ಹಣಕಾಸಿನ ವಿಚಾರದಲ್ಲಿ ತಲೆ ಹಾಕದಿರಿ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರ

ಹೊಸದಿಲ್ಲಿ: ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ ವಿವಿಧ ಕ್ಷೇತ್ರಗಳಿಗೆ ಪರಿಹಾರವನ್ನು ನೀಡಲು ತನ್ನಿಂದ ಸಾಧ್ಯವಾಗದು ಎಂದು ಸುಪ್ರೀಂ ಕೋರ್ಟ್ ಗೆ ಹೇಳಿರುವ ಕೇಂದ್ರ ಸರಕಾರ, “ನ್ಯಾಯಾಲಯಗಳು ಹಣಕಾಸು ನೀತಿಗಳ ವಿಷಯದಲ್ಲಿ ತಲೆಹಾಕಬಾರದು” ಎಂದಿದೆ. ಆರು ತಿಂಗಳ ಕೊರೊನಾ ಸಾಂಕ್ರಾಮಿಕದ ಅವಧಿಯ ಎರಡು ಕೋಟಿ ರೂಪಾಯಿವರೆಗಿನ ಸಾಲದ ಮೇಲೆ ಚಕ್ರಬಡ್ಡಿಯನ್ನು ಮನ್ನಾಗೊಳಿಸುವುದಾಗಿ ಸರಕಾರ ಕಳೆದವಾರ ನೀಡಿದ ಅಫಿದವಿತ್ ನ ಕುರಿತು ಕೋರ್ಟ್ ನೀಡಿದ ಸಲಹೆಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರಕಾರ ಈ ಪ್ರತಿಕ್ರಿಯೆಯನ್ನು ನೀಡಿದೆ.

“ನೀತಿಯು ಸರಕಾರದ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ನಿರ್ದಿಷ್ಟ ಹಣಕಾಸಿನ ಪರಿಹಾರವನ್ನು ಸುಪ್ರೀಂ ಕೋರ್ಟ್ ವಿಭಾಗೀಕರಿಸುವುದು ಸಾಧ್ಯವಿಲ್ಲ. 20 ಕೋಟಿ ರೂಪಾಯಿ ಸಾಲಕ್ಕೆ ಚಕ್ರಬಡ್ಡಿಯನ್ನು ಮನ್ನಾ ಮಾಡುವುದು ಹೊರತುಪಡಿಸಿ, ಹೆಚ್ಚಿನ ಪರಿಹಾರದ ಕುರಿತು ರಾಷ್ಟ್ರೀಯ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವಲಯವು ನಿರ್ಣಯಿಸುತ್ತದೆ” ಎಂದು ಸರಕಾರ ಅಫಿದವಿತ್ ನಲ್ಲಿ ತಿಳಿಸಿದೆ.

- Advertisement -

ಕಳೆದ ವಾರ 2 ಕೋಟಿ ತನಕದ ಸಾಲಕ್ಕೆ ಚಕ್ರಬಡ್ಡಿಯನ್ನು ಮನ್ನಾ ಮಾಡಬಹುದು ಎಂದು ಸರಕಾರ ಕೋರ್ಟ್ ಗೆ ತಿಳಿಸಿತ್ತು. ಎಂ.ಎಸ್.ಎಂ.ಇ (ಅತಿ ಸಣ್ಣ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳು), ಶಿಕ್ಷಣ, ಮನೆ, ಗ್ರಾಹಕ ಉತ್ಪನ್ನ ಸಾಲ ಮತ್ತು ವಾಹನ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿಗಳಿಗೆ ಮಾತ್ರವೇ ಈ ಚಕ್ರಬಡ್ಡಿ ಮನ್ನಾ ಅನ್ವಯಿಸುತ್ತದೆ.

ಸರಕಾರದ ಕ್ರಮವು ಪರಮೋಚ್ಛ ನ್ಯಾಯಾಲಯಕ್ಕೆ ತೃಪ್ತಿ ತಂದಿರಲಿಲ್ಲ ಮತ್ತು ರಿಯಲ್ ಎಸ್ಟೇಟ್ ಹಾಗೂ ವಿದ್ಯುತ್ ಉತ್ಪಾದಕರ ಆತಂಕವನ್ನು ಹೊಸ ಅಫಿದವಿತ್ ನಲ್ಲಿ ಪರಿಗಣಿಸುವಂತೆ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ನಿರ್ದಿಷ್ಟ ವಲಯಗಳಿಗೆ ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಕೇಳಲಾಗದು ಎಂದು ಸರಕಾರ ಹೇಳಿದೆ.

- Advertisement -