ಜೈಲಿನೊಳಗೆ CAA ವಿರೋಧಿ ಹೋರಾಟಗಾರ ಶಾರ್ಜೀಲ್ ಇಮಾಮ್ ಮೇಲೆ ಹಲ್ಲೆ: ಸಿಸಿಟಿವಿ ದೃಶ್ಯಾವಳಿ ಕೇಳಿದ ದೆಹಲಿ ನ್ಯಾಯಾಲಯ

Prasthutha|

ನವದೆಹಲಿ: ತಿಹಾರ್ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಮತ್ತು ಇತರರು ಸೇರಿಕೊಂಡು ತನಗೆ ಹಲ್ಲೆ ನಡೆಸಿದ್ದಾರೆ ಎಂದು CAA ವಿರೋಧಿ ಹೋರಾಟಗಾರ ಶಾರ್ಜೀಲ್ ಇಮಾಮ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ, ದೆಹಲಿ ನ್ಯಾಯಾಲಯವು ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.

- Advertisement -

ನನ್ನ ಮೇಲೆ ಜುಲೈ 4 ರಂದು ಜೈಲಿನೊಳಗೆ ಹಲ್ಲೆ ನಡೆಸಲಾಗಿದೆ ಎಂದು UAPA ಪ್ರಕರಣದ ಅಡಿಯಲ್ಲಿ ಜೈಲಿನಲ್ಲಿರುವ ಶಾರ್ಜೀಲ್ ಇಮಾಮ್ ನ್ಯಾಯಾಲಯಕ್ಕೆ ಅರ್ಜಿ ಸಲಿಸಿದ್ದರು. ಜೈಲು ಸಹಾಯಕ ಅಧೀಕ್ಷಕರು ಸೇರಿದಂತೆ ಸುಮಾರು 8 ರಿಂದ 10 ಮಂದಿ ತಪಾಸಣೆಯ ನೆಪದಲ್ಲಿ ಸೆಲ್’ಗೆ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿ, ಭಯೋತ್ಪಾದಕ ಮತ್ತು ದೇಶವಿರೋಧಿ ಎಂಬ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಶಾರ್ಜೀಲ್ ಇಮಾಮ್ ಆರೋಪಿಸಿದ್ದರು.

ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಜೂನ್ 30 ರಂದು ಸಂಜೆ 6 ಗಂಟೆಯಿಂದ 8 ಗಂಟೆಯ ನಡುವೆ ಸ್ಥಳದಲ್ಲಿದ್ದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

- Advertisement -

ಜೂನ್ 30 ರಂದು ರಾತ್ರಿ 7.15 ರಿಂದ 8.30 ರವರೆಗೆ ಜೈಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ವೀಡಿಯೋವನ್ನು ಕಾಪಾಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಇಮಾಮ್ ತನ್ನ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಅಲ್ಲದೆ ಜುಲೈ 20 ರಂದು ಮುಂದಿನ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಧೀಶರು ತಿಹಾರ್ ಜೈಲು ಅಧೀಕ್ಷಕರಿಗೆ ಸೂಚಿಸಿದ್ದಾರೆ. ಈ ಮಧ್ಯೆ ನನ್ನ ಮೇಲಿನ ಹಲ್ಲೆ ತಡೆಯಲು ಜೈಲು ಅಧೀಕ್ಷಕರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಮಾಮ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ಜೆ.ಎನ್.ಯು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಯಾಗಿರುವ ಇಮಾಮ್, ಸರ್ಕಾರ ಜಾರಿಗೆ ತಂದ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಭಾಷಣಗಳನ್ನು ಮಾಡಿದ್ದಕ್ಕಾಗಿ ಏಪ್ರಿಲ್ 2020 ರಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಆರೋಪ ಹೊರಿಸಿ ಬಂಧಿಸಲಾಗಿತ್ತು.

Join Whatsapp