ಮೆಟ್ರೋ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ: ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವ ಸುನೀಲ್ ಕುಮಾರ್ ಸೂಚನೆ

Prasthutha|

ಬೆಂಗಳೂರು: ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ರೈಲು ಸಂಚಾರದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದ್ದು, ಇದಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಇದಕ್ಕೆ ಸೂಕ್ತ ವಿವರಣೆ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನೀಲ್ ಕುಮಾರ್ ಮೆಟ್ರೋ ರೈಲು ನಿಗಮಕ್ಕೆ ಸೂಚಿಸಿದ್ದಾರೆ.

- Advertisement -


ಈ ಸಂಬಂಧ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಕುಮಾರ್ ಅವರಿಗೆ ಪತ್ರ ಬರೆದಿರುವ ಸಚಿವರು, ದಿನಾಂಕ 29.08.2021 ರಂದು ನಾಯಂಡಹಳ್ಳಿ – ಕೆಂಗೇರಿ ನಡುವಿನ ಮಟೊ ರೈಲು ಸಂಚಾರದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆಯ ಕಡಗಣನೆಯನ್ನು ಗಮನಿಸಲಾಗಿರುತ್ತದೆ. ಸಮಾರಂಭದ ಮುಖ್ಯ ವೇದಿಕೆಯ ಫಲಕಗಳಲ್ಲಿ ಹಾಗೂ ಹಿಂಬದಿಯ ಪರದೆಯಲ್ಲಿ ಕನ್ನಡ ಭಾಷೆಯನ್ನು ಬಳಸಿರಲಿಲ್ಲ ಎಂಬುದು ನಿಜಕ್ಕೂ ಗಂಭೀರವಾದ ಸಂಗತಿ. ರಾಜ್ಯದ ರಾಜಧಾನಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನು ಕಡೆಗಣಿಸಿದ್ದು ಗಂಭೀರವಾದ ಲೋಪವಾಗಿದೆ. ಈಗಾಗಲೇ ಆಡಳಿತ ಭಾಷೆಯಾಗಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದರೂ ಇಂತಹ ಕರ್ತವ್ಯ ಲೋಪವಾಗಿರುವುದು ನಿಜಕ್ಕೂ ದುರದೃಷ್ಟಕರ ಎಂದು ತಿಳಿಸಿದ್ದಾರೆ.


ಈ ಬಗ್ಗೆ ಗಮನ ಹರಿಸಬೇಕಾದದ್ದು ನಿಮ್ಮ ಹಾಗೂ ನಿಮ್ಮ ಅಧೀನದಲ್ಲಿರುವ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೂ ಈ ವಿಚಾರದಲ್ಲಿ ನಿರ್ಲಕ್ಷ ತೋರಿರುವುದನ್ನು ಸಹಿಸಲಾಗದು. ಭಾಷೆ ಒಂದು ಭಾವನಾತ್ಮಕ ವಿಚಾರ. ಅದರಲ್ಲಿಯೂ ಆಡಳಿತ ಭಾಷೆಯ ಬಗ್ಗೆ ನಿರ್ಲಕ್ಷ ತೋರಿದ್ದೇ ಆದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬಳಸಬೇಕಾದ ಸರ್ಕಾರದ ಇಲಾಖೆಗಳು ಈ ರೀತಿಯ ಲೋಪವೆಸಗುವುದು ಗಂಭೀರ ಕರ್ತವ್ಯಲೋಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ತಾವು ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಇದಕ್ಕೆ ಸೂಕ್ತ ವಿವರಣೆ ನೀಡಬೇಕೆಂದು ಸಚಿವರು ಸೂಚಿಸಿದ್ದಾರೆ.



Join Whatsapp