ದಯಾನಂದ ಪೈ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅಡ್ಡಿ, ಬೆದರಿಕೆ: ಸಂತ್ರಸ್ತೆಯಿಂದ ದೂರು ದಾಖಲು

Prasthutha|

- Advertisement -

ಮಂಗಳೂರು: ದಯಾನಂದ ಪೈ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಕಾಲೇಜು ಗೇಟ್ ಬಳಿ ತಡೆವೊಡ್ಡಿ, ಬೆದರಿಕೆ ಹಾಕಿ, ಧರ್ಮನಿಂದನೆಗೈದ ಎಬಿವಿಪಿಯ 15ಕ್ಕೂ ಅಧಿಕ ಕಾರ್ಯಕರ್ತರ ವಿರುದ್ಧ ಸಂತ್ರಸ್ತೆ ವಿದ್ಯಾರ್ಥಿನಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದಯಾನಂದ ಪೈ ವಿದ್ಯಾರ್ಥಿನಿಯಾಗಿರುವ ದೂರುದಾರೆ ಮಾರ್ಚ್ 3ರಂದು ಪರೀಕ್ಷೆ ಬರೆಯುತ್ತಿರುವಾಗ ಏಕಾಏಕಿ ಎಬಿವಿಪಿ 15ಕ್ಕೂ ಹೆಚ್ಚಿನ ಕಾರ್ಯಕರ್ತರು ಪರೀಕ್ಷೆ ಬರೆಯದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿ ಪರೀಕ್ಷೆ ಬರೆಯಲು ಅಡ್ಡಿ ಪಡಿಸಿದ್ದರು. ಮಾರ್ಚ್ 4ರಂದು ಕೂಡ ಕಾಲೇಜು ಗೇಟ್ ಬಳಿ ತಡೆವೊಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೇಶದ್ರೋಹಿ ಎಂದು ಕರೆದು ಧರ್ಮ ನಿಂದನೆ ಗೈದಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

ವಿದ್ಯಾರ್ಥಿನಿಗೆ ಎಬಿವಿಪಿ ಕಾರ್ಯಕರ್ತರು ಅಡ್ಡಿಪಡಿಸುತ್ತಿರುವ ವೀಡಿಯೋ ವೈರಲ್ ಆಗಿದೆ.

ಈ ಮಧ್ಯೆ, ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿನಿಗೆ ಅಡ್ಡಿಪಡಿಸಿದ ಎಬಿವಿಪಿ ಕಾರ್ಯಕರ್ತ ಕೂಡ ಬಂದರು ಠಾಣೆಗೆ ದೂರು ನೀಡಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಪರೀಕ್ಷೆ ಬರೆಯಲು ಅಡ್ಡಿಪಡಿಸಿದ ಬಗ್ಗೆ ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿರುವ ಬಗ್ಗೆ ವಿದ್ಯಾರ್ಥಿಯೋರ್ವ ದೂರು ನೀಡಿದ್ದಾರೆ. ಎರಡೂ ದೂರುಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಅಭಿಪ್ರಾಯ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Join Whatsapp