ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಆಕ್ಷೇಪಣೆ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನೋಟಿಸ್

Prasthutha|

ತಿರುವನಂತಪುರಂ: ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

- Advertisement -


ನ್ಯಾಯಮೂರ್ತಿ ಎನ್. ನಗರೇಶ್ ಅವರು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಈ ಪ್ರಕರಣದಲ್ಲಿ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಆ ಬಳಿಕ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲಿದೆ.

ತಾನು ಖಾಸಗಿ ಆಸ್ಪತ್ರೆಯಲ್ಲಿ ದರ ಪಾವತಿ ಮಾಡಿ ಲಸಿಕೆ ಪಡೆದಿದ್ದು, ನಂತರ ಈ ಕುರಿತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದೇನೆ. ಪ್ರಮಾಣಪತ್ರದಲ್ಲಿ ಪ್ರದಾನಿ ಮೋದಿಯವರ ವರ್ಣಚಿತ್ರವಿದ್ದು ಅದರೊಟ್ಟಿಗೆ “ ಔಷಧ ಮತ್ತು ಕಠಿಣ ನಿಯಂತ್ರಣ” ಎಂದು ಮಲಯಾಳಂನಲ್ಲಿಯೂ, ‘ಭಾರತವು ಒಗ್ಗೂಡಿ ಕೋವಿಡ್ ಅನ್ನು ಸೋಲಿಸಲಿದೆ’ ಎಂದು ಇಂಗ್ಲಿಷ್ ನಲ್ಲಿಯೂ ಬರೆದಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳೆಂದು ಸೂಚಿಸಲಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ಹಾಗೂ ವಕೀಲ ಅಜಿತ್ ಜಾಯ್ ಅವರು ಅರ್ಜಿ ಸಲ್ಲಿಸಿದ್ದಾರೆ. ಮೋದಿ ಅವರ ಭಾವಚಿತ್ರವಿರುವ ಲಸಿಕೆ ಪ್ರಮಾಣಪತ್ರ ನೀಡಲಾಗಿದ್ದು ಕೋವಿಡ್ ವಿರುದ್ಧದ ರಾಷ್ಟ್ರೀಯ ಅಭಿಯಾನವನ್ನು ಅವರ ಮಾಧ್ಯಮ ಅಭಿಯಾನವಾಗಿ ಪರಿವರ್ತಿಸಲಾಗಿದೆ ಎಂಬ ಕಳವಳ ತಮ್ಮದು ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Join Whatsapp