ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಟಿಟಿಕೆ ಕಾಮಗಾರಿಗಳನ್ನು ದೊಡ್ಡ ಗುತ್ತಿಗೆದಾರರಿಗೆ ನೀಡುವುದನ್ನು ನಿಲ್ಲಿಸಿ: ಸಂಘ ಒತ್ತಾಯ

Prasthutha|

ಬೆಂಗಳೂರು: ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ 1 ರಿಂದ 5 ಲಕ್ಷ ರೂಪಾಯಿ ಮೊತ್ತದ ಟಿಟಿಕೆ ಕಾಮಗಾರಿಗಳನ್ನು ದೊಡ್ಡ ಗುತ್ತಿಗೆದಾರರಿಗೆ ನೀಡುತ್ತಿದ್ದು, ಇದರಿಂದ ಸಣ್ಣ ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಆರೋಪಿಸಿದೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ. ರಮೇಶ್, 1 ರಿಂದ 5 ಲಕ್ಷ ರೂಪಾಯಿವರೆಗಿನ ಕಾಮಗಾರಿಗಳನ್ನು ಸಣ್ಣ ಗುತ್ತಿಗೆದಾರರಿಗೆ ನೀಡದೇ ಎಲ್ಲಾ ಕಾಮಗಾರಿಗಳನ್ನು ಒಟ್ಟುಗೂಡಿಸಿ ದೊಡ್ಡ ದೊಡ್ಡ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಇದರಿಂದ ಶೇ. 5ರಷ್ಟು ದೊಡ್ಡ ಪ್ರಮಾಣದ ಗುತ್ತಿಗೆದಾರರಿಗೆ ಅನುಕೂಲವಾಗುತ್ತಿದೆ. ಆದರೆ ಉಳಿದ 30 ಸಾವಿರ ಸಣ್ಣ ಗುತ್ತಿಗೆದಾರರು ಮತ್ತು ಅವರನ್ನು ಅವಲಂಬಿಸಿರುವ ಹತ್ತು ಲಕ್ಷ ಕಾರ್ಮಿಕರಿಗೆ ಉದ್ಯೋಗ ಇಲ್ಲದೇ ತೊಂದರೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆ.ಇ.ಆರ್.ಸಿ ಕೂಡ ಟಿಟಿಕೆ ಕಾಮಗಾರಿಗಳನ್ನು ನಿಯಮಬದ್ಧವಾಗಿ ನೀಡುವಂತೆ ಸೂಚಿಸಿದೆ. ಟಿಟಿಕೆ ಕಾಮಗಾರಿಗಳಲ್ಲಿ ಕೇಂದ್ರೀಕರಣ ವ್ಯವಸ್ಥೆ ತೆಗೆದುಹಾಕಿ, ವಿಕೇಂದ್ರೀಕರಣ ವ್ಯವಸ್ಥೆಯನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳು ಜಾರಿಗೊಳಿಸುವಂತೆ ಸರ್ಕಾರ ಸೂಚಿಸಬೇಕು ಎಂದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 100 ದಿನಗಳ ಬೆಳಕು ಯೋಜನೆಯಡಿ ಸ್ಥಳೀಯ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಿದ್ದು, ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಈ ಕಾಮಗಾರಿಯಲ್ಲಿ ಬಳಸಿರುವ ಕಾಮಗಾರಿ ವೆಚ್ಚ, ಸಾಮಗ್ರಿಗಳ ದರ ಹೆಚ್ಚಾಗಿದ್ದು, ನಮ್ಮ ಬೇಡಿಕೆಯನ್ನು ಪರಿಗಣಿಸಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು 5,140 ರೂಪಾಯಿ ವ್ಯಾತ್ಯಾಸ ದರ ನಿಗದಿ ಮಾಡಿದ್ದಾರೆ. ಇದನ್ನು ಇತರೆ ವಿದ್ಯುತ್ ಸರಬರಾಜು ಕಂಪೆನಿಗಳಲ್ಲೂ ಜಾರಿಗೆ ತರಲು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

- Advertisement -

ಇದಲ್ಲದೇ ವಿದ್ಯುತ್ ಕಾಮಗಾರಿಗಳ ಹಣಕಾಸು ಮಿತಿ ಕುರಿತು ಒಂದೊಂದು ಕಂಪೆನಿ ಒಂದೊಂದು ರೀತಿಯಲ್ಲಿ ದರ ನಿಗದಿ ಮಾಡಿದ್ದು, ಇದನ್ನು ಗುಣಮಟ್ಟದ ಕಾಮಗಾರಿ ಮತ್ತು ಸುರಕ್ಷಿತ ಕ್ರಮಗಳಿಗೆ ಒಳಪಟ್ಟು ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಒಂದೇ ರೀತಿಯ ದರ ನಿಗದಿ ಮಾಡಬೇಕು ಎಂದು ಸಿ. ರಮೇಶ್ ಹೇಳಿದರು.

ವಿದ್ಯುತ್ ಪರಿವೀಕ್ಷಣಾಲಯದಲ್ಲಿ ವಿದ್ಯುತ್ ಗುತ್ತಿಗೆ ಪರವಾನಗಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಎಂದು ನಿಗದಿ ಮಾಡಲಾಗಿದ್ದು, ಈ ನಿಯಮವನ್ನು ತೆಗೆದುಹಾಕಬೇಕು. ತಾತ್ಕಾಲಿಕ ಮತ್ತು ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅಳವಡಿಸುವ ಮಾಪಕಗಳ ಕೊರತೆ ಎದುರಾಗಿದ್ದು, ಈ ಸಮಸ್ಯೆಗೆ ಕೂಡಲೇ ಪರಿಹಾರ ದೊರಕಿಸಿಕೊಡಬೇಕು ಎಂದು ಎಂದರು.

17 ರಂದು ಸಮಾವೇಶ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಇದೇ 17 ರ ಭಾನುವಾರ ರಾಜ್ಯಮಟ್ಟದ ವಿದ್ಯುತ್ ಗುತ್ತಿಗೆದಾರರ ಸಮಾವೇಶ ಮತ್ತು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ಸಂಘದ ಶತಮಾನೋತ್ಸವದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಸಿ. ರಮೇಶ್ ಹೇಳಿದರು.

Join Whatsapp