ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿ ಮೇಲೆ ಹಲ್ಲೆ ಖಂಡಿಸಿ CFI ನಿಂದ ದಿಢೀರ್ ಪ್ರತಿಭಟನೆ

Prasthutha|

ಪುತ್ತೂರು: ಕೊಂಬೆಟ್ಟು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ನಿರಂತರವಾಗಿ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಮಂಗಳವಾರ ದಿಢೀರ್ ಆಗಿ ಪುತ್ತೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

- Advertisement -


ಕ್ಯಾಂಪಸ್ ಫ್ರಂಟ್ ಮುಖಂಡ ಸವಾದ್ ಕಲ್ಲರ್ಪೆ ಮಾತನಾಡಿ, ಕೊಂಬೆಟ್ಟು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಇಂದು ಕೂಡ ಪ್ರಥಮ ಪಿಯುಸಿ ವಿದ್ಯಾರ್ಥಿ ಮುಹಮ್ಮದ್ ಆದಿಲ್ ಎಂಬ ವಿದ್ಯಾರ್ಥಿಯ ಮೇಲೆ ಸಹಪಾಠಿಯೊಂದಿಗೆ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಗಾಯಾಳು ವಿದ್ಯಾರ್ಥಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಕಳೆದ ಒಂದು ವಾರದಲ್ಲಿ ಹಲ್ಲೆಗೈದ ಮೂರನೇ ಪ್ರಕರಣ ಇದಾಗಿದೆ. ಈ ಹಿಂದೆಯೂ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ತಿಳಿಸಿದರು.


ಇತ್ತೀಚೆಗೆ ಹಿಂದೂ ಜಾಗರಣ ವೇದಿಕೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಇತರ ಸಂಘಪರಿವಾರದ ಮುಖಂಡರು ಕಾಲೇಜಿನಲ್ಲಿ ‘ಹಿಂದುತ್ವಕ್ಕಾಗಿ ಯುವ ಜನತೆ’ ಎಂಬ ಕಾರ್ಯಕ್ರಮ ನಡೆಸಿದ್ದರು. ಈ ಕಾರ್ಯಕ್ರಮದ ಬಳಿಕ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಹಲ್ಲೆ ನಡೆಸುತ್ತಿರುವ ಘಟನೆ ಹೆಚ್ಚಾಗಿದೆ. ಪ್ರಾಂಶುಪಾಲರು ಕೂಡ ಇಂತಹ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪುತ್ತೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.
ಪೊಲೀಸ್ ಅಧಿಕಾರಿಗಳು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಯಿತು.

Join Whatsapp