ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ಜಡ್ಜ್ ಸೇರಿದಂತೆ 68 ನ್ಯಾಯಾಧೀಶರ ಬಡ್ತಿ ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ; ಮೇ 8ಕ್ಕೆ ವಿಚಾರಣೆ

Prasthutha|

ಹೊಸದಿಲ್ಲಿ: ಕ್ರಿಮಿನಲ್ ಮಾನಹಾನಿ ಆರೋಪದಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಹರೀಶ್ ಹಸ್ಮುಖಭಾಯ್ ವರ್ಮಾ ಸೇರಿದಂತೆ 68 ನ್ಯಾಯಾಧೀಶರ ಬಡ್ತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ಮೇ 8 ರಂದು ವಿಚಾರಣೆ ನಡೆಸಲಿದೆ.

- Advertisement -

ಹಿರಿಯ ಸಿವಿಲ್ ನ್ಯಾಯಾಧೀಶ ಕೇಡರ್‌ನ ಇಬ್ಬರು ನ್ಯಾಯಾಧೀಶರು ಆದ ಗುಜರಾತ್ ಸರ್ಕಾರದ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ರವಿಕುಮಾರ್ ಮಾಹೇತಾ ಮತ್ತು ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ನಿರ್ದೇಶಕ ಸಚಿನ್ ಪ್ರತಾಪ್ ರೈ ಮೆಹ್ತಾ ಅವರು 68 ಜಡ್ಜ್ ಗಳ ಆಯ್ಕೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ 28 ರಂದು ಸಲ್ಲಿಸಿದ ಮನವಿಯು ನೇಮಕಾತಿಯನ್ನು ರದ್ದುಗೊಳಿಸಲು ನ್ಯಾಯಾಲಯದ ನಿರ್ದೇಶನವನ್ನು ಕೋರಿದೆ.

ಅರ್ಜಿದಾರರ ಪರವಾಗಿ ವಕೀಲ ಪೂರ್ವಿಶ್ ಮಲ್ಕನ್ ಅವರು ಮಾರ್ಚ್ 10 ರಂದು ಹೈಕೋರ್ಟ್ ಹೊರಡಿಸಿದ ಆಯ್ಕೆ ಪಟ್ಟಿಯನ್ನು ಮತ್ತು ನಂತರ ಅವರನ್ನು ನೇಮಕ ಮಾಡುವ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್‌ನ ನಿರ್ದೇಶನವನ್ನು ಕೋರಿದರು. ಮೆರಿಟ್-ಕಮ್-ಜ್ಯೇಷ್ಠತೆಯ ತತ್ವದ ಮೇಲೆ ಹೊಸ ಮೆರಿಟ್ ಪಟ್ಟಿಯನ್ನು ತಯಾರಿಸಲು ಹೈಕೋರ್ಟ್‌ಗೆ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ.

Join Whatsapp