2000 ಕಿ.ಮೀ.ವರೆಗೂ ದಾಳಿ ನಡೆಸಬಲ್ಲ ಅತ್ಯಾಧುನಿಕ ಕ್ಷಿಪಣಿ
ಹೊಸದಿಲ್ಲಿ : ಒಡಿಶಾ ಕರಾವಳಿ ಪ್ರದೇಶದಲ್ಲಿ ಭಾರತ ಇಂದು (ಜೂನ್ 28 ಸೋಮವಾರ) ನೂತನ ಅತ್ಯಾಧುನಿಕ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ್ದು, ಇದು ಎರಡು ಸಾವಿರ ಕಿಲೋ ಮೀಟರ್ ದೂರದವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವುದಾಗಿ ವರದಿ ತಿಳಿಸಿದೆ.
ಈ ಹೊಸ ಪರಮಾಣು ಸಾಮರ್ಥ್ಯದ ಕ್ಷಿಪಣಿಯನ್ನು ಸಂಕೀರ್ಣ ಉಪಕರಣಗಳಿಂದ ತಯಾರಿಸಲ್ಪಟ್ಟಿದ್ದು, ನೂತನ ಅಗ್ನಿ ಪ್ರೈಮ್ ಕ್ಷಿಪಣಿಯಲ್ಲಿ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು DRDO ಅಧಿಕಾರಿಗಳು ತಿಳಿಸಿರುವುದಾಗಿ ANI ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಅತ್ಯಾಧುನಿಕ ತಂತ್ರಜ್ಞಾನದ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಸೋಮವಾರ ಒಡಿಶಾ ತೀರದಲ್ಲಿ ಬೆಳಗ್ಗೆ 10.55ಕ್ಕೆ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕ್ಷಿಪಣಿ ಉಡಾವಣೆ ಮತ್ತು ಸಾಮರ್ಥ್ಯದ ಪರೀಕ್ಷೆಗಾಗಿ ಪೂರ್ವ ಕರಾವಳಿಯುದ್ಧಕ್ಕೂ ಇರುವ ವಿವಿಧ ಟೆಲಿಮೆಟ್ರಿ ಮತ್ತು ರಾಡಾರ್ ಕೇಂದ್ರಗಳು ಪರಿಶೀಲನೆ ನಡೆಸಿರುವುದಾಗಿ ವರದಿ ಹೇಳಿದೆ. ಅಗ್ನಿ ಪ್ರೈಮ್ ಕ್ಷಿಪಣಿ ಸೂಕ್ತ ಪಥದಲ್ಲಿ ಚಲಿಸಿದ್ದು, ಉನ್ನತ ಮಟ್ಟದ ನಿಖರತೆಯೊಂದಿಗೆ ಗುರಿ ತಲುಪಿರುವುದಾಗಿ DRDO ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ವಿವರಿಸಿದೆ.