ದೀರಿ? ಎಂದಿದ್ದಾರೆ. ಅವರು ಎದುರಿಸುತ್ತಿರುವ ಗಂಭೀರ ಆರೋಪಗಳ ಬಗ್ಗೆ ಕೇಳಿದಾಗ ಕೋಪಗೊಂಡ ಸಂಸದರು ಚುಪ್ ಎಂದು ಹೇಳಿದ್ದು ವಿಡಿಯೊದಲ್ಲಿ ಸೆರೆಯಾಗಿದೆ. ವರದಿಗಾರ್ತಿ ಅವರನ್ನು ಹಿಂಬಾಲಿಸಿದಾಗ ಮೈಕ್ ತಳ್ಳಿ ಹಾಕಿ ಸಿಂಗ್ ಕಾರಿನ ಬಾಗಿಲು ಹಾಕಿದ್ದಾರೆ.

- Advertisement -

ಘಟನೆಯ ವಿಡಿಯೊವನ್ನು ಹಂಚಿಕೊಂಡಿರುವ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ, ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದರೊಬ್ಬರು ಮಹಿಳಾ ಪತ್ರಕರ್ತೆಗೆ ಕ್ಯಾಮೆರಾದಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ಅವರ ಮೈಕ್ ಅನ್ನು ಕೂಡಾ ಮುರಿದಿದ್ದಾರೆ. ಇದು ಯಾರ ಮಾತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಬಹುದೇ? ಇದು ಯಾರ ಸಂಸ್ಕೃತಿ ಎಂದು ಕೇಳಿದ್ದಾರೆ.

ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್, ಸಿಂಗ್ ಅವರನ್ನು ‘ಗುಂಡಾ’ ಎಂದು ಕರೆದಿದ್ದಾರೆ. ಈ ಬಗ್ಗೆ ಟ್ಟೀಟ್ ಮಾಡಿದ ಅವರು ಮತ್ತೊಮ್ಮೆ ಹೇಳುತ್ತಿದ್ದೇನೆ ಬ್ರಿಜ್ ಭೂಷಣ್ ಸಿಂಗ್ ಒಬ್ಬ ಗೂಂಡಾ. ಕ್ಯಾಮೆರಾ ಮುಂದೆ. ಮಹಿಳಾ ವರದಿಗಾರರೊಂದಿಗೆ ಈ ರೀತಿ ವರ್ತಿಸುವ ಧೈರ್ಯವಿರುವಾಗ, ಕ್ಯಾಮೆರಾದ ಹೊರಗೆ ಮಹಿಳೆಯರೊಂದಿಗೆ ಅವನು ಹೇಗೆ ವರ್ತಿಸುತ್ತಾನೆಂದು ಊಹಿಸಿ. ಈ ಮನುಷ್ಯನ ಸ್ಥಾನವು ಜೈಲಿನಲ್ಲಿರುವುದು, ಸಂಸತ್ತಿನಲ್ಲಿ ಅಲ್ಲ! ಎಂದು ಕಿಡಿಕಾರಿದ್ದಾರೆ.