ನಮ್ಮ ಪಾದಯಾತ್ರೆ ತಪ್ಪು ಎಂದಾದರೆ ಮೇಕೆದಾಟು ಯೋಜನೆಗೆ 1000 ಕೋಟಿ ಘೋಷಣೆ ಮಾಡಿದ್ದು ಯಾಕೆ?: ಡಿಕೆಶಿ

Prasthutha|

►ಇದು ಬೊಮ್ಮಾಯಿಯವರ ಕೊನೆಯ ಬಜೆಟ್ ಎಂದ ಕೆಪಿಸಿಸಿ ಅಧ್ಯಕ್ಷ

- Advertisement -

ಬೆಂಗಳೂರು: ಇದು ಬಸವರಾಜ ಬೊಮ್ಮಾಯಿ ಅವರ ಮೊದಲ ಹಾಗೂ ಕಡೇಯ ಬಜೆಟ್ ಆಗಿದೆ. ಅವರು ಚುನಾವಣೆ ಪ್ರಣಾಳಿಕೆಯನ್ನು ಈ ಬಜೆಟ್ ನಲ್ಲಿ ಇಟ್ಟಿದ್ದಾರೆ. ಮುಖ್ಯಮಂತ್ರಿಯಾದವರು ಬಜೆಟ್ ಅನ್ನು ಜನರ ಮುಂದೆ ಇಡುವಾಗ ಅದರಲ್ಲಿ ಸ್ಫೂರ್ತಿ, ದೂರದೃಷ್ಟಿ, ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಆತ್ಮ ವಿಶ್ವಾಸ ಇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಜೆಟ್ ಮಂಡನೆಯಲ್ಲಿ ಆತ್ಮಬಲ ಕುಗ್ಗಿತ್ತು. ಅವರ ಮಾತಿನಲ್ಲಿ ತಾನು ಮಂಡನೆ ಮಾಡುತ್ತಿರುವ ಬಜೆಟ್ ಜಾರಿ ಮಾಡಲು ಅಸಾಧ್ಯ ಎಂಬ ಅಳುಕು ಎದ್ದು ಕಾಣುತ್ತಿತ್ತು ಎಂದು ಹೇಳಿದರು.

- Advertisement -

ನಾವು 9 ದಿನ ಪಾದಯಾತ್ರೆ ಮಾಡಿ ಬಂದಿದ್ದೀವಿ. ಪಾದಯಾತ್ರೆ ಮಾಡಿದರೆ ನೀರು ಹರಿಯುತ್ತದಾ? ಎಂದು ಇದಕ್ಕೆ ವಿವಿಧ ರೀತಿ ಟೀಕೆ ಮಾಡಿದ್ದರು. ನಾವು ಅದನ್ನೆಲ್ಲ ಗೌರವದಿಂದ ಸ್ವೀಕಾರ ಮಾಡಿದ್ದೆವು. ನಮ್ಮ ಪಾದಯಾತ್ರೆ ಸರಿ ಇಲ್ಲ ಎಂದ ಮೇಲೆ, ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಗೆ ಒಂದು ಸಾವಿರ ಕೋಟಿ ಘೋಷಣೆ ಮಾಡಿದ್ದು ಯಾಕೆ? ಈ ಹೋರಾಟಕ್ಕೆ ಸಹಕರಿಸಿದ ರೈತರು, ಬೆಂಗಳೂರಿನ ನಾಗರೀಕರು, ಮಹಿಳೆಯರು ಹಾಗೂ ಎಲ್ಲ ವರ್ಗದವರ ಒತ್ತಾಯ, ಜನಬೆಂಬಲಕ್ಕೆ ಮಣಿದು ರಾಜ್ಯ ಸರ್ಕಾರ 1 ಸಾವಿರ ಕೋಟಿ ರೂಪಾಯಿ ಕೊಟ್ಟು ಇದು ಪ್ರಮುಖ ಯೋಜನೆ ಎಂದು ಒಪ್ಪಿಕೊಂಡಿದೆ ಎಂದರು.

ಬಜೆಟ್ ಮೇಲಿನ ಚರ್ಚೆಗೆ ಸಿಎಂ ಅವರು ಉತ್ತರ ನೀಡುವಾಗ, ಪರಿಸರ ಇಲಾಖೆ ಅನುಮತಿ ಯಾವಾಗ ಪಡೆಯುತ್ತೀರಿ? ಯಾವಾಗ ಟೆಂಡರ್ ಕರೆಯುತ್ತೀರಿ? ಯಾವಾಗ ಕೆಲಸ ಆರಂಭ ಮಾಡುತ್ತೀರಿ? ಎಂಬ ಕಾಲಮಿತಿ ಬಗ್ಗೆ ತಿಳಿಸಲಿ. ಆಗ ಮಾತ್ರ ಜನ ಅವರನ್ನು ನಂಬುತ್ತಾರೆ. ಮುಖ್ಯಮಂತ್ರಿಗಳೇ ನೀವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಎಲ್ಲ ಜಾತಿ, ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದಾಗಿ ಎಂದು ಪ್ರತಿಜ್ಞೆ ಮಾಡಿದ್ದೀರಿ. ಆದರೆ ನೀವು ಅಲ್ಪಸಂಖ್ಯಾತರನ್ನು ನೋಡುತ್ತಿರುವ ರೀತಿ ನಿಮ್ಮ ಪ್ರತಿಜ್ಞೆಗೆ ವಿರುದ್ಧವಾಗಿದೆ. ಈ ಬಜೆಟ್ ಸಂವಿಧಾನ ವಿರೋಧಿಯಾಗಿದೆ ಎಂದು ಡಿಕೆಶಿ ಹೇಳಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ 3 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆವು. ಆದರೆ ನೀವು ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ತೆಗೆದುಹಾಕಿದ್ದೀರಿ. ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗೆ 50 ಕೋಟಿ, ಜೈನ, ಬೌದ್ಧ ಧರ್ಮ ಹಾಗೂ ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 50 ಕೋಟಿ ರೂ. ಕೊಟ್ಟಿದ್ದೀರಿ. ಮುಖ್ಯಮಂತ್ರಿಗಳೇ ಬೌದ್ಧ ಧರ್ಮದಲ್ಲಿರುವ ಶೇ.90 ರಷ್ಟು ಜನ ದಲಿತರು. ರಾಜ್ಯದಲ್ಲಿ ಸಿಖ್ ಸಮುದಾಯ ಕಡಿಮೆ ಇರಬಹುದು. ಆದರೆ ಜೈನ ಸಮುದಾಯದವರು ಬಹಳಷ್ಟು ಜನ ಇದ್ದಾರೆ. ಅಂತಹುದರಲ್ಲಿ ಇಡೀ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ಪಡೆದವರಿಗೆ ಬಹಳ ಅನ್ಯಾಯ, ನೋವುಂಟು ಮಾಡಿದ್ದೀರಿ ಎಂದು ಕುಟುಕಿದರು.

ಹಿಂದುಳಿದವರು, ಪರಿಶಿಷ್ಟರಿಗೆ ನಾವು ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡುತ್ತಿದ್ದೆವು. ಆದರೆ ನೀವು ಎಲ್ಲ ಅನುದಾನ ಕಡಿತ ಮಾಡುತ್ತಿದ್ದೀರಿ. ನೀವು ಯಾರಿಗೂ ಪ್ರತ್ಯೆಕ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿಲ್ಲ. ಶ್ರಮಿಕರು, ಸಾಂಪ್ರದಾಯಿಕ ವೃತ್ತಿ ಅವಲಂಬಿತರಿಗೆ ಅನುಕೂಲ ಮಾಡಿಕೊಡಲು ನಿಮ್ಮಿಂದ ಸಾಧ್ಯವಾಗಿಲ್ಲ. ಈ ರಾಜ್ಯದ ಯುವಕರಿಗೆ ನಿಮ್ಮ ಯೋಜನೆ ಏನು? ಉದ್ಯೋಗ ಸೃಷ್ಟಿಗೆ ನಿಮ್ಮ ಕ್ರಮ ಏನು? ವಿದ್ಯಾವಂತ ನಿರುದ್ಯೋಗಿಗಳಿಗೆ ಸಹಾಯ ಏನು? ಉದ್ಯೋಗ ನೀಡುವವರಿಗೆ, ಉದ್ಯೋಗ ಪಡೆಯುವವರಿಗೆ ಏನೂ ನೆರವು, ಯೋಜನೆ ಇಲ್ಲ. ಈ ರೀತಿ ಯುವಕರನ್ನು ನಿರ್ಲಕ್ಷ್ಯ ಮಾಡಿದ ಬಜೆಟ್ ಇದೇ ಮೊದಲು. ಕೇಂದ್ರ ಸರ್ಕಾರದವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂದರು. ಅದು ಸಾಧ್ಯವಾಗಲಿಲ್ಲ. ನಿರ್ಮಲಾ ಸೀತರಾಮನ್ ಅವರು ಇದನ್ನು 60 ಲಕ್ಷಕ್ಕೆ ಇಳಿಸಿದರು. ನೀವು ಎಷ್ಟು ಉದ್ಯೋಗ ಕೊಟ್ಟಿದ್ದೀರಿ ಎಂದು ಹೇಳುತ್ತಿಲ್ಲ.

ಪ್ರಧಾನ ಮಂತ್ರಿಗಳು ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಈಗ ನೀವು ಹೇಳುತ್ತಿದ್ದೀರಿ. ಅದನ್ನು ಹೇಗೆ ಮಾಡುತ್ತೀರಿ ಎಂದು ಹೇಳಿ. ಅದಕ್ಕಾಗಿ ಏನಾದರೂ ಕ್ರಮ ಕೈಗೊಂಡಿದ್ದೀರಾ? ರೈತರಿಗೆ ಇಂತಹ ಬೆಳೆ ಬೆಳೆಯಿರಿ, ರಸಗೊಬ್ಬರ ಪೂರೈಸುತ್ತೇನೆ, ಬೀಜ ಪೂರೈಸುತ್ತೇನೆ ಎಂದು ಮಾರ್ಗದರ್ಶನ ಏನಾದರೂ ನೀಡಿದ್ದೀರಾ?  ನೀವು ತೆರಿಗೆ ವಸೂಲಿ ಮಾಡಲು ಕಾಲಿಗೆ ಹಾಕುವ ಚಪ್ಪಲಿಯಿಂದ ಎಲ್ಲ ವಸ್ತುಗಳಿಗೂ ಎಂಆರ್ ಪಿ ಹಾಕಿದ್ದೀರಿ. ಅದೇ ರೀತಿ ರೈತರ ಬೆಳೆಗೆ ಎಂಆರ್ ಪಿ ಯಾಕೆ ನಿಗದಿ ಮಾಡಿಲ್ಲ? ಎಂದು ಪ್ರಶ್ನಿಸಿದರು.

ರೈತರಿಗೆ ಅನುದಾನವಾದರೂ ನೀಡಬೇಕು ಅಥವಾ ಬೆಂಬಲ ಬೆಲೆ ಹೆಚ್ಚಿಸಬೇಕು. ಹೈನುಗಾರಿಕೆಯಲ್ಲಿ ಬದುಕುತ್ತಿರುವ ರೈತರ ವೆಚ್ಚ ಎಷ್ಟು ಏರಿದೆ ಗೊತ್ತಿದೆಯಾ? ಆತ ಹುಲ್ಲು, ತಿಂಡಿ, ಬೂಸ ಹಾಕಿ ಪಶುಗಳ ನಿರ್ವಹಣೆ ಮಾಡುವುದು ಎಷ್ಟು ಕಷ್ಟ ಇದೆ ಎಂದು ಗೊತ್ತಿದೆಯಾ? ಎರಡು ಹಸು ಕಟ್ಟಿಕೊಂಡು ಜೀವನ ಮಾಡುತ್ತಿರುವವರಿಗೆ ಧೈರ್ಯ ತುಂಬಲು ಎರಡು ಮಾತುಗಳನ್ನೂ ಆಡಿಲ್ಲ.

ಬಂಡವಾಳಶಾಹಿಗಳನ್ನು ಆಕರ್ಷಿಸಲು ನೀವು ನವೆಂಬರ್ ನಲ್ಲಿ ಯೋಜನೆ ಹಾಕುತ್ತಿದ್ದೀರಿ. ನೀವು ಕೇಸರಿಕರಣ ಹೆಸರಲ್ಲಿ ಮಾಡಿದ ಕೋಮುಗಲಭೆ, ರಾಜಕೀಯಕ್ಕಾಗಿ ಆಳಂದದಲ್ಲಿ, ಶಿವಮೊಗ್ಗದಲ್ಲಿ, ಕರಾವಳಿ ಭಾಗದಲ್ಲಿ ನಿಮ್ಮ ನಾಯಕರು ಏನೇನು ಮಾಡಿದರು, ಮಾಡುತ್ತಿದ್ದಾರೆ ಎಂಬುದನ್ನು ನೆನೆಸಿಕೊಳ್ಳಿ. ಇಷ್ಟೇಲ್ಲಾ ಆದಮೇಲೆ ಯಾವುದೇ ಬಂಡವಾಳ ಹೂಡಿಕೆದಾರರು ಬರುವುದಿಲ್ಲ. ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಬೆಂಬಲಿಸಿದ ನೀವು ರಾಜ್ಯಕ್ಕೆ ಕಪ್ಪುಚುಕ್ಕೆ ಇಟ್ಟಿರಿ. ಬಜೆಟ್  ನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ್ದೀರಾ? ನಿಮಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ. ರೈತರು, ಶ್ರಮಿಕರು, ಹಿಂದುಳಿದವರನ್ನು ಉಳಿಸಿಕೊಳ್ಳಲು ನಿಮ್ಮಿಂದ ಸಾಧ್ಯವಾಗಿಲ್ಲ. ಯಾರೂ ಬೇಡ ಸರ್ಕಾರಿ ನೌಕರರ ವೇತನ ಆಯೋಗದ ಬಗ್ಗೆ ಮಾತನಾಡಿದ್ದೀರಾ?

ಮನೆ ಕಟ್ಟುವವರಿಗೆ ಕಬ್ಬಿಣ, ಸೀಮೆಂಟ್ ಬೆಲೆ ಇಳಿಸಲು ಕ್ರಮ ಕೈಗೊಂಡಿದ್ದೀರಾ? ಇದು ಚುನಾವಣೆಗಾಗಿ ಮಾಡಿರುವ ಘೋಷಣೆಗಳ ಬಜೆಟ್ ಅಷ್ಟೇ. ಇದರಲ್ಲಿ ಕೈಗಾರಿಕೆ, ಕೃಷಿ, ತೋಟಗಾರಿಕೆ ಯಾವುದಕ್ಕೂ ಆದ್ಯತೆ ಇಲ್ಲ.

ಇನ್ನು ಪೇ ಅಂಡ್ ಪ್ಲೇ ಮಾದರಿಯಲ್ಲಿ ಕ್ರೀಡಾಂಗಣವನ್ನು ಹಣ ಕೊಟ್ಟು ಬಳಸಬೇಕಂತೆ. ಇದು ಸ್ವಾವಲಂಬನೆಯಂತೆ. ಯುವಕರಿಗೆ ಶಿಕ್ಷಣ, ಕ್ರೀಡೆ, ಆರೋಗ್ಯ ನೀಡುವುದು ನಮ್ಮ ಜವಾಬ್ದಾರಿಯಲ್ಲವೇ? ಕೇಂದ್ರದವರು ಖಾಸಗೀಕರಣ, ನೀವು ವಾಣಿಜ್ಯಕರಣಕ್ಕೆ ಮುಂದಾಗಿದ್ದೀರಿ.

ದೇವಾಲಯಗಳನ್ನು ನಿಯಂತ್ರಣ ಮಾಡುತ್ತಿದ್ದೀರಿ. ಸಾಲದ ಪ್ರಮಾಣ ಹೆಚ್ಚಿಸುತ್ತಿದ್ದೀರಿ. ಕೇಂದ್ರದಿಂದ ತರಬೇಕಾದ ಹಣ ತರಲಿಲ್ಲ. ಅವರು ಬಜೆಟ್ ನಲ್ಲೂ ಘೋಷಣೆ ಮಾಡಲಿಲ್ಲ. ಕೋವಿಡ್ ನಿರ್ವಹಣೆಯನ್ನು ಬಹಳ ಚೆನ್ನಾಗಿ ಮಾಡಿದ್ದೀವಿ ಎಂದಿದ್ದೀರಿ.  ಕೋವಿಡ್ ನಲ್ಲಿ 20 ಲಕ್ಷ ಕೋಟಿ ರು. ಪರಿಹಾರ ಯಾರಿಗೆ ಸಿಕ್ತು? ಸತ್ತ 4 ಲಕ್ಷ ಜನರ ಕುಟುಂಬಗಳಿಗೆ ಪರಿಹಾರ ಕೊಟ್ಟರಾ? ಬರಿ 40  ಸಾವಿರ ಜನರಿಗೆ 1 ಲಕ್ಷ ಕೊಡುತ್ತೇವೆ ಎಂದು ಹೇಳಿ ಅದನ್ನು ಸರಿಯಾಗಿ ನೀಡಿಲ್ಲ. ಆಸ್ಪತ್ರೆಯಲ್ಲಿ ದಾಖಲಾದವರಿಗೆ ನೆರವು ಕೊಟ್ಟಿದ್ದೀರಾ? 2 ವರ್ಷ ಬಂದ್ ಮಾಡಿ ನಷ್ಟ ಅನುಭಿಸಿದವರಿಗೆ 2 ಸಾವಿರ 5 ಸಾವಿರ ಕೊಡುತ್ತೀವಿ ಎಂದು ಹೇಳಿದಿರಿ. ಆದರೆ ಅದನ್ನು ಕೊಟ್ಟಿಲ್ಲ. ಕೇವಲ ಚಪ್ಪಾಳೆ ತಟ್ಟಿಸಿ, ಜಾಗಟೆ ಬಾರಿಸಿ ಭಾವನಾತ್ಮಕ ವಿಚಾರ ತೆಗೆದುಕೊಂಡು ಹೋಗುತ್ತಿದ್ದೀರಿ.  ಇದು ಚುನಾವಣೆಗಾಗಿ ಮಂಡನೆಯಾಗಿರುವ ಬಜೆಟ್. ಇದರಿಂದ ಜನರಿಗೆ ಯಾವುದೇ ಸಹಾಯವಾಗುವುದಿಲ್ಲ. ಇದರಿಂದ ನಮಗೆ ನಿರಾಸೆಯಾಗಿದೆ. ಕಳೆದ ವರ್ಷ ಇದೇ ರೀತಿ ತೋರಿಸಿದ ಬಜೆಟ್ ಅನ್ನು ನೀವು ಕಾರ್ಯರೂಪಕ್ಕೆ ತರಲು ಆಗಿಲ್ಲ. ನೀವು ನಿಮಗೆ ಬೇಕಾದವರಿಗೆ ಮಾತ್ರ ಸ್ವಲ್ಪ ಹಣ ನೀಡಿದ್ದು, ಕಾಂಗ್ರೆಸ್ ಹಾಗೂ ದಳದವರನ್ನು ಉಪೇಕ್ಷೆ ಮಾಡಿದ್ದೀರಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Join Whatsapp